ಗಾಜಾದ ಹತ್ಯಾಕಾಂಡ, ಹಸಿವು, ಮಕ್ಕಳ ಸಾವು, ಮಹಿಳೆಯರ ಸಂಕಟ, ಬಲಾತ್ಕಾರದ ವಲಸೆಯನ್ನು ಮರೆಮಾಚುವುದು ಈ 'ಹಸ್ಬರಾ' ಅಭಿಯಾನದ ಉದ್ದೇಶ. ಪ್ರಾಯೋಜಿತ ಪ್ರವಾಸಕ್ಕೆ ಬಲಿಯಾದ ಕನ್ನಡ ಪತ್ರಕರ್ತರು ತಮ್ಮ 'ಬುದ್ಧಿ' ಬಸಿದು ಇಸ್ರೇಲ್ ಮತ್ತು ನೆತನ್ಯಾಹುವನ್ನು ಹೀರೋ ಮಾಡುತ್ತಿದ್ದಾರೆ.
ಇಸ್ರೇಲ್ ತನ್ನ ಪ್ರಚಾರತಂತ್ರದ ಭಾಗವಾಗಿ ಜಗತ್ತಿನ ಬೇರೆ ಬೇರೆ ಭಾಗಗಳ ಬುದ್ದಿಜೀವಿಗಳನ್ನು, ಪತ್ರಕರ್ತರನ್ನು ತನ್ನಲ್ಲಿಗೆ ಕರೆಸಿಕೊಂಡು ಅವರ ಪ್ರವಾಸವನ್ನು ಪ್ರಾಯೋಜಿಸುವ ಪರಿಪಾಠ ಇಟ್ಟುಕೊಂಡಿದೆ. ಇದೀಗ ಕನ್ನಡ ಪತ್ರಕರ್ತರ ತಂಡವೊಂದು ಇಸ್ರೇಲ್ ಪ್ರಯಾಣದಲ್ಲಿದ್ದು ಅಲ್ಲಿನ ಪ್ರಜೆಗಳ ದೇಶಪ್ರೇಮ, ಆತ್ಮರಕ್ಷಣೆ ಮತ್ತು ಹೋರಾಟದ ಕೆಚ್ಚು ಇತ್ಯಾದಿಗಳ ಬಗ್ಗೆ ಪುಂಖಾನುಪುಂಖವಾಗಿ ಲೇಖನಗಳು ವೀಡಿಯೋಗಳು ಹೊರಬರುತ್ತಿವೆ.
”ಇಸ್ರೇಲಿಯರು ನಡೆಸುತ್ತಿರುವುದು ಆತ್ಮರಕ್ಷಣೆಯ ಯುದ್ಧ”; ”ಭಯೋತ್ಪಾದನೆಯೇ ಗಾಜಾದ ಜನರ ಕಸುಬು”; ”ಇಸ್ರೇಲ್ ಮಾತ್ರ ಜಗತ್ತಿನಲ್ಲಿ ಯಹೂದಿಯರಿಗೆ ಇರುವ ಏಕೈಕ ಸುರಕ್ಷಿತ ಸ್ಥಳ” ಎಂಬಿತ್ಯಾದಿ ನೆರೆಟಿವ್‌ಗಳನ್ನು ಹರಡುವುದು ಈ ಪ್ರಾಯೋಜಿತ ಕಾರ್ಯಕ್ರಮದ ಉದ್ದೇಶ. ಎರಡು ವರ್ಷ ಹಿಂದೆ ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡಾಗ ಅಂದಿನ ರಕ್ಷಣಾ ಸಚಿವ ಯೋಅವ್ ಗಲಾಂಟ್ ಫೆಲೆಸ್ತೀನಿಯರನ್ನು ”ಮನುಷ್ಯರಂತಿರುವ ಪ್ರಾಣಿ”ಗಳೆಂದು ಕರೆದಿದ್ದರು. ಇಂತಹ ಭಾಷೆಯೇ ಇಂದು ಇಸ್ರೇಲ್ ಪ್ರಯಾಣದಲ್ಲಿರುವ ನಮ್ಮ ಕನ್ನಡಿಗ ಪತ್ರಕರ್ತರ ಬರಹ, ವೀಡಿಯೋಗಳಲ್ಲಿ ಕಾಣಿಸುತ್ತಿವೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ ಜನಾಂಗ ಹತ್ಯೆಯ ಆರೋಪ ಎದುರಿಸುತ್ತಿರುವ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇವರ ಮಟ್ಟಿಗೆ ಹೀರೋ.
ಇದನ್ನು ಓದಿದ್ದೀರಾ?: ಜಗದೀಪ್ ಎಸ್ ಚೋಕ್ಕರ್ | ಭ್ರಷ್ಟರಿಗೆ ನಡುಕ ಹುಟ್ಟಿಸಿದ ಪ್ರಜಾಪ್ರಭುತ್ವದ ರಕ್ಷಕ
ಯಹೂದಿಯರ ಜನಾಂಗ ಹತ್ಯೆ ನಡೆಸಿದ ಅಡಾಲ್ಫ್ ಹಿಟ್ಲರ್ ತನ್ನ ಭಯಾನಕ ನಾಝಿ ಅಜೆಂಡಾಕ್ಕೆ ಪರವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸಲು ಮತ್ತು ಅದಕ್ಕೆ ಎದುರಾಗಬಹುದಾದ ವಿರೋಧವನ್ನು ಮಟ್ಟ ಹಾಕಲು ಜೋಸೆಫ್ ಗೋಬೆಲ್ಸ್ ಎಂಬುವನನ್ನು ನೇಮಿಸಿಕೊಂಡಿದ್ದ. ಇಂದು ಎಲ್ಲರ ನಾಲಗೆಯಲ್ಲೂ ಹರಿದಾಡುವ ”ಗೋಬೆಲ್ಸ್ ತಂತ್ರ” ಎಂಬ ಪ್ರಚಾರ ಕಲೆಯ ಪಿತಾಮಹನೇ ಈ ಹಿಟ್ಲರ್ ಬಂಟ. ಯಾವುದೇ ಸುಳ್ಳನ್ನು ನೂರು ಬಾರಿ ಪುನರಾವರ್ತಿಸಿದರೆ ಅದು ಸತ್ಯವಾಗಿ ಬಿಡುತ್ತದೆ ಎಂಬುದು ಆತನ ವಾದವಾಗಿತ್ತು. ನಾಝಿ ಪಕ್ಷದ ಮುಖ್ಯ ಪ್ರಚಾರಕನಾಗಿ ಯಹೂದಿಗಳ ವಿರುದ್ಧ ಸಮಾಜದಲ್ಲಿ ವ್ಯವಸ್ಥಿತವಾಗಿ ದ್ವೇಷ ಮತ್ತು ಪೂರ್ವಗ್ರಹವನ್ನು ಸೃಷ್ಟಿಸುವ ಮೂಲಕ ಜನಾಂಗ ನಿರ್ಮೂಲನ ಮತ್ತು ವಂಶೋತ್ಪಾಟನೆಗೆ ವೇದಿಕೆ ನಿರ್ಮಿಸುವಲ್ಲಿ ಆತ ಸಫಲನಾಗಿದ್ದ.

ಗೋಬೆಲ್ಸ್ ತಮ್ಮ ವಿರುದ್ಧ ಹೆಣೆದ ಈ ತಂತ್ರವನ್ನೇ ಇಂದು ಯಹೂದಿಯರು ಪ್ಯಾಲೆಸ್ತೀನ್‌ನಲ್ಲಿ ತಾವು ನಡೆಸುತ್ತಿರುವ ಅಕ್ರಮ ಅನ್ಯಾಯಗಳ ಸಮರ್ಥನೆಗೆ ಬಳಸುತ್ತಿದ್ದಾರೆ. ಇದಕ್ಕೆ ”ಹಸ್ಬರಾ” ಎಂಬ ಮುದ್ದಿನ ಹೆಸರನ್ನೂ ಅವರು ಇಟ್ಟುಕೊಂಡಿದ್ದಾರೆ. ಹಿಬ್ರೂ ಭಾಷೆಯಲ್ಲಿ ಅದರ ಅರ್ಥ ”ವಿವರಣೆ ಕೊಡುವುದು”. ಮೊದಲು ಅರಬ್-ಇಸ್ರೇಲಿಯರ ಕೈಯಿಂದ ಝಯೋನಿಸಮ್ ಪರವಾದ ಪುಸ್ತಕಗಳನ್ನು ರಚಿಸುವುದಕ್ಕೆ ಸೀಮಿತವಾಗಿದ್ದ ಈ ಕಾರ್ಯತಂತ್ರವು ಇಂದು ಆ ರಾಷ್ಟ್ರದ ರಾಜತಾಂತ್ರಿಕತೆಯ ಅವಿಭಾಜ್ಯ ಅಂಗ. ಅಲ್ಲಿನ ವಿದೇಶಾಂಗ ಸಚಿವಾಲಯ, ಡಯಾಸ್ಪೋರಾ ಎಫೇರ್ಸ್ ಮಿನಿಸ್ಟ್ರಿ, ಪ್ರವಾಸೋದ್ಯಮ ಇಲಾಖೆ ಮತ್ತು ರಕ್ಷಣಾ ಇಲಾಖೆ ಹೀಗೆ ಎಲ್ಲ ಕಡೆ ಇದರ ವ್ಯಾಪ್ತಿಯಿದೆ. ಜಾಗತಿಕ ಮಟ್ಟದಲ್ಲಿ ಇಸ್ರೇಲಿ ಸರಕಾರದ (ಅ)ಕ್ರಮಗಳನ್ನು ಸಮರ್ಥಿಸುವುದು ಇದರ ಧ್ಯೇಯ. ದಶಕಗಳಿಂದ ನಡೆಯುತ್ತಿರುವ ಈ ಪಬ್ಲಿಕ್ ಡಿಪ್ಲೊಮೆಸಿ ಯೋಜನೆಗೆ ಬಿಲಿಯಗಟ್ಟಲೆ ಡಾಲರನ್ನು ಅಲ್ಲಿನ ಸರಕಾರ ಖರ್ಚು ಮಾಡುತ್ತಿದೆ.
ಗಾಜಾದಲ್ಲಿ 2023ರಲ್ಲಿ ನರಮೇಧ ಆರಂಭಗೊಂಡ ನಂತರ ಇಸ್ರೇಲಿಗೆ ಈ ”ಹಸ್ಬರಾ” ವೈಟ್‌ವಾಷ್‌ನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚು ಮನದಟ್ಟಾಗಿದೆ. ಆದ್ದರಿಂದಲೇ 2024ರ ಕೊನೆ ಮತ್ತು 2025ರ ಆರಂಭದಲ್ಲಿ ಈ ಯೋಜನೆಗೆ ನಿಗದಿತ ಬಜೆಟ್‌ಗಿಂತ 20 ಪಟ್ಟು ಹೆಚ್ಚಿನ ಹಣ (150 ಮಿಲಿಯ ಡಾಲರ್)ವನ್ನು ಅಲ್ಲಿನ ಸರಕಾರ ಮಂಜೂರು ಮಾಡಿದೆ. ಗಾಜಾದಲ್ಲಿ ಈವರೆಗೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳಲ್ಲಿ ಸುಮಾರು 65,000 ಮಂದಿ ಹತರಾಗಿದ್ದು 1.6 ಲಕ್ಷ ಮಂದಿ ಗಾಯಗೊಂಡಿದ್ದಾರೆ. ಅತ್ಯಂತ ಜನನಿಬಿಡ ಪ್ರದೇಶವಾದ ಗಾಜಾದಲ್ಲಿ ಸುಮಾರು 20 ಲಕ್ಷ ಜನರು ನಿರಾಶ್ರಿತರಾಗಿ ಅನ್ನಾಹಾರವಿಲ್ಲದೆ ಸುಮಾರು ಎರಡು ವರ್ಷಗಳಿಂದ ದಿನದೂಡುತ್ತಿದ್ದಾರೆ. ವಿಶ್ವಸಂಸ್ಥೆಯೇ ಅಲ್ಲಿ ”ತೀವ್ರ ಅನಾವೃಷ್ಟಿ”ಯ ಪರಿಸ್ಥಿತಿ ಇದೆ ಮತ್ತು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಮಾನವೀಯ ದುರಂತವನ್ನು ಬಚ್ಚಿಡಬೇಕಾದರೆ ವಿಶೇಷ ಬಜೆಟ್ ಮತ್ತು ಬಕೆಟ್ ಹಿಡಿಯುವ ಮೀಡಿಯಾ ಬೇಕು ತಾನೆ?
ಇಪ್ಪತ್ತೊಂದನೇ ಶತಮಾನದ ಅತ್ಯಂತ ಭಯಾನಕ ಹತ್ಯಾಕಾಂಡ (ಜೆನೊಸೈಡ್) ಗಾಜಾದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದರೂ ಜಾಗತಿಕ ಮಟ್ಟದಲ್ಲಿ ಅಂತಹ ದೊಡ್ಡ ಆಕ್ರೋಶ ಇನ್ನೂ ವ್ಯಕ್ತವಾಗಿಲ್ಲ. ಯುಕ್ರೈನ್-ರಷ್ಯಾ ಯುದ್ಧ ಮತ್ತು ಅಲ್ಲಿ ಸಂತ್ರಸ್ತರಾಗುತ್ತಿರುವ ಮಕ್ಕಳ ಚಿತ್ರಗಳು ಜಾಗತಿಕ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವಷ್ಟು ಗಾಜಾದ ಹಸುಳೆಗಳ ನರಳಾಟ ಸುದ್ದಿ ಮಾಡುತ್ತಿಲ್ಲ. ಖತರ್ ಮೇಲೆ ದಾಳಿ ನಡೆಯುವವರೆಗೆ ಭಾರತ ಕೂಡಾ ಇಸ್ರೇಲ್ ವಿರುದ್ಧ ಒಂದೇ ಒಂದು ಹೇಳಿಕೆ ನೀಡಿರಲಿಲ್ಲ. ಈ ಅಸಹನೀಯ ಮೌನದ ಹಿಂದೆ ಹಲವಾರು ಜಿಯೋಪೊಲಿಟಿಕಲ್, ಧಾರ್ಮಿಕ ಮತ್ತು ವಾಣಿಜ್ಯ ಹಿತಾಸಕ್ತಿಗಳಿರುವುದು ಸ್ಪಷ್ಟ. ಆದರೆ ಇವೆಲ್ಲವುಗಳ ಜತೆಗೆ ಇಸ್ರೇಲ್ ನಡೆಸುತ್ತಿರುವ ”ಹಸ್ಬರಾ” ಕೂಡಾ ಯುದ್ಧದ ನೆರೆಟಿವ್ ಅನ್ನು ತನ್ನ ಪರವಾಗಿ ತಿರುಗಿಸಲು ಆ ರಾಷ್ಟ್ರಕ್ಕೆ ಸಹಾಯ ಮಾಡುತ್ತಿದೆ.
ಇತ್ತೀಚೆಗೆ ಇಸ್ರೇಲ್ ಜಗತ್ತಿನ ದೈತ್ಯ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್‌ನೊಂದಿಗೆ 45 ಮಿಲಿಯ ಡಾಲರ್‍ನ ಹೊಸ ಒಪ್ಪಂದ ಮಾಡಿಕೊಂಡಿದ್ದು, ಆರು ತಿಂಗಳ ಜಾಹೀರಾತು ಅಭಿಯಾನವನ್ನು ಆರಂಭಿಸಿದೆ. ಗಾಜಾದ ಹತ್ಯಾಕಾಂಡ, ಹಸಿವು, ಮಕ್ಕಳ ಸಾವು, ಮಹಿಳೆಯರ ಸಂಕಟ, ಬಲಾತ್ಕಾರದ ವಲಸೆಯನ್ನು ಮರೆಮಾಚುವುದು ಈ ಅಭಿಯಾನದ ಉದ್ದೇಶ. ಇದರ ಭಾಗವಾಗಿ ಗೂಗಲ್ ಪ್ರಾಯೋಜಕತ್ವದ ಯೂಟ್ಯೂಬ್‌ನಲ್ಲಿ ಪ್ಯಾಲೆಸ್ತೀನಿಯರು ಊಟ, ತಿಂಡಿಗಳನ್ನು ರೆಡಿ ಮಾಡುವ ದೃಶ್ಯವನ್ನು ತೋರಿಸುವ ವೀಡಿಯೋ ಇತ್ತೀಚೆಗೆ ಬಿತ್ತರವಾಗಿದೆ, ”ಗಾಜಾದಲ್ಲಿ ಆಹಾರ ಇದೆ. ಇದಕ್ಕೆ ವ್ಯತಿರಿಕ್ತವಾದ ಹೇಳಿಕೆಗಳೆಲ್ಲವೂ ಅಸತ್ಯ,” ಎಂದು ಆ ವೀಡಿಯೋ ನಮ್ಮನ್ನು ನಂಬಿಸಲು ಯತ್ನಿಸುತ್ತದೆ.
ಇದನ್ನು ಓದಿದ್ದೀರಾ?: ಭಾಗವತರ ಗುಣಗಾನ ಮಾಡಿದ ಮೋದಿ, ಮರ್ಮವೇನು?
ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ಗಾಜಾದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 240 ಪತ್ರಕರ್ತರ ಹತ್ಯೆಯಾಗಿದೆ. ಜಗತ್ತಿನ ಯಾವುದೇ ಯುದ್ಧದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳು ಬಲಿಯಾಗಿಲ್ಲ. ಗಾಜಾದ ಯಾತನೆಯನ್ನು ಮರೆಮಾಚಲಿಕ್ಕಾಗಿ ‘ಅಲ್ ಜಝೀರಾ’ದಂತಹ ಮಾಧ್ಯಮ ಸಂಸ್ಥೆಯ ವರದಿಗಾರರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಪ್ಯಾಲೆಸ್ತೀನ್‌ಗೆ ಅಂತಾರಾಷ್ಟ್ರೀಯ ವರದಿಗಾರರ ಪ್ರವೇಶವನ್ನು ನಿರ್ಬಂಧಿಸಿ ಸತ್ಯವನ್ನು ಮರೆಮಾಚುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಅಲ್ಲಿನ ಪ್ರಧಾನಿ ಇದೀಗ ನಿಷೇಧವನ್ನು ತೆರವುಗೊಳಿಸುವ ಆಶ್ವಾಸನೆ ನೀಡುತ್ತಿದ್ದರೂ ಕೇವಲ (ಸೈನಿಕರೊಂದಿಗೆ ಪ್ರಯಾಣಿಸುವ) ”ಎಂಬೆಡೆಡ್” ಪತ್ರಕರ್ತರಿಗೆ ಮಾತ್ರ ಅಲ್ಲಿ ಅವಕಾಶ.

ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದ ”ಪ್ರಾಯೋಜಿತ” ಪ್ರವಾಸದಲ್ಲಿರುವ ಕನ್ನಡದ ಪತ್ರಕರ್ತರು ಇಸ್ರೇಲಿನ ಮಾಧ್ಯಮಗಳು ಮತ್ತು ಸರಕಾರ ಪ್ಯಾಲೆಸ್ತೀನಿಯರಿಗೆ ಬಳಸುವ ಎಲ್ಲ ರೀತಿಯ ”ಡಿಹ್ಯೂಮನೈಸಿಂಗ್” ಭಾಷೆಯನ್ನು ಪುನರುಚ್ಚರಿಸುತ್ತಿದ್ದಾರೆ. ಭಾರತವೂ ಸೇರಿದಂತೆ ಜಗತ್ತಿನ 140 ದೇಶಗಳು ಸ್ವತಂತ್ರ ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಿದ್ದರೂ ಗಾಜಾವನ್ನು ಪರಿಚಯಿಸುವಾಗ ”2005ರಲ್ಲಿ ಇಸ್ರೇಲ್ ಏಕಪಕ್ಷೀಯವಾಗಿ ತನ್ನ ಸೈನ್ಯ ಮತ್ತು ವಸಾಹತುಗಳನ್ನು ಹಿಂತೆಗೆದುಕೊಂಡ ಪ್ರದೇಶ” ಎಂದು ನಮ್ಮ ಪತ್ರಕರ್ತರು ಗುರುತಿಸುತ್ತಾರೆ.
”ಹಸ್ಬರಾ”ಕ್ಕೆ ಮತ್ತಷ್ಟು ಹಣ ಸುರಿಯುವ ಮೂಲಕ ಜಾಗತಿಕ ಮಟ್ಟದಲ್ಲಿ ಇಸ್ರೇಲಿ ಪರ ಹವಾ ಹುಟ್ಟಿಸುವ ಪ್ರಯತ್ನದ ಹೊರತಾಗಿಯೂ ಗಾಜಾದ ನರಳಾಟಕ್ಕೆ ಜಗತ್ತು ನಿಧಾನವಾಗಿ ಕಣ್ಣು ತೆರೆಯುತ್ತಿದೆಯೆಂಬುದು ಸ್ಪಷ್ಟ. ಪರಂಪರಾಗತವಾಗಿ ಇಸ್ರೇಲಿನ ಬೆಂಬಲಕ್ಕೆ ನಿಲ್ಲುತ್ತಾ ಬಂದಿರುವ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಕೆನಡಾ, ಆಸ್ಟ್ರೇಲಿಯಾ ಮುಂತಾದ ಬಲಿಷ್ಠ ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡುವ ಘೋಷಣೆ ಹೊರಡಿಸಿವೆ. ಗಾಜಾದ ಮೇಲೆ ಕಾರ್ಯಾಚರಣೆ ನಡೆಯುತ್ತಿರುವಂತೆಯೇ 2024ರ ಮೇಯಲ್ಲಿ ಸ್ಪೈನ್ ಕೂಡಾ ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಿದೆ.
ಅಮೆರಿಕದ ಬೆಂಬಲ ಇಲ್ಲದಿದ್ದರೆ ಇಸ್ರೇಲ್ ಎಂಬುದು ಒಂದು ದೊಡ್ಡ ಸೊನ್ನೆ. ಪ್ರತಿ ವರ್ಷ ಸುಮಾರು ನಾಲ್ಕು ಬಿಲಿಯ ಡಾಲರ್ ಹಣವನ್ನು ವಾಷಿಂಗ್ಟನ್ ಕಳೆದ ಹತ್ತು ವರ್ಷಗಳಿಂದ ಟೆಲ್ ಅವಿವ್‌ಗೆ ನೀಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಮೆರಿಕದಿಂದ ಇಸ್ರೇಲ್ ಪಡೆದಿರುವ ಸೈನಿಕ ನೆರವು 18 ಬಿಲಿಯ ಡಾಲರ್‌ಗೂ ಹೆಚ್ಚು. ಇಷ್ಟಾಗಿಯೂ ಅಮೆರಿಕದಲ್ಲೇ ಇಂದು ಇಸ್ರೇಲ್‌ನ ಜನಾಂಗ ಹತ್ಯೆಯ ವಿರುದ್ಧ ಜನಾಂದೋಲನ ತೀವ್ರಗೊಂಡಿದ್ದು ಗ್ಯಾಲಪ್ ಸಮೀಕ್ಷೆಯ ಪ್ರಕಾರ ಕನಿಷ್ಠ ಆ ದೇಶದ ಶೇ. 60 ಮಂದಿ ಗಾಜಾದಲ್ಲಿ ಇಸ್ರೇಲ್ ನರಹತ್ಯೆ ನಿಲ್ಲಿಸಬೇಕೆಂದು ಬಯಸುತ್ತಾರೆ. ಹೀಗೆ ”ಹಸ್ಬರಾ”ದ ಹೊರತಾಗಿಯೂ ಜಗತ್ತಿನಾದ್ಯಂತ ಜನರು ಗಾಜಾದ ಸತ್ಯವನ್ನು ಮನಗಾಣುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ಗಾಜಾವನ್ನು ದಿಗ್ಬಂಧನದಲ್ಲಿಟ್ಟು, ಪಶ್ಚಿಮ ದಂಡೆಯನ್ನು ವಿಶ್ವದ ಅತ್ಯಂತ ದೊಡ್ಡ ಬಯಲು ಸೆರೆಮನೆಯಾಗಿ ಮಾರ್ಪಡಿಸಿರುವ ಇಸ್ರೇಲ್‌ನ ಬಣ್ಣ ಬಯಲಾಗುತ್ತಿದೆ. ಪ್ಯಾಲೆಸ್ತೀನ್ ಸಮಸ್ಯೆ 2023ರ ಆಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಪೈಶಾಚಿಕ ದಾಳಿಯಿಂದ ಆರಂಭಗೊಂಡದ್ದಲ್ಲ ಎಂಬ ವಾಸ್ತವಿಕತೆಯನ್ನು ಜನರು ಅರ್ಥ ಮಾಡಿಕೊಳ್ಳತೊಡಗಿದ್ದಾರೆ.
ಕೊನೆಯದಾಗಿ ಒಂದು ಮಾತು. ಭಾರತವು ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಿದ್ದು 1988ರಲ್ಲಿ. ನಾವು ಪ್ಯಾಲೆಸ್ತೀನ್‌ಗೆ ಮಾನ್ಯತೆ ನೀಡಿದ ಮೊದಲ ಅರಬೇತರ ರಾಷ್ಟ್ರಗಳ ಸಾಲಿನಲ್ಲಿದ್ದೇವೆ. ನಮ್ಮ ದೇಶ ಇಸ್ರೇಲಿಗೆ ಮಾನ್ಯತೆ ನೀಡಿದ್ದು 1992ರಲ್ಲಿ. ಅಂದರೆ ಪ್ಯಾಲೆಸ್ತೀನ್ ಒಂದು ಸ್ವತಂತ್ರ ರಾಷ್ಟ್ರವೆಂದು ನಾವು ಘೋಷಿಸಿದ ನಾಲ್ಕು ವರ್ಷಗಳ ನಂತರ. ಕನಿಷ್ಠ ಇಷ್ಟು ತಿಳಿವಳಿಕೆಯಾದರೂ ಇಸ್ರೇಲ್ ಪ್ರವಾಸದಲ್ಲಿರುವ ನಮ್ಮ ಕನ್ನಡ ಪತ್ರಕರ್ತರಿಗಿದ್ದರೆ ಅವರ ಭಾಷೆಯಲ್ಲಿ ಇಸ್ರೇಲ್ ಪ್ರವಾಸದ ”ಥ್ರಿಲ್” ಜೊತೆಗೆ ಗಾಜಾದ ಜನರ ಬಗ್ಗೆ ಸ್ವಲ್ಪವಾದರೂ ಕಳಕಳಿ ಇರುತ್ತಿತ್ತೇನೋ.
ಇದನ್ನು ಓದಿದ್ದೀರಾ?: ‘ಪ್ಯಾಲೆಸ್ತೀನ್ ರಾಜ್ಯವೇ ಇರುವುದಿಲ್ಲ’: ಇಸ್ರೇಲ್ ಪ್ರಧಾನಿ ನೆತನ್ಯಾಹು ವಿನಾಶಕಾರಿ ಹೇಳಿಕೆ
ಕನ್ನಡದ ಬಹುತೇಕ ಪತ್ರಿಕೆಗಳು ಹಲವಾರು ದಶಕಗಳಿಂದ ಪ್ಯಾಲೆಸ್ತೀನ್ ಪರ ನಿಲುವು ತಳೆದುಕೊಂಡು ಬಂದಿವೆ ಎಂಬ ವಾಸ್ತವಿಕತೆಯನ್ನೂ ಇಲ್ಲಿ ಸ್ಮರಿಸಬೇಕು. ಕನಿಷ್ಠ ಪಕ್ಷ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭದ ಎಂಭತ್ತು ತೊಂಭತ್ತರ ದಶಕದ ಸಂಪಾದಕೀಯಗಳನ್ನು ತೆಗೆದು ನೋಡಿದರೂ ಕನ್ನಡದ ನೆಲ, ಕನ್ನಡದ ಜನ ಯಾವತ್ತೂ ಪ್ಯಾಲೆಸ್ತೀನ್ ಪರವಾಗಿದ್ದರು ಎಂಬುದು ನಮ್ಮ ಜಂಕೆಟ್‌ನಲ್ಲಿರುವ ಪತ್ರಕರ್ತರಿಗೆ ಮನವರಿಕೆಯಾಗಬಹುದು.
ಇಸ್ರೇಲ್ ಪ್ರವಾಸದಲ್ಲಿರುವ ಕನ್ನಡ ಪತ್ರಕರ್ತರ ನಿಯೋಗದಲ್ಲಿ ಗಾಂಧಿಗೆ ಪತ್ರಬರೆಯುವ ಅಂಕಣಕಾರರೂ ಇರುವುದರಿಂದ ಬಾಪೂವಿನ ಈ ಮಾತು ನೆನಪಿಸುವುದು ಸೂಕ್ತ ಎನಿಸುತ್ತಿದೆ: ”ಇಂಗ್ಲೆಂಡ್ ಎಷ್ಟು ಇಂಗಿಷರಿಗೆ ಸೇರಿದ್ದೋ, ಫ್ರಾನ್ಸ್ ಎಷ್ಟು ಫ್ರೆಂಚರಿಗೆ ಸೇರಿದ್ದೋ, ಪ್ಯಾಲೆಸ್ತೀನ್ ಕೂಡಾ ಅಷ್ಟೇ ಅರಬರಿಗೆ ಸೇರಿದ್ದು. ಪ್ಯಾಲೆಸ್ತೀನ್‌ನಲ್ಲಿ ಯಹೂದಿ ತಾಯ್ನಾಡಿನ ಸ್ಥಾಪನೆಯು ಅಲ್ಲಿ ಈಗಾಗಲೇ ನೆಲೆಸಿರುವ ಅರಬ್ ಜನತೆಯನ್ನು ಅಲ್ಲಿಂದ ಹೊರದಬ್ಬಿ ಆಗಕೂಡದು.”


ತುಫೈಲ್ ಮುಹಮ್ಮದ್
ವಿಜಯ ಕರ್ನಾಟಕ, ವಿಜಯ್ ಟೈಮ್ಸ್, ಡೆಕ್ಕನ್ ಹೆರಾಲ್ಡ್, ಪ್ರೆಸ್ ಎಸೋಸಿಯೇಶನ್, ದ ಹಿಂದೂ ಮತ್ತು ಯುಎಇಯ ದ ನ್ಯಾಶನಲ್ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದು ಸದ್ಯ ಅಬುಧಾಬಿಯಲ್ಲಿ ಸ್ವತಂತ್ರ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ.




