ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಭಾರಿ ಪ್ರಮಾಣದ ವಾಯು ದಾಳಿ ನಡೆಸಿದ್ದು, ಒಂದೇ ದಿನ ಬರೋಬ್ಬರಿ 1,200 ಬಾಂಬ್‌ಗಳನ್ನು ಸುರಿಸಲಾಗಿದೆ. ಶನಿವಾರ ಮುಂಜಾನೆಯಿಂದಲೇ ಆರಂಭವಾದ ಈ ಕಾರ್ಯಾಚರಣೆಯಲ್ಲಿ, ರಾಜಧಾನಿ ಟೆಹ್ರಾನ್ ಸೇರಿದಂತೆ ಇರಾನ್‌ನ ಪ್ರಮುಖ ನಗರಗಳ ಮೇಲೆ ನೂರಾರು ಯುದ್ಧವಿಮಾನಗಳ ಮೂಲಕ ನಿರಂತರವಾಗಿ ಬಾಂಬ್ ದಾಳಿ ನಡೆಸಲಾಗಿದ್ದು, ಸೇನಾ ಹಾಗೂ ಸರ್ಕಾರಿ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.
ಈ ಭೀಕರ ಕಾರ್ಯಾಚರಣೆಯ ನಡುವೆ ಅತ್ಯಂತ ಕರುಣಾಜನಕ ಹಾಗೂ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ಶಾಲೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 148 ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ದಿಗ್ಭ್ರಮೆ ಮೂಡಿಸಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಈ ವ್ಯಾಪಕ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತರಾಗಿದ್ದಾರೆ. ಅಮೆರಿಕ ಈ ಕಾರ್ಯಾಚರಣೆಯನ್ನು ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಕರೆದರೆ, ಇಸ್ರೇಲ್ ಇದನ್ನು ‘ಆಪರೇಷನ್ ರೋರಿಂಗ್ ಲಯನ್’ ಎಂದು ಹೆಸರಿಸಿದೆ.
ಇದನ್ನು ಓದಿದ್ದೀರಾ? ಸಿಬಿಐ, ಇ.ಡಿಗೆ ಚಾಟಿ ಬೀಸಿದ ‘ಎಂಟೆದೆಯ ಬಂಟ’ ನ್ಯಾಯಾಧೀಶ ಜಿತೇಂದ್ರ ಸಿಂಗ್
ಇರಾನ್‌ನ ಪರಮಾಣು ನೆಲೆಗಳು, ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು, ವಾಯುರಕ್ಷಣಾ ವ್ಯವಸ್ಥೆಗಳು ಹಾಗೂ ‘ರೆವಲ್ಯೂಷನರಿ ಗಾರ್ಡ್ಸ್’ ಕಚೇರಿಗಳನ್ನು ಮತ್ತು ಖಮೇನಿಯವರ ನಿವಾಸವನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ. ಇದು ಇರಾನ್ ಆಡಳಿತ ಬದಲಾವಣೆಯ ನಿಟ್ಟಿನಲ್ಲಿ ಒಂದು ನಿರ್ಣಾಯಕ ಹೆಜ್ಜೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾನ್, ತಕ್ಷಣವೇ ಪ್ರತಿಕಾರಕ್ಕೆ ಮುಂದಾಗಿದೆ. ಇಸ್ರೇಲ್‌ನ ಹಲವು ನಗರಗಳು ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಆರಂಭಿಸಿದೆ. ಕತಾರ್, ಬಹ್ರೇನ್, ಕುವೈತ್, ಮತ್ತು ಯುಎಇ ಗಳಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಲಾಗುತ್ತಿದ್ದು, ಈ ಬೆಳವಣಿಗೆಯು ಇಡೀ ಮಧ್ಯಪ್ರಾಚ್ಯವನ್ನು ಮತ್ತೊಂದು ಬೃಹತ್ ಯುದ್ಧದ ಅಂಚಿಗೆ ತಳ್ಳಿದೆ.





