ಆರು ದಿನಗಳ ಹಿಂದೆ ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ಕಾಣೆಯಾಗಿದ್ದ ಕರ್ನಾಟಕದ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರು ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಬಾರಿ ಕಚೇರಿಯು ದೃಢಪಡಿಸಿದೆ.
ಕರ್ನಾಟಕದ ಬೆಂಗಳೂರು ಮೂಲದವರಾದ ಸಾಕೇತ್ ಅವರು ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಆಣ್ವಿಕ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಅವರು ಫೆಬ್ರವರಿ 9 ರಂದು ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಶನಿವಾರ ರಾತ್ರಿ ಅವರ ಮೃತದೇಹವು ವಿಶ್ವವಿದ್ಯಾಲಯ ಕ್ಯಾಂಪಸ್‌ನಿಂದ ಸುಮಾರು 1 ಕಿ.ಮೀ ದೂರದಲ್ಲಿ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿ ಪತ್ತೆಯಾಗಿದೆ.
ಸಾಕೇತ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಭಾರತೀಯ ರಾಯಬಾರಿ ಕಚೇರಿತ ತಿಳಿಸಿದೆ. “ಈ ತೀವ್ರ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ” ಎಂದು ಹೇಳಿದೆ.
ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿ ಶ್ರೀನಿವಾಸಯ್ಯ, ಬರ್ಕ್ಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಅವರು ಬೆಂಗಳೂರಿನ ಶ್ರೀ ವಾಣಿ ಶಿಕ್ಷಣ ಕೇಂದ್ರದಲ್ಲಿ ಶಾಲಾ ಶಿಕ್ಷಣ ಪಡೆದಿದ್ದರು.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ‘ಹೈಪರ್‌ಲೂಪ್‌ಗಾಗಿ ಮೈಕ್ರೋಚಾನೆಲ್ ಕೂಲಿಂಗ್ ಸಿಸ್ಟಮ್ ಮತ್ತು ಅದರ ವಿಧಾನ’ವನ್ನು ಕಂಡುಹಿಡಿದಿದ್ದು, ಅದರ ಪೇಟೆಂಟ್ ಹೊಂದಿರುವ ಆರು ಜನರಲ್ಲಿ ಶ್ರೀನಿವಾಸಯ್ಯ ಕೂಡ ಒಬ್ಬರು.





