ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಗಿದೆ. ಖಮೇಲಿ ಹತ್ಯೆಯ ಬೆನ್ನಲ್ಲೇ, ಇರಾನ್‌ನ ಸೇನೆ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ಅತ್ಯಂತ ಕಠಿಣ ಪ್ರತಿಜ್ಞೆ ಮಾಡಿದೆ. ‘ಖಮೇನಿ ಹಂತಕರನ್ನು ಶಿಕ್ಷಿಸುತ್ತೇವೆ’ ಎಂದು ಘೋಷಿಸಿದೆ.
ಟೆಲಿಗ್ರಾಮ್‌ನಲ್ಲಿ ತಮ್ಮ ಪ್ರತಿಜ್ಞೆಯನ್ನು ಹಂಚಿಕೊಂಡಿರುವ ರೆವಲ್ಯೂಷನರಿ ಗಾರ್ಡ್ಸ್, “ಇರಾನ್ ಇಸ್ಲಾಮಿಕ್ ಗಣರಾಜ್ಯದ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಆಕ್ರಮಣಕಾರಿ ಕಾರ್ಯಾಚರಣೆಯು ಈಗ ಯಾವುದೇ ಕ್ಷಣದಲ್ಲಿ ಪ್ರಾರಂಭವಾಗಲಿದೆ” ಎಂದು ಹೇಳಿಕೊಂಡಿದೆ. ತಮ್ಮ ದಾಳಿಯು ಅಮೆರಿಕದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ವಿವರಿಸಿದೆ. ಇರಾನ್ ಪ್ರತಿದಾಳಿ ನಡೆಸುತ್ತಿರುವ ನೆಲೆಗಳು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಗೊಂಡಿವೆ.
“ಉಮ್ಮಾದ ಇಮಾಮ್‌ನ ಹಂತಕರಿಗೆ ಕಠಿಣ ಮತ್ತು ನಿರ್ಣಾಯಕ ಶಿಕ್ಷೆ ನೀಡಲು ಇರಾನ್‌ನ ಸೇಡಿನ ಕೈಗಳು ಸಿದ್ದವಾಗಿವೆ. ಹಂತರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಗಾರ್ಡ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
1989ರಿಂದ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ, ಪಾಶ್ಚಿಮಾತ್ಯ ದೇಶಗಳು ತಮ್ಮ ಕಡು ಶತ್ರುವೆಂದು ಪರಿಗಣಿಸಿದ್ದ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಬೃಹತ್ ದಾಳಿಯ ಆರಂಭಿಕ ಹಂತದಲ್ಲೇ ಹತರಾಗಿದ್ದಾರೆ. ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸುವ ಗುರಿಯನ್ನು ಹೊಂದಿರುವ ಅಮೆರಿಕ-ಇಸ್ರೇಲ್ ದಾಳಿಯು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೆ, ಖಮೇನಿಯವರ ಉನ್ನತ ಸಲಹೆಗಾರ ಅಲಿ ಶಮ್ಖಾನಿ ಮತ್ತು ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಾಕ್‌ಪೋರ್ ಕೂಡ ಹತರಾಗಿದ್ದಾರೆ ಎಂದು ಇಸ್ರೇಲ್ ಸೈನ್ಯ ತಿಳಿಸಿದೆ.




