ಇರಾನ್‌ನ ಸರ್ವೋಚ್ಚ ನಾಯಕನಾಗಿ ಅಯತುಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ನೇಮಕ ಮಾಡಲಾಗಿದೆ. ಇರಾನ್‌ನ ತಜ್ಞರ ಸಭೆಯು ಮೊಜ್ತಬಾ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
‘ಇರಾನ್ ಇಂಟರ್‌ನ್ಯಾಷನಲ್’ ವರದಿ ಪ್ರಕಾರ, ಇರಾನ್ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶನಿವಾರ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿ, ಭಾನುವಾರ ಪರಮೋಚ್ಛ ನಾಯಕ ಅಲಿ ಖಮೇನಿ ಅವರನ್ನು ಹತ್ಯೆಗೈದಿವೆ. ಈ ಬಳಿಕ, ಇರಾನ್‌ನ ಸರ್ವೋಚ್ಛ ನಾಯಕನಾಗಿ ಯಾರು ಆಯ್ಕೆಯಾಗಲಿದ್ದಾರೆ. ಇರಾನ್‌ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಇದೀಗ, ಅಲಿ ಖಮೇನಿ ಅವರ ಎರಡನೇ ಮಗ, 56 ವರ್ಷದ ಮೊಜ್ತಬಾ ಅವರನ್ನು ಇರಾನ್ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಮೊಜ್ತಬಾ ಖಮೇನಿ ಅವರು ಹಲವು ವರ್ಷಗಳಿಂದ ಅಲಿ ಖಮೇನಿ ಅವರೊಂದಿಗೆ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದಾಗ್ಯೂ, ಅವರು ಇರಾನ್‌ನಲ್ಲಿ ತಮ್ಮ ಪ್ರಭಾವ ಬೆಳೆಸಿಕೊಂಡಿದ್ದರು. ಐಆರ್‌ಜಿಸಿ ಹಾಗೂ ಬಸಿಜ್ ಅರೆಸೈನಿಕ ಜಾಲಗಳಲ್ಲಿ ಅವರ ಪ್ರಭಾವ ಹೆಚ್ಚಿದೆ. ಇರಾನ್–ಇರಾಕ್ ಯುದ್ಧದ ಸಮಯದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಗಳು ಹೇಳಿವೆ.
ಆದರೂ, ಕುಟುಂಬ ಉತ್ತರಾಧಿಕಾರದ ಕುರಿತು ಧರ್ಮಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ವೋಚ್ಚ ನಾಯಕನ ಸ್ಥಾನ ಪಡೆಯಲು ಅಗತ್ಯವಿರುವ ಉನ್ನತ ಧಾರ್ಮಿಕ ಪದವಿ ಹಾಗೂ ಔಪಚಾರಿಕ ನಾಯಕತ್ವದ ಅನುಭವ ಇರಬೇಕು. ಅದು ಮೊಜ್ತಬಾ ಅವರಿಗಿಲ್ಲ ಎಂದು ಧರ್ಮಗುರುಗಳು ಹೇಳುತ್ತಿದ್ದಾರೆ.




