ಕುವೈತ್‌ನ ಮಿನಾ ಅಲ್-ಅಹ್ಮದಿ ತೈಲ ಘಟಕದ ಮೇಲೆ ಮತ್ತೊಮ್ಮೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಇದರಿಂದಾಗಿ ಘಟಕದ ಕೆಲವು ಭಾಗಗಳು ಹೊತ್ತಿ ಉರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ದಾಳಿ ನಡೆಸಿವೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಹಲವು ಹಿರಿಯ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಇಸ್ರೇಲ್ ದೋಸ್ತಿ; ಎಫೆಕ್ಟ್ ಮಾತ್ರ ಭಾರತಕ್ಕೆ!
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್‌ನ ಟೆಲ್ ಅವಿವ್ ಮತ್ತು ಮಧ್ಯಪ್ರಾಚ್ಯ ಕತಾರ್, ಯುಎಇ, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ಬೇಸ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಸದ್ಯ ದಾಳಿ ಪ್ರತಿದಾಳಿಗಳು ಮುಂದುವರೆದಿದೆ.
ಇಸ್ರೇಲ್ ಟೆಹ್ರಾನ್ ಮೇಲೆ ಮತ್ತೆ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದೆ. ಇದಾಗುತ್ತಿದ್ದಂತೆ ಇರಾನ್ ಕುವೈತ್‌ನ ತೈಲ ಘಟಕದ ಮೇಲೆ ಮತ್ತೆ ದಾಳಿ ನಡೆಸಿದೆ. ಇರಾನ್ ಕೊಲ್ಲಿಯಾದ್ಯಂತ ತೈಲ ಮತ್ತು ನೈಸರ್ಗಿಕ ಅನಿಲ ಸೌಲಭ್ಯಗಳ ಮೇಲೆ ಕೇಂದ್ರೀಕರಿಸಿದೆ. ಶುಕ್ರವಾರ ಮುಂಜಾನೆ ದುಬೈನಲ್ಲಿಯೂ ಈದ್ ಅಲ್-ಫಿತರ್ ಆಚರಣೆಯ ನಡುವೆ ಸ್ಫೋಟ ಸಂಭವಿಸಿದೆ. ಮಸೀದಿಗಳು ಪ್ರಾರ್ಥನೆಗೆ ಮೊದಲ ಕರೆ ನೀಡುತ್ತಿದ್ದಂತೆ ಸ್ಫೋಟಗಳು ಕೇಳಿಬಂದಿದೆ ಎಂದು ವರದಿಯಾಗಿದೆ.
ಇಸ್ರೇಲ್, ಇರಾನ್‌ನ ಮುಂದುವರೆದ ದಾಳಿ-ಪ್ರತಿದಾಳಿಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯೇ ಅಲುಗಾಡಿದೆ. ಅಮೆರಿಕ- ಇಸ್ರೇಲ್ ತನ್ನ ತೈಲ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಇದು ತೈಲ ಸಾಗಾಟಕ್ಕೆ ತೊಂದರೆ ಉಂಟು ಮಾಡಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $119 ಕ್ಕಿಂತ ಅಧಿಕ ಅಂದರೆ ಶೇಕಡ 60ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.





