ಜಗತ್ತಿನ ಬಹುದೊಡ್ಡ ಆರ್ಥಿಕ ನಗರ ಎಂದೇ ಕರೆಯಲ್ಪಡುವ ನ್ಯೂಯಾರ್ಕ್ ನಗರದಲ್ಲಿ ಜನವರಿ 1 ರಂದು ಜೊಹ್ರಾನ್ ಮಮ್ದಾನಿ 112ನೇ ಮೇಯರ್ ಆಗಿ ತೆಗೆದುಕೊಂಡ ಪ್ರಮಾಣ ವಚನ ಅಮೆರಿಕದ ರಾಜಕೀಯದಲ್ಲಿನ ಹೊಸ ಪಲ್ಲಟವಾಗಿದೆ. 34 ವರ್ಷದ ಭಾರತ ಸಂಜಾತ ಜೊಹ್ರಾನಿ ಮಮ್ದಾನಿ ಅವರು ಹೊಸ ವರ್ಷದ ದಿನ ಮುಂಜಾವಿನ ವೇಳೆ ಅಮೆರಿಕದ ಅತಿ ದೊಡ್ಡ ನಗರವಾದ ನ್ಯೂಯಾರ್ಕ್ ನ ‘ಮೊದಲ ಪ್ರಜೆ’ಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಹಾಗೂ ಆಫ್ರಿಕಾದ ಉಗಾಂಡದಲ್ಲಿ ಜನಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡೆಮಾಕ್ರಟಿಕೆ ಪಕ್ಷದ ನಾಯಕ, ಸಮಾಜವಾದಿ ಜೊಹ್ರಾನ್ ಮಮ್ದಾನಿ ಅವರು ಪ್ರಮಾಣ ವಚನದ ವೇಳೆ, 200 ವರ್ಷಕ್ಕೂ ಹಳೆಯದಾದ ‘ಕುರಾನ್’ ಮೇಲೆ ಕೈಯಿಟ್ಟು ಪ್ರಮಾಣ ತೆಗೆದುಕೊಂಡಿದ್ದಾರೆ. ಬುಧವಾರ ಮಧ್ಯರಾತ್ರಿ ನ್ಯೂಯಾರ್ಕ್ ನಗರದಲ್ಲಿ ಹೊಸ ವರ್ಷದ ಸಂಭ್ರಮ ಆರಂಭವಾಗುತ್ತಿದ್ದಂತೆಯೇ ಓಲ್ಡ್ ಸಿಟಿ ಹಾಲ್ ಸಬ್ ವೇ ಸ್ಟೇಷನ್ ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಪ್ರಮಾಣ ತೆಗೆದುಕೊಂಡಿದ್ದಾರೆ. 1904 ರಲ್ಲಿ ಆರಂಭಗೊಂಡು 1945ರಲ್ಲಿ ಮುಚ್ಚಲ್ಪಟ್ಟ ಓಲ್ಡ್ ಸಿಟಿ ನಿಲ್ದಾಣದ ಸಬ್ ವೇ ಸ್ಟೇಷನ್ ನ್ಯೂಯಾರ್ಕ್‌ನ ಮೂಲ ಸುರಂಗಮಾರ್ಗ ನಿಲ್ದಾಣಗಳಲ್ಲಿ ಒಂದಾಗಿದೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಮ್ದಾನಿ ಅವರ ಪತ್ನಿ ರಮಾ ದುವಾಜಿ, ಕುಟುಂಬದ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದಾರೆ.
ಇದನ್ನು ಓದಿ : ನ್ಯೂಯಾರ್ಕ್ ನೂತನ ಮೇಯರ್ ಝೋಹ್ರಾನ್ ಮಮ್ದಾನಿ
ಮಮ್ದಾನಿ ಅವರ ಗೆಲುವು ತಿಂಗಳ ಹಿಂದೆಯೇ ತಿಳಿದಿತ್ತು. ಅಮೆರಿಕದ ಅತ್ಯಂತ ಪ್ರಬಲ ಬಂಡವಾಳಶಾಹಿಗಳ ಮುಂದೆ ತನ್ನನ್ನು ಸಮಾಜವಾದಿ ಎಂದು ಕರೆದುಕೊಳ್ಳುವ ಮಮ್ದಾನಿ ಅವರ ಆಡಳಿತ ಹೇಗಿರಬಹುದು ಎಂಬುದು ಕುತೂಹಲವಾಗಿದೆ. ಜೊಹ್ರಾನ್ ಮಮ್ದಾನಿಯ ಗೆಲುವು ಜಗತ್ತಿನ ರಾಜಕಾರಣಕ್ಕೆ ಪಾಠವಾಗಬಹುದೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಚುನಾವಣಾ ಪ್ರಚಾರದ ವೇಳೆ, ರೋಟಿ ಕಪಡ ಮಕಾನ್ ಬಗ್ಗೆ ಮತನಾಡಿ ಜನರ ಮನಸ್ಸನ್ನು ಗೆದ್ದಿದ್ದರು. ನ್ಯೂಯಾರ್ಕ್ ನಲ್ಲಿ ಯಹೂದಿಗಳಿಗೂ ನೆಲೆಯಿದೆ ಎಂದಿದ್ದರು. ಮಮ್ದಾನಿ ತಮ್ಮ ಮುಸ್ಲಿಂ ಗುರುತನ್ನು ಹೇಳಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ.
ಈಗ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣ ತೆಗೆದುಕೊಂಡ ವೇಳೆ ಅನೇಕ ಪ್ರಶ್ನೆಗಳು ಎದ್ದಿವೆ. ಬಂಡವಾಳ ಶಾಹಿಗಳಿಂದ ನಡೆಯುತ್ತಿರುವ ದೇಶದಲ್ಲಿ ಸಮಾಜವಾದಿ ವ್ಯಕ್ತಿಯ ರಾಜಕೀಯದ ಮೇಲೆ ಗಂಭೀರ ಪರಿಣಾಮ ಬೀರಬಹುದೆ? ಇಸ್ಲಾಮೋಫೋಬಿಯಾ ಇನ್ನೂ ಜೀವಂತವಾಗಿರುವ ಹೊತ್ತಿನಲ್ಲಿ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣ ತೆಗೆದುಕೊಂಡಿರುವ ಮಮ್ದಾನಿ ಅವರಿಗೆ ಬಲಪಂಥೀಯ ಟೀಕೆಗಳನ್ನು ಮೆಟ್ಟಿ ನಿಲ್ಲುವ ಧೈರ್ಯವಿದೆಯಾ? ಮಮ್ದಾನಿಯ ಗೆಲುವು ಅಮೆರಿಕದ ಪ್ರಜಾತಾಂತ್ರಿಕತೆಗೆ ಭರವಸೆಯಾಗಬಲ್ಲದೇ?
ಪ್ರಮಾಣ ವಚನದ ವೇಳೆ ತಮ್ಮ ಅಜ್ಜನ ಕಾಲಕ್ಕೂ ಹಳೆಯದಾದ ಎರಡು ಕುರಾನ್‌ಗಳು ಮತ್ತು ಕಪ್ಪುವರ್ಣೀಯರ ಇತಿಹಾಸವನ್ನು ಪ್ರತಿನಿಧಿಸುವ ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಯ ಸ್ಕೋಂಬರ್ಗ್ ಸಂಶೋಧನಾ ಕೇಂದ್ರದಿಂದ ತಂದಿದ್ದ 18ನೇ ಶತಮಾನದ ಕೈ ಬರಹದ ಕುರಾನ್ ಅನ್ನು ಬಳಸಿದ್ದಾರೆ.
ಮಮ್ದಾನಿ ಅವರ ರಾಜಕೀಯ ನಿಲುವುಗಳು ಸ್ಪಷ್ಟವಾಗಿದೆ. ಸಾರ್ವತ್ರಿಕ ಶಿಶುಪಾಲನಾ ಯೋಜನೆ ಜಾರಿ, ಸುಮಾರು 20 ಲಕ್ಷ ಬಾಡಿಗೆ ಮನೆಗಳ ಬಾಡಿಗೆ ಸ್ಥಗಿತ ಮತ್ತು ನಗರ ಬಸ್ ಸೇವೆಯನ್ನು ಉಚಿತ ಹಾಗೂ ವೇಗಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮಮ್ದಾನಿ ಅವರ ಗೆಲುವು ಅಮೆರಿಕದ ಅಲ್ಪಸಂಖ್ಯಾತ ಸಮುದಾಯಗಳಿಗೆ, ವಿಶೇಷವಾಗಿ ಮುಸ್ಲಿಮರು ಮತ್ತು ದಕ್ಷಿಣ ಏಷ್ಯಾದ ಜನರಿಗೆ ದೊಡ್ಡ ಆತ್ಮವಿಶ್ವಾಸವನ್ನು ಮೂಡಿಸಿದೆ.
ಮಮ್ದಾನಿ ಪ್ರಮಾಣದ ವೇಳೆ ಬಳಸಿದ ಕುರಾನ್ ಮತ್ತು ಪ್ರಮಾಣ ವಚನ ತೆಗೆದುಕೊಂಡ ಜಾಗವು ಬಂಡವಾಳ ಶಾಹಿಗಳಿಗಿಂತ ಹೆಚ್ಚಾಗಿ ಜನಸಾಮಾನ್ಯರ ಒಳಗೊಳ್ಳುವಿಕೆಯನ್ನು ತೋರಿಸುತ್ತದೆ. ಇದು ಕೇವಲ ಧಾರ್ಮಿಕ ವಿಚಾರವಲ್ಲ, ಆರ್ಥಿಕ ವಿಚಾರವೂ ಹೌದು. ಒಬ್ಬ ಡೆಮೊಕ್ರಟಿಕ್ ಸೋಶಿಯಲಿಸ್ಟ್ ವ್ಯಕ್ತಿ ಜಾಗತಿಕ ಹಣಕಾಸು ವ್ಯವಹಾರದ ನ್ಯೂಯಾರ್ಕ್ ನಗರದಲ್ಲಿ ಉಚಿತ ಭಾಗ್ಯಗಳನ್ನು ಕೊಟ್ಟು ಅಧಿಕಾರ ನಡೆಸುವುದು ಸುಲಭದ ಮಾತಲ್ಲ. ಅವರ ಜನಪರ ಯೋಜನೆಗಳು ಆರ್ಥಿಕವಾಗಿ ಎಷ್ಟು ಸಮರ್ಥನೀಯ ಎಂಬುದು ದೊಡ್ಡ ಸವಾಲಾಗಿದೆ.
ಮಮ್ದಾನಿ ಪ್ರಮಾಣ ವಚನ ಸ್ವೀಕಾರಕ್ಕೆ ಆಯ್ಕೆ ಮಾಡಿಕೊಂಡ ಹಳೆಯ ಸುರಂಗ ಮಾರ್ಗ ಮತ್ತು ಕಪ್ಪುವರ್ಣೀಯರ ಇತಿಹಾಸದೊಂದಿಗೆ ನಂಟು ಹೊಂದಿರುವ ಹಳೆಯ ಕುರಾನ್ ಬಳಕೆ ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರವಲ್ಲದೆ, ಅಮೆರಿಕದ ಕಪ್ಪುವರ್ಣೀಯರ ಹೋರಾಟವನ್ನು ಒಗ್ಗೂಡಿಸುವ ಪ್ರಯತ್ನದಂತೆ ಕಾಣುತ್ತದೆ. ಜೊಹ್ರಾನ್ ಮಮ್ದಾನಿ ಅವರ ಗೆಲುವು ನ್ಯೂಯಾರ್ಕ್ ನಗರದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ. ಅಮೆರಿಕದ ಪ್ರಜಾಪ್ರಭುತ್ವವು ವೈವಿಧ್ಯತೆಯನ್ನು ಅಪ್ಪಿಕೊಳ್ಳುವ ಶಕ್ತಿ ಹೊಂದಿದೆ ಎಂಬುದು ತೋರುತ್ತಿದೆ.





