ಜೋಹ್ರಾನ್ ಮಮ್ದಾನಿಯ ಗೆಲುವು ಖಂಡಿತ ಭಾರತದ ಅನೇಕ ನಾಯಕರಿಗೆ ಪಾಠ ಆಗಬೇಕಿದೆ. ಕಾರ್ಪೋರೇಟ್ ಗಳು ನಡೆಸುವ ಲಾಭಿಗೆ ಸಿಲುಕಿ, ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಭಾರತದ ಅನೇಕ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ. ಭಾರತ ಮೊದಲಿನಿಂದಲೂ ನಂಬಿಕೊಂಡು ಬಂದಿರುವುದು ಜಾತ್ಯತೀತ ತತ್ವವನ್ನು. ಇದೇ ಜಾತ್ಯತೀತ ತತ್ವದ ಮೇಲೆ ಮಮ್ದಾನಿ ನ್ಯೂಯಾರ್ಕ್ ನಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ಅಮೆರಿಕದ ಅತಿದೊಡ್ಡ ಮತ್ತು ಆರ್ಥಿಕವಾಗಿ ಬಲಿಷ್ಠವಾದ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಗೆಲುವು ಸಾಧಿಸಿದ್ದಾರೆ. ಭಾರತೀಯ ಮೂಲದ ಮಮ್ದಾನಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ತಮ್ಮದೇ ಪಕ್ಷದ ಹಿರಿಯ ನಾಯಕ, ನ್ಯೂಯಾರ್ಕ್ ನ ಮಾಜಿ ಗವರ್ನರ್ ಆಂಡ್ರೂ ಕುಮೊ ಅವರನ್ನು ಪರಾಭವಗೊಳಿಸಿದ್ದಾರೆ. ಈ ಗೆಲುವನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಅಮೆರಿಕದ ಕಾರ್ಪೊರೇಟ್ ಲಾಭಿ, ಜನಾಂಗೀಯವಾದ, ಅಲ್ಲಿನ ಶಕ್ತಿಗಳು ಹರಡುತ್ತಿದ್ದ ಇಸ್ಲಾಮಾಫೋಬಿಯಾ ಹಾಗೂ ಡೊನಾಲ್ಡ್ ಟ್ರಂಪ್ ನ ಬೆದರಿಕೆ, ಇವೆಲ್ಲವನ್ನೂ ಮೆಟ್ಟಿ ನಿಂತು ಮಮ್ದಾನಿಯ ಈ ಗೆಲುವಿಗೆ ಜಗತ್ತೇ ನಿಬ್ಬೆರಗಾಗಿದೆ. 26 ಶತಕೋಟ್ಯಧಿಪತಿಗಳು, 200 ಕೋಟಿಯಷ್ಟು ಹಣ, ಮಮ್ದಾನಿಯನ್ನು ಸೋಲಿಸಲು ಹೂಡಿಕೆ ಮಾಡಿದರೂ, 34 ವರ್ಷದ ಡೆಮಾಕ್ರಟಿಕ್ ಸಮಾಜವಾದಿ ಎಂದು ಗುರುತಿಸಿಕೊಂಡಿದ್ದ ಭಾರತೀಯ-ಉಗಾಂಡ ಮೂಲದ ಮುಸ್ಲಿಮ್ ಯುವಕ ಜೋಹ್ರಾನ್ ಮಮ್ದಾನಿ ಗೆಲುವು ಸಾಧಿಸಿದರು.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೆರಿದ ದಿನದಿಂದ ಅಮೆರಿಕ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಮಮ್ದಾನಿಯ ಗೆಲುವು ಉತ್ತರದಂತಿದೆ. ಟ್ರಂಪ್ ತಮ್ಮ ಭಾಷಣದಲ್ಲಿ ನ್ಯೂಯಾರ್ಕ್ ಜನತೆಗೆ ನೇರವಾಗಿ ಬೆದರಿಕೆ ಹಾಕಿದ್ದರು. “ಮಮ್ದಾನಿ ಒಬ್ಬ ಕಮ್ಯುನಿಸ್ಟ್ ಅಭ್ಯರ್ಥಿಯಾಗಿದ್ದಾರೆ. ಅವರು ಮೇಯರ್ ಚುನಾವಣೆಯಲ್ಲಿ ಗೆದ್ದರೆ ನ್ಯೂಯಾರ್ಕ್‌ಗೆ ಹಣವನ್ನು ರವಾನಿಸಲು ನನಗೆ ಇಷ್ಟವಿಲ್ಲ. ಆತ ಗೆದ್ದರೆ ನಗರವು ಸಂಪೂರ್ಣ ಸಾಮಾಜಿಕ ಮತ್ತು ಆರ್ಥಿಕ ವಿಪತ್ತಿಗೆ ಸಿಲುಕಲಿದೆ” ಎಂದು ಎಚ್ಚರಿಸಿದ್ದರು. ನಿಜಕ್ಕೂ ಮಮ್ದಾನಿಯ ಗೆಲುವು ತನ್ನ ಎದುರಾಳಿ ಆಂಡ್ರೂ ವಿರುದ್ಧವಲ್ಲ, ಅಮೆರಿಕದ ಅಧ್ಯಕ್ಷ ಟ್ರಂಪ್ ವಿರುದ್ಧ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ : ನ್ಯೂಯಾರ್ಕ್ ನೂತನ ಮೇಯರ್ ಝೋಹ್ರಾನ್ ಮಮ್ದಾನಿ
ವಿಶ್ವದ ಅತ್ಯಂತ ಶ್ರೀಮಂತ ನಗರದಲ್ಲಿ ಕೋಟ್ಯಾಧಿಪತಿ ಬೆಂಬಲಿತ ಅಭ್ಯರ್ಥಿಯನ್ನು ಒಬ್ಬ ಸಾಮಾನ್ಯ ಸಮಾಜವಾದಿ ಮುಸ್ಲಿಂ ನಾಯಕ ಜೋಹ್ರಾನ್ ಮಮ್ದಾನಿ ಸೋಲಿಸಿದ್ದು ಜಾಗತಿಕ ಪ್ರಜಾಪ್ರಭುತ್ವದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಜಾಪ್ರಭತ್ವ ಇರುವುದು ಜನಸೇವೆಗೆ ಹೊರತು, ಪ್ರಭಾವಶಾಲಿಗಳ ಸವಲತ್ತುಗಳನ್ನು ರಕ್ಷಣೆ ಮಾಡುವುದ್ದಕ್ಕಲ್ಲ ಎಂಬುದನ್ನು ಮಮ್ದಾನಿ ಗೆಲುವು ಸಾಬೀತುಪಡಿಸಿದೆ. ಗೆಲುವಿನ ನಂತರ ಮಮ್ದಾನಿ ಮಾಡಿದ ಭಾಷಣದಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1947 ತಮ್ಮ ಭಾಷಣದಲ್ಲಿ ಹೇಳಿದ “ಒಂದು ರಾಷ್ಟ್ರದ ಇತಿಹಾಸದಲ್ಲಿ ಹಳೆಯದನ್ನು ತ್ಯಜಿಸಿ ಹೊಸದನ್ನು ಅಪ್ಪಿಕೊಳ್ಳುವಂತಹ ಅಪರೂಪ ಕ್ಷಣ ಬರುತ್ತದೆ” ಎಂಬ ಸಾಲನ್ನು ನೆನಪಿಸಿಕೊಂಡರು. ಭಾರತದಲ್ಲಿ ಕಳೆದ ಹತ್ತು ವರ್ಷದಿಂದಲೂ ನೆಹರೂ ಅವರನ್ನು ಅವಮಾನಿಸುತ್ತಿರುವಾಗ, ನ್ಯೂಯಾರ್ಕ್ ನೆಲದಲ್ಲಿ ಮಮ್ದಾನಿ, ನೆಹರೂವನ್ನು ನೆನಪಿಸಿಕೊಂಡಿದ್ದು, ಭಾರತದ ನಾಯಕರಿಗೆ ಸಂದೇಶ ನೀಡಿದಂತಿದೆ.

ಗೆಲುವಿನ ನಂತರ ಮಾಡಿದ ತಮ್ಮ ಭಾಷಣದಲ್ಲಿ “ನ್ಯೂಯಾರ್ಕ್ ನಗರ ವಲಸಿಗರ ನಗರ, ವಲಸಿಗರಿಂದ ನಿರ್ಮಿಸಲ್ಪಟ್ಟ ನಗರ, ವಲಸಿಗರೇ ನಡೆಸಲ್ಪಡುವ ನಗರ ಮತ್ತು ಇಂದಿನಿಂದ ಒಬ್ಬ ವಲಸಿಗನೇ ಆಳುವ ನಗರವಾಗಿ ಬದಲಾಗಿದೆ” ಎಂದರು. “ಟ್ರಂಪ್ ನಿಮಗೆ ನಾಲ್ಕು ಪದಗಳನ್ನು ಹೇಳಲು ಬಯಸುತ್ತೇನೆ. Turn the volume up – ವಾಲ್ಯೂಮ್ ಅನ್ನು ಹೆಚ್ಚಿಸಿಕೊಳ್ಳಿ” ಎಂದು ಹೇಳಿ ನ್ಯೂಯಾರ್ಕ್ ನಗರದ ಜನರಿಗೆ ಭರವಸೆಯ ಕಿರಣದಂತೆ ಕಂಡರು. ಡೊನಾಲ್ಡ್ ಟ್ರಂಪ್ ಎಷ್ಟೇ ಅಪಪ್ರಚಾರಗಳನ್ನು ಮಾಡಿದರೂ, ನ್ಯೂಯಾರ್ಕ್ ನಗರದಲ್ಲಿರುವ ಮತದಾರರಿಗೆ ಬೆದರಿಕೆ ಹಾಕಿದರೂ, 34 ವರ್ಷದ ಜೋಹ್ರಾನ್ ಮಮ್ದಾನಿ ಗೆದ್ದು ಮೊದಲ ಮುಸ್ಲಿಂ ಮೇಯರ್ ಆಗಿದ್ದಾರೆ. ಇವರ ಬೇರುಗಳು ಭಾರತದಲ್ಲಿವೆ. ಸಲಾಂ ಬಾಂಬೆ ಖ್ಯಾತಿಯ ಸಿನಿಮಾ ನಿರ್ದೇಶಕಿ ಮೀರಾ ನಾಯರ್ ಮತ್ತು ಗುಜರಾತ್ ಸಂಜಾತ ಮಹಮೂದ್ ಮಮ್ದಾನಿ ಅವರ ಮಗನೇ ಈ ಜೋಹ್ರಾನ್ ಮಮ್ದಾನಿ. ಜೋಹ್ರಾನ್ ನ್ಯೂಯಾರ್ಕ್ ನಗರದ ವಲಸೆ, ಬಡತನ, ಸೇರಿದಂತೆ ಅಮೆರಿಕದ ಹಾಗೂ ಜಗತ್ತಿನ ಅನೇಕ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸದಾ ಎಚ್ಚರದಿಂದಿದ್ದು, ಜಾಗೃತವಾಗಿ ಪ್ರತಿಕ್ರಿಯಿಸುತ್ತಿದ್ದರು.
ಡೊನಾಲ್ಡ್ ಟ್ರಂಪ್, ಜೋಹ್ರಾನ್ ಅವರನ್ನು “ನೂರು ಶೇಕಡಾ ಕಮ್ಯೂನಿಸ್ಟ್ ಹುಚ್ಚ” ಎಂದಿದ್ದರು. ಅದಕ್ಕೆ ಜೋಹ್ರಾನ್ ಪ್ರತಿಕ್ರಿಯಿಸಿ, “ನಾನು ಟ್ರಂಪ್ ಅವರ ಅತಿ ಕೆಟ್ಟ ದುಃಸ್ವಪ್ನ” ಎಂದು ದಿಟ್ಟವಾಗಿ ತಿರುಗೇಟು ಕೊಟ್ಟಿದ್ದರು. ಮಮ್ದಾನಿ ವಿರುದ್ಧ ಅತ್ಯಂತ ಕೀಳು ಮಟ್ಟದ ಕಾರ್ಟೂನ್ ಗಳನ್ನು ತಯಾರಿಸಿ ಅಪಪ್ರಚಾರ ಮಾಡಲಾಯಿತು. ಆತನಿಗೆ “ಯಹೂದಿ ವಿರೋಧಿ” ಎಂಬ ಪಟ್ಟಕಟ್ಟಲು ಪ್ರಯತ್ನಿಸಿದರು. ಮಮ್ದಾನಿ ವಿರುದ್ಧ ಅನೇಕ ದ್ವೇಷದ ಪ್ರಚಾರಗಳನ್ನು ನಡೆಸಲು ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗಿತ್ತು. ಇದ್ಯಾವುದಕ್ಕೂ ಹೆದರಿಕೊಳ್ಳದ ಮಮ್ದಾನಿ 46,000 ಸ್ವಯಂ ಸೇವಕರ ಪ್ರಚಾರ ತಂಡವನ್ನು ಕಟ್ಟಿಕೊಂಡರು. ಈ ತಂಡವು ಹತ್ತು ಲಕ್ಷಕ್ಕೂ ಹೆಚ್ಚು ಮನೆಗಳ ಬಾಗಿಲು ತಟ್ಟಿದೆ. ನ್ಯೂಯಾರ್ಕ್ ನಲ್ಲಿ ಒಟ್ಟು 83 ಲಕ್ಷ ಜನ ಇದ್ದು, ಅಷ್ಟು ಜನರಲ್ಲಿ ಅಂದಾಜು 25 ಲಕ್ಷದಷ್ಟು ಜನರಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಇದನ್ನರಿತ ಮಮ್ದಾನಿ ಹಿಂದಿ, ಉರ್ದು, ಬಂಗಾಳಿ, ಸ್ಪ್ಯಾನಿಷ್ ಭಾಷೆಗಳಲ್ಲಿ ಜನರೊಂದಿಗೆ ನೇರವಾಗಿ ಸಂವಾದ ನಡೆಸಲು ಶುರು ಮಾಡಿದರು. ಇನ್ಸ್ಟಾಗ್ರಾಂ, ಟಿಕ್ ಟಾಕ್ ತರದ ಸಾಮಾಜಿಕ ಮಾಧ್ಯಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡರು. ನೀರಸ ರಾಜಕೀಯ ಭಾಷಣಗಳ ಬದಲು, ಹಾಸ್ಯ ಮಾಡುವ ಮೂಲಕ, ಬಾಲಿವುಡ್ ಚಿತ್ರದ ಹಾಡುಗಳನ್ನು ಹೇಳುವ ಮೂಲಕ, ಅಮಿತಾಭ್ ಬಚ್ಚನ್ ಅವರ ದೀವಾರ್ ಸಿನಮಾದ “ತುಮ್ಹಾರೆ ಪಾಸ್ ಕ್ಯಾ ಹೈ?” ಡೈಲಾಗಿ ಹೇಳಿ, ಅದಕ್ಕೆ ಜೋಹ್ರಾನ್ “ಮೇರೆ ಪಾಸ್…. ಐ ಹ್ಯಾವ್ ದಿ ಪೀಪಲ್” ಎಂದು ಪ್ರತಿಕ್ರಿಯಿಸಿದ್ದು ಸಾಕಷ್ಟು ವೈರಲ್ ಆಗಿತ್ತು.

ಭಾರತ ಸಂಜಾತ ಮಮ್ದಾನಿ, ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿದ್ದರು. ಗುಜರಾತ್ ಗಲಭೆಗಳನ್ನು ಉಲ್ಲೇಖಿಸಿ, ಈ ಗಲಭೆಯ ಹಿಂದಿರುವುದು ನರೇಂದ್ರ ಮೋದಿ, ಅದಕ್ಕೆ ನರೇಂದ್ರ ಮೋದಿ “ಯುದ್ಧ ಅಪರಾಧಿ” ಎಂದಿದ್ದರು. ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ‘ಹಿಂದೂ ಆಗಿದ್ದ ನನ್ನ ತಾತ ಉರ್ದು ಕಾವ್ಯ ಓದುತ್ತಿದ್ದರು ಮತ್ತು ಮುಸ್ಲಿಂ ಆಗಿದ್ದ ನನ್ನ ಅಜ್ಜಿ ಗುಜರಾತಿನಲ್ಲಿ ಭಜನೆಗಳನ್ನು ಹಾಡುತ್ತಿದ್ದರು. ಇಂತಹ ಬಹುತ್ವ ಇರುವ ಭಾರತ ದೇಶದಲ್ಲಿ ಬಿಜೆಪಿಯು ಕೋಮು ದ್ವೇಷವನ್ನು ಬಿತ್ತುತ್ತಿದೆ, ರಾಜಕೀಯ ಧ್ರುವೀಕರಣಕ್ಕಾಗಿ ಸಮುದಾಯಗಳ ನಡುವೆ ಹಿಂಸೆಯನ್ನು ಪ್ರಚೋದಿಸುತ್ತಿದೆ” ಎಂದು ಕಟುವಾಗಿ ಟೀಕಿಸಿದ್ದರು. ಮಮ್ದಾನಿಯ ಬಿಜೆಪಿ ಮತ್ತು ಮೋದಿ ವಿರುದ್ಧದ ಟೀಕೆಯು ಅಮೆರಿಕದ ಹೊರಗೂ ಮತ್ತು ಒಳಗೂ ಕೆರಳಿಸುತ್ತಿದೆ ಎಂದು ಅಪಪ್ರಚಾರ ನಡೆಸಲಾಯಿತು. ಆದರೆ ಅಮೆರಿಕದಲ್ಲಿರುವ ಹಿಂದೂಗಳೇ ಮಮ್ದಾನಿಯ ಪರವಾಗಿ “Hindus For Zohran” ಎಂಬಂತಹ ಅಭಿಯಾನಗಳನ್ನು ಮಾಡಿದರು.

ಅದೇ ರೀತಿ ಇಸ್ರೇಲ್ ಮಾಡುತ್ತಿರುವ ಜನಾಂಗೀಯ ನರಮೇಧದ ವಿರುದ್ಧ ಮಮ್ದಾನಿ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದರು. ಇಸ್ರೇಲ್, ಪ್ಯಾಲಸ್ತೀನ್ ಮೇಲೆ ನಡೆಸುತ್ತಿರುವ ಆಕ್ರಮಣಕಾರಿ ನೀತಿಗಳ ವಿರುದ್ಧ ಧ್ವನಿ ಎತ್ತಿದ್ದರು. “ನೇತನ್ಯಾಹು ನ್ಯೂಯಾರ್ಕ್ ಗೆ ಬಂದರೆ, ನಾನು ಅವನನ್ನು ಬಂಧಿಸುತ್ತೇನೆ” ಎಂದು ಹೇಳಿದ್ದರು. ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಬೀಕರತೆಯನ್ನು ಅಮೆರಿಕ ಜನರಿಗೆ ಬಿಡಿಸಿ ಬಿಡಿಸಿ ಹೇಳುತ್ತಿದ್ದರು. ಇಸ್ರೇಲ್ ಅನ್ನು ಹೊರತುಪಡಿಸಿ ಅತಿ ಹೆಚ್ಚು ಯಹೂದಿ ಜನಸಂಖ್ಯೆ ಇರುವ ನಗರವಾದ ನ್ಯೂಯಾರ್ಕ್ ನಗರದಲ್ಲಿ ಮಮ್ದಾನಿಗೆ ಅತಿ ಹೆಚ್ಚು ಮತ ಬಂದಿದ್ದೇ ಯಹೂದಿಗಳಿಂದ. ಅಮೆರಿಕದಲ್ಲಿರುವ ಯಹೂದಿಗಳು ಸಹ ಮಮ್ದಾನಿಯ ಪರವಾಗಿ “Jews for Mamdani” ಎಂಬ ಅಭಿಯಾನವನ್ನು ನಡೆಸಿದರು.
“ನಾನು ಯುವಕ, ನಾನು ಮುಸ್ಲಿಂ ಜೊತೆಗೆ ನಾನು ಡೆಮಾಕ್ರಟಿಕ್ ಸಮಾಜವಾದಿ” (I’m young, I’m muslim and I’m a democratic socialist) ಎಂದು ದಿಟ್ಟವಾಗಿ ಹೇಳುವ ಮಮ್ದಾನಿ ತನ್ನ ಗುರುತನ್ನು ಎಂದಿಗೂ ಮರೆಮಾಚಲಿಲ್ಲ. ಧರ್ಮದ ಹೆಸರಲ್ಲಿ ದ್ವೇಷ ಹರಡುವ ರಾಜಕಾರಣವನ್ನು ಸೋಲಿಸಿದರು. ಜನರ ಕ್ರೌಡ್ ಫಂಡ್ ಮೂಲಕವೇ ಚುನಾವಣೆಯನ್ನು ಎದುರಿಸುವ ಮೂಲಕ ಮಮ್ದಾನಿ ತಾನು ಅಮೆರಿಕದ ಶ್ರೀಮಂತ ಕುಳಗಳನ್ನು ಪ್ರತಿನಿಧಿಸುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಸಮಾಜವಾದಿ ಆಶಯವನ್ನು ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎತ್ತಿ ಹಿಡಿದಿದ್ದರು. ಅಮೆರಿಕದಲ್ಲಿರುವ ವೈವಿಧ್ಯತೆಯನ್ನು ಮಮ್ದಾನಿ ಚುನಾವಣೆಯ ಉದ್ದಕ್ಕೂ ಗೌರವಿಸಿದ್ದಾರೆ.
ಗ್ಯಾರಂಟಿ ಭರವಸೆಗಳ ಮೂಲಕ ಜನಮನ ಗೆದ್ದ ಮಮ್ದಾನಿ
ಜೋಹ್ರಾನ್ ಮಮ್ದಾನಿ ಅಮೆರಿಕದ ಕ್ವೀನ್ಸ್ ಬೀದಿಗಳಲ್ಲಿ ಕಾರ್ಮಿಕ ವರ್ಗದವರೊಂದಿಗೆ ಓಡಾಡಿ ಅವರೊಟ್ಟಿಗೆ ರೋಟಿ, ಕಪಡ, ಮಖಾನ್ ಘೋಷಣೆಗಳನ್ನು ಕೂಗಿದ್ದವರು. ಅಂದರೆ ಮನುಷ್ಯರಿಗೆ ಮೂಲಭೂತವಾಗಿ ಊಟ, ಬಟ್ಟೆ, ಮನೆ ಬೇಕು ಎಂಬ ತತ್ವವನ್ನು ಜಗತ್ತಿಗೆ ಹೇಳಿದವರು ಈ ಮಮ್ದಾನಿ.
ವಲಸಿಗರೆ ಹೆಚ್ಚಿನ ಸಂಖ್ಯೆಯಲ್ಲಿರುವ ನ್ಯೂಯಾರ್ಕ್ ನಗರದಲ್ಲಿ ಜೀವನ ವೆಚ್ಚ ಭಾರೀ ದುಬಾರಿ. ಇಲ್ಲಿ ಬಾಡಿಗೆ ಹೆಚ್ಚು. ನ್ಯೂಯಾರ್ಕ್ ನ ಬಹುಪಾಲು ಜನರಿಗೆ ಸ್ವಂತ ಮನೆಗಳಿಲ್ಲ. ಅಂದಾಜಿನ ಪ್ರಕಾರ 20 ಲಕ್ಷದಷ್ಟು ಜನರು ದೊಡ್ಡ ದೊಡ್ಡ ಬಾಡಿಗೆ ಅಪಾರ್ಟ್ ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಅದಕ್ಕೆ ಬಾಡಿಗೆ ಹೆಚ್ಚಿಸುವವರಿಗೆ ನಿಯಂತ್ರಣ ಹೇರುವ ಮತ್ತು ಅಲ್ಲಿಗೆ ವಲಸೆ ಬಂದಂತಹ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸಿಕೊಡುವ ಭರವಸೆಯನ್ನು ಕೊಟ್ಟಿದ್ದಾರೆ. ಅದಕ್ಕಾಗಿ ನ್ಯೂಯಾರ್ಕ್ ನಗರದ ಜನರು ಎದುರಿಸುತ್ತಿರುವ ಆರ್ಥಿಕ ಹೊರೆಯನ್ನು ಇಳಿಸುವುದಾಗಿ ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್ ನಗರದ ಭದ್ರತೆಗೆ ವಿಶೇಷ ಗಮನ ಕೊಡುವುದು, ಜನರ ಜೇಬಿಗೆ ಹೊರೆಯಾಗದಂತೆ ಸ್ಥಳೀಯ ಆಡಳಿತ ಮಾಲೀಕತ್ವದ ದಿನಸಿ ಮಳಿಗೆಗಳ ಸ್ಥಾಪನೆ, ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ, ಕಾರ್ಪೋರೇಟ್ ಶೋಷಣೆಗೆ ಕಡಿವಾಣ ಹಾಕುವುದು, 5 ವಾರಗಳಿಂದ ಐದು ವರ್ಷ ವಯಸ್ಸಿನ ಮಕ್ಕಳ ಆರೈಕೆಗೆ ಯೋಜನೆ ರೂಪಿಸುವುದು, ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ಮತ್ತು ಸಂಪನ್ಮೂಲಗಳನ್ನು ಹಂಚಿಕೆ ಮಾಡುವುದು, ಶಿಕ್ಷಕರ ನೇಮಕಾತಿ, ಅವರಿಗೆ ಪೂರಕವಾದ ತರಬೇತಿ ನೀಡುವುದು ಸೇರಿದಂತೆ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಅನೇಕ ನೀತಿಗಳು ಮಮ್ದಾನಿ ಗೆಲುವಿಗೆ ಸಹಕರಿಸಿದವು. ಈ ರೀತಿಯ ಅನೇಕ ಘೋಷಣೆಗಳು ನ್ಯೂಯಾರ್ಕ್ ಜನರ ಮನಸೆಳೆದವು.
ಮೇಲ್ನೋಟಕ್ಕೆ ಈ ನೀತಿಗಳು ಒಂದು ಕಲ್ಯಾಣ ರಾಜ್ಯವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಹಾಕಿಕೊಡುತ್ತವೆ. ಬಹಳ ಮುಖ್ಯವಾಗಿ 85 ಲಕ್ಷ ನ್ಯೂಯಾರ್ಕ್ ಜನರ ಮೂಲಭೂತ ಸೌಲಭ್ಯಗಳ ಭರವಸೆಗಳನ್ನು ಕೊಟ್ಟಂತಿದೆ. ಇದರ ಮೂಲಕ ಸಮಾಜವಾದಿ ಸಿದ್ಧಾಂತ ನಿಲುವನ್ನು ಸ್ಪಷ್ಟವಾಗಿ ಬಲಪಡಿಸಿದಂತಿದೆ. ಬಲಪಂಥೀಯ ಶಕ್ತಿಗಳು ನಡೆಸುತ್ತಿರುವ ದಾಳಿಗಳ ವಿರುದ್ಧ ಅಮೆರಿಕದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ವಿಭಿನ್ನ ದೃಷ್ಟಿಕೋನವನ್ನು ಕೊಡಲು ಮಮ್ದಾನಿ ನ್ಯೂಯರ್ಕ್ ಜನರಲ್ಲಿ ಭರವಸೆಯ ಆಶಾಕಿರಣದಂತೆ ಕಾಣಿಸಿದ್ದಾರೆ.
ಈ ಗೆಲುವು ಭಾರತದ ನಾಯಕರಿಗೆ ಪಾಠ ಆಗಬಹುದೇ?
ಜೋಹ್ರಾನ್ ಮಮ್ದಾನಿಯ ಗೆಲುವು ಖಂಡಿತ ಭಾರತದ ಅನೇಕ ನಾಯಕರಿಗೆ ಪಾಠ ಆಗಬೇಕಿದೆ. ಕಾರ್ಪೋರೇಟ್ ಗಳು ನಡೆಸುವ ಲಾಭಿಗೆ ಸಿಲುಕಿ, ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಭಾರತದ ಅನೇಕ ರಾಜಕಾರಣಿಗಳು ಕಲಿಯುವುದು ಸಾಕಷ್ಟಿದೆ. ಭಾರತ ಮೊದಲಿನಿಂದಲೂ ನಂಬಿಕೊಂಡು ಬಂದಿರುವುದು ಜಾತ್ಯತೀತ ತತ್ವವನ್ನು. ಇದೇ ಜಾತ್ಯತೀತ ತತ್ವದ ಮೇಲೆ ಮಮ್ದಾನಿ ನ್ಯೂಯಾರ್ಕ್ ನಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಜನಸಾಮಾನ್ಯರ ದೈನಂದಿನ ಬದುಕಿನಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿವಹಿಸುವ ಮೂಲಕ, ಸೌಹಾರ್ದತೆಯನ್ನು ಕಾಪಾಡುವ ಮೂಲಕ, ಜನಾಂಗೀಯ ದ್ವೇಷವನ್ನು ಹೊಡೆದುರುಳಿಸಿ, ಎಲ್ಲರನ್ನೂ ಸಮಾನವಾಗಿ ಸಮಾಜವಾದಿ ಆಶಯಗಳ ಮೂಲಕ ಒಂದಾಗಿಸುವ ಮಮ್ದಾನಿಯ ತರಹದ ನಾಯಕನೊಬ್ಬ ಭಾರತಕ್ಕೆ ಬೇಕಾಗಿದೆ. ಅಮೆರಿಕದಲ್ಲಿ ಆಗಿರುವ ಈ ಬದಲಾವಣೆ ಭಾರತದಲ್ಲಿ ಅತ್ಯಗತ್ಯವೆನಿಸಿದೆ. ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯಲು ಅಮೆರಿಕದ ಜನತೆಯೇ ಸಿದ್ದವಿಲ್ಲ ಎಂದು ಘೋಷಿಸಿದ್ದಾರೆ. ಹೀಗಿರುವಾಗ ಟ್ರಂಪ್ ತಾಳಕ್ಕೆ ಕುಣಿಯುವ ನಾಯಕ ಅಗತ್ಯ ಭಾರತಕ್ಕೆ ಇದೆಯಾ? ಖಂಡಿತವಾಗಿ ಯೋಚಿಸುವ ಸಮಯ ಬಂದಿದೆ ಎನಿಸುತ್ತದೆ.





