ಮೂರು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಗೆ ತೆರಳಿದ್ದ ಮಂಡ್ಯದ ನಿವಾಸಿಯೋರ್ವರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಮಂಡ್ಯ ತಾಲೂಕಿನ ಗೂಬೆ ಹಳ್ಳದ ನಿವಾಸಿ ಅಬೂಬಕ್ಕರ್ (30) ಎಂದು ಗುರುತಿಸಲಾಗಿದೆ.
ಅಬೂಬಕ್ಕರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾವು ನಿವಾಸಿಯಾಗಿರುವ ಮುಹಮ್ಮದ್ ಎಂಬುವವರ ಮಗಳನ್ನು ವಿವಾಹವಾಗಿದ್ದರು.
ಮೂರು ದಿನಗಳ ಹಿಂದಷ್ಟೇ ಅಬುಧಾಬಿಯ ಕೆಫೆಯೊಂದರಲ್ಲಿ ಕೆಲಸದ ನಿಮಿತ್ತ ತೆರಳಿದ್ದರು. ಶನಿವಾರ ಸಂಜೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಫೆಯಿಂದ ರೂಮಿಗೆ ತೆರಳಿದ್ದರು. ಮರಳಿ ಕೆಲಸಕ್ಕೆಂದು ಕೆಫೆಗೆ ಬರುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಕುಸಿದುಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೃದಯಾಘಾತದಿಂದ ನಿಧನರಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆ ಮಾಡಲು ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟ ಅಬೂಬಕ್ಕರ್ ಅವರು ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಅರಿತ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್)ನ ಸ್ವಯಂ ಸೇವಕರು, ಮೃತರ ಸಂಪೂರ್ಣ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದು, ಮೃತದೇಹವನ್ನು ಸ್ವಂತ ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಶ್ರಮಿಸುತ್ತಿರುವುದಾಗಿ ತಿಳಿದು ಬಂದಿದೆ.
ಅಬುಧಾಬಿಯಲ್ಲಿ ಭಾನುವಾರ ವಾರದ ರಜಾದಿನವಾಗಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ರವಾನಿಸುವ ಪ್ರಕ್ರಿಯೆ ಸ್ವಲ್ಪ ತಡವಾಗಬಹುದು ಎಂದು ತಿಳಿದು ಬಂದಿದೆ.
ಕೆಸಿಎಫ್ ಯುಎಇ ನಾಯಕರಾದ ಸಮದ್ ಬೀರಾಲಿ, ಹಕೀಂ ತುರ್ಕಳಿಕೆ ಹಾಗೂ ಬ್ಯಾರೀಸ್ ಚೇಂಬರ್ಸ್ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಮೃತಪಟ್ಟ ಅಬೂಬಕ್ಕರ್ ಅವರ ಕುಟುಂಬದ ಸದಸ್ಯರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿಯನ್ನು ಒದಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.





