ದಕ್ಷಿಣ ಫಿಲಿಪೈನ್ಸ್‌ನ ಕರಾವಳಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಮೀಪದ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದ್ದು, ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಫಿಲಿಪೈನ್ಸ್‌ನ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ಪ್ರಕಾರ, ದಾವೊ ಓರಿಯಂಟಲ್ ಪ್ರಾಂತ್ಯದ ಮನಯ್ ಪಟ್ಟಣದಿಂದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್ ದೂರದಲ್ಲಿ ಈ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಇದು ಸಮುದ್ರದ ಅಡಿಯಲ್ಲಿ 10 ಕಿಲೋಮೀಟರ್ ಆಳದಲ್ಲಿ ಇತ್ತು ಎಂದು ಸಂಸ್ಥೆ ವಿವರ ನೀಡಿದೆ.
ಈ ಭೂಕಂಪದಿಂದಾಗಿ ಹಾನಿ ಮತ್ತು ನಂತರದ ಕಂಪನಗಳಾಗುವ ನಿರೀಕ್ಷೆ ಇದೆ ಎಂದು ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ಎಚ್ಚರಿಕೆ ನೀಡಿದೆ.
ಕಂಪನದ ಬೆನ್ನಲ್ಲೇ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು, ಭೂಕಂಪದ ಕೇಂದ್ರ ಬಿಂದುವಿನಿಂದ 300 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಪಾಯಕಾರಿ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಹೇಳಿದೆ. ಭೂಕಂಪದ ಕೇಂದ್ರಕ್ಕೆ ಸಮೀಪವಿರುವ ಕೆಲವು ಫಿಲಿಪ್ಪೀನ್ಸ್ ಕರಾವಳಿಗಳಲ್ಲಿ ಸಾಮಾನ್ಯ ಉಬ್ಬರವಿಳಿತಗಳಿಗಿಂತ 3 ಮೀಟರ್ (10 ಅಡಿ) ಎತ್ತರದ ಅಲೆಗಳು ಅಪ್ಪಳಿಸಬಹುದು.
ಇದನ್ನು ಓದಿದ್ದೀರಾ? ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ: 69 ಸಾವು, 140ಕ್ಕೂ ಹೆಚ್ಚು ಮಂದಿಗೆ ಗಾಯ
ಹಾಗೂ ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲೂ ಸಣ್ಣ ಅಲೆಗಳು ಉಂಟಾಗಬಹುದು ಎಂದು ಸುನಾಮಿ ಎಚ್ಚರಿಕೆ ಕೇಂದ್ರ ಸಂದೇಶವನ್ನು ರವಾನಿಸಿದೆ.
ಕೆಲವೇ ದಿನಗಳ ಹಿಂದೆ, ಅಂದರೆ ಸೆಪ್ಟೆಂಬರ್ 30ರಂದು ಸೆಬು ಪ್ರಾಂತ್ಯದಲ್ಲಿ ಇದೇ ರೀತಿಯ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಈ ದುರಂತದಲ್ಲಿ ಕನಿಷ್ಠ 74 ಜನರು ಸಾವಿಗೀಡಾಗಿ, ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಈ ಘಟನೆಯಿಂದ ದೇಶ ಚೇತರಿಸಿಕೊಳ್ಳುತ್ತಿರುವಾಗಲೇ ಫಿಲಿಪೈನ್ಸ್‌ಗೆ ಮತ್ತೊಂದು ಭೂಕಂಪದ ಆಘಾತ ಎದುರಾಗಿದೆ.
ಫಿಲಿಪೈನ್ಸ್ ದೇಶವು ಪೆಸಿಫಿಕ್ ಮಹಾಸಾಗರದ ‘ರಿಂಗ್ ಆಫ್ ಫೈರ್’ ಮೇಲೆ ನೆಲೆಗೊಂಡಿದೆ. ಈ ಪ್ರದೇಶವು ವಿಶ್ವದಲ್ಲೇ ಅತಿ ಹೆಚ್ಚು ವಿಪತ್ತು ಪೀಡಿತ ಪ್ರದೇಶವಾಗಿದ್ದು, ಈ ಭಾಗದಲ್ಲಿ ಬರುವ ದೇಶಗಳಿಗೆ ಗಂಡಾಂತರ ತಪ್ಪಿದ್ದಲ್ಲ. ಈ ಕಾರಣದಿಂದಾಗಿ ಇಲ್ಲಿ ಆಗಾಗ್ಗೆ ಭೂಕಂಪಗಳು ಹಾಗೂ ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಲೇ ಇರುತ್ತವೆ. ಇದರ ಜೊತೆಗೆ, ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಮತ್ತು ಬಿರುಗಾಳಿಗಳು ಈ ದ್ವೀಪ ಸಮೂಹಕ್ಕೆ ಅಪ್ಪಳಿಸುವುದು ವಾಡಿಕೆ.





