ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಗೆ ಸಂತಾಪ ಸೂಚಿಸಿದರು. ಭಾರತವು ಇಸ್ರೇಲ್ ಜೊತೆಗೆ ‘ಸಂಪೂರ್ಣ ದೃಢವಿಶ್ವಾಸದೊಂದಿಗೆ ನಿಂತಿದೆ’ ಎಂದು ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯದ ಕುರಿತು ತುಟಿಬಿಚ್ಚಲಿಲ್ಲ.
ಒಂದೆಡೆ, ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ. ಕಳೆದ ಮೂರು ವರ್ಷಗಳಿಂದ ಸುಮಾರು 70 ಸಾವಿರ ಪ್ಯಾಲೆಸ್ತೀನಿಯರನ್ನು ಕೊಂದಿದೆ. ತನ್ನ ವಿಧ್ವಂಸಕ ಆಕ್ರಮಣವನ್ನು ಈಗಲೂ ಮುಂದುವರೆಸಿದೆ. ಗಾಜಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು, ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿ ಪ್ಯಾಲೆಸ್ತೀನಿಯರನ್ನು ಜೀತದಾಳುಗಳಾಗಿ ಮಾಡಿಕೊಳ್ಳಲು ಅಮೆರಿಕ ಹವಣಿಸುತ್ತಿದೆ. ಮತ್ತೊಂದೆಡೆ, ಅಮೆರಿಕ ಮತ್ತು ಇರಾನ್ ನಡುವೆ ಮಿಲಿಟರಿ ಸಂಘರ್ಷದ ಅಪಾಯಗಳ ಕುರಿತು ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಆತಂಕಗಳು ಹೆಚ್ಚುತ್ತಿವೆ. ಇದೆಲ್ಲದರ ನಡುವೆಯೇ, ಪ್ರಧಾನಿ ಮೋದಿ ಅವರು ನರಹಂತಕ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಭಾರತ-ಇಸ್ರೇಲ್ ಸಂಬಂಧವನ್ನು ಗಟ್ಟಿಗೊಳಿಸುವ ಅವಕಾಶವೆಂದು ನೋಡುತ್ತಿದ್ದಾರೆ. ತಮ್ಮ ಭೇಟಿಯನ್ನು ಮೋದಿ, ‘ಪಥ ಪರಿವರ್ತನೆಯ ಪ್ರಯಾಣ’ ಎಂದಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಉಭಯ ರಾಷ್ಟ್ರಗಳ ನಡುವಿನ ಅಳಿದುಳಿದಿರುವ ಗೋಡೆಗಳು ಉರುಳಲಿವೆ’ ಎಂದಿದ್ದಾರೆ.
ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ದಾಳಿಗೆ ಸಂತಾಪ ಸೂಚಿಸಿದರು. ಭಾರತವು ಇಸ್ರೇಲ್ ಜೊತೆಗೆ ‘ಸಂಪೂರ್ಣ ದೃಢವಿಶ್ವಾಸದೊಂದಿಗೆ ನಿಂತಿದೆ’ ಎಂದು ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್ ನಡೆಸಿದ ಕ್ರೌರ್ಯದ ಕುರಿತು ತುಟಿಬಿಚ್ಚಲಿಲ್ಲ.
ಭಾರತವು ತನ್ನ ಸುದೀರ್ಘ ಇತಿಹಾಸದಲ್ಲಿ ಬಹುತ್ವ, ಜಾತ್ಯತೀತ, ಸಹಬಾಳ್ವೆಯನ್ನು ಅಳವಡಿಸಿಕೊಂಡಿದೆ. ಆದರೆ, ಮೋದಿ ಆಡಳಿತದಲ್ಲಿ ಇಸ್ಲಾಂ ವಿರೋಧ ರಾಷ್ಟ್ರವಾಗಿ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದೆ. ಪ್ರಸ್ತುತ, ಭಾರತವನ್ನು ಇಸ್ಲಾಂ ವಿರೋಧಿ ರಾಷ್ಟ್ರವೆಂದು ಜಗತ್ತು ನೋಡುತ್ತಿದೆ. ಆದ್ದರಿಂದ, ಭಾರತ ಮತ್ತು ಇಸ್ರೇಲ್ – ಎರಡೂ ರಾಷ್ಟ್ರಗಳು ‘ಇಸ್ಲಾಂ’ಅನ್ನು ಎದುರಿಸುವ ಸವಾಲು ಹೊಂದಿವೆ ನೆತನ್ಯಾಹು ಹೇಳಿಕೊಂಡಿದ್ದಾರೆ.
ಹಿಂದು ರಾಷ್ಟ್ರೀಯವಾದಿ (ಅಕ್ಷರಶಃ ಕೋಮುವಾದಿ) ಮೋದಿ, 2017ರಲ್ಲಿಯೂ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಇತಿಹಾಸದಲ್ಲಿ ಇಸ್ರೇಲ್ ನೆಲದಲ್ಲಿ ಕಾಲಿಟ್ಟ ಭಾರತದ ಮೊದಲ ಪ್ರಧಾನಿಯೂ ಮೋದಿಯೇ ಆಗಿದ್ದರು. ಆ ಭೇಟಿಯ ಬಳಿಕ ಇಸ್ರೇಲ್‌ನ ಹೈಫಾ ಬಂದರಿನ ನಿರ್ವಹಣೆಯು ಅದಾನಿ ಗ್ರೂಪ್‌ನ ವಶವಾಯಿತು. ಇಂದಿನ ಭೇಟಿಯು ಕೃತಕ ಬುದ್ಧಿಮತ್ತೆ (AI) ಮತ್ತು ರಕ್ಷಣಾ ವಿಷಯಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದಾನಿ ಅಥವಾ ಅಂಬಾನಿಗೆ ಇದರಿಂದ ಲಾಭವಾಗುವ ನಿರೀಕ್ಷೆಯೂ ಇದೆ.
ಅದೇನೇ ಇರಲಿ, ಒಂದು ಕಾಲದಲ್ಲಿ ಭಾರತದಲ್ಲಿ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತಿದ್ದ ಮತ್ತು ರಹಸ್ಯವಾಗಿ ನಡೆಯುತ್ತಿದ್ದ ಇಸ್ರೇಲ್ ಜೊತೆಗಿನ ಸಂಬಂಧವು ಈಗ ಅತ್ಯಂತ ಸಾರ್ವಜನಿಕ ಸ್ನೇಹವಾಗಿ ಕಾಣಿಸಿಕೊಂಡಿದೆ. ಗಾಜಾ ಮೇಲೆ ಇಸ್ರೇಲ್ ಎಸಗಿದ ಕ್ರೌರ್ಯ ಮತ್ತು ಯುದ್ಧಾಪರಾಧಗಳಿಗಾಗಿ ಇಸ್ರೇಲ್ ಪ್ರಧಾನಿಯ ವಿರುದ್ಧ 2024ರ ಕೊನೆಯಲ್ಲಿ ‘ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್’ ಬಂಧನ ವಾರಂಟ್ ಹೊರಡಿಸಿದ್ದರೂ ಸಹ, ನೆತನ್ಯಾಹು ಅವರನ್ನು ಮೋದಿ ತಮ್ಮ ‘ಆಪ್ತ ಸ್ನೇಹಿತ’ ಎಂದು ಪದೇ-ಪದೇ ಬಣ್ಣಿಸಿದ್ದಾರೆ.
ಭಾರತವು ಇಸ್ರೇಲ್ ಕಡೆಗೆ ವಾಲಿರುವುದನ್ನು ಭಾರತೀಯ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ‘ಪ್ರಾಯೋಗಿಕ ಧೋರಣೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ತಾಂತ್ರಿಕ ಮತ್ತು ಮಿಲಿಟರಿ ಪರಿಣತಿಯನ್ನು ಹೊಂದಿರುವ ಇಸ್ರೇಲ್ ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸುತ್ತಾರೆ. ಜೊತೆಗೆ, ಅರಬ್ ಮಿತ್ರರಾಷ್ಟ್ರಗಳೊಂದಿಗಿನ ಸಂಬಂಧವನ್ನು ಭಾರತವು ಬಲಪಡಿಸಲಿದೆ, ಸಮತೋಲನ ಕಾಪಾಡಲಿದೆ ಎಂದು ಹೇಳಿಕೊಳ್ಳುತ್ತಾರೆ.
2023ರ ಅಕ್ಟೋಬರ್‌ನಲ್ಲಿ ಗಾಜಾ ಮೇಲೆ ಇಸ್ರೇಲ್ ಆಕ್ರಮಣ ಆರಂಭಿಸಿದ ನಂತರವೂ ಹಲವಾರು ಪಾಶ್ಚಿಮಾತ್ಯ ನಾಯಕರು ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಆದರೆ, ಗ್ಲೋಬಲ್ ಸೌತ್‌ನ ಕೆಲವೇ ನಾಯಕರು ಮಾತ್ರ ಅಲ್ಲಿಗೆ ಹೋಗಿದ್ದಾರೆ. ಉದಯೋನ್ಮುಖ ಆರ್ಥಿಕತೆಗಳ ನಡುವೆ ಇಸ್ರೇಲ್‌ನ ಸ್ನೇಹಿತರಾಗಿ ಕಾಣಿಸಿಕೊಳ್ಳಲು ಸಿದ್ಧವಿರುವ ದೇಶಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರಸ್ತುತ, ಜಾಗತಿಕವಾಗಿ ಇಸ್ರೇಲ್ ಹೆಚ್ಚು ಸ್ನೇಹಿತರನ್ನು ಹೊಂದಿಲ್ಲ. ಇದೆ ಸಮಯದಲ್ಲಿ, ಮೋದಿಯವರ ಭೇಟಿ ಗಮನಾರ್ಹವಾಗಿದೆ ಭಾರತವು ಇಸ್ರೇಲ್‌ನ ಉತ್ತಮ ಸ್ನೇಹಿತನೆಂಬ ಪಾತ್ರ ನಿರ್ವಹಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಅಂದಹಾಗೆ, ಗಾಜಾ ಮೇಲಿನ ಇಸ್ರೇಲ್ ಕ್ರೌರ್ಯವನ್ನು ಮರೆಮಾಚಿ, ಇಸ್ರೇಲ್ ಮೇಲಿನ ಹಮಾಸ್ ನೇತೃತ್ವದ ದಾಳಿಯನ್ನು ಮಾತ್ರವೇ ಖಂಡಿಸಿದ ಮತ್ತು ಇಸ್ರೇಲ್‌ಗೆ ಬೆಂಬಲ ನೀಡಿದ ವಿಶ್ವದ ಮೊದಲ ನಾಯಕರಲ್ಲಿ ಮೋದಿಯೂ ಒಬ್ಬರಾಗಿದ್ದರು.
2023ರಲ್ಲಿ ಹಮಾಸ್ ದಾಳಿಯಲ್ಲಿ ಜೀವತೆತ್ತ 1,700 ಇಸ್ರೇಲಿಗರಿಗೆ ಬುಧವಾರ ಮೋದಿ ಸಂತಾಪ ಸೂಚಿಸಿದ್ದಾರೆ. “ಶಾಂತಿಯ ಹಾದಿ ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಈ ಪ್ರದೇಶದಲ್ಲಿ ಸಂವಾದ, ಶಾಂತಿ ಮತ್ತು ಸ್ಥಿರತೆಗಾಗಿ ಭಾರತವು ನಿಮ್ಮೊಂದಿಗೆ (ಇಸ್ರೇಲ್) ಮತ್ತು ಪ್ರಪಂಚದೊಂದಿಗೆ ಇರುತ್ತದೆ. ನಾವು ನಿಮ್ಮ ನೋವನ್ನು ಅರ್ಥ ಮಾಡಿಕೊಳ್ಳುತ್ತೇವೆ. ನಿಮ್ಮ ದುಃಖದಲ್ಲಿ ಭಾಗಿಯಾಗುತ್ತೇವೆ. ಈ ಕ್ಷಣದಲ್ಲಿ ಮತ್ತು ಅದರ ನಂತರವೂ ಭಾರತವು ಇಸ್ರೇಲ್‌ನೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಮೋದಿ ಹೇಳಿದ್ದಾರೆ.
ಆದರೆ, ಇದೇ 2023ರಿಂದ ಇಂದಿನವರೆಗೆ ಗಾಜಾದಲ್ಲಿ 70,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಇಸ್ರೇಲ್ ಕೊಂದಿದೆ. ಆದರೆ, ಆ ಜೀವಗಳ ಕುರಿತು ಮೋದಿ ಎಲ್ಲಿಯೂ ಮಾತನಾಡಿಲ್ಲ. ಇಸ್ರೇಲ್‌ನ ಕ್ರಮವನ್ನು ಎಂದಿಗೂ ಖಂಡಿಸಿಲ್ಲ. ಇಸ್ರೇಲ್ ಕ್ರೌರ್ಯವನ್ನು ಟೀಕಿಸಲು ಮೋದಿ ಸರ್ಕಾರ ಹಿಂಜರಿಯುತ್ತಿದೆ. 2023ರ ಅಕ್ಟೋಬರ್‌ನಲ್ಲಿ ಇಸ್ರೇಲ್‌ನ ಕ್ರೌರ್ಯವನ್ನು ಖಂಡಿಸಿ ಯೂರೋಪ್ ರಾಷ್ಟ್ರಗಳು ಸೇರಿದಂತೆ 80ಕ್ಕೂ ಹೆಚ್ಚು ದೇಶಗಳು ಖಂಡನಾ ಹೇಳಿಕೆಗೆ ಸಹಿ ಹಾಕಿದವು. ಆದರೆ, ಆ ಹೇಳಿಕೆಗೆ ಮೋದಿ ಸಹಿಹಾಕಲಿಲ್ಲ. ತೀವ್ರ ಟೀಕೆಗೆ ಗುರಿಯಾದ ಬಳಿಕವಷ್ಟೇ, ಭಾರತ ಸಹಿಹಾಕಿತು. ಆದಾಗ್ಯೂ, ಇಂದಿನ ಭೇಟಿಯಲ್ಲಿ ತಮ್ಮ ನಿಲುವನ್ನು ಮೋದಿ ಸ್ಪಷ್ಟಪಡಿಸಲಿಲ್ಲ.
ಭಾರತ-ಇಸ್ರೇಲ್ ಸಂಬಂಧ ಬೆಳವಣಿಗೆಯು ಪ್ಯಾಲೆಸ್ತೀನಿಯರು ಮತ್ತು ಪ್ಯಾಲೆಸ್ತೀನ್ ಜೊತೆಗಿನ ಭಾರತದ ಸಂಬಂಧಕ್ಕೆ ಹಾಗೂ ಭಾರತದ ನೈತಿಕ ವಿಶ್ವಾಸಾರ್ಹತೆಗೆ ದೊಡ್ಡ ಪೆಟ್ಟು ನೀಡಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ. “ಪ್ಯಾಲೆಸ್ತೀನ್ ಪರವಾದ ಹಿತಾಸಕ್ತಿಯನ್ನು ಬಲಿಕೊಟ್ಟು, ಇಸ್ರೇಲ್ ಕುರಿತು ಒಲವು ಹೊಂದಿರುವ ಈ ತಿರುವು ಭಾರತದ ನೈತಿಕ ಶಕ್ತಿಯನ್ನು ಕಸಿದುಕೊಂಡಿದೆ. ಗಾಜಾ ಮೇಲೆ ನಡೆಯುತ್ತಿರುವ ಆಕ್ರಮಣದ ನಡುವೆಯೇ ಸಂಭವಿಸಿರುವ ಮೋದಿ ಭೇಟಿಯು ‘ವರ್ಣಭೇದ ನೀತಿ’ ಅನುಸರಿಸುತ್ತಿರುವ ಇಸ್ರೇಲ್‌ಗೆ ನ್ಯಾಯಸಮ್ಮತತೆಯನ್ನು ನೀಡಿದಂತಾಗುತ್ತದೆ” ಎಂದು ದೆಹಲಿಯ ‘ಪರ್ಸ್ಪೆಕ್ಟಿವ್ಸ್ ಫೌಂಡೇಶನ್ ಥಿಂಕ್ ಟ್ಯಾಂಕ್’ನ ಹಿರಿಯ ಸದಸ್ಯ ಅನ್ವರ್ ಆಲಂ ಹೇಳಿದ್ದಾರೆ.
ವಸಾಹತುಶಾಹಿ ಆಡಳಿತದಿಂದ ಮುಕ್ತವಾದ ನಂತರ, ವಿಶ್ವ ವೇದಿಕೆಯಲ್ಲಿ ಭಾರತವು ಪ್ಯಾಲೆಸ್ತೀನ್ ಪರವಾಗಿ ದೃಢವಾಗಿ ನಿಂತಿತ್ತು. 1947ರಲ್ಲಿ ಭಾರತವು ಪ್ಯಾಲೆಸ್ತೀನ್ಅನ್ನು ವಿಭಜಿಸುವ ವಿಶ್ವಸಂಸ್ಥೆಯ ಯೋಜನೆಯನ್ನು ವಿರೋಧಿಸಿತ್ತು. ಅಲ್ಲದೆ, ನಾಲ್ಕು ದಶಕಗಳ ನಂತರ, 1988ರಲ್ಲಿ, ಪ್ಯಾಲೆಸ್ತೀನ್ಅನ್ನು ರಾಷ್ಟ್ರವಾಗಿ ಗುರುತಿಸಿದ ಮೊದಲ ಅರಬ್‌ಯೇತರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು.
ಭಾರತವು ಅಲಿಪ್ತ ನೀತಿಯನ್ನು ಹೊಂದಿದ್ದರೂ, ಸೋವಿಯತ್ ಒಕ್ಕೂಟದ ಕಡೆಗೆ ಒಲವು ಹೊಂದಿತ್ತು. ಆದಾಗ್ಯೂ, ಶೀತಲ ಸಮರದ ಅಂತ್ಯವು ಭಾರತದ ಲೆಕ್ಕಾಚಾರಗಳು ಬದಲಾಗುವಂತೆ ಮಾಡಿತು. ಅಮೆರಿಕದೊಂದಿಗಿನ ಸಂಪರ್ಕದ ಜೊತೆಗೆ, ಭಾರತವು 1992ರಲ್ಲಿ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿತು. ಅಂದಿನಿಂದ, ಈ ಸ್ನೇಹಕ್ಕೆ ರಕ್ಷಣಾ ಸಂಬಂಧಗಳು ಅಡಿಪಾಯವಾದವು. ಮೋದಿ ಆಡಳಿತದಲ್ಲಿ ರಕ್ಷಣಾ ಕ್ಷೇತ್ರ ಮಾತ್ರವಲ್ಲದೆ, ಇತರ ಕ್ಷೇತ್ರಗಳಿಗೂ ಉಭಯ ರಾಷ್ಟ್ರಗಳ ಸಂಬಂಧ ವಿಸ್ತರಿಸಿದೆ.
ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುತ್ತೇವೆಂಬ ಹುಸಿ ಸಿದ್ಧಾಂತ ಹೊಂದಿರುವ ಮೋದಿ ಅವರ ಬಿಜೆಪಿ, ‘ಭಾರತವು ವಿಶ್ವದ ಯಾವುದೇ ಮೂಲೆಯಲ್ಲಿರುವ ಹಿಂದುಗಳಿಗೆ ನೈಸರ್ಗಿಕ ತಾಯ್ನಾಡು’ ಎಂಬ ಧೋರಣೆಯನ್ನು ಹೊಂದಿದೆ. ಇದು ಇಸ್ರೇಲ್ ತನ್ನನ್ನು ತಾನು ಯಹೂದಿ ತಾಯ್ನಾಡು ಎಂದು ನೋಡುವ ದೃಷ್ಟಿಕೋನಕ್ಕೆ ಹೊಂದಿಕೊಂಡಿದೆ. ಹೀಗಾಗಿಯೇ, ಮೋದಿ ಆಡಳಿತದ ಭಾರತ ಮತ್ತು ನೆತನ್ಯಾಹು ನೇತೃತ್ವದ ಇಸ್ರೇಲ್ ಎರಡೂ ‘ಇಸ್ಲಾಮಿಕ್ ವಿರೋಧಿ’ ರಾಷ್ಟ್ರಗಳಾಗಿ ಗುರುತಿಸಿಕೊಂಡಿವೆ.
ಮೋದಿ ಆಡಳಿತದಲ್ಲಿ ಭಾರತವು ಇಸ್ರೇಲ್‌ನ ಅತಿದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ರಾಷ್ಟ್ರವಾಗಿದೆ. ಅಲ್ ಜಜೀರಾ ತನಿಖೆಯ ಪ್ರಕಾರ, 2024ರಲ್ಲಿ ಇಸ್ರೇಲ್ ಗಾಜಾ ಮೇಲೆ ಯುದ್ಧ ನಡೆಸುತ್ತಿದ್ದಾಗ, ಭಾರತೀಯ ಶಸ್ತ್ರಾಸ್ತ್ರ ಸಂಸ್ಥೆಗಳು ಇಸ್ರೇಲ್‌ಗೆ ರಾಕೆಟ್ ಮತ್ತು ಸ್ಫೋಟಕಗಳನ್ನು ಮಾರಾಟ ಮಾಡಿವೆ.
ಇತ್ತೀಚೆಗೆ, ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿಯನ್ನು ಹೊಂದಿರುವ ತಿಳುವಳಿಕಾ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ. ಭಾರತವು ಇಸ್ರೇಲ್‌ನೊಂದಿಗೆ ಜಂಟಿಯಾಗಿ ಆ್ಯಂಟಿ-ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಎದುರು ನೋಡುತ್ತಿದೆ.
ಇದೆಲ್ಲದರ ನಡುವೆ, ಮೋದಿಯವರ 2017ರ ಭೇಟಿಯು ಇತ್ತೀಚೆಗೆ ಭಾರೀ ಚರ್ಚೆ ಹುಟ್ಟುಹಾಕಿದೆ. ಲೈಂಗಿಕ ಅಪರಾಧಿ ‘ಜೆಫ್ರಿ ಎಪ್ಸ್ಟೀನ್’ಗೆ ಸಂಬಂಧಿಸಿದ ಫೈಲ್‌ಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದೆ. ಅದರಲ್ಲಿನ ಒಂದು ಇಮೇಲ್ ಪ್ರಕಾರ, ಎಪ್ಸ್ಟೀನ್‌ನ ಸಲಹೆಯಂತೆ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಅವರು ಇಸ್ರೇಲ್‌ನಲ್ಲಿ ಹಾಡು ಹಾಡಿ, ನೃತ್ಯ ಮಾಡಿದ್ದರು ಎಂದು ಹೇಳಲಾಗಿದೆ. ಈ ಆರೋಪವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಳ್ಳಿಹಾಕಿದೆ.
ಈ ಲೇಖನ ಓದಿದ್ದೀರಾ?: ಏನಿದು ಕಾಶ್ಮೀರದ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’? ಎಬಿವಿಪಿ ತಗಾದೆ ಯಾಕೆ?
ಅಂತಾರಾಷ್ಟ್ರೀಯ ಸಂಘರ್ಷಗಳ ವಿಚಾರದಲ್ಲಿ ಹಿಂದೆ ಅಲಿಪ್ತ ನೀತಿ ಎಂದು ಕರೆಯಲಾಗುತ್ತಿದ್ದ ತನ್ನ ಧೋರಣೆಯನ್ನು ಭಾರತವು ಈಗ ‘ಕಾರ್ಯತಂತ್ರದ ಸ್ವಾಯತ್ತತೆ’ ಎಂದು ಕರೆದುಕೊಳ್ಳುತ್ತಿದೆ. ಅರಬ್ ದೇಶಗಳು, ಇರಾನ್ ಹಾಗೂ ಇಸ್ರೇಲ್ – ಎಲ್ಲರೊಂದಿಗೂ ಭಾರತ ಉತ್ತಮ ಸಂಬಂಧ ಹೊಂದಿದೆ ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಅಮೆರಿಕದ ಒತ್ತಡದಿಂದಾಗಿ ಭಾರತವು ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದೆ, ಚಬಹಾರ್ ಬಂದರು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲು ಮುಂದಾಗಿದೆ.
ಜೊತೆಗೆ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇಸ್ರೇಲ್ ಮತ್ತು ಅಮೆರಿಕ ಚಿಂತಿತವಾಗಿವೆ. ಇಸ್ಲಾಮಿಕ್ ಗಣರಾಜ್ಯದ (ಇರಾನ್) ಮೇಲೆ ಸಂಭವನೀಯ ದಾಳಿಗಳ ಮುನ್ಸೂಚನೆಯಾಗಿ ಅಮೆರಿಕವು ಇರಾನ್ ಕರಾವಳಿಯ ಬಳಿ ಬೃಹತ್ ನೌಕಾ ಪಡೆಯನ್ನು ನಿಯೋಜಿಸುತ್ತಿದೆ. ಇಸ್ರೇಲ್ ಕರಾವಳಿಯತ್ತ ಮೆಡಿಟರೇನಿಯನ್‌ಗೆ ವಿಮಾನವಾಹಕ ನೌಕೆಯನ್ನು ಸಹ ಪೆಂಟಗನ್ ರವಾನಿಸಿದೆ.
ಒಂದು ವೇಳೆ, ಇರಾಮ್ ಮೇಲೆ ಅಮೆರಿಕ ದಾಳಿ ನಡೆಸಿದರೆ, ಇಸ್ರೇಲ್ ಮತ್ತು ಕೊಲ್ಲಿ ಅರಬ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಬಹುದು. ಈ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಶತಕೋಟಿ ಡಾಲರ್ ಹಣವನ್ನು ಭಾರತಕ್ಕೆ ಕಳುಹಿಸುತ್ತಾರೆ.
ಈ ಸವಾಲಿನ ನಡುವೆಯೂ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಎಲ್ಲ ರಾಷ್ಟ್ರಗಳೊಂದಿಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳುವುದೇ ತಮ್ಮ ಆದ್ಯತೆ ಇನ್ನುತ್ತಿರುವ ಮೋದಿ, ಇರಾನ್ ಮೇಲಿನ ಅಮೆರಿಕ-ಇಸ್ರೇಲ್‌ನ ಸಂಭವನೀಯ ದಾಳಿಯನ್ನು ವಿರೋಧಿಸುವರೇ? ಗಾಜಾದಲ್ಲಿ ನರಮೇಧ ನಡೆಸುತ್ತಿರುವ ಇಸ್ರೇಲ್‌ನ ಕ್ರೌರ್ಯವನ್ನು ಇಂದಾದರೂ ಖಂಡಿಸುವರೇ? ಗಾಜಾವನ್ನು ತನ್ನ ರಿಯಲ್-ಎಸ್ಟೀಟ್ ಉದ್ಯಮವಾಗಿ ಮಾಡಿಕೊಳ್ಳಲು ಹವಣಿಸುತ್ತಿರುವ ಅಮೆರಿಕ ಧೋರಣೆಯನ್ನು ಟೀಕಿಸು
ವರೇ? ವೆಸ್ಟ್-ಬ್ಯಾಂಕ್‌ಅನ್ನು ಆಕ್ರಮಿಸಿಕೊಳ್ಳಲು ತಂತ್ರ ಹೆಣೆಯುತ್ತಿರುವ ಇಸ್ರೇಲ್‌ಗೆ ಬುದ್ದಿ ಹೇಳುವರೇ? ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಯನ್ನು ಪುನರಾರಂಭಿಸುವರೇ? ಇದೆಲ್ಲದಕ್ಕೂ ಗುರುವಾರವೂ ಇಸ್ರೇಲ್‌ನಲ್ಲಿರುವ ಮೋದಿ ಅವರ ನಡೆ-ನುಡಿಗಳು ಉತ್ತರ ನೀಡಲಿವೆ!




