ಗಾಜಾದಲ್ಲಿ ಇಸ್ರೇಲ್‌ನ ದಾಳಿಯನ್ನು “ಜನಾಂಗೀಯ ಹತ್ಯೆ” ಎಂದು ಖಂಡಿಸಿದ ಮುಸ್ಲಿಂ ಸಮುದಾಯದ ನರ್ಸ್ ಒಬ್ಬರನ್ನು ಕೆಲಸದಿಂದ ವಜಾ ಮಾಡಿದ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿದೆ.
ಹಸನ್ ಜಬರ್ ಎಂಬ ನರ್ಸ್‌ಗೆ ಈ ತಿಂಗಳ ಆರಂಭದಲ್ಲಿ, ನ್ಯೂಯಾರ್ಕ್‌ನಲ್ಲಿನ ಎನ್‌ವೈಯು ಲ್ಯಾಂಗೋನ್ ಹೆಲ್ತ್ ಎಂಬ ಆಸ್ಪತ್ರೆಯಲ್ಲಿ ಶಿಶುಗಳನ್ನು ಕಳೆದುಕೊಂಡ ತಾಯಂದಿಯರಿಗೆ ಸಹಾನುಭೂತಿಯ ಆರೈಕೆಯನ್ನು ಒದಗಿಸುವುದಕ್ಕಾಗಿ ಪ್ರಶಸ್ತಿಯನ್ನು ನೀಡಿತ್ತು. ಈ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಗಾಜಾದಲ್ಲಿ ಇಸ್ರೇಲ್‌ನ ದಾಳಿಯನ್ನು “ಜನಾಂಗೀಯ ಹತ್ಯೆ” ಎಂದು ಖಂಡಿಸಿದರು.
ಭಾಷಣ ಮಾಡಿದ ನಂತರ ಹಸನ್ ಜಬರ್ ಅವರನ್ನು ಎನ್‌ವೈಯು ಲ್ಯಾಂಗೋನ್ ಹೆಲ್ತ್ ಆಸ್ಪತ್ರೆ ಮಂಡಳಿ ಕೆಲಸದಿಂದ ವಜಾ ಮಾಡಿದೆ. ತಾವು ವಜಾಗೊಂಡಿರುವ ಬಗ್ಗೆ ಹಸನ್ ಜಬರ್ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಪ್ರಸ್ತುತ ಗಾಜಾದಲ್ಲಿ ನಡೆಯುತ್ತಿರುವ ನರಮೇಧದ ಸಮಯದಲ್ಲಿ ನನ್ನ ದೇಶದ ಮಹಿಳೆಯರು ಊಹಿಸಲಾಗದ ನಷ್ಟವನ್ನು ಅನುಭವಿಸುತ್ತಿರುವುದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ” ಎಂದು ಜಬರ್ ಅವರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ತಮ್ಮ ಭಾಷಣದ ವಿಡಿಯೊದಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು
ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿದ್ದಕ್ಕಾಗಿ ಇದೇ ಅಸ್ಪತ್ರೆಯ ಕ್ಯಾನ್ಸರ್ ಸಂಶೋಧಕರೊಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಈ ಸಂಶೋಧಕರು ಹಮಾಸ್ ವಿರೋಧಿ ರಾಜಕೀಯ ಕಾರ್ಟೂನ್‌ಗಳನ್ನು ಪೋಸ್ಟ್ ಮಾಡಿದ ನಂತರ ಕೆಲಸದಿಂದ ತೆಗೆದುಹಾಕಲಾಗಿತ್ತು. ವ್ಯಂಗ್ಯಚಿತ್ರವು ಕೆಲವು ಅರಬ್ ಜನರ ಆಕ್ಷೇಪಾರ್ಹ ಚಿತ್ರಗಳನ್ನು ಒಳಗೊಂಡಿತ್ತು.
ಆಸ್ಪತ್ರೆಯ ವಕ್ತಾರರು ಇಮೇಲ್‌ನಲ್ಲಿ ಹಸನ್ ಜಬರ್ ಅವರಿಗೆ ಡಿಸೆಂಬರ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಹಿಂದಿನ ಘಟನೆಯನ್ನು ಅನುಸರಿಸಿ, ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಕೆಲಸದ ಸ್ಥಳಕ್ಕೆ ತರಬೇಡಿ ಎಂದು ತಿಳಿಸಲಾಗಿತ್ತು. ಪುನಃ ಭಾಷಣ ಮಾಡಿದ್ದಕ್ಕಾಗಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆಸ್ಪತ್ರೆ ಮಂಡಳಿ ತಿಳಿಸಿದೆ.
ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ಕಳೆದ ಎಂಟು ತಿಂಗಳಲ್ಲಿ 36,000 ಕ್ಕೂ ಹೆಚ್ಚು ಅಮಾಯಕರು ಮೃತರಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ಹೇಳಿದೆ. ದಾಳಿಯಿಂದ 20 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.





