ತಮಗೆ ನೊಬೆಲ್ ಪ್ರಶಸ್ತಿ ಕೊಡಬೇಕೆಂದು ಟ್ರಂಪ್ ಪದೇ-ಪದೇ ಹೇಳುತ್ತಲೇ ಇದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಸಮಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದಿಲ್ಲ ಎಂಬುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ನೊಬೆಲ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸುವ ನಾರ್ವೆ, ರಾಜತಾಂತ್ರಿಕ ಬಿಟ್ಟಕ್ಕು ಎದುರಿಸುವ ಆತಂಕದಲ್ಲಿದೆ.
ನೊಬೆಲೆ ಶಾಂತಿ ಪ್ರಶಸ್ತಿಯನ್ನು ನಾರ್ವೆ ರಾಷ್ಟ್ರವು ಪ್ರಧಾನ ಮಾಡುತ್ತದೆ. ಆದಾಗ್ಯೂ, ನೊಬೆಲ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವಲ್ಲಿ ನಾರ್ವೆ ಸರ್ಕಾರದ ಪಾತ್ರ ಏನೂ ಇರುವುದಿಲ್ಲ. ವಿಜೇತರನ್ನು ನೊಬೆಲ್ ಕಮಿಟಿ ಆಯ್ಕೆ ಮಾಡುತ್ತದೆ. ಆದಾಗ್ಯೂ, ಟ್ರಂಪ್ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡದಿದ್ದರೆ, ಟ್ರಂಪ್ ಅವರು ನಾರ್ವೆ ಸರ್ಕಾರದ ಮೇಲೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಕಷ್ಟಗಳನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.
ನೊಬೆಲ್ ಕಮಿಟಿಯು ಸ್ವತಂತ್ರವಾಗಿ ವಿಜೇತರನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಟ್ರಂಪ್ ಒಪ್ಪುವುದಿಲ್ಲ. ಪ್ರಸಂಶಿಸುವುದಿಲ್ಲ. ಕಮಿಟಿ ಸ್ವತಂತ್ರವಾಗಿ ವಿಜೇತರನ್ನು ಆಯ್ಕೆ ಮಾಡಿದರೂ, ಆಯ್ಕೆಯಲ್ಲಿ ನಾರ್ವೆ ಸರ್ಕಾರದ ಪಾತ್ರವಿದೆ ಎಂದು ಟ್ರಂಪ್ ಭಾವಿಸುತ್ತಾರೆ. ಅವರ ಅಸ್ಥಿತ ಮನೋಭಾವದಿಂದ ನಾರ್ವೆ ಮೇಲೆ ಅನಿರೀಕ್ಷಿತ ಪರಿಣಾಮಗಳು ಉಂಟಾಗಬಹುದು ಎಂದು ನಾರ್ವೆಯ ಆಡಳಿತಾರೂಢ ಸಮಾಜವಾದಿ ಎಡಪಕ್ಷದ ನಾಯಕ ಕಿರ್ಸ್ಟಿ ಬರ್ಗ್ಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.
“ನೊಬೆಲ್ ಆಯ್ಕೆ ಸಮಿತಿಯು ಸ್ವತಂತ್ರ ಸಂಸ್ಥೆಯಾಗಿದೆ. ವಿಜೇತರನ್ನು ನಿರ್ಧರಿಸುವಲ್ಲಿ ನಾರ್ವೆ ಸರ್ಕಾರದ ಪಾತ್ರವಿಲ್ಲ. ಆದರೆ, ಇದು ಟ್ರಂಪ್ ಅವರಿಗೆ ತಿಳಿದಿದೆ ಎಂಬ ಖಚಿತತೆ ಇಲ್ಲ. ನಾವು ಯಾವುದಕ್ಕೂ ಸಿದ್ಧರಾಗಿರಬೇಕು” ಎಂದು ಅವರು ಹೇಳಿರುವುದಾಗಿ ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಹೊರಮೈ ರೋಗನಿರೋಧಕ ಸಹಿಷ್ಣುತೆಯ ಸಂಶೋಧನೆಗೆ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿ
ಟ್ರಂಪ್ ಅವರು ತಮಗೆ ನೊಬೆಲೆ ಶಾಂತಿ ಪ್ರಶಸ್ತಿ ನೀಡಬೇಕೆಂದು ಸುಮಾರು ಐದಾರು ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಈ ಹಿಂದೆ, 2009ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಒಬಾಮ ಅವರು ಅಂತಾರಾಷ್ಟ್ರೀಯ ರಾಜತಾಂತ್ರಿಕತೆ, ಜನರ ನಡುವಿನ ಸಹಕಾರವನ್ನು ಬಲಪಡಿಸುವಲ್ಲಿನ ಪ್ರಯತ್ನಗಳ ಕಾರಣಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾಗಿ ನೊಬೆಲ್ ಕಮಿಟಿ ಹೇಳಿತ್ತು. ಇದೀಗ, ಆ ಪ್ರಶಸ್ತಿ ತಮಗೂ ಲಭಿಸಬೇಕೆಂದು ಟ್ರಂಪ್ ಹಠಕ್ಕೆ ಬಿದ್ದಿದ್ದಾರೆ.
ನಾನು ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನಿಸಿದ್ದೇನೆ. ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಿಸಿದ್ದೇನೆ. ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದೇನೆ. ಗಾಜಾ-ಇಸ್ರೇಲ್ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ನಡೆಸುತ್ತಿದ್ದೇನೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿದ್ದೇನೆ. ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಟ್ರಂಪ್ ಮಾತನಾಡುತ್ತಿದ್ದಾರೆ.
ಇತ್ತೀಚೆಗೆ ನಾರ್ವೆಯ ಆಗಿನ ಹಣಕಾಸು ಸಚಿವ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರಿಗೆ ಟ್ರಂಪ್ ಕರೆ ಮಾಡಿದ್ದರು. ಅವರು ಸುಂಕ ವಿಚಾರವಾಗಿ ಚರ್ಚಿಸಬೇಕೆಂದು ಹೇಳಿಕೊಂಡು ಕರೆ ಮಾಡಿದ್ದರೂ, ಹಣಕಾಸು ವಿಚಾರಗಳನ್ನು ಬಿಟ್ಟು, ನೊಬೆಲ್ ಪ್ರಶಸ್ತಿಯ ಕುರಿತು ಚರ್ಚಿಸಿದ್ದರು ಎಂದು ವರದಿಯಾಗಿದೆ.
ಶುಕ್ರವಾರ (ಅ.10) ಮಧ್ಯಾಹ್ನ 2 ಗಂಟೆಗೆ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ನೊಬೆಲ್ ಕಮಿಟಿ ಪ್ರಕಟಿಸಲಿದೆ. ಯಾರಿಗೆ ಪ್ರಶಸ್ತಿ ದೊರೆಯಲಿದೆ ಎಂಬುದು ಇಂದು ಗೊತ್ತಾಗಲಿದೆ.




