ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್, ಶಾರ್ಜಾ – ರೊಲ್ಲಾ ಪ್ರದೇಶದಲ್ಲಿ, ರೊಲ್ಲಾ ಮಾಲ್ ಎದುರುಭಾಗದಲ್ಲಿ, ತನ್ನ ಹೊಸ ಶಾಖೆಯನ್ನು ಗಣ್ಯ ಅತಿಥಿಗಳು, ಸಮುದಾಯ ನಾಯಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರಾದ ಬಶೀರ್ ಕಿನ್ನಿಂಗಾರ್ ಅವರು, ‘ಶಾರ್ಜಾ ಶಾಖೆಯನ್ನು ಸ್ಥಳೀಯ ಸಮುದಾಯದ ಹೆಚ್ಚುತ್ತಿರುವ ಬೇಡಿಕೆಯ ಆಧಾರದ ಮೇಲೆ ಆರಂಭಿಸಲಾಗಿದೆ. ಸಾರ್ವಜನಿಕರ ಬಲವಾದ ಬೇಡಿಕೆಯಿಂದಲೇ ನಾವು ಶಾರ್ಜಾದಲ್ಲಿ ಈ ಕ್ಲಿನಿಕ್ ಆರಂಭಿಸಿದ್ದೇವೆ. ಎಲ್ಲ ವರ್ಗದ ಜನರಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಆರೋಗ್ಯ ಸೇವೆ ನೀಡುವುದು ಮ್ಯಾಕ್ಸ್‌ಕೇರ್‌ನ ಬದ್ಧತೆ. ಇಲ್ಲಿ ವೈದ್ಯರ ಕನ್ಸಲ್ಟೇಶನ್ ಶುಲ್ಕ AED 25ರಿಂದ ಆರಂಭವಾಗುತ್ತದೆ’ ಎಂದು ಅವರು ಹೇಳಿದರು.
ಉದ್ಘಾಟನೆಯ ವಿಶೇಷ ಘೋಷಣೆಯಾಗಿ, ವಿಸಿಟ್ ವೀಸಾದ ಮೇಲೆ ಯುಎಇಗೆ ಬರುವವರಿಗೆ ಯಾವುದೇ ವೈದ್ಯರನ್ನು ಕೇವಲ AED 1ಕ್ಕೆ ಭೇಟಿ ಮಾಡುವ ವಿಶೇಷ ಯೋಜನೆ ಪ್ರಕಟಿಸಲಾಯಿತು. ಇದರಿಂದ ಅಲ್ಪಕಾಲಿಕ ಭೇಟಿ ನೀಡುವವರಿಗೆ ಅಗತ್ಯ ವೈದ್ಯಕೀಯ ಸೇವೆ ಸುಲಭವಾಗಿ ಲಭ್ಯವಾಗಲಿದೆ ಎಂದು ಬಶೀರ್ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಶೇಖ್ ಅಹ್ಮದ್ ಸಾಕರ್ ಅಲ್ ಕಾಸಿಮಿ,ಸಯ್ಯದ್ ನಿಸಾರ್, ಯುಎಇ ಬಿಸಿಸಿಐ ಅಧ್ಯಕ್ಷರಾದ ಹಿದಾಯತ್ ಅಡ್ಡೂರು, ನಿಶ್ಕಾ ಜ್ಯುವೆಲ್ಲರಿಯ ನಿರ್ದೇಶಕರಾದ ಸಯ್ಯದ್ ಹೈದ್ರೋಸ್ ತಂಙಳ್, ಯಾಸ್‌ಮೆಡ್‌ನ ನಿರ್ದೇಶಕ ನಿಜಾರ್ ಹಂಝ, ಬೈತಾನ್ ಗ್ರೂಪ್ ಎಂ ಡಿ ಜಮಾಲ್ ಬೈತಾನ್, ಇಲಾಜ್ ಮೆಡಿಕಲ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹುಸೈನ್, ಬರಾಕಾ ಕ್ಲಿನಿಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಲ್ಮಾನ್, ಮಿರಾಕ್ಯೂರ್ ಕ್ಲಿನಿಕ್ ಎಂಡಿ ಮೊಹಮ್ಮದ್ ಶಫೀಕ್, ಮ್ಯಾಕ್ಸ್‌ಕೇರ್‌ನ ನಿರ್ದೇಶಕಿ ಬದ್ರುನ್ನಿಸಾ ಮೊಹಮ್ಮದ್, ಮ್ಯಾಕ್ಸ್‌ಕೇರ್ ಮ್ಯಾನೇಜರ್ ಫಜಲ್ ವಿ.ಕೆ ಸೇರಿದಂತೆ ಇತರ ಆಹ್ವಾನಿತ ಅತಿಥಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ಮ್ಯಾಕ್ಸ್‌ಕೇರ್ ಧ್ಯೇಯದ ಮತ್ತೊಂದು ಪ್ರಮುಖ ಹಂತ ಇದಾಗಿದ್ದು, ನಾಲ್ಕು ವರ್ಷಗಳ ಹಿಂದೆ ಆರೋಗ್ಯ ಕ್ಷೇತ್ರದ ಸ್ಟಾರ್ಟ್‌ಅಪ್ ಆಗಿ ಆರಂಭವಾದ ಮ್ಯಾಕ್ಸ್‌ಕೇರ್, ಇಂದು ಯುಎಇಯಾದ್ಯಂತ ವಿವಿಧ ಸಮುದಾಯಗಳಿಗೆ ವಿಶ್ವಾಸಾರ್ಹ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಸ್ಥೆಯಾಗಿ ಬೆಳೆದಿದೆ. ಕಡಿಮೆ ವೆಚ್ಚದ ಚಿಕಿತ್ಸಾ ಮಾದರಿಯಿಂದ “ಬಜೆಟ್ ಕ್ಲಿನಿಕ್” ಎಂದು ಜನಪ್ರಿಯವಾಗಿರುವ ಮ್ಯಾಕ್ಸ್‌ಕೇರ್, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.
ಇದನ್ನು ಓದಿದ್ದೀರಾ? ನಂದಿನಿ ಉತ್ಪನ್ನಗಳ ಸೇವನೆ-ಸುರಕ್ಷತೆ ಕುರಿತು ವದಂತಿ; ಸುಳ್ಳುಗಳಿಗೆ ಕಿವಿಗೊಡಬೇಡಿ ಎಂದ ಕೆಎಂಎಫ್
ಹೊಸ ಶಾರ್ಜಾ ರೊಲ್ಲಾ ಶಾಖೆ ಸಂಪೂರ್ಣ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಜನರಲ್ ಮೆಡಿಸಿನ್, ಗೈನಕಾಲಜಿ, ಡೆಂಟಲ್ ಕೇರ್ ಹಾಗೂ ಲ್ಯಾಬೊರೇಟರಿ ಸೇವೆಗಳು ಸೇರಿದಂತೆ ಹಲವಾರು ಚಿಕಿತ್ಸಾ ಸೇವೆಗಳು ಲಭ್ಯವಿವೆ. ಕ್ಲಿನಿಕ್ ಜೊತೆಗೆ ಮ್ಯಾಕ್ಸ್‌ಕೇರ್ ಪಾಯಿಂಟ್ ಫಾರ್ಮಸಿ ಕೂಡ ಆರಂಭಿಸಲಾಗಿದೆ, ಇದರಿಂದ ರೋಗಿಗಳಿಗೆ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳು ಒಂದೇ ಸ್ಥಳದಲ್ಲಿ ಸಿಗುತ್ತವೆ. ಅನುಭವ ಹೊಂದಿದ ಕ್ಲಿನಿಕಲ್ ಮತ್ತು ನಾನ್-ಕ್ಲಿನಿಕಲ್ ಸಿಬ್ಬಂದಿ ತಂಡವು ಅತಿ ಕಡಿಮೆ ನಿರೀಕ್ಷಾ ಸಮಯದಲ್ಲಿ ಸುಗಮ ಸೇವೆ ಒದಗಿಸುತ್ತದೆ.








