ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳು ಡ್ಯುರಾಂಡ್ ಲೈನ್ ವಿವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ ವಿವಿಧ ಹಂತಗಳಲ್ಲಿ ಉದ್ವಿಗ್ನಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರಿಗೂ ಈ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ ಎಂಬುದೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಶನಿವಾರ ರಾತ್ರಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಪಾಕಿಸ್ತಾನದ 12 ಸೈನಿಕರನ್ನು ಅಫ್ಘನ್ ತಾಲಿಬಾನ್‌ಗಳು ಹತ್ಯೆಗೈದಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ‘ಡ್ಯುರಾಂಡ್ ರೇಖೆ’ಯ ಸಮೀಪವಿರುವ ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಹಲವಾರು ಪಾಕಿಸ್ತಾನಿ ಸೇನಾ ಹೊರಠಾಣೆಗಳನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ. ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಉದ್ವಿಗ್ನಗೊಂಡಿದೆ.
2,600 ಕಿ.ಮೀ ಉದ್ದದ ಗಡಿ ಹಂಚಿಕೊಂಡಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಘರ್ಷಣೆ ಇವತ್ತಿನದಲ್ಲ. ಐತಿಹಾಸಿಕವಾಗಿ ಸುಮಾರು 130 ವರ್ಷಗಳಿಂದಲೂ ಸಂಘರ್ಷ-ಘರ್ಷಣೆ ನಡೆಯುತ್ತಲೇ ಇದೆ. ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಒತ್ತಡಗಳು ಹಾಗೂ ಭಯೋತ್ಪಾದನೆ ಮುಂದುವರಿದೇ ಇದೆ.
ಘರ್ಷಣೆಯ ಕೇಂದ್ರಬಿಂದು ‘ಡ್ಯುರಾಂಡ್ ಲೈನ್’. 1893ರಲ್ಲಿ ಭಾರತದ ಬ್ರಿಟಿಷ್ ಅಧಿಕಾರಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘನ್ ಎಮಿರ್ ಅಬ್ದುರ್ ರಹ್ಮನ್ ಖಾನ್ ನಡುವಿನ ಒಪ್ಪಂದದಿಂದ ರೂಪುಗೊಂಡ ಗಡಿ ‘ಡ್ಯುರಾಂಡ್ ಲೈನ್’. ಈ ಗಡಿಯು ಪಶ್ತೂನ್ ಜನರನ್ನು ಪಾಕ್-ಅಫ್ಘನ್‌ಗಳ ನಡುವೆ ವಿಭಜಿಸಿದೆ. ಅಫ್ಘಾನಿಸ್ತಾನವು ಈ ಗಡಿಯನ್ನು ತನ್ನ ಮೇಲೆ ಹೇರಲಾದ ‘ಬಲವಂತದ ಗಡಿ’ ಎಂದು ಭಾವಿಸಿದೆ. ಆ ಗಡಿಯನ್ನು ದಾಟಿ, ಪಾಕ್ ಪ್ರದೇಶವನ್ನೂ ಒಳಗೊಂಡು ‘ಪಶ್ತೂನಿಸ್ತಾನ್’ ಎಂಬ ಸ್ವತಂತ್ರ ರಾಜ್ಯ ರಚನೆಯ ಗುರಿ ಹೊಂದಿದೆ.
ಆದ್ದರಿಂದಲೇ, 1919ರಲ್ಲಿ ಅಫ್ಘಾನಿಸ್ತಾನದ ಎಮಿರ್ ಅಮಾನುಲ್ಲಾ ಖಾನ್ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಯುದ್ಧ (ಮೂರನೇ ಆಂಗ್ಲೋ-ಅಫ್ಘನ್ ಯುದ್ಧ) ಘೋಷಿಸಿದರು. ಡ್ಯುರಾಂಡ್ ಲೈನ್‌ನ ನಿಯಂತ್ರಣವನ್ನು ಭೇದಿಸಿ, ಪಶ್ತೂನಿಗಳು ವಾಸಿಸುತ್ತಿದ್ದ ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆಯಲು ಯತ್ನಿಸಿತು. ಆದಾಗ್ಯೂ, ರಾವಲ್ಪಿಂಡಿ ಒಪ್ಪಂದದ (1919) ಮೂಲಕ ಅಫ್ಘಾನಿಸ್ತಾನ ಸ್ವಾತಂತ್ರ್ಯ ಪಡೆಯಿತು. ಆದರೆ, ಗಡಿ ವಿವಾದ ಹಾಗೆಯೇ ಉಳಿಯಿತು.
ಒಪ್ಪಂದದ ಮುಗಿದ ಬಳಿಕ, 1920–1940ರ ನಡುವೆ, ಪಶ್ತೂನ್ ರಾಷ್ಟ್ರೀಯತಾವಾದವು ಅಫ್ಘಾನಿಸ್ತಾನದಲ್ಲಿ ತೀವ್ರಗೊಂಡಿತು. ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹ ನಾಯಕರು ಬ್ರಿಟಿಷ್ ಭಾರತದ ಭಾಗವಾಗಿದ್ದ (ಈಗಿನ ಪಾಕ್ ಭಾಗ) ಖೈಬರ್ ಪಕ್ತುಂಕ್ವಾ ಮತ್ತು ಅಫ್ಘನ್‌ನ ಕೆಲವು ಪ್ರಾಂತ್ಯಗಳನ್ನು ಒಳಗೊಂಡು ‘ಪಶ್ತೂನಿಸ್ತಾನ್’ ಎಂಬ ಸ್ವತಂತ್ರ ರಾಜ್ಯ ನಿರ್ಮಾಣದ ಆಲೋಚನೆಯನ್ನು ಹುಟ್ಟುಹಾಕಿದರು. ಈ ಪ್ರಸ್ತಾಪವನ್ನು ಅಫ್ಘನ್ ಸರ್ಕಾರ ಬೆಂಬಲಿಸಿತು. ಪರಿಣಾಮ, ಬ್ರಿಟಿಷರ ಜೊತೆಗಿನ ಸಂಘರ್ಷ ಮುಂದುವರೆಯಿತು.
‘ಪಶ್ತೂನಿಸ್ತಾನ್’ ರಚನೆಯ ವಾದವು ಮುನ್ನೆಲೆಯಲ್ಲಿದ್ದ ಸಮಯದಲ್ಲಿಯೇ 1947ರಲ್ಲಿ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ರಚನೆಯಾಯಿತು. ಆಗಲೂ, ‘ಡ್ಯುರಾಂಡ್ ಲೈನ್’ ಬದಲಾವಣೆಗಾಗಿ ಅಫ್ಘಾನಿಸ್ತಾನ ಒತ್ತಾಯಿಸಿತು. ಮಾತ್ರವಲ್ಲದೆ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡಬಾರದೆಂದು ಪಟ್ಟುಹಿಡಿಯಿತು. ಆ ಸಂದರ್ಭದಲ್ಲಿ, ಅಫ್ಘನ್ ರಾಜ ಜಹೀರ್ ಶಾ ಅವರು ‘ಗ್ರೇಟರ್ ಪಶ್ತೂನಿಸ್ತಾನ್’ ಕಲ್ಪನೆಯನ್ನು ಮುಂದಿಟ್ಟರು. ಇದು ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಮತ್ತು ಬಲೂಚಿಸ್ತಾನದ ಭಾಗವನ್ನು ಒಳಗೊಂಡ ರಾಜ್ಯ ನಿರ್ಮಾಣವನ್ನು ಪ್ರಸ್ತಾಪಿಸಿತು.
1949-50ರಲ್ಲಿ ಅಫ್ಘನ್-ಪಾಕ್ ಗಡಿಯಲ್ಲಿ ನಿರಂತರ ಗಡಿಯಾಚೆಗಿನ ದಾಳಿಗಳು ನಡೆದವು. ಅಫ್ಘನ್ ಬೆಂಬಲಿತ ಪಶ್ತೂನ್ ಗಿರಿಜನ ಗುಂಪುಗಳು ಪಾಕ್ ಗಡಿಯಲ್ಲಿ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏರ್ ಸ್ಟ್ರೈಕ್‌ಗಳ ಮೂಲಕ ಪ್ರತೀಕಾರ ತೀರಿಸಿತು.
1963ರಲ್ಲಿ ಅಫ್ಘನ್ ಪ್ರಧಾನಿ ಮೊಹಮ್ಮದ್ ದಾವೂದ್ ಖಾನ್ ಅವರು ‘ಪಶ್ತೂನ್ ರಾಷ್ಟ್ರೀಯತಾವಾದ’ವನ್ನು ತೀವ್ರಗೊಳಿಸಿದರು. ಇದರಿಂದ ಗಡಿ ಘರ್ಷಣೆಗಳು ಹೆಚ್ಚಾದವು. 1973ರಲ್ಲಿ ರಾಜಕೀಯ ಒತ್ತಡದಿಂದಾಗಿ ದಾವೂದ್ ಅವರು ಅಧಿಕಾರದಿಂದ ಕೆಳಗಿಳಿದರು. ಆದರೂ, ಪಶ್ತೂನ್ ರಾಷ್ಟ್ರೀಯತಾವಾದ ಬೆಂಕಿಯ ಉಂಡೆಯಾಗಿಯೇ ಉಳಿಯಿತು.
ಇದೆಲ್ಲದರ ನಡುವೆ, ಸೋವಿಯತ್ ಒಕ್ಕೂಟವು 1979ರಲ್ಲಿ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿತು. ಈ ಸಂದರ್ಭದಲ್ಲಿ ಅಫ್ಘನ್‌ನಲ್ಲಿ ಪಾಕ್ ಚಟುವಟಿಕೆಗಳು ಹೆಚ್ಚಾಯಿತು. ಜೊತೆಗೆ, ಅಫ್ಘನ್ ಜನರಲ್ಲಿ ಪಾಕ್ ವಿರೋಧಿ ಭಾವನೆಯೂ ಹೆಚ್ಚಿತು.
ಅಫ್ಘನ್-ಸೋವಿಯನ್ ಯುದ್ಧದಲ್ಲಿ ಸುಮಾರು 30 ಲಕ್ಷ ಅಫ್ಘನ್ ಶರಣಾರ್ಥಿಗಳು ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡರು. ಇದು ಗಡಿ ಪ್ರದೇಶಗಳಲ್ಲಿ ಜನಸಂಖ್ಯಾ ಒತ್ತಡ ಮತ್ತು ಜಾತೀಯ ಒಡಕುಗಳನ್ನು ಹೆಚ್ಚಿಸಿತು.
ಇದೆಲ್ಲದರ ನಡುವೆ, ಪಾಕಿಸ್ತಾನದ ಐಎಸ್‌ಐ ಬೆಂಬಲದೊಂದಿಗೆ, 1994ರಲ್ಲಿ ತಾಲಿಬಾನ್ ಎಂಬ ಉಗ್ರಗಾಮಿ ಸಂಘಟನೆ ಹುಟ್ಟಿಕೊಂಡಿತು. ತಾಲಿಬಾನ್‌ಗೆ ಪಾಕಿಸ್ತಾನ ಆಶ್ರಯ ನೀಡಿತು. ಅಗತ್ಯ ನೆರವನ್ನೂ ಒದಗಿಸಿತು. ಪರಿಣಾಮವಾಗಿ, 1996ರಲ್ಲಿ ಕಾಬುಲ್‌ಅನ್ನು ತಾಲಿಬಾನ್ ವಶಪಡಿಸಿಕೊಂಡಿತು. ಇದನ್ನು ಅಫ್ಘನ್ ಜನರು ‘ಪಾಕ್ ಆಕ್ರಮಣ’ವೆಂದು ಭಾವಿಸಿದರು. ಆದಾಗ್ಯೂ, ತಾಲಿಬಾನ್ ಕೂಡ ಅಫ್ಘನ್-ಪಾಕ್ ನಡುವಿನ ಗಡಿ ಸಂಘರ್ಷವನ್ನು ಕೊನೆಗಾಣಿಸಲಿಲ್ಲ.
ತಾಲಿಬಾನ್ ನಿಯಂತ್ರಣದಲ್ಲಿದ್ದ ಅಫ್ಘನ್ ಮೇಲೆ 2001ರಲ್ಲಿ ಅಮೆರಿಕ ದಾಳಿ ನಡೆಸಿತು. ತಾಲಿಬಾನ್ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಿ, ಪ್ರಜಾತಾಂತ್ರಿತ ಸರ್ಕಾರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತು. ಆದರೆ, ಅಮೆರಿಕದ ಮಿತ್ರ ರಾಷ್ಟ್ರವೇ ಆಗಿದ್ದ ಪಾಕಿಸ್ತಾನವು ತಾಲಿಬಾನ್ ಮತ್ತು ಅಲ್-ಖೈದಾ ನಾಯಕರಿಗೆ ಆಶ್ರಯ ನೀಡಿತು.
ತಾಲಿಬಾನ್ ವಿರುದ್ಧ ಅಫ್ಘಾನಿಸ್ತಾನವು ‘ಟೆಹ್ರೀಕ್-ಇ-ತಲಿಬಾನ್ ಪಾಕಿಸ್ತಾನ’ (ಟಿಟಿಪಿ) ಸಂಘಟನೆಯನ್ನು ಹುಟ್ಟುಹಾಕಿತು. ಇದು, ಅಫ್ಘನ್ ಗಡಿಯಲ್ಲಿ ಆಶ್ರಯ ಪಡೆದು, ಪಾಕ್ ಮೇಲೆ ನಿರಂತರ ದಾಳಿ ನಡೆಸಿತು. 1014ರಲ್ಲಿ ಪೆಶಾವರ್ ಸ್ಕೂಲ್ ಮೇಲೆ ಟಿಟಿಪಿ ನಡೆಸಿದ ಭೀಕರ ದಾಳಿಯಲ್ಲಿ 141 ಮಕ್ಕಳು ಹತರಾದರು.
ಈ ಲೇಖನ ಓದಿದ್ದೀರಾ?: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’
ಅಫ್ಘನ್ ಜೊತೆಗಿನ ಗಡಿ ಸಂಘರ್ಷ ಮತ್ತು ಟಿಟಿಪಿ ದಾಳಿಗಳಿಂದ ಬಳಲಿರುವ ಪಾಕಿಸ್ತಾನ, 2017ರಲ್ಲಿ ‘ಡ್ಯುರಾಂಡ್ ಲೈನ್’ನಲ್ಲಿ ಗಡಿ ನಿರ್ಮಾಣ ಮಾಡಲು ಆರಂಭಿಸಿತು. ಗಡಿಯುದ್ದಕ್ಕೂ ಮುಳ್ಳಿನ ತಂತಿ ಅಳವಡಿಕೆಯನ್ನು ಆರಂಭಿಸಿತು. ಪಾಕ್ ನಡೆಯನ್ನು ಅಫ್ಘನ್ ವಿರೋಧಿಸಿತು. ರಾಜಕೀಯ ಒತ್ತಡ ಹಾಕಲು ಆರಂಭಿಸಿತು. ಆದಾಗ್ಯೂ, ಗಡಿ ನಿರ್ಮಾಣ ಕಾಮಗಾರಿಯನ್ನು ಪಾಕ್ ಬಹುತೇಕ ಮುಗಿಸಿದೆ. ಈವರೆಗೆ, 4,468 ಕೋಟಿ ರೂ. ವೆಚ್ಚ ಮಾಡಿದೆ. ಸೈನಿಕರ ಸಂಖ್ಯೆಯನ್ನೂ ಹೆಚ್ಚಿಸಿದೆ.
ಈ ನಡುವೆ, ಅಫ್ಘನ್‌ಅನ್ನು 2021ರಲ್ಲಿ ತಾಲಿಬಾನ್ ಮತ್ತೆ ವಶಕ್ಕೆ ಪಡೆದು, ಅಧಿಕಾರ ಸ್ಥಾಪಿಸಿತು. ಆ ನಂತರದಲ್ಲಿ, ಅಫ್ಘನ್ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಏರಿಕೆಯಾಗಿದೆ. ಟಿಟಿಪಿ ದಾಳಿಗೆ ತಾಲಿಬಾನ್ ಬೆಂಬಲ ನೀಡುತ್ತಿದೆ. 2025ರಲ್ಲಿಯೇ ಟಿಟಿಪಿ ಪಾಕ್ ಮೇಲೆ ಸುಮಾರು 200 ದಾಳಿಗಳನ್ನು ನಡೆಸಿದ್ದು, 194 ಮಂದಿಯನ್ನು ಕೊಂದಿದೆ.
ಕಳೆದ 130 ವರ್ಷಗಳಲ್ಲಿ, ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳು ಡ್ಯುರಾಂಡ್ ಲೈನ್ ವಿವಾದದಿಂದ ಹಿಡಿದು ಭಯೋತ್ಪಾದನೆಯವರೆಗೆ ವಿವಿಧ ಹಂತಗಳಲ್ಲಿ ಉದ್ವಿಗ್ನಗೊಂಡಿದೆ. ಈ ಸಂಘರ್ಷವನ್ನು ಕೊನೆಗಾಣಸಲು ವಿಶ್ವಸಂಸ್ಥೆಯ ಮಧ್ಯಪ್ರವೇಶಿಕೆ, ಗಡಿ ಮಾತುಕತೆಗಳು, ಚೀನಾ ಮಧ್ಯಸ್ಥಿಕೆಗಳು ಹೆಚ್ಚಾದರೆ ಗಡಿ ಸಂಘರ್ಷ ಕೊನೆಗೊಳ್ಳಬಹುದು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಘರ್ಷಕ್ಕೆ ಅಂತ್ಯ ಹಾಡುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ ಎಂಬುದೂ ಸ್ಪಷ್ಟವಾಗಿ ಗೋಚರಿಸುತ್ತಿದೆ.




