ಪಾಕಿಸ್ತಾನ ರಾಷ್ಟ್ರೀಯ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು,ಮುಂದಿನ ವಾರ ನೂತನ ಸರ್ಕಾರ ರಚನೆಯಾಗಲಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್‌ಎನ್) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಲಾಹೋರ್‌ನಿಂದ 55 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸದ್ಯದ ಫಲಿತಾಂಶದ ಪ್ರಕಾರ ನಾಲ್ಕು ಸ್ಥಾನಗಳಲ್ಲಿ ಗೆದ್ದು ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಪಿಎಂಎಲ್‌ಎನ್ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲಿವೆ ಎಂದು ಸಮೀಕ್ಷೆಗಳು ಹೇಳಿರುವ ಹಿನ್ನೆಲೆ ನವಾಜ್ ಷರೀಫ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂಬೈ ದಾಳಿಯ ರೂವಾರಿ ಎಲ್‌ಇಟಿ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಪುತ್ರ ತಲ್ಹಾ ಸಹೀದ್ ಲಾಹೋರ್ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೇಸಿಗೆ ಬೇಗ ಬಂದಿದೆ; ಜೀವಜಲಕ್ಕೆ ತತ್ವಾರ ತಂದಿದೆ
ಫೆ.08 ರಂದು ಪಾಕ್ ದೇಶಾದ್ಯಂತ ಚುನಾವಣೆಗಳು ನಡೆದಿದ್ದವು. 12 ಕೋಟಿಗೂ ಹೆಚ್ಚು ಮತದಾರರು ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದರು.
ರಾಷ್ಟ್ರೀಯ ಚುನಾವಣೆಯಲ್ಲಿ 12ಕ್ಕಿಂತ ಹೆಚ್ಚು ಪಕ್ಷಗಳು ಸ್ಪರ್ಧಿಸಿದ್ದರೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್ಎನ್, ಬಿಲಾವಾಲ್ ಜರ್ದಾರಿ ಬಟ್ಟೋ ಅವರ ಪಿಪಿಪಿ ಪಕ್ಷಗಳು ಪ್ರಮುಖ ಸ್ಪರ್ಧಿಗಳಾಗಿವೆ.
ಚುನಾವಣೆಯಲ್ಲಿ ಹಲವು ದುರುಪಯೋಗ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆಯಿರುವುದರಿಂದ ಇಂದು ನಡೆಯುತ್ತಿರುವ ಮತ ಎಣಿಕೆ ದಿನದಂದು ದೇಶಾದ್ಯಂತ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಒಟ್ಟು 265 ರಾಷ್ಟ್ರೀಯ ಸ್ಥಾನಗಳಲ್ಲಿ ಸರ್ಕಾರ ರಚನೆಗೆ ಗೆಲ್ಲುವ ಪಕ್ಷ 133 ಸ್ಥಾನಗಳನ್ನು ಗಳಿಸಬೇಕಿದೆ.





