ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಎದುರಾಗಿರುವ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು ಪಾಕಿಸ್ತಾನ ಸರ್ಕಾರವು ಕಠಿಣ ಆರ್ಥಿಕ ಮಿತವ್ಯಯ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರ ವೇತನದಲ್ಲಿ ಶೇಕಡಾ 5 ರಿಂದ 30ರವರೆಗೆ ಕಡಿತಗೊಳಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಶನಿವಾರ ಅನುಮೋದನೆ ನೀಡಿದ್ದಾರೆ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಧಾನಿ ಕಚೇರಿ ಹೊರಡಿಸಿರುವ ಹೇಳಿಕೆಯ ಪ್ರಕಾರ, ಇಂಧನ ಬೆಲೆಯಲ್ಲಿ ಆಗಿರುವ ತೀವ್ರ ಏರಿಕೆ ಮತ್ತು ಸರ್ಕಾರದ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ತೀರ್ಮಾನದಂತೆ, ಸರ್ಕಾರಿ ನೌಕರರಂತೆಯೇ, ಸರ್ಕಾರದ ಆಶ್ರಯದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಸ್ವಾಯತ್ತ ಸಂಸ್ಥೆಗಳ ನೌಕರರ ವೇತನದಲ್ಲಿ ಶೇ 5ರಿಂದ ಶೇ. 30 ರಷ್ಟು ಕಡಿತ ಇರಲಿದೆ. ಈ ಮಿತವ್ಯಯ ಕ್ರಮಗಳ ಮೂಲಕ ಉಳಿತಾಯವಾಗುವ ಹಣವನ್ನು ಕೇವಲ ‘ಸಾರ್ವಜನಿಕ ಪರಿಹಾರಕ್ಕಾಗಿ’ ಮಾತ್ರ ಬಳಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮುಂಬರುವ ಎರಡು ತಿಂಗಳ ಕಾಲ ಸರ್ಕಾರಿ ವಾಹನಗಳಿಗೆ ನೀಡುತ್ತಿರುವ ಇಂಧನ ಪ್ರಮಾಣದಲ್ಲಿ ಶೇ. 50ರಷ್ಟು ಕಡಿತ ಮಾಡಲಾಗುವುದು ಮತ್ತು ಈ ಅವಧಿಯಲ್ಲಿ ಶೇ. 60ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಲಾಗಿದೆ. ಈ ಕ್ರಮಗಳ ಮೇಲ್ವಿಚಾರಣೆಗಾಗಿ ಥರ್ಡ್-ಪಾರ್ಟಿ ಆಡಿಟ್(ಮೂರನೇ ವ್ಯಕ್ತಿಯ ಲೆಕ್ಕಪರಿಶೋಧನೆ) ನಡೆಸಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೆ, ನಿಗಮಗಳು ಮತ್ತು ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿನಿಧಿಗಳಿಗೆ ಇನ್ನು ಮುಂದೆ ಸಭೆಯಲ್ಲಿ ಭಾಗವಹಿಸುವ ಶುಲ್ಕ ನೀಡುವುದಿಲ್ಲ;ಬದಲಿಗೆ ಅದನ್ನು ಉಳಿತಾಯದ ಭಾಗವಾಗಿ ಪರಿಗಣಿಸಲಾಗುವುದು. ಸರ್ಕಾರದ ಹೊಸ ವಾಹನಗಳ ಖರೀದಿ ಹಾಗೂ ಇತರ ಎಲ್ಲಾ ಅನಗತ್ಯ ಖರೀದಿಗಳ ಮೇಲಿನ ಸಂಪೂರ್ಣ ನಿಷೇಧದ ಅನುಷ್ಠಾನದ ಕುರಿತೂ ಸಭೆಯಲ್ಲಿ ವಿವರಿಸಲಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಮಿತವ್ಯಯ ಯೋಜನೆಯಡಿ, ಸಂಪುಟ ಸದಸ್ಯರು, ಮಂತ್ರಿಗಳು, ಸಲಹೆಗಾರರು ಮತ್ತು ವಿಶೇಷ ಸಹಾಯಕರ ಮುಂದಿನ ಎರಡು ತಿಂಗಳ ವೇತನವನ್ನೂ ‘ಸಾರ್ವಜನಿಕ ಕಲ್ಯಾಣದ ಉಳಿತಾಯವಾಗಿ’ ಬಳಸಲಾಗುವುದು. ಇದರೊಂದಿಗೆ, ಸರ್ಕಾರಿ ಅಧಿಕಾರಿಗಳು, ಸಚಿವರು, ರಾಜ್ಯ ಸಚಿವರು ಹಾಗೂ ವಿಶೇಷ ಸಹಾಯಕರ ವಿದೇಶಿ ಪ್ರವಾಸದ ಮೇಲೆ ಹೇರಿರುವ ಸಂಪೂರ್ಣ ನಿಷೇಧವು ಮುಂದೆಯೂ ಜಾರಿಯಲ್ಲಿರಲಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಆರ್ಥಿಕ ಪರಿಣಾಮಗಳನ್ನು ಪಾಕಿಸ್ತಾನವು ಈಗಾಗಲೇ ಅನುಭವಿಸುತ್ತಿದೆ. ಕಳೆದ ಶುಕ್ರವಾರವಷ್ಟೇ ಪೆಟ್ರೋಲಿಯಂ ಬೆಲೆಯನ್ನು ಪ್ರತಿ ಲೀಟರ್‌ಗೆ 55 ರೂ.ಗಳಷ್ಟು ಹೆಚ್ಚಿಸಲಾಯಿತು, ಇದು ಇಂಧನ ಬಳಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಪರಿಚಯಿಸಲು ಸರ್ಕಾರವನ್ನು ಪ್ರೇರೇಪಿಸಿತು. ಇದಕ್ಕೂ ಮೊದಲು, ಅಧಿಕೃತ ವಾಹನಗಳಿಗೆ ಎರಡು ತಿಂಗಳ ಕಾಲ ಇಂಧನ ಹಂಚಿಕೆಯನ್ನು ಶೇ. 50ರಷ್ಟು ಕಡಿಮೆ ಮಾಡುವುದು, ಈ ಅವಧಿಯಲ್ಲಿ ಶೇ. 60ರಷ್ಟು ಸರ್ಕಾರಿ ವಾಹನಗಳನ್ನು ರಸ್ತೆಯಿಂದ ತೆಗೆಯುವುದು ಮತ್ತು ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸುವಂತಹ ಕ್ರಮಗಳನ್ನು ಸರ್ಕಾರ ಜಾರಿ ಮಾಡಿತ್ತು.





