ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು, ಕನಿಷ್ಠ 31ಕ್ಕೂ ಜನರು ಸಾವನ್ನಪ್ಪಿದ್ದಾರೆ. 169 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇಸ್ಲಾಮಾಬಾದ್‌ನ ಶೆಹಜಾದ್ ಟೌನ್ ಪ್ರದೇಶದ ತರ್ಲೈ ಇಮಾಮ್‌ಬರ್ಗಾದಲ್ಲಿ ಸ್ಫೋಟ ಸಂಭವಿಸಿದೆ. ಆತ್ಮಾಹುತಿ ಬಾಂಬರ್‌ನನ್ನು ಇಮಾಮ್‌ಬರ್ಗಾದ ಗೇಟ್‌ನಲ್ಲಿ ತಡೆಯಲಾಗಿತ್ತು. ಆದರೆ, ಆತ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ಹೊಣೆಗಾರಿಕೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಹೇಳಲಾಗಿದೆ.
ಆದಾಗ್ಯೂ, ದಾಳಿಕೋರ ವಿದೇಶಿ ಪ್ರಜೆಯಾಗಿದ್ದಾನೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಿಐಎಂಎಸ್ ಮತ್ತು ಪಾಲಿಕ್ಲಿನಿಕ್‌ಗೆ ವರ್ಗಾಯಿಸಲಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಗೆ ಆತ್ಮಹತ್ಯಾ ಬಾಂಬ್ ದಾಳಿ ನಡೆದ ಸುಮಾರು ಮೂರು ತಿಂಗಳ ನಂತರ ಈ ದಾಳಿ ನಡೆದಿದೆ. ನವೆಂಬರ್ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದರು.




