ಪಾಕಿಸ್ತಾನ ಸರ್ಕಾರವು ಶುಕ್ರವಾರದಂದು ರಾಜಧಾನಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಸ್ಲಾಮಿಕ್ ಪಕ್ಷವಾದ ಟಿಎಲ್‌ಪಿ ಯೋಜಿಸಿರುವ ಪ್ರತಿಭಟನೆಗೆ ಮುನ್ನ ರಾಜಧಾನಿಯ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಮುಚ್ಚಲಾಗಿದೆ.
ಗುರುವಾರದಂದು ಲಾಹೋರ್ ನಗರದಲ್ಲಿ ಕಾನೂನು ಜಾರಿ ಅಧಿಕಾರಿಗಳು ಮತ್ತು ಟಿಎಲ್‌ಪಿ ಸದಸ್ಯರ ನಡುವಿನ ಹಿಂಸಾತ್ಮಕ ಘರ್ಷಣೆಯಿಂದ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೇಲ್ ವಿರೋಧಿ ಪ್ರತಿಭಟನೆಯ ಹಿನ್ನಲೆಯಲ್ಲಿ ಈ ಘರ್ಷಣೆಗಳು ನಡೆದಿವೆ. ಟಿಎಲ್‌ಪಿ ಶುಕ್ರವಾರದಂದು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಘೋಷಿಸಿದ ನಂತರ, ಪಂಜಾಬ್ ಪೊಲೀಸರು ಟಿಎಲ್‌ಪಿ ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿಯನ್ನು ಬಂಧಿಸಲು ಲಾಹೋರ್‌ನಲ್ಲಿರುವ ಟಿಎಲ್‌ಪಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.
ಇಂಟರ್ನೆಟ್ ಮತ್ತು ರಸ್ತೆಗಳು ಬಂದ್
ಗೃಹ ಸಚಿವಾಲಯವು ಪಾಕಿಸ್ತಾನ ಟೆಲಿಕಾಮ್ಯುನಿಕೇಷನ್ ಅಥಾರಿಟಿ (ಪಿಟಿಎ)ಗೆ ಶುಕ್ರವಾರದ ಮಧ್ಯರಾತ್ರಿಯಿಂದ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
ಪಂಜಾಬ್ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದು, 10 ದಿನಗಳ ಕಾಲ ಎಲ್ಲ ರೀತಿಯ ಪ್ರತಿಭಟನೆಗಳು, ರ‍್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ. ಪಂಜಾಬ್ ಗೃಹ ಇಲಾಖೆಯ ಅಧಿಸೂಚನೆಯ ಪ್ರಕಾರ, ಸಾರ್ವಜನಿಕ ಸ್ಥಳಗಳು, ಬೀದಿಗಳು ಮತ್ತು ತೆರೆದ ಪ್ರದೇಶಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಜನರ ಸಭೆಗಳನ್ನು ನಿಷೇಧಿಸಲಾಗಿದೆ. ಆದರೆ, ಈ ನಿರ್ಬಂಧವು ಪ್ರಾರ್ಥನೆ, ಮದುವೆ, ಅಂತ್ಯಕ್ರಿಯೆ, ಕಚೇರಿಗಳು ಅಥವಾ ನ್ಯಾಯಾಲಯದ ಆವರಣಕ್ಕೆ ಅನ್ವಯಿಸುವುದಿಲ್ಲ. ಜೊತೆಗೆ, ಆಯುಧಗಳ ಪ್ರದರ್ಶನ ಮತ್ತು ಲೌಡ್‌ಸ್ಪೀಕರ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಾವಲ್ಪಿಂಡಿಯಲ್ಲಿ 144 ಸೆಕ್ಷನ್ ಈಗಾಗಲೇ ಅಕ್ಟೋಬರ್ 11 ರವರೆಗೆ ಜಾರಿಯಲ್ಲಿದೆ. ಇಸ್ಲಾಮಾಬಾದ್‌ನಲ್ಲಿ, ಎಲ್ಲ ಪ್ರಮುಖ ಪ್ರವೇಶ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಕೆಂಪು ವಲಯವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಟಿಎಲ್‌ಪಿಯು ದೊಡ್ಡ ಪ್ರಮಾಣದ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಾರಣ ಕಾನೂನು ಜಾರಿ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.





