ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು (ಮಾ.4) ನಾಲ್ಕನೇ ದಿನವೂ ಮುಂದುವರಿದಿದೆ. ಒಂದು ವೇಳೆ ಅಮೆರಿಕವು ಇರಾನ್ ಮೇಲೆ ಇನ್ನು 10 ದಿನಗಳ ಕಾಲ ದಾಳಿಯನ್ನು ಮುಂದುವರಿಸಿದರೆ, ಅಮೆರಿಕದ ನಿರ್ಣಾಯಕ ಕ್ಷಿಪಣಿಗಳ ದಾಸ್ತಾನು ಕಡಿಮೆಯಾಗಬಹುದು ಎಂದು ಟ್ರಂಪ್‌ಗೆ ಪೆಂಟಗನ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಟ್ರಂಪ್‌ಗೆ ಪೆಂಟಗನ್ ನೀಡಿರುವ ಕೆಲ ಸೋರಿಕೆಯಾಗಿವೆ ಎಂದು ಅಲ್‌ಜಜೀರಾ ವರದಿ ಮಾಡಿದೆ. ಆ ವರದಿ ಪ್ರಕಾರ, ದೀರ್ಘಕಾಲದ ಸಂಘರ್ಷದಿಂದ ಯುದ್ಧೋಪಕರಣಗಳ ದಾಸ್ತಾನು ಮರುಹೊಂದಿಸುವಿಕೆಗಾಗಿ ಹೆಚ್ಚಿನ ವೆಚ್ಚವನ್ನು ಭರಿಸಬೇಕಾಗುವ ಅಪಾಯವಿದೆ ಎಂದು ಪೆಂಟಗನ್ ಟ್ರಂಪ್‌ಗೆ ಮಾಹಿತಿ ನೀಡಿದೆ. ಆದರೆ, ಮಂಗಳವಾರ ‘ಟ್ರೂತ್’ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಯುದ್ಧ ಸಾಮಗ್ರಿಗಳ ದಾಸ್ತಾನುಗಳು ಅಮೆರಿಕವು ನಿರಂತರ ಯುದ್ಧ ಮಾಡಲು ‘ಎಂದೆಂದಿಗೂ’ ಸಹಾಯ ಮಾಡಬಲ್ಲವು. ಅಮೆರಿಕದ ಯುದ್ಧೋಪಕರಣಗಳ ದಾಸ್ತಾನುಗಳು ಮಧ್ಯಮ ಮತ್ತು ಉನ್ನತ ಮಧ್ಯಮ ದರ್ಜೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿವೆ. ನಮಗೆ ಈ ಶಸ್ತ್ರಾಸ್ತ್ರಗಳ ಅನಿಯಮಿತ ಪೂರೈಕೆ ಇದೆ” ಎಂದು ಬರೆದಿಕೊಂಡಿದ್ದಾರೆ.
ಸೋಮವಾರದಂದು ಇರಾನ್ ಮೇಲಿನ ದಾಳಿಯನ್ನು ‘ನಾಲ್ಕರಿಂದ ಐದು ವಾರಗಳ ಕಾಲ’ ಮುಂದುವರಿಸಲು ಯೋಜಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೂ, ಯುದ್ಧವು ಅದಕ್ಕಿಂತಲೂ ಹೆಚ್ಚು ಕಾಲ ನಡೆಯಬಹುದು ಎಂದೂ ಅವರೇ ಹೇಳಿಕೊಂಡಿದ್ದಾರೆ.
ಯಾವ ಶಸ್ತ್ರಾಸ್ತ್ರಗಳ ಕೊರತೆಯಾಗಬಹುದು?
ಅಮೆರಿಕದ ದಾಸ್ತಾನಿನಲ್ಲಿರುವ ಕೆಲವು ಶಸ್ತ್ರಾಸ್ತ್ರಗಳು, ವಿಶೇಷವಾಗಿ ಇಂಟರ್‌ಸೆಪ್ಟರ್ (ತಡೆಹಿಡಿಯುವ) ಕ್ಷಿಪಣಿಗಳು ತ್ವರಿತವಾಗಿ ಬಹಳ ಕಡಿಮೆಯಾಗಬಹುದು ಎಂದು ವಿಶ್ಲೇಷಕರು ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.
ಫೆಬ್ರವರಿ 23 ರಂದು, ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದಂತೆ, ಪೆಂಟಗನ್ ಅಧಿಕಾರಿಗಳು ಮತ್ತು ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡಾನ್ ಕೈನ್ ಅವರು ಇರಾನ್ ವಿರುದ್ಧದ ಸುದೀರ್ಘ ಸಂಘರ್ಷದ ಅಪಾಯಗಳ ಬಗ್ಗೆ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದರು. ನಿರ್ಣಾಯಕ ಯುದ್ಧೋಪಕರಣಗಳ ಕೊರತೆಯು ಇರಾನಿಯನ್ನರ ಪ್ರತಿದಾಳಿಯನ್ನು ನಿಯಂತ್ರಿಸುವ ಪ್ರಯತ್ನಗಳಿಗೆ ಅಡ್ಡಿಯಾಗಬಹುದು ಎಂದು ಕೈನ್ ಒತ್ತಿ ಹೇಳಿದ್ದರು.
ಇಸ್ರೇಲ್ ಮತ್ತು ಉಕ್ರೇನ್‌ನಂತಹ ಮಿತ್ರರಾಷ್ಟ್ರಗಳಿಗೆ ಅಮೆರಿಕವು ಮಿಲಿಟರಿ ನೆರವು ನೀಡಿದ ನಂತರ, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಪ್ರಮುಖ ದಾಸ್ತಾನುಗಳು ಸೇರಿದಂತೆ ಅಮೆರಿಕದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಮೀಸಲು ಈಗ ಗಂಭೀರವಾಗಿ ಕುಸಿದಿದೆ. ಕಳೆದ ವರ್ಷ ಇಸ್ರೇಲ್-ಇರಾನ್ ಸಂಘರ್ಷದಲ್ಲಿ, ಅಮೆರಿಕವು ತನ್ನ THAAD ಇಂಟರ್‌ಸೆಪ್ಟರ್‌ಗಳಲ್ಲಿ 25%ರಷ್ಟನ್ನು (150 ಕ್ಷಿಪಣಿಗಳು) ಇರಾನ್ ಕ್ಷಿಪಣಿಗಳನ್ನು ತಡೆಯಲು ಬಳಸಿಕೊಂಡಿತ್ತು. ಅಲ್ಲದೆ, ಅಮೆರಿಕದ ಹಡಗು-ಆಧಾರಿತ ಇಂಟರ್‌ಸೆಪ್ಟರ್‌ಗಳು ಖಾಲಿಯಾಗಿದ್ದವು ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದ್ದವು.
THAAD ವ್ಯವಸ್ಥೆ ಸೇರಿದಂತೆ ಸುಧಾರಿತ ನಿಖರ ಯುದ್ಧೋಪಕರಣಗಳು ಮತ್ತು ಪ್ರಮುಖ ಇಂಟರ್‌ಸೆಪ್ಟರ್‌ಗಳು ಖಾಲಿಯಾಗುವ ಅಪಾಯವನ್ನು ಅಮೆರಿಕ ಎದುರಿಸುತ್ತಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇವುಗಳಲ್ಲಿ ಅತಿ ಹೆಚ್ಚು ಬಾಧಿತವಾಗಿರುವುದು ‘ಜಂಟಿ ನೇರ ದಾಳಿ ಯುದ್ಧೋಪಕರಣಗಳು’ (JDAMs) – ಇವು ಸಾಮಾನ್ಯ ಬಾಂಬ್‌ಗಳನ್ನು ಅತ್ಯಂತ ನಿಖರವಾದ ‘ಸ್ಮಾರ್ಟ್’ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವ GPS-ನಿರ್ದೇಶಿತ ಕಿಟ್‌ಗಳಾಗಿವೆ.
ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಂತಹ ದೊಡ್ಡ ಶಕ್ತಿಗಳಿಂದ ಎದುರಾಗುವ ಅಲ್ಪಾವಧಿಯ ತೀವ್ರ ದಾಳಿಗಳನ್ನು ಎದುರಿಸಲು ಈ ಸುಧಾರಿತ ಕ್ಷಿಪಣಿ ಕವಚಗಳನ್ನು ನಿರ್ಮಿಸಲಾಗಿದೆ. ಆದರೆ, ಈಗ ಅವುಗಳನ್ನೇ ಬಳಸಿಕೊಂಡು ಪ್ರಸ್ತುತ ಎದುರಿಸುತ್ತಿರುವ ಕಡಿಮೆ ವೆಚ್ಚದ ಮತ್ತು ನಿರಂತರವಾದ ರಾಕೆಟ್ ದಾಳಿಗಳನ್ನು ಎದುರಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ತಜ್ಞರು ಬೆಟ್ಟು ಮಾಡಿದ್ದಾರೆ.
ಗಮನಾರ್ಹವಾಗಿ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಸೋಮವಾರ ಸುದ್ದಿಗಾರರಿಗೆ ಮಾತನಾಡಿ, “ಇರಾನ್‌ನ ಉತ್ಪಾದನಾ ಸಾಮರ್ಥ್ಯವು ಅಮೆರಿಕ ಮತ್ತು ಅದರ ಪಾಲುದಾರರು ತಯಾರಿಸಬಹುದಾದ ರಕ್ಷಣಾತ್ಮಕ ಇಂಟರ್‌ಸೆಪ್ಟರ್‌ಗಳಿಗಿಂತ ಬಹಳ ಮುಂದಿದೆ. ಕೆಲವು ಅಂದಾಜಿನ ಪ್ರಕಾರ, ಇರಾನ್ ತಿಂಗಳಿಗೆ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉತ್ಪಾದಿಸುತ್ತಿದ್ದಾರೆ. ಇದನ್ನು ಅಮೆರಿಕದ ಮಿತ್ರ ರಾಷ್ಟ್ರಗಳು ತಿಂಗಳಿಗೆ ತಯಾರಿಸಬಹುದಾದ ಆರೇಳು ಇಂಟರ್‌ಸೆಪ್ಟರ್‌ಗಳಿಗೆ ಹೋಲಿಸಿ ನೋಡಿ, ಅಜಗಜಾಂತರ ವ್ಯತ್ಯಾಸವಿದೆ” ಎಂದು ಹೇಳಿದ್ದಾರೆ.
ಈ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿರುವುದು ಏನೆಂದರೆ, ಹಡಗಿನಿಂದ ಉಡಾವಣೆ ಮಾಡಲಾಗುವ SM-3 ಇಂಟರ್‌ಸೆಪ್ಟರ್‌ಗಳ ದಾಸ್ತಾನು ಈಗಾಗಲೇ ಕಡಿಮೆಯಾಗಿದೆ. ಇದಕ್ಕೆ ಉತ್ಪಾದನಾ ವಿಳಂಬ, ಯೆಮನ್‌ನ ಹೌತಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಗಳು ಹಾಗೂ ಇರಾನ್‌ನೊಂದಿಗಿನ ಹಿಂದಿನ ಸಂಘರ್ಷಗಳು ಕಾರಣವಾಗಿವೆ ಎಂದು ವರದಿಗಳು ಹೇಳುತ್ತಿವೆ.
ವರದಿಗಳ ಪ್ರಕಾರ, ಇರಾನ್ ಮೇಲಿನ ದಾಳಿಯ ಮೊದಲ 24 ಗಂಟೆಗಳಲ್ಲಿ ಅಮೆರಿಕ 779 ಮಿಲಿಯನ್ ಡಾಲರ್ (ಸುಮಾರು 6,900 ಕೋಟಿ ರೂಪಾಯಿ) ಖರ್ಚು ಮಾಡಿದೆ.
ಇರಾನ್ ಯುದ್ಧಕ್ಕಾಗಿ ಅಮೆರಿಕ ವೆಚ್ಚ
‘ಸೆಂಟರ್ ಫಾರ್ ನ್ಯೂ ಅಮೆರಿಕನ್ ಸೆಕ್ಯುರಿಟಿ’ಯ ಅಂಕಿಅಂಶಗಳ ಪ್ರಕಾರ, ವಿಮಾನವಾಹಕ ನೌಕೆಗಳ (USS ಜೆರಾಲ್ಡ್ ಆರ್ ಫೋರ್ಡ್ ನಂತಹವು) ಕಾರ್ಯಾಚರಣೆಗೆ ದಿನಕ್ಕೆ ಸುಮಾರು 6.5 ಮಿಲಿಯನ್ ಡಾಲರ್ (58 ಕೋಟಿ ರೂ.) ವೆಚ್ಚವಾಗುತ್ತದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಪ್ರಮುಖ ನಾಯಕರ ಹತ್ಯೆಗೆ ಕಾರಣವಾದ ದಾಳಿಯ ಪೂರ್ವಸಿದ್ಧತೆಯಾಗಿ, ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಜೆರಾಲ್ಡ್ ಆರ್ ಫೋರ್ಡ್ ಸೇರಿದಂತೆ ಎರಡು ವಿಮಾನವಾಹಕ ನೌಕೆಗಳ ಗುಂಪುಗಳನ್ನು ನಿಯೋಜಿಸಿತ್ತು. ವಿಮಾನಗಳ ಮರುನಿಯೋಜನೆ, ನೌಕಾ ಹಡಗುಗಳ ನಿಯೋಜನೆ ಹಾಗೂ ಪ್ರಾದೇಶಿಕ ಸ್ವತ್ತುಗಳ ಸಜ್ಜುಗೊಳಿಸುವಿಕೆ ಸೇರಿದಂತೆ ಒಟ್ಟಾರೆ ದಾಳಿಯ ಪೂರ್ವ ಮಿಲಿಟರಿ ಸಿದ್ಧತೆಯ ಅಂದಾಜು ವೆಚ್ಚವು 630 ಮಿಲಿಯನ್ ಡಾಲರ್ (5,556 ಕೋಟಿ ರೂ.) ಆಸುಪಾಸಿನಲ್ಲಿದೆ.
ಒಂದು ವೇಳೆ ಟ್ರಂಪ್ ಸೂಚಿಸಿದಂತೆ ಯುದ್ಧವು ದೀರ್ಘಕಾಲ ಎಳೆದರೆ, ಅಮೆರಿಕವು ಬರೋಬ್ಬರಿ 210 ಬಿಲಿಯನ್ ಡಾಲರ್ (18.87 ಲಕ್ಷ ಕೋಟಿ ರೂ.) ಖರ್ಚು ಮಾಡಬೇಕಾಗುತ್ತದೆ ಎಂದು ಪೆನ್ ವಾರ್ಟನ್ ಬಜೆಟ್ ಮಾಡೆಲ್‌ನ ನಿರ್ದೇಶಕ ಕೆಂಟ್ ಸ್ಮೆಟರ್ಸ್ ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿಕದ ಆಟ!
2023ರ ಅಕ್ಟೋಬರ್ 7ರಂದು ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ, ಅಮೆರಿಕವು ಇಸ್ರೇಲ್‌ಗೆ 21.7 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಿದೆ. ಅಲ್ಲದೆ ಯೆಮನ್, ಇರಾನ್ ಹಾಗೂ ವಿಶಾಲವಾದ ಮಧ್ಯಪ್ರಾಚ್ಯದಲ್ಲಿ ನಡೆಸಿದ ಕಾರ್ಯಾಚರಣೆಗಳಿಗೆ 9.65 ಬಿಲಿಯನ್‌ನಿಂದ 12.07 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅಂದರೆ, ಒಟ್ಟು 31.35 ಬಿಲಿಯನ್ ಡಾಲರ್ (2.82 ಲಕ್ಷ ಕೋಟಿ ರೂ.) ನಿಂದ 33.77 ಬಿಲಿಯನ್ ಡಾಲರ್ (3.04 ಲಕ್ಷ ಕೋಟಿ ರೂ.) ಖರ್ಚಾಗಿದೆ.
ಇದೆಲ್ಲದವೂ ತಿಳಿದಿದ್ದರೂ, ಶುಕ್ರವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಜೊತೆಗಿನ ಪರಮಾಣು ಮಾತುಕತೆಗಳು ನಡೆಯುತ್ತಿರುವ ರೀತಿಯ ಬಗ್ಗೆ ನಮಗೆ ಸಂತೋಷವಿಲ್ಲ” ಎಂದಿದ್ದರು. ಅದಾದ, ಮೂರು ಗಂಟೆಗಳ ನಂತರ, ಅವರು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವಾರು ಉನ್ನತ ಮಿಲಿಟರಿ ಮುಖ್ಯಸ್ಥರು ಸೇರಿದಂತೆ ದೇಶದ ಅನೇಕ ಪ್ರಮುಖ ನಾಯಕರನ್ನು ಹತ್ಯೆ ಮಾಡುವ ಕಾರ್ಯಾಚರಣೆಗೆ ಟ್ರಂಪ್ ಆದೇಶ ನೀಡಿದರು. ಶನಿವಾರ (ಫೆ.28) ಇರಾನ್ ಮೇಲೆ ದಾಳಿಗಳು ಆರಂಭವಾದವು. ಪ್ರತೀಕಾರವಾಗಿ ಇರಾನ್ ಕೂಡ ಅಮೆರಿಕದ ವಾಯು ನೆಲೆಗಳಿರುವ ಬಹ್ರೇನ್, ಸೌದಿ ಅರೇಬಿಯಾ, ಕತಾರ್, ಯುಎಇ ಹಾಗೂ ಇರಾಕ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಆರಂಭಿಸಿತು.




