ವಿಮಾನ ಅಪಘಾತ ಸಂಭವಿಸಿ 10 ವಿದೇಶಿಯರು ಸೇರಿದಂತೆ ಒಟ್ಟು 11 ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ಕೆನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ಹೋಗುವ ಮಾರ್ಗದಲ್ಲಿ ಸಂಭವಿಸಿದೆ.
ಎಂಟು ಹಂಗೇರಿಯನ್ ಮತ್ತು ಇಬ್ಬರು ಜರ್ಮನ್ ಪ್ರಯಾಣಿಕರು ವಿಮಾನದಲ್ಲಿದ್ದರು. ಉಳಿದಂತೆ ಕೆನ್ಯಾದ ಪೈಲಟ್ ಇದ್ದರು. ಎಲ್ಲಾರೂ ಸಾವನ್ನಪ್ಪಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಮೊಂಬಾಸಾ ಏರ್ ಸಫಾರಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ಸಿನಿಮಾ ನಿರ್ಮಾಪಕ ನಾಪತ್ತೆ: ಅಪಘಾತದಲ್ಲಿ ಮೃತಪಟ್ಟಿರುವ ಶಂಕೆ
ಡಯಾನಿ ವಾಯುನೆಲೆಯಿಂದ ಸುಮಾರು 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿರುವ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಕಾರಣವನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂದು ಕ್ವಾಲೆ ಕೌಂಟಿ ಆಯುಕ್ತ ಸ್ಟೀಫನ್ ಒರಿಂಡೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು. ಸ್ಥಳೀಯ ಸಮಯ ಬೆಳಿಗ್ಗೆ 5:30 ಕ್ಕೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಆರಂಭದಲ್ಲಿ ಹೇಳಿದ್ದರು. ಆದರೆ ಸಾರಿಗೆ ಸಚಿವರು ಬೆಳಿಗ್ಗೆ 8:35 ಅಪಘಾತ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ವಿಮಾನಯಾನ ಸಂಸ್ಥೆ ನಿಖರವಾದ ಸಮಯವನ್ನು ತಿಳಿಸಿಲ್ಲ.
ವಿಮಾನವು ಬೆಂಕಿಗಾಹುತಿಯಾಗಿದ್ದು, ಪ್ರತ್ಯಕ್ಷದರ್ಶಿಗಳು ಭಾರಿ ಸದ್ದು ಕೇಳಿದೆ ಎಂದು ತಿಳಿಸಿರುವುದಾಗಿ ಎಪಿ ವರದಿ ಮಾಡಿದೆ.
ಕೆನ್ಯಾ ಕರಾವಳಿಯ ಪಶ್ಚಿಮದಲ್ಲಿರುವ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶವು ಹೆಸರುವಾಸಿಯಾಗಿದೆ. ಇಲ್ಲಿಗೆ ಜನಪ್ರಿಯ ಕರಾವಳಿ ಪಟ್ಟಣ ಡಯಾನಿಯಿಂದ ಎರಡು ಗಂಟೆಗಳ ನೇರ ವಿಮಾನ ಪ್ರಯಾಣದಲ್ಲಿ ಸಾಗಬಹುದಾಗಿದೆ. ಈ ಮೀಸಲು ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.





