ಕೀನ್ಯಾದ ಮಾಜಿ ಪ್ರಧಾನಮಂತ್ರಿ ರೈಲಾ ಒಡಿಂಗಾ (80) ಅವರು ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿತುಕುಲಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ನಿಧನರಾದರು.
ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮುಂಜಾನೆ 8 ಗಂಟೆ ಸುಮಾರಿಗೆ ತಮ್ಮ ಬೆಳಗಿನ ವಾಯುವಿಹಾರದ ಸಮಯದಲ್ಲಿ ಹೃದಯಾಘಾತಕ್ಕೊಳಗಾದರು. ತಕ್ಷಣವೇ ಅವರನ್ನು ಕೊಚ್ಚಿತುಕುಲಂನ ದೇವಮಾತ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬೆಳಿಗ್ಗೆ 9.52ಕ್ಕೆ ಅವರ ಮೃತಪಟ್ಟಿದ್ದಾರೆಂದು ದೃಢೀಕರಿಸಲಾಯಿತು.
ಶ್ರೀಧರೀಯಂ ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ರೈಲಾ ಒಡಿಂಗಾ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಕಾರಣ ಮೊದಲಿಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ತಮ್ಮ ಕಿರಿಯ ಮಗಳು ಮತ್ತು ವೈಯಕ್ತಿಕ ವೈದ್ಯರೊಂದಿಗೆ ಕೊಚ್ಚಿತುಕುಲಂಗೆ ಆಗಮಿಸಿದ್ದರು. ಆಯುರ್ವೇದ ಚಿಕಿತ್ಸೆಯಿಂದ ಚೇತರಿಕೆಯ ಲಕ್ಷಣಗಳನ್ನು ತೋರಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪಟೇಲರನ್ನು ಹೈಜಾಕ್ ಮಾಡುವುದು ಆರ್‌ಎಸ್‌ಎಸ್‌ಗೆ ಸುಲಭವಲ್ಲ!
ಅವರ ಮೃತದೇಹವನ್ನು ಅಂತಿಮಸಂಸ್ಕಾರಕ್ಕೆ ಸಿದ್ಧಪಡಿಸಲಾಗುವುದು. ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ನವದೆಹಲಿಯ ಕೀನ್ಯಾ ರಾಯಭಾರ ಕಚೇರಿಯ ಸೂಚನೆಗಳ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಾ ಒಡಿಂಗಾ ಅವರಿಗೆ ಶ್ರೀಧರೀಯಂ ಆಸ್ಪತ್ರೆಯೊಂದಿಗೆ ವಿಶೇಷ ಸಂಬಂಧವಿತ್ತು. ಅವರ ಹಿರಿಯ ಮಗಳು ರೋಸ್‌ಮೇರಿ ಒಡಿಂಗಾ 2017ರಲ್ಲಿ ಆಪ್ಟಿಕ್ ನರದ ಹಾನಿಯಿಂದ ತಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು. 2019ರಲ್ಲಿ ಶ್ರೀಧರೀಯಂನಲ್ಲಿ ಚಿಕಿತ್ಸೆ ಆರಂಭವಾದ ಬಳಿಕ ಅವರ ದೃಷ್ಟಿ ಪುನಃ ಬಂದಿತ್ತು. ಈ ಕಾರಣಕ್ಕಾಗಿ ರೈಲಾ ಒಡಿಂಗಾ ಅವರು ಆಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು.
ರೈಲಾ ಒಡಿಂಗಾ ಅವರು 2008 ರಿಂದ 2013ರವರೆಗೆ ಕೀನ್ಯಾದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1992 ರಿಂದ 2013ರವರೆಗೆ ಲಂಗಾಟಾ ಕ್ಷೇತ್ರದ ಸಂಸದರಾಗಿದ್ದ ಅವರು, ಕೀನ್ಯಾದಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದರು.





