ಅಮೆರಿಕದೊಂದಿಗೆ ಸುದೀರ್ಘ ಯುದ್ಧ ನಡೆಸಲು ಇರಾನ್ ಸರ್ಕಾರ ಸಿದ್ಧವಾಗಿದೆ. ಸಂಘರ್ಷದಿಂದ ಹಿಂದೆ ಸರಿಯುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒಪ್ಪಿಸಲು ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ, ಆ ದೇಶಗಳ ಮೇಲೆ ದಾಳಿಯನ್ನು ಮುಂದುವರಿಸಲು ಇರಾನ್ ಸಿದ್ಧವಿದೆ. ಆರ್ಥಿಕ ಸಂಕಷ್ಟದಿಂದ ಮಾತ್ರವೇ ಯುದ್ಧ ಅಂತ್ಯವಾಗಬಲ್ಲದು ಎಂದು ಇರಾನ್‌ನ ಉನ್ನತ ಅಧಿಕಾರಿ ಎಚ್ಚರಿಸಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕರ ಕಚೇರಿಯ ವಿದೇಶಾಂಗ ನೀತಿ ಸಲಹೆಗಾರ ಕಮಲ್ ಖರಾಜಿ ಅವರು ಸಿಎನ್‌ಎನ್‌ಗೆ ಸಂದರ್ಶನ ನೀಡಿದ್ದು, ಯುದ್ಧ ಮುಂದುವರಿಕೆಯ ಬಗ್ಗೆ ಮಾತನಾಡಿದ್ದಾರೆ. ಅಮೆರಿಕ ಜೊತೆಗಿನ ರಾಜತಾಂತ್ರಿಕ ಮಾತುಕತೆಯನ್ನು ಅವರು ತಿರಸ್ಕರಿಸಿದ್ದು, ಯುದ್ಧವು ಕೇವಲ ಆರ್ಥಿಕ ಸಂಕಷ್ಟದ ಮೂಲಕವಷ್ಟೇ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ.
“ನನಗೆ ಈಗ ರಾಜತಾಂತ್ರಿಕತೆಗೆ ಯಾವುದೇ ಅವಕಾಶ ಕಾಣಿಸುತ್ತಿಲ್ಲ. ಏಕೆಂದರೆ ಡೊನಾಲ್ಡ್ ಟ್ರಂಪ್ ಇತರರನ್ನು ವಂಚಿಸುತ್ತಿದ್ದಾರೆ ಮತ್ತು ತಮ್ಮ ಭರವಸೆಗಳನ್ನು ಈಡೇರಿಸುತ್ತಿಲ್ಲ. ಎರಡು ಬಾರಿ ಮಾತುಕತೆ ನಡೆಸಿದಾಗ ನಾವು ಇದನ್ನು ಅನುಭವಿಸಿದ್ದೇವೆ. ನಾವು ಮಾತುಕತೆಯಲ್ಲಿ ತೊಡಗಿದ್ದಾಗಲೇ ಅವರು ನಮ್ಮ ಮೇಲೆ ದಾಳಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಇರಾನ್ ವಿರುದ್ಧದ ಅಮೆರಿಕನ್ನರು ಮತ್ತು ಇಸ್ರೇಲಿಗಳ ಆಕ್ರಮಣವನ್ನು ಕೊನೆಗೊಳಿಸುವ ಭರವಸೆ ನೀಡಲು ಇತರ ದೇಶಗಳು ಹಸ್ತಕ್ಷೇಪ ಮಾಡುವಷ್ಟು ಆರ್ಥಿಕ ಒತ್ತಡ ನಿರ್ಮಾಣವಾಗಬೇಕು. ಅದನ್ನು ಬಿಟ್ಟು ಇಲ್ಲಿ ಬೇರೆ ಅವಕಾಶವಿಲ್ಲ. ಆರ್ಥಿಕ ಒತ್ತಡ ನಿರ್ಮಾಣವಾದರೆ, ಗಲ್ಫ್ ರಾಷ್ಟ್ರಗಳು ಮತ್ತು ಇತರ ದೇಶಗಳು ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಮೇಲೆ ಒತ್ತಡ ಹೇರುತ್ತಾರೆ” ಎಂದು ಕಮಲ್ ಖರಾಜಿ ಹೇಳಿದ್ದಾರೆ.
“ಈ ಯುದ್ಧವು ಹಣದುಬ್ಬರ ಮತ್ತು ಇಂಧನದ ಕೊರತೆಯ ರೂಪದಲ್ಲಿ ಇತರರ ಮೇಲೆ ಸಾಕಷ್ಟು ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿದೆ. ಒಂದು ವೇಳೆ ಇದು ಮುಂದುವರಿದರೆ, ಈ ಒತ್ತಡವು ಇನ್ನೂ ಹೆಚ್ಚಾಗುತ್ತದೆ. ಅಂತಿಮವಾಗಿ ಇತರರಿಗೆ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ʼಕಾಂಕ್ರೀಟ್ʼ ಮಾಡುವ ಗಾಯಕ್ಕೆ ಜಪಾನಿ ʼಮಿಯಾವಾಕಿʼಯೇ ಮದ್ದು!
ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದಾಗಿನಿಂದ, ಪ್ರತಿದಾಳಿಯಾಗಿ ಇರಾನ್ ಮಧ್ಯಪ್ರಾಚ್ಯದಾದ್ಯಂತ ಹಲವಾರು ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ. ಆದಾಗ್ಯೂ, ಈ ದಾಳಿಯಲ್ಲಿ ವಸತಿ ಕಟ್ಟಡಗಳು ಮತ್ತು ವಿಮಾನ ನಿಲ್ದಾಣಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಅಲ್ಲದೆ, ತನ್ನ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಪರಿಣಾಮ, ಕಚ್ಛಾತೈಲ ತುಂಬಿದ ಹಡಗುಗಳು ಸಮುದ್ರದಲ್ಲಿ ನಿಂತಿವೆ. ಜಾಗತಿಕ ಇಂಧನ ಮಾರುಕಟ್ಟೆ ಅಸ್ತವ್ಯಸ್ತವಾಗಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಇಂಧನ ಕೊರತೆ ಎದುರಿಸುತ್ತಿವೆ. ಈಗಾಗಲೇ, ಬೆಂಗಳೂರು, ಚೆನ್ನೈ ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಎಲ್‌ಪಿಜಿ ಕೊರತೆಗೆ ತುತ್ತಾಗಿದ್ದು, ತಮ್ಮ ಉದ್ಯಮಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಮುಂದಾಗಿವೆ.




