ಕಾಶ್ಮೀರ ಸೇರಿದಂತೆ ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಘನತೆಯುತ ಮತ್ತು ಗೌರವಯುತ ರೀತಿಯಲ್ಲಿ ಮಾತುಕತೆಗೆ ನಾವು ಸಿದ್ಧವಾಗಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಶುಕ್ರವಾರ ತಿಳಿಸಿದ್ದಾರೆ. ಆದಾಗ್ಯೂ, “ಮಾತುಕತೆಗಾಗಿ ಪಾಕಿಸ್ತಾನ ಬೇಡಲ್ಲ” ಎಂದು ಒತ್ತಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಾರ್, “ಜಮ್ಮು ಕಾಶ್ಮೀರ ವಿವಾದ ಸೇರಿದಂತೆ ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಘನತೆಯುತ ಮತ್ತು ಗೌರವಯುತ ರೀತಿಯಲ್ಲಿ ಮಾತುಕತೆಗೆ ಪಾಕಿಸ್ತಾನ ಸಿದ್ಧವಾಗಿದೆ. ಈ ವಿಷಯದ ಬಗ್ಗೆ ದೀರ್ಘಕಾಲದ ನಿಲುವಿನ ಪ್ರಕಾರವಾಗಿಯೇ ಮಾತುಕತೆಗೆ ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತೀಯರನ್ನು ಕೊಂದರೆ ಬೆಲೆ ತೆರಬೇಕಾಗುತ್ತದೆ: ಪಾಕಿಸ್ತಾನಕ್ಕೆ ಶಶಿ ತರೂರ್ ಎಚ್ಚರಿಕೆ
ಇನ್ನೊಂದೆಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವುದು ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಸ್ಪಷ್ಟಪಡಿಸಿದೆ.
2003ರಲ್ಲಿ ಜನರಲ್ ಪರ್ವೇಜ್ ಮುಷರಫ್ ಪಾಕಿಸ್ತಾನದ ಆಡಳಿತ ಹೊಂದಿದ್ದಾಗ ಮಾತುಕತೆ ಪ್ರಾರಂಭವಾಗಿತ್ತು. ಒಟ್ಟು ಉಭಯ ದೇಶಗಳ ನಡುವಿನ ಎಂಟು ಸಮಸ್ಯೆಗಳ ಬಗ್ಗೆ ಮಾತುಕತಡೆ ನಡೆಸಲು ಆರಂಭಿಸಲಾಗಿತ್ತು. ಆದರೆ 2008ರ ಮುಂಬೈ ದಾಳಿಯ ನಂತರ ಮಾತುಕತೆ ಕೈಬಿಡಲಾಗಿತ್ತು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರರು ಭಯೋತ್ಪಾದಕ ದಾಳಿ ನಡೆಸಿ 26 ಪ್ರವಾಸಿಗರ ಹತ್ಯೆ ಮಾಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ ನಡೆಸಿ 100ಕ್ಕೂ ಅಧಿಕ ಭಯೋತ್ಪಾದಕರ ಹತ್ಯೆ ಮಾಡಿದೆ ಎಂದು ತಿಳಿಸಿದೆ. ಅದಾದ ಬಳಿಕ ಪಾಕಿಸ್ತಾನ, ಭಾರತದ ನಡುವೆ ದಾಳಿ, ಪ್ರತಿದಾಳಿ ನಡೆದಿದೆ. ನಾಲ್ಕು ದಿನಗಳ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಒಪ್ಪಂದ ಮಾಡಿಕೊಂಡಿದೆ.





