ಅಗತ್ಯ ಆಂಟಿಬಯೋಟಿಕ್‌ಗಳಿಗೆ ಪ್ರತಿರೋಧ(resistance) ಹೆಚ್ಚಾಗುತ್ತಿದ್ದು, ಇದು ಜಾಗತಿಕವಾಗಿ ಆರೋಗ್ಯ ಕ್ಷೇತ್ರಕ್ಕೆ ಅಪಾಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಹೇಳಿದೆ. ಆಂಟಿಬಯೋಟಿಕ್‌ಗಳನ್ನು ಮೀರಿಸಿ ಹರಡುವ ಶಕ್ತಿಯನ್ನು ಕೆಲವು ಬ್ಯಾಕ್ಟೀರಿಯಾಗಳು ಹೊಂದಿವೆ ಎಂದು ಹೇಳಲಾಗಿದೆ.
2023ರಲ್ಲಿ ವಿಶ್ವಾದ್ಯಂತ ಜನರಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಕಾರಣವಾದ ಬ್ಯಾಕ್ಟೀರಿಯಾ ಸೋಂಕುಗಳಲ್ಲಿ ಒಂದು ಆಂಟಿಬಯೋಟಿಕ್‌ಗಳಿಗೆ ಪ್ರತಿರೋಧ ಒಡ್ಡುತ್ತದೆ ಎಂದು ಪ್ರಯೋಗಾಲಯವೊಂದು ದೃಢಪಡಿಸಿದೆ ಎಂದು WHO ವರದಿ ತಿಳಿಸಿದೆ. 2018 ಮತ್ತು 2023ರ ನಡುವೆ ಆಂಟಿಬಯೋಟಿಕ್‌ಗಳಿಗೆ ಪ್ರತಿರೋಧವು ಶೇಕಡ 40ರಷ್ಟು ಹೆಚ್ಚಳವಾಗಿದೆ. ಸರಾಸರಿ ವಾರ್ಷಿಕವಾಗಿ ಶೇ.5-15ರಷ್ಟು ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ : ವಿಶ್ವ ಆರೋಗ್ಯ ಸಂಸ್ಥೆ
ಹೊಸ ಜಾಗತಿಕ ಆಂಟಿಬಯೋಟಿಕ್ ಪ್ರತಿರೋಧ ವರದಿ 2025, ಮೊದಲ ಬಾರಿಗೆ ಮೂತ್ರ ಮತ್ತು ಜಠರ, ಕರಳು, ಗೊನೊರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ 22 ಆಂಟಿಬಯೋಟಿಕ್‌ಗಳಲ್ಲಿ ಪ್ರತಿರೋಧ ಕಂಡುಬಂದಿದೆ ಎಂದು ಹೇಳಿದೆ. ಒಟ್ಟು ಎಂಟು ಸಾಮಾನ್ಯ ಬ್ಯಾಕ್ಟೀರಿಯಾಗಳ ಪ್ರಯೋಗ ಮಾಡಲಾಗಿದೆ.
ಆಗ್ನೇಯ ಏಷ್ಯಾ ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ ಆಂಟಿಬಯೋಟಿಕ್‌ಗಳಿಗೆ ಪ್ರತಿರೋಧವು ಅತ್ಯಧಿಕವಾಗಿದೆ. ಈ ಪ್ರದೇಶಗಳಲ್ಲಿ ವರದಿಯಾದ ಮೂರು ಸೋಂಕುಗಳ ಪೈಕಿ ಒಂದು ಪ್ರತಿರೋಧವನ್ನು ಹೊಂದಿದೆ. ಆಫ್ರಿಕನ್ ಪ್ರದೇಶದಲ್ಲಿ, ಐದು ಸೋಂಕುಗಳಲ್ಲಿ ಒಂದು ಪ್ರತಿರೋಧವನ್ನು ಹೊಂದಿದೆ.
“ಆಧುನಿಕ ವೈದ್ಯಕೀಯದಲ್ಲಿ ಆಂಟಿಮೈಕ್ರೊಬಿಯಲ್ ಪ್ರತಿರೋಧವು ತೀವ್ರವಾಗಿ ಹೆಚ್ಚಾಗುತ್ತಿದೆ. ಇದು ವಿಶ್ವಕ್ಕೆ ಅಪಾಯವಾಗಿದೆ. ಈ ಬಗ್ಗೆ ಎಲ್ಲಾ ದೇಶಗಳು ಗಮನಹರಿಸಬೇಕು. ಎಲ್ಲರಿಗೂ ಸರಿಯಾದ ಔಷಧಿಗಳು, ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿದೆಯೇ ಎಂದು ನೋಡಿಕೊಳ್ಳಬೇಕು” ಎಂದು WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.





