ಲಿಟಾನಿ ಕೇವಲ ನದಿಯಲ್ಲ, ಅದೊಂದು ಆತ್ಮಸಾಕ್ಷಿ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ನದಿಯು ಜೀವನೋಪಾಯದ ಮೂಲ. ಅಂತಹ ನದಿಯೊಂದರ ಪುನಶ್ಚೇತನಗಳತ್ತ ಒಂದು ನೋಟ...
ಲಿಟಾನಿ ನದಿ- ದಕ್ಷಿಣ ಲೆಬನಾನ್‌ನ ಬಯಲು, ಹೊಲ, ತೋಟ, ಹಳ್ಳಿಗಳಗುಂಟ ಸಕಲ ಜೀವಿಗಳನ್ನೂ ಪೊರೆಯುತ್ತಾ ಹರಿಯುವ ಜೀವನದಿ. ಶತ ಶತಮಾನಗಳ ಕಾಲ ಜನರ ಶ್ರಮ, ಪ್ರೀತಿ, ಆರೈಕೆಯನ್ನು ಲಿಟಾನಿ ಕಂಡಿದೆ. ಈ ನದಿಯ ನೀರು ವ್ಯವಸಾಯಕ್ಕೆ ಬಳಕೆಯಾದ ಬಗ್ಗೆಯಷ್ಟೇ ಸ್ಮೃತಿಗಳನ್ನಿಟ್ಟುಕೊಂಡಿಲ್ಲ, ಬದಲಿಗೆ ಸ್ಥಳಾಂತರವಾದವರ, ಪ್ರತಿರೋಧ ಒಡ್ಡಿದವರ ಮತ್ತು ಇವೆಲ್ಲದರ ನಡುವೆ ಉಳಿದ ಜನರ ಕತೆಗಳನ್ನೂ ತನ್ನೆದೆಯೊಳಗೆ ಇಳಿಸಿಕೊಂಡಿದೆ. ಈ ನದಿಯ ದಂಡೆಯುದ್ದಕ್ಕೂ ಬಹಳ ಕಾಲದಿಂದ ಮಹಿಳೆಯರು ತಮ್ಮ ಕುಟುಂಬಗಳನ್ನು ಹಾಗೂ ಸಮುದಾಯಗಳನ್ನು ಸುಸ್ಥಿರವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕೈತೋಟಗಳನ್ನು ಮಾಡಿದ್ದಾರೆ, ಬ್ರೆಡ್‌ಗಾಗಿ ಹಿಟ್ಟು ನಾದಿದ್ದಾರೆ, ಔಷಧೀಯ ಗಿಡ-ಬಳ್ಳಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಬಿತ್ತನೆ ಬೀಜಗಳನ್ನು ಸಂರಕ್ಷಿಸಿದ್ದಾರೆ. ಅವರ ಜ್ಞಾನ ತಲೆತಲಾಂತರದಿಂದ ಹರಿದು ಬಂದಿದೆ, ನದಿಯ ಹಾಗೆ.
ಆದರೆ ಇಂದು ಲಿಟಾನಿ ನದಿಯ ಮೇಲೆ ದೊಡ್ಡ ಹೊರೆ ಬಿದ್ದಿದೆ. ನಿತ್ಯದ ಬದುಕಿಗೆ ಹಾಗೂ ಕೃಷಿಗೆ ಯೋಗ್ಯವಾಗಿದ್ದ ಈ ನದಿಯ ನೀರು ಕಲುಷಿತಗೊಂಡಿದೆ ಮತ್ತು ನಿರ್ಲಕ್ಷಕ್ಕೆ ಒಳಗಾಗಿದೆ. ಕೈಗಾರಿಕಾ ತ್ಯಾಜ್ಯ, ಸಂಸ್ಕರಿಸದೆ ಹಾಗೆಯೇ ನದಿಗೆ ಹರಿಸುವ ಚರಂಡಿ ನೀರನ್ನು ನಿಯಂತ್ರಿಸಲಾಗುತ್ತಿಲ್ಲ. ಅದಕ್ಕೆ ರಾಜಕೀಯ ಹಿತಾಸಕ್ತಿಯ ಕೊರತೆಯೇ ಕಾರಣ. ಇದು ಭೂಮಿ, ಜನಜೀವನ ಹಾಗೂ ಆಡಳಿತದ ನಡುವಿನ ಕ್ಷೀಣವಾದ ಸಂಬಂಧವನ್ನು ಎತ್ತಿತೋರಿಸುತ್ತಿದೆ. ಈ ನದಿ ಎಲ್ಲ ಒತ್ತಡಗಳ ನಡುವೆಯೂ ಜನಸಮುದಾಯಗಳಂತೆಯೇ ಉಳಿದಿದೆ. ಅನ್ಯಾಯಕ್ಕೊಳಗಾಗಿರುವ ಈ ನದಿಯು ತನ್ನ ಸ್ಥಿತಿಸ್ಥಾಪಕತ್ವದ ಕಥೆ ಹೇಳುತ್ತಿದೆ.
ಇದನ್ನು ಓದಿದ್ದೀರಾ?: ರಸಗೊಬ್ಬರಕ್ಕಾಗಿ ಎರಡು ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆ ಸಾವು
ಇಲ್ಲಿ, ನೆನಪುಗಳ ಮೂಸೆಯಲ್ಲಿ, ತುರ್ತಿನ ಈ ದಿನಮಾನಗಳಲ್ಲಿ ನನ್ನ ಮುಂದಿನ ಯೋಜನೆ ಆರಂಭಗೊಳ್ಳುತ್ತದೆ. ನಾನು ದಕ್ಷಿಣ ಲೆಬನಾನ್‌ನ ಮಹಿಳೆಯರ ಜೊತೆ ಹೆಜ್ಜೆಹಾಕಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಎಲ್ಲೆಲ್ಲಿ ಪ್ರಕೃತಿಯೊಂದಿಗೆ ನೆನಪುಗಳು ಹೆಣೆದುಕೊಂಡಿವೆಯೋ ಅಲ್ಲೆಲ್ಲಾ ಹೋಗಿ ನಿಂತು ಕೆಲಸ ಮಾಡಲಿಚ್ಛಿಸಿದ್ದೇನೆ. ಇದು ನನ್ನ ಪ್ರಯಾಣವಷ್ಟೇ ಅಲ್ಲ, ಬದಲಿಗೆ ಇದು ಪರಸ್ಪರ ಗಮನಿಸುವ, ಕೇಳುವ ಹಾಗೂ ಹೊಸದನ್ನು ಜೊತೆಯಾಗಿ ಕಟ್ಟುವ ಸಮಷ್ಟಿಯ ಪ್ರಯಾಣ. ಈ ನಡಿಗೆಯಲ್ಲಿ ನಾವು ಭೂಮಿ ಮತ್ತು ನೀರಿನ ಕಥೆಗಳನ್ನು ದಾಖಲಿಸುತ್ತೇವೆ; ಪರಂಪರೆಗಳ ನೆಲಗುರುತು-ನುಡಿಗುರುತುಗಳನ್ನು ಪತ್ತೆ ಹಚ್ಚುತ್ತೇವೆ; ಪರಿಸರದ ಮೇಲಾಗಿರುವ ದಾಳಿಯನ್ನೂ ನಮ್ಮ ನೆನಪುಗಳಿಂದ ಅಳಿಸಿ ಹಾಕುತ್ತಿರುವ ಜಾಗತಿಕ ಹುನ್ನಾರಗಳನ್ನು ಭೇದಿಸುತ್ತೇವೆ. ಇದರೊಂದಿಗೆ ಮಹಿಳೆಯರ ಧ್ವನಿ ಹೇಗೆ ಭವಿಷ್ಯದ ಪರಿಸರ ಸಮತೋಲನವನ್ನು ಕಾಪಾಡಲು ಸಹಾಯವಾಗಬಲ್ಲದು ಎಂದು ಅರಿಯುತ್ತೇವೆ.

ನದಿಯ ಮಾತು ಕೇಳಿ…
ಲಿಟಾನಿ ಕೇವಲ ನದಿಯಲ್ಲ, ನದಿಗೆ ಮೀರಿದ್ದು, ಅದೊಂದು ಆತ್ಮಸಾಕ್ಷಿ. ಈ ನದಿಯು ಆಧುನಿಕ ಆರ್ಥಿಕತೆಯೊಂದಿಗೆ ಬದಲಾದ ಕೃಷಿ ಪದ್ಧತಿಗಳನ್ನು ಕಂಡಿದೆ. ರೈತರು ಭೂಮಿ ಮತ್ತು ಕಸುಬು ಕಳೆದುಕೊಂಡಾಗ ಅವರು ನಡೆಸಿದ ಹೋರಾಟಗಳಿಗೆ ಸಾಕ್ಷಿಯಾಗಿದೆ. ಇದಲ್ಲದೆ ಪರಿಸರದ ಮೇಲಾಗಿರುವ ದಾಳಿಯನ್ನೂ ತಾಳಿಕೊಂಡಿದೆ. ಮಹಿಳೆಯರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ನದಿಯು ಜೀವನೋಪಾಯದ ಮೂಲ, ಅಂತೆಯೇ ಪ್ರಾಕೃತಿಕ ಸಂಪತ್ತು ಹಾಗೂ ಪ್ರಾಕೃತಿಕ ನಷ್ಟದ ನೆನಪು.
ನದಿಯ ದಂಡೆಯ ಮೇಲೆ ಹೆಜ್ಜೆಹಾಕುತ್ತಾ ಭೂಮಿಯೊಂದಿಗೆ ಬದುಕುತ್ತಿರುವ ಮಹಿಳೆಯರ ಪರಿಸರದ ಕಥೆಗಳನ್ನು ಹುಡುಕುತ್ತೇವೆ. ನಿರ್ಲಕ್ಷಕ್ಕೆ ಒಳಗಾದ ವಿಷಯಗಳಾದ ಆಹಾರ ಸಾರ್ವಭೌಮತ್ವ, ಮಣ್ಣು, ಬೀಜ, ನದಿಯ ಬಗ್ಗೆ ಮಾತನಾಡುತ್ತೇವೆ. ಇವು ಕೇವಲ ಸಂಪನ್ಮೂಲಗಳಷ್ಟೇ ಅಲ್ಲ, ನಮ್ಮ ನಡುವಿನ ಜೀವಿಗಳು. ಈ ಸಾಕ್ಷ್ಯಗಳು ಕೇವಲ ಸ್ಥಿತಿಸ್ಥಾಪಕತ್ವವನ್ನಷ್ಟೇ ಹೇಳದೆ, ಪರಿಸರಕ್ಕೆ ತತ್‌ಕ್ಷಣ ಬೇಕಾದ ಶುಶ್ರೂಷೆಯನ್ನು ನೀಡುತ್ತವೆ. ಅದರಿಂದ ಮನುಷ್ಯರ ಜೀವನ ಹಾಗೂ ನೈಸರ್ಗಿಕ ಚಕ್ರದ ನಡುವಿನ ಸಂಬಂಧವನ್ನು ಪುನಃಸ್ಥಾಪಿಸುವ ಕೆಲಸವಾಗುತ್ತದೆ.
ಜ್ಞಾನವಾಹಕವಾಗಿ ಮಹಿಳೆಯರು…
ಮಹಿಳೆಯರ ದಿನನಿತ್ಯದ ಚಟುವಟಿಕೆಗಳಲ್ಲಿ ಪಾರಿಸರಿಕ ಹಾಗೂ ಸಾಂಸ್ಕೃತಿಕ ಜ್ಞಾನ ಅಡಕವಾಗಿದೆ. ಓರ್ವ ಮಹಿಳೆ ತನ್ನ ಕೈತೋಟವನ್ನು ನೋಡಿಕೊಳ್ಳುವುದು, ಅಡುಗೆ ಮಾಡುವ ಪದ್ಧತಿಗಳು, ಕಸೂತಿ ಕೆಲಸಗಳು, ಮನೆ ಮದ್ದು ಅರೆಯುವುದು- ಇವೆಲ್ಲಾ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದು ಈಗಲೂ ಉಳಿದಿರುವ ಸಂಗತಿಗಳು. ಇವೆಲ್ಲ ಪಾರಂಪರಿಕವಾಗಿ ನಮ್ಮ ಸಮುದಾಯಗಳು ಈ ನೆಲಕ್ಕೆ ಹತ್ತಿರವಾಗಿದ್ದರ ಫಲ; ಸಂಪನ್ಮೂಲಗಳ ಅತಿವೃಷ್ಟಿ-ಅನಾವೃಷ್ಟಿಗಳ ಬಗೆಗಿನ ಕಾಲದ ನೆನಪುಗಳು.
ಅನೇಕ ಬಾರಿ ಇವೆಲ್ಲಾ ಸಾರ್ವಜನಿಕ ಚರ್ಚೆಗಳಲ್ಲಿ ಸ್ಥಾನ ಪಡೆಯುವುದೇ ಇಲ್ಲ. ಮಹಿಳೆಯರ ಜೊತೆ ನಡೆಯುತ್ತಾ ಅವರ ಪರಂಪರೆಯನ್ನು ದಾಖಲಿಸುವುದು ಈ ಯೋಜನೆಯ ಉದ್ದೇಶ ಹಾಗೂ ಪಾರಂಪರಿಕ ಜ್ಞಾನಕ್ಕೆ ಮರುಜೀವ ಕೊಡುವ ಕೆಲಸವೂ ಹೌದು. ಆ ಜ್ಞಾನವನ್ನು ಸಂರಕ್ಷಿಸುವುದೆಂದರೆ ಅದು ಕೇವಲ ಒಂದು ನೆನಪನ್ನು ದಾಖಲಿಸುವುದಷ್ಟೇ ಅಲ್ಲ, ಬದಲಿಗೆ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರ ಪಾತ್ರವನ್ನು ಅಳಿಸುತ್ತಿರುವ, ಗ್ರಾಮೀಣ ಬದುಕನ್ನು ಕಡೆಗಣಿಸಿರುವ, ಪಾರಿಸರಿಕ ವಿವೇಕವನ್ನು ಲೆಕ್ಕಿಸದಿರುವ ಆಧುನಿಕ ವ್ಯವಸ್ಥೆಯ ವಿರುದ್ದ ಪ್ರತಿರೋದ ಒಡ್ಡುವ ಕ್ರಮವೂ ಹೌದು.

ಜೀವಂತ ಪಠ್ಯ…
ಈ ಪ್ರಯಾಣದ ಆತ್ಮವೇ ಕಥೆ ಹೇಳುವುದು, ಚಿತ್ರ ಬಿಡಿಸುವುದು, ಬರವಣಿಗೆ ಮಾಡುವುದು, ಕಾರ್ಯಾಗಾರಗಳನ್ನು ಆಯೋಜಿಸುವುದು. ಆ ಮೂಲಕ ನದಿಯ ದಂಡೆಯ ಮೇಲಿನ ಪ್ರತಿ ಹೆಜ್ಜೆಯನ್ನೂ ಜೀವಂತ ಪಠ್ಯವಾಗಿಸುವುದು. ಈ ಪಠ್ಯ ಪೂರ್ವನಿಗದಿತವಾದದ್ದಲ್ಲ. ನೆನಪುಗಳಲ್ಲಿ, ಪ್ರಯಾಣದ ಜೊತೆ ಜೊತೆಯಾಗಿ ಎಲ್ಲರ ಸ್ಮೃತಿಗಳಲ್ಲಿ ಅಡಗಿರುವ ಸಾಂಘಿಕ ಕಲಾ ಕೃತಿ ಇದು. ಮಹಿಳೆಯರ ಧ್ವನಿಗಳು ಈ ಪಠ್ಯದ ಪುಟಗಳನ್ನು ತುಂಬುತ್ತವೆ. ಅವರು ಒದಗಿಸುವ ಸಾಕ್ಷ್ಯಗಳು ನಮಗೆ ಚಿತ್ರಗಳಾಗುತ್ತವೆ. ಅವರ ನೆನಪುಗಳು, ಪದ್ಯಗಳು, ಅವರ ಹಾವ ಭಾವ, ಚಿತ್ರಕಲೆ ಎಲ್ಲವೂ ರೂಪ ಪಡೆಯುತ್ತವೆ. ಇಲ್ಲಿ ಕಲೆ ಎಂಬುದು ಆಲಂಕಾರಿಕವಲ್ಲ. ಪರಿಸರದ ಆತ್ಮಸಾಕ್ಷಿಯನ್ನು, ಸ್ತ್ರೀವಾದಿ ಕಲ್ಪನೆಯನ್ನು ಮತ್ತು ಪಾರಂಪರಿಕ ಬದುಕಿನ ಹಸಿ ಹಸಿ ಗುರುತುಗಳನ್ನೊತ್ತು ಹೋಗುವ ಹಡಗು.
ಈ ಪಠ್ಯ ಅಥವಾ ಪತ್ರಿಕೆ ಪ್ರಯೋಗಗಳಿಗೆ ಅವಕಾಶವೂ ಹೌದು. ಕಥೆ ಹೇಳುವ ಕ್ರಮವೊಂದು ದೃಶ್ಯರೂಪಕವಾಗಬಹುದು, ನೆನಪುಗಳು ಬಣ್ಣ ಪಡೆದುಕೊಳ್ಳಬಹುದು. ಯಾವುದೋ ಪಾಕವಿಧಾನ ಹಳ್ಳಿಯೊಂದಿಗೆ, ನದಿ ದಂಡೆಗೆ ಬೆಸೆದುಕೊಳ್ಳಬಹುದು. ಇದು ಮಹಿಳೆಯರ ಜೀವನ ಹಾಗೂ ಪ್ರಕೃತಿಯ ನಡುವಿನ ನೇಯ್ಗೆ.
ನೇಯ್ಗೆಯ ನಿರಂತರತೆ-ನವೀಕರಣ…
ಲಿಟಾನಿ ನದಿಯಗುಂಟ ಹೊರಡುವ ಈ ನಡಿಗೆ ಹಿಂದಿನದನ್ನು ತಿಳಿಯುವುದಕ್ಕಷ್ಟೇ ಸೀಮಿತವಲ್ಲ, ಮುಂದಿನ ಹಾದಿ ಏನು ಎಂಬುದನ್ನು ಅರಿಯುವ ಪ್ರಯತ್ನವೂ ಆಗಿದೆ. ಮಹಿಳೆಯರನ್ನು ಒಟ್ಟಿಗೆ ತರುವ, ಸಾಂಘಿಕವಾಗಿ ಕಥೆ ಹೇಳುವ, ಹೊಸದನ್ನು ಕಟ್ಟುವ ಈ ಕ್ರಿಯೆಯಿಂದ ನಾವು ದೇಹ, ಭೂಮಿ ಹಾಗೂ ಧ್ವನಿಗಳಿಗೆ ಹೊಸ ನೇಯ್ಗೆ ಹಾಕುತ್ತೇವೆ.
ನದಿ ಒತ್ತಡದಲ್ಲಿದ್ದರೂ ನಮಗೆ ಮಾರ್ಗದರ್ಶಿಯಾಗುತ್ತದೆ. ಅಸ್ತವ್ಯಸ್ತವಾಗಿರುವ ಸ್ಥಿತಿಯೂ ಮುಂದುವರಿಕೆ, ಶಕ್ತಿ ಮತ್ತು ನವೀಕರಣದ ಸಾಧ್ಯತೆಯನ್ನು ನಮಗೆ ನದಿಯೇ ನೆನಪಿಸಿಕೊಡುತ್ತದೆ. ನದಿ ಹೇಗೆ ಬಂಡೆಗಲ್ಲುಗಳ ನಡುವೆ ತನ್ನ ಹಾದಿ ಹುಡುಕಿ ಹರಿಯುತ್ತದೋ ಅದೇ ರೀತಿಯಾಗಿ ಮಹಿಳೆಯರ ಧ್ವನಿಗಳು ಒಮ್ಮೆ ವಿನಿಮಯಗೊಂಡು ದಾಖಲಾದರೆ- ಆ ಮಾತುಗಳಿಗೆ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ.
ಲಿಟಾನಿ ಲೆಬನಾನ್‌ನ ನದಿಯಷ್ಟೇ ಅಲ್ಲ, ಇದೊಂದು ಕಥೆಗಳ ತೊರೆ, ಇದು ನಮ್ಮನ್ನು ಒಳಗೊಳ್ಳುವ, ನ್ಯಾಯ ಮಾರ್ಗದತ್ತ ನಡೆಯುವ ಹಾಗೂ ಪರಂಪರೆಯನ್ನು ನವೀಕರಿಸುವ ಸಾಧ್ಯತೆಗಳ ಮಹಾನದಿಯಾಗಿದೆ.
-ಡಾಲಿಯ ಬರಾಕತ್






