ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ಕಫಲಾ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ಕೊನೆಗೊಳಿಸಿದೆ. ಹಾಗೆಯೇ ವಲಸೆ ಕಾರ್ಮಿಕರಿಗೆ ಹೊಸದಾಗಿ ಹಕ್ಕುಗಳನ್ನು ಜಾರಿ ಮಾಡಿದೆ.
2025ರ ಜೂನ್‌ನಲ್ಲಿಯೇ ಈ ಸುಧಾರಣೆಯನ್ನು ತರಲಾಗಿದ್ದು, ಸುಮಾರು 13 ಮಿಲಿಯನ್ ವಿದೇಶಿ ಕಾರ್ಮಿಕರಿಗೆ ಹೊಸದಾಗಿ ನಿಯಮ, ಹಕ್ಕುಗಳನ್ನು ಜಾರಿ ಮಾಡಲಾಗಿದೆ. ಈವರೆಗೆ ಮುಖ್ಯವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ವಲಸೆ ಕಾರ್ಮಿಕರಿಗೆ ಕಾರ್ಮಿಕ ಹಕ್ಕುಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.
ಇದನ್ನು ಓದಿದ್ದೀರಾ? ʼವಿಶ್ವಗುರುʼ ತನ್ನ ನಾಗರಿಕರನ್ನು ಕೈಕೋಳಗಳಲ್ಲಿ ಸ್ವಾಗತಿಸಿತು; ಕೊಲಂಬಿಯಾ ದೇಶ ʼರಾಷ್ಟ್ರಪತಿ ವಿಮಾನವನ್ನೇ ಕಳಿಸಿತು!
ಏನಿದು ಕಫಲಾ ವ್ಯವಸ್ಥೆ, ಸುಧಾರಣೆಯೇನು?
ಅರೇಬಿಕ್ ಭಾಷೆಯಲ್ಲಿ ‘ಪ್ರಾಯೋಜಕತ್ವ’ ಎಂಬ ಅರ್ಥವನ್ನು ಹೊಂದಿರುವ ಕಫಲಾ ವ್ಯವಸ್ಥೆಯನ್ನು 1950ರ ದಶಕದಲ್ಲಿ ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ದೇಶಗಳಲ್ಲಿ ಪರಿಚಯಿಸಲಾಗಿದೆ. ಈ ಚೌಕಟ್ಟಿನಡಿಯಲ್ಲಿ, ಕಾರ್ಮಿಕರ ಕಾನೂನು ಸ್ಥಾನಮಾನವನ್ನು ಕಫೀಲ್ ಎಂದು ಕರೆಯಲ್ಪಡುವ ಅವರ ಉದ್ಯೋಗದಾತರು ನಿರ್ವಹಿಸುತ್ತಾರೆ. ಈ ಕಫೀಲ್ ಎಂಬವರು ಉದ್ಯೋಗಗಳನ್ನು ಬದಲಾಯಿಸುವ, ದೇಶವನ್ನು ತೊರೆಯುವ ಅಥವಾ ಕಾನೂನು ಸಹಾಯವನ್ನು ಪಡೆಯುವ ವಿಚಾರದಲ್ಲಿ ನಿಯಂತ್ರಣವನ್ನು ಹೊಂದಿರುತ್ತದೆ. ಮಾನವ ಹಕ್ಕುಗಳ ಸಂಘಟನೆಗಳು ಈ ವ್ಯವಸ್ಥೆಯನ್ನು ಶೋಷಣೆ, ನಿಂದನೆ ಮತ್ತು ಬಲವಂತದ ಕಾರ್ಮಿಕ ಪದ್ಧತಿ ಎಂದು ಟೀಕಿಸಿವೆ.
ವೀಸಾ ಮತ್ತು ನಿವಾಸದಂತಹ ಆಡಳಿತಾತ್ಮಕ ಜವಾಬ್ದಾರಿಗಳನ್ನೂ ಸ್ಥಳೀಯ ಉದ್ಯೋಗದಾತರಿಗೆ ನೀಡುವ ಈ ವ್ಯವಸ್ಥೆಯು ಕಾಲಾನಂತರದಲ್ಲಿ ಕಾರ್ಮಿಕರ ಸ್ವಾಯತ್ತತೆ ಮತ್ತು ರಕ್ಷಣೆಗಳನ್ನು ಸೀಮಿತಗೊಳಿಸಿತು. ಗೃಹ ಕಾರ್ಮಿಕರು ಮತ್ತು ನಿರ್ಮಾಣ, ಆತಿಥ್ಯ ಮತ್ತು ಕೃಷಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಲಕ್ಷಾಂತರ ವಲಸೆ ಕಾರ್ಮಿಕರು ಈ ನಿರ್ಬಂಧಗಳಿಂದ ಅತಿ ಕೆಟ್ಟ ಪ್ರಭಾವಕ್ಕೆ ಒಳಗಾದರು.
ಸೌದಿ ಅರೇಬಿಯಾದ ಹೊಸ ಕಾರ್ಮಿಕ ಚೌಕಟ್ಟು ಕಫಲಾದ ಬದಲಾಗಿ ಗುತ್ತಿಗೆ ಉದ್ಯೋಗ ಮಾದರಿಯನ್ನು(contractual employment model) ಜಾರಿಗೆ ತಂದಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ಪ್ರಕಾರ, ಕಾರ್ಮಿಕರು ಈಗ ತಮ್ಮ ಪ್ರಸ್ತುತ ಪ್ರಾಯೋಜಕರ ಅನುಮೋದನೆಯ ಅಗತ್ಯವಿಲ್ಲದೆಯೇ ಉದ್ಯೋಗ ಬದಲಾಯಿಸಬಹುದು. ನಿರ್ಗಮನ ವೀಸಾ ಇಲ್ಲದೆ ದೇಶವನ್ನು ತೊರೆಯಬಹುದು. ಈ ಹಿಂದೆ ಇಲ್ಲದ ಕಾನೂನು ರಕ್ಷಣೆಗಳನ್ನು ಪಡೆಯಬಹುದು.
ಇದನ್ನು ಓದಿದ್ದೀರಾ? ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು
ಸೌದಿ ಅರೇಬಿಯಾದ ವಿಷನ್ 2030 ಭಾಗವಾಗಿ ಈ ಸುಧಾರಣೆ ಮಾಡಲಾಗಿದೆ. ಇದು ಆರ್ಥಿಕತೆಯನ್ನು ಹೆಚ್ಚಿಸುವ, ವಿದೇಶಿ ಕಾರ್ಮಿಕರ ಕಲ್ಯಾಣದ ಗುರಿಯನ್ನು ಹೊಂದಿದೆ. ಅಧಿಕಾರಿಗಳು ಈ ಬದಲಾವಣೆಯನ್ನು ಪ್ರಮುಖ ಪ್ರಗತಿ ಎಂದು ಶ್ಲಾಘಿಸಿದ್ದಾರೆ. ಆದರೆ ಮಾನವ ಹಕ್ಕುಗಳ ಗುಂಪುಗಳು ನಿಜವಾದ ಸುಧಾರಣೆ ತರಲು ಹೊಸ ನಿಯಮವನ್ನು ಎಚ್ಚರಿಕೆಯಿಂದ ಅನುಷ್ಠಾನಗೊಳಿಸಬೇಕು ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿವೆ.
ಸೌದಿ ಅರೇಬಿಯಾವು ಸುಮಾರು 13.4 ಮಿಲಿಯನ್ ವಲಸೆ ಕಾರ್ಮಿಕರನ್ನು ಹೊಂದಿದೆ. ಅಂದರೆ ಒಟ್ಟು ಜನಸಂಖ್ಯೆ ಶೇಕಡ 42ರಷ್ಟು. ಪ್ರಮುಖವಾಗಿ ಬಾಂಗ್ಲಾದೇಶ ಮತ್ತು ಭಾರತದಿಂದ ಸೌದಿ ಅರೇಬಿಯಾಕ್ಕೆ ಹೋಗಿ ದುಡಿಯುತ್ತಾರೆ. 2023ರಲ್ಲಿ 498,000 ಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಮತ್ತು 426,951 ಇತರ ನೆರೆಯ ದೇಶದ ಪ್ರಜೆಗಳು ಸೌದಿಯಲ್ಲಿ ಉದ್ಯೋಗದಲ್ಲಿದ್ದರು. ಮನೆಕೆಲಸಗಾರರೇ 4 ಮಿಲಿಯನ್‌ರಷ್ಟಿದ್ದು, ಎಲ್ಲರೂ ವಿದೇಶಿ ಪ್ರಜೆಗಳಾಗಿದ್ದಾರೆ. ವಲಸೆ ಕಾರ್ಮಿಕರು ನಿರ್ಮಾಣ, ಮನೆಕೆಲಸ, ಆತಿಥ್ಯ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಲಸೆ ಕಾರ್ಮಿಕರಿದ್ದಾರೆ. ಕಫಲಾ ರದ್ದತಿಯು ಶೋಷಣೆಯನ್ನು ಕಡಿಮೆ ಮಾಡುತ್ತದೆ. ಕಾರ್ಮಿಕರಿಗೆ ಹೆಚ್ಚಿನ ಘನತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.





