ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ ಕಳೆಗಟ್ಟಿದ್ದ ವೇಳೆ, ಸ್ವಿಟ್ಜರ್ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ಕ್ರಾನ್ಸ್-ಮೊಂಟಾನಾದಲ್ಲಿ (Crans-Montana) ಭಾರಿ ದುರಂತವೊಂದು ಸಂಭವಿಸಿದೆ. ಇಲ್ಲಿನ ಐಷಾರಾಮಿ ಬಾರ್‌ವೊಂದರಲ್ಲಿ ಸಂಭವಿಸಿದ ಸ್ಫೋಟ ಮತ್ತು ನಂತರ ಹೊತ್ತಿಕೊಂಡ ಭಾರಿ ಬೆಂಕಿಗೆ ಹಲವರು ಆಹುತಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯು ಹೊಸ ವರ್ಷದ ಮುಂಜಾನೆ (ಸ್ಥಳೀಯ ಕಾಲಮಾನ ರಾತ್ರಿ 1:30ರ ಸುಮಾರಿಗೆ) ನಡೆದಿದ್ದು, ಸಂಭ್ರಮಾಚರಣೆಯಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಸ್ವಿಟ್ಜರ್ಲೆಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯ ಹೃದಯಭಾಗದಲ್ಲಿರುವ ಕ್ರಾನ್ಸ್-ಮೊಂಟಾನಾ ಪಟ್ಟಣದ ‘ಲೀ ಕಾನ್ಸ್ಟೆಲ್ಲೇಷನ್’ (Le Constellation) ಬಾರ್ ಮತ್ತು ಲಾಂಜ್‌ನಲ್ಲಿ ಈ ದುರ್ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಬಾರ್‌ನಲ್ಲಿ ಭಾರಿ ಬೆಂಕಿ ಆವರಿಸಿಕೊಂಡಿದ್ದು, ಹೊಗೆಯ ದಟ್ಟವಾದ ಮೋಡಗಳು ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಕಂಡುಬಂದಿದೆ.
ಪೊಲೀಸ್ ವಕ್ತಾರ ಗೇಟನ್ ಲ್ಯಾಥಿಯಾನ್ ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, “ಅಜ್ಞಾತ ಕಾರಣಗಳಿಂದ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ,” ಎಂದು ಖಚಿತಪಡಿಸಿದ್ದಾರೆ. ಗಾಯಾಳುಗಳ ಕುಟುಂಬದವರಿಗೆ ಮಾಹಿತಿ ನೀಡಲು ಮತ್ತು ಸಹಾಯ ಮಾಡಲು ಪೊಲೀಸರು ಸಹಾಯವಾಣಿಯನ್ನು ಸ್ಥಾಪಿಸಿದ್ದಾರೆ.
ಇದನ್ನು ಓದಿದ್ದೀರಾ? ಖಾಲೆದಾ ಜಿಯಾ | ಪಶ್ಚಿಮ ಬಂಗಾಳದಿಂದ ಬಾಂಗ್ಲಾ ಗದ್ದುಗೆವರೆಗಿನ ಏಳುಬೀಳು
ಸ್ಫೋಟಕ್ಕೆ ಕಾರಣವೇನು?
ಸ್ಫೋಟಕ್ಕೆ ನಿಖರವಾದ ಕಾರಣವೇನೆಂದು ಅಧಿಕಾರಿಗಳು ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ, ಬಾರ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಯ ವೇಳೆ ಬಳಸಲಾದ ಪಟಾಕಿಗಳು ಅನಾಹುತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ಶಂಕಿಸಿವೆ. ಪೊಲೀಸ್ ತನಿಖೆ ಮುಂದುವರಿದಿದ್ದು, ನೈಜ ಕಾರಣ ಇನ್ನಷ್ಟೇ ಹೊರಬರಬೇಕಿದೆ.
ಘಟನೆ ನಡೆದಾಗ ಬಾರ್‌ನ ಒಳಗೆ 100ಕ್ಕೂ ಹೆಚ್ಚು ಜನರಿದ್ದರು ಎಂದು ಪೊಲೀಸ್ ಮೂಲಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿವೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುವ ಆತಂಕವೂ ಎದುರಾಗಿದೆ.
ಕ್ರಾನ್ಸ್-ಮೊಂಟಾನಾ ಸ್ವಿಟ್ಜರ್ಲೆಂಡ್‌ನ ರಾಜಧಾನಿ ಬರ್ನ್‌ನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದ ದೂರದಲ್ಲಿದೆ. ಇದು ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗೋಲ್ಫ್‌ಗೆ ಪ್ರಸಿದ್ಧವಾಗಿದ್ದು, ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ. ಸ್ವಿಟ್ಜರ್ಲೆಂಡ್ ಇತ್ತೀಚೆಗೆ ಅಸಾಮಾನ್ಯ ಬರಗಾಲ ಮತ್ತು ಕಾಡ್ಗಿಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದೆ.
2001 ರಿಂದ 2024 ರ ನಡುವೆ ಸ್ವಿಟ್ಜರ್ಲೆಂಡ್ ಬೆಂಕಿಯ ಅನಾಹುತಗಳಿಂದ ತನ್ನ ಶೇ. 3ರಷ್ಟು ಅರಣ್ಯ ಸಂಪತ್ತನ್ನು ಕಳೆದುಕೊಂಡಿದೆ. ಇದಲ್ಲದೆ, ಕೆಲವು ತಿಂಗಳ ಹಿಂದಷ್ಟೇ ಜಿನೀವಾ ಹೃದಯಭಾಗದಲ್ಲಿರುವ ಐತಿಹಾಸಿಕ ‘ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗ್ಸ್’ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವರು ಗಾಯಗೊಂಡಿದ್ದರು. ಇದೀಗ ಹೊಸ ವರ್ಷದಂದೇ ಸಂಭವಿಸಿದ ಈ ದುರಂತ ಸ್ವಿಟ್ಜರ್ಲೆಂಡ್ ಜನತೆಯನ್ನು ಬೆಚ್ಚಿಬೀಳಿಸಿದೆ.





