ಯಾವ ರೀತಿ ನರಮೇಧ ನಡೆದಿದೆ ಎಂದರೆ, ಬಾಹ್ಯಕಾಶದ ಚಿತ್ರದಲ್ಲಿ ನೆಲದಲ್ಲಿ ಬಿದ್ದಿರುವ ರಕ್ತ ಕಾಣುತ್ತಿದೆ. ನರಮೇಧ ನಡೆಸಲು RSF ಬೆಂಬಲಿಸಿದ ಯುಎಇ, ಅಮೆರಿಕ, ಚೀನಾಗಳು ಹಾಗು SAF ಗೆ ಬೆಂಬಲಿಸುವ ಟರ್ಕಿ ಮತ್ತು ಸೌದಿ ಅರೆಬಿಯಾದಂತಹ ದೇಶಗಳು ಅಧಿಕಾರಕ್ಕಾಗಿ, ಸುಡಾನ್ ಚಿನ್ನದ ನಿಕ್ಷೇಪಕ್ಕಾಗಿ ಪ್ರಯತ್ನಿಸುತ್ತಿವೆ. ಈ ಅಂತರ್ಯುದ್ಧದಲ್ಲಿ ಯಾರಾದರೂ ಗೆಲ್ಲಬಹುದು. ಕೊನೆಗೆ ಸೋಲುವುದು ಸುಡಾನ್ ದೇಶದ ಅಮಾಯಕ ಜನರು.
ಬಾಹ್ಯಾಕಾಶದಿಂದ ನೋಡಿದರೆ, ಸಮುದ್ರದ ತಟದಿಂದ ಕಪ್ಪು ಹೊಗೆಯು ಆಕಾಶದ್ದೆತ್ತರಕ್ಕೆ ತಲುಪುವಂತೆ ಕಾಣುವ ಸುಡಾನ್, ಅದನ್ನೇ ಜೂಮ್ ಮಾಡಿ ನೋಡಿದಾಗ, ಅಲ್ಲಿನ ಬಂದರುಗಳಲ್ಲಿರುವ ಇಂಧನ ಟ್ಯಾಂಕರ್ಗಳು ಒತ್ತಿ ಉರಿಯುವ ದೃಶ್ಯ ಮೈನಡುಗಿಸುತ್ತದೆ. ಸುಡಾನ್ ನಲ್ಲಿರುವ ವಿಮಾನ ನಿಲ್ದಾಣ, ಇಂಧನ ಟ್ಯಾಂಕರ್‌ಗಳು, ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಂತರ್ಯುದ್ಧ ನಡೆದಿದೆ. ಏಪ್ರಿಲ್ 15, 2023ರಲ್ಲಿ ಆರಂಭವಾದ ಸುಡಾನ್ ಸೇನಾ ಮಿಲಿಟರಿ ಪಡೆ(SAF), ಮತ್ತು ಅರೆಸೇನಾ/ಪ್ಯಾರಾಮಿಲಿಟರಿ ರ್ಯಾಪಿಡ್ ಸಪೋರ್ಟ್ ಫೋರ್ಸಸ್(RSF) ನಡುವೆ ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಅಂರ್ತಯುದ್ಧದಲ್ಲಿ ಕೇವಲ ಸುಡಾನ್ ದೇಶದ ಸಂಪತ್ತು ನಾಶವಾಗಿಲ್ಲ, 1,50,000ಕ್ಕೂ ಹೆಚ್ಚು ಜನರ ನರಮೇಧ ನಡೆದಿವೆ.
ಕಳೆದ ಎರಡೂವರೆ ವರ್ಷಗಳಿಂದ ಸುಡಾನ್ ದೇಶವು ಅಂತರ್ಯುದ್ಧದಲ್ಲಿ ತತ್ತರಿಸಿದೆ. ಇದು ಪ್ಯಾಲೆಸ್ತೀನ್, ಗಾಝಾದ ನರಮೇಧದ ಮುಂದುವರಿಕೆಯ ಭಾಗವೆಂದೇ ಹೇಳಬಹುದು. ಪ್ಯಾಲೆಸ್ತೀನ್, ಗಾಝಾದಲ್ಲಿ ನಡೆದ ನರಮೇಧ ರೀತಿಯಲ್ಲಿಯೇ ಸುಡಾನ್ ದೇಶದಲ್ಲಿ ನಡೆಯುತ್ತಿರುವುದು ಪ್ರಪಂಚದ ಕರಾಳತೆಯಾಗಿದೆ. ಎಸ್ಎಎಫ್(SAF) ಪಡೆಯ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಸಾಮಾನ್ಯ ಸೇನೆ ಹಾಗೂ ರ‍್ಯಾಪಿಡ್ ಸಪೋರ್ಟ್ ಪೋರ್ಸ್ ನ(RSF) ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೋ (ಹೆಮೆದ್ತಿ) ನೇತೃತ್ವದ ಪ್ಯಾರಾಮಿಲಿಟರಿಯು ಸುಡಾನ್ ದೇಶದ ಅಧಿಕಾರಕ್ಕಾಗಿ ಅಂರ್ತಯುದ್ಧ ನಡೆಸುತ್ತಿರುವುದು ಜಗತ್ತಿನ ಕರಾಳ ಯುದ್ದವೆಂದು ಕರೆಯಬಹುದು.

ಈಗ ಜನಾಂಗೀಯ ನರಮೇಧ ನಡೆಸುತ್ತಿರುವ RSF 2003ರಲ್ಲಿ ಸುಡಾನ್‌ನಲ್ಲಿರುವ ಡಾರ್ಫೌರ್ ನಗರದಲ್ಲಿ ಆರಂಭವಾದದ್ದು. ಡಾರ್ಫೌರ್ ಐತಿಹಾಸಿಕವಾಗಿಯೇ ನಿರ್ಲಕ್ಷಿಸಲ್ಪಟ್ಟಿರುವ ಜಾಗ. ಅಲ್ಲಿನ ಜನರಿಗೆ ಸರಿಯಾಗಿ ವೈದ್ಯಕೀಯ ಸೌಲಭ್ಯ, ಮೂಲಭೂತ ಅಗತ್ಯ ವಸ್ತುಗಳ ಕೊರತೆ ಹಾಗೂ ಡಾರ್ಫೌರ್ ಜನರ ಮೇಲೆ ನಡೆಯುತ್ತಿರುವ ಹಿಂಸಾಚಾರದಿಂದ ತತ್ತರಿಸಿದ್ದರು. ಡಾರ್ಫೌರ್ ನಲ್ಲಿ ಸುಡಾನ್ ಲಿಬರೇಷನ್ ಚಳವಳಿ(Sudan Liberation Movement) ಮತ್ತು ನ್ಯಾಯ ಮತ್ತು ಸಮಾನತೆಗಾಗಿ ಚಳವಳಿ (Justice and Equality movement) ಎಂಬ ಎರಡು ಗುಂಪುಗಳು ಸುಡಾನ್ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಬಂಡಾಯ ಎದ್ದರು. ಡಾರ್ಫೌರ್ ನಲ್ಲಿ ಅರಬ್ಬೇತರ ಜನಾಂಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರುದ್ಧ 2003ರಲ್ಲಿ ದೊಡ್ಡ ಪ್ರತಿಭಟನೆಗಳು ನಡೆದವು. ಈ ದಾಳಿಗಳ ವಿರುದ್ಧವಾಗಿಯೇ ಸುಡಾನ್ ಮಾಜಿ ಅಧ್ಯಕ್ಷ ಒಮರ್ ಅಲ್-ಬಶೀರ್ ಅಲ್ಲಿನ ಜಂಜಾವೀಡ್ ಎಂಬ ಸಮುದಾಯದ ಜನರನ್ನು ಬಳಸಿಕೊಂಡು RSF ಎಂಬ ಮತ್ತೊಂದು ಮಿಲಿಟರಿ ಪಡೆಯನ್ನು ಹುಟ್ಟುಹಾಕಿದ.
1956ರಲ್ಲಿ ಸುಡಾನ್ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸುಮಾರು 20ಕ್ಕೂ ಹೆಚ್ಚು ಕಾಲ ಸೈನ್ಯವು ಅಧಿಕಾರಕ್ಕಾಗಿ ಪ್ರಯತ್ನ ನಡೆಸಿವೆ. ಇದನ್ನು ಕೂಪ್ ಪ್ರಯತ್ನ (coup attempts) ಎಂದು ಕರೆಯಲಾಗಿದೆ. ಇದರಲ್ಲಿ 7 ಭಾರೀ ಯಶಸ್ವಿ ಕಂಡಿವೆ. ಅಫ್ರಿಕಾದಲ್ಲಿ ಅತಿ ಹೆಚ್ಚು ಕೂಪ್ ಪ್ರಯತ್ನ ನಡೆದ ದೇಶ ಸುಡಾನ್ ಆಗಿದೆ. ಇದು ವಿಶ್ವದ ಎರಡನೇ ದೇಶವಾಗಿದೆ. ಮೊದಲು ದಕ್ಷಿಣ ಅಮೆರಿಕದಲ್ಲಿರುವ ಬೊಲಿವಿಯಾ. ನೈಸರ್ಗಿಕವಾಗಿ ಸಿಗುವ ಲಿಥಿಯಂ, ಕೊಬಾಲ್ಟ್ ಬೊಲಿವಿಯಾದಲ್ಲಿ ಸಿಕ್ಕರೆ, ಸುಡಾನ್ ನಲ್ಲಿ ಚಿನ್ನ ಹೆಚ್ಚಾಗಿ ಸಿಗುತ್ತದೆ. ಈ ಕಾರಣಕ್ಕಾಗಿಯೇ ಈ ದೇಶಗಳಲ್ಲಿ ಮಿಲಿಟರಿ ಆಡಳಿತ ಅಧಿಕಾರಕ್ಕಾಗಿ ಹೋರಾಡುತ್ತಲೇ ಇರುತ್ತದೆ. ಇದರ ಮೂಲಕ ಆರ್ಥಿಕವಾಗಿ ಪ್ರಬಲವಾಗಿರುವ ಅಮೆರಿಕ, ಚೀನಾ, ಯುಎಇ ತರದ ದೇಶಗಳ ಹಿತಾಸಕ್ತಿ ಕಾಯಲು ಪ್ರಯತ್ನಿಸುತ್ತಲೆ ಇರುತ್ತದೆ. ಅದೇ ರೀತಿ ಸುಡಾನ್ ನಲ್ಲಿ ಸೈನ್ಯವು ಸಹ ದೇಶವನ್ನು ಆಳಬಹುದು ಎಂಬ ನೀತಿಯು ಬ್ರಿಟಿಷರು ತಂದಿದ್ದ ಒಡೆದಾಳುವ ನೀತಿಯಿಂದ (1899-1956ರ Anglo-Egyptian Condominium) ಆರಂಭವಾಯಿತು. ಸ್ವಾತಂತ್ರ್ಯ ಬಂದ ನಂತರವೂ ಬ್ರಿಟಿಷರು ತಂದಿದ್ದ ಒಡೆದಾಳುವ ನೀತಿಯನ್ನು ಬಳಸಿ ಅಮೆರಿಕವು ಸುಡಾನ್ ದೇಶವನ್ನು, ಉತ್ತರ ಸುಡಾನ್(ಅರಬ್-ಮುಸ್ಲಿಂ) ಮತ್ತು ದಕ್ಷಿಣ ಸುಡಾನ್(ಆಫ್ರಿಕನ್-ಕ್ರಿಶ್ಚನ್/ಆನಿಮಿಸ್ಟ್) ಎಂದು ಜುಲೈ 2011ರಲ್ಲಿ ವಿಭಜಿಸಿದರು.
ಈ ವಿಭಜನೆಯಿಂದ ಅತಿ ಹೆಚ್ಚು ನಷ್ಟ ಅನುಭವಿಸಿದ್ದೆ, ಉತ್ತರ ಸುಡಾನ್ ಪ್ರದೇಶ. RSF ಮತ್ತು SAF ಈ ಎರಡು ಮಿಲಿಟರಿ ಪಡೆಗಳು ನಡೆಸುತ್ತಿರುವ ಅಂತರ್ಯುದ್ಧದಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ (ಕೊಲೆ ಮಾಡಲಾಗಿದೆ). ಒಂದು ಕೋಟಿಗೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ. 35 ಲಕ್ಷಕ್ಕೂ ಹೆಚ್ಚು ಜನರು ಇತರ ದೇಶಗಳಿಗೆ ಪಲಾಯನಗೊಂಡಿದ್ದಾರೆ. ಡಾರ್ಫೌರನ ಕೆಲವು ಭಾಗಗಳಲ್ಲಿನ ಜನರು ಕ್ಷಾಮ, ಹಸಿವಿನಿಂದ ಬಳಲುತ್ತಿದ್ದಾರೆ. ಅಂದಾಜು 5,22,000 ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2023 ಏಪ್ರಿಲ್ 15ರಂದು ಮೊದಲು ಯುದ್ಧ ಪ್ರಾರಂಭವಾದಾಗ, SAF ಮತ್ತು RSF ಗಳು ಕೇವಲ ಅಧಿಕಾರ ಕೇಂದ್ರಿತವಾಗಿ ಯುದ್ಧ ನಡೆಸದೆ, ಸುಡಾನ್ ದೇಶದ ಸಾಮನ್ಯ ಜನರನ್ನು ಸಹ ಗುರಿಯಾಗಿಸಿಕೊಂಡವು. ಈ ಪರಿಣಾಮವಾಗಿಯೇ ಲಕ್ಷಾಂತರ ಜನರು ಸಾವು-ನೋವುಗಳನ್ನು ಅನುಭವಿಸಿದ್ದಾರೆ, ಅನುಭವಿಸುತ್ತಲೇ ಇದ್ದಾರೆ.
ಸುಡಾನ್ ಇತಿಹಾಸ
ಈಜಿಪ್ಟಿನ ಕೈರೋದಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ವರೆಗೆ ಇರುವ ಇಡೀ ಆಫ್ರಿಕನ್ ಭೂಮಿಯಲ್ಲಿ ಸುಡಾನ್ ಸಹ ಒಂದು ರಾಷ್ಟ್ರ. 1899ರಿಂದ 1956ರವರೆಗೆ ಬ್ರಿಟಿಷರು ತಮ್ಮ ವಸಹತುಶಾಹಿಯ ಭಾಗವಾಗಿ ಸುಡಾನ್ ದೇಶವನ್ನು ಆಳಿದ್ದಾರೆ. ಸ್ವಾತಂತ್ರ್ಯ ಕೊಟ್ಟ ನಂತರವೂ ಸುಡಾನ್ನಲ್ಲಿ ಬ್ರಿಟಿಷರು ತನ್ನ ಸೈನಿಕ ನೆಲೆಗಳನ್ನು ಬೀಡುಬಿಟ್ಟಿದ್ದರು. ಇದರ ಪರಿಣಾವಾಗಿಯೇ 2011ರಲ್ಲಿ ಸುಡಾನ್ ಇಬ್ಭಾಗವಾಗಿ ದಕ್ಷಿಣ ಸುಡಾನ್ ಮತ್ತು ಉತ್ತರ ಸುಡಾನ್ ಎಂಬ ಎರಡು ರಾಷ್ಟ್ರ ಉದಯವಾಯಿತು. ದಕ್ಷಿಣ ಸುಡಾನ್ ಮತ್ತು ಉತ್ತರ ಸುಡಾನ್ ಬೇರೆ ಬೇರೆಯಾಗಿ ವಿಭಿನ್ನ ಸಂಸ್ಕೃತಿಗಳು, ಆಚರಣೆ, ನಂಬಿಕೆ ಪದ್ಧತಿಗಳನ್ನು ಹೊಂದಿವೆ. ಉತ್ತರ ಸುಡಾನ್ ನಲ್ಲಿ ಹೆಚ್ಚು ಅರೇಬಿಕ್ ಮಾತನಾಡುವವರು ಮತ್ತು ಒಟ್ಟು ಜನಸಂಖ್ಯೆಯ ಸುಮಾರು 97% ಮುಸ್ಲಿಮರಿದ್ದಾರೆ. ಇನ್ನು ದಕ್ಷಿಣ ಸುಡಾನ್ ನಲ್ಲಿ ಇಂಗ್ಲಿಷ್, ಡಿಂಕ, ನ್ಯೂರ್, ಜ್ಯೂಬ ಅರೇಬಿಕ್, ಬರಿ, ಝಂಡೆ ಹೀಗೆ ಹಲವು ಭಾಷೆ ಮಾತನಾಡುವ ಜನರು ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ ಧರ್ಮದವರು ಹೆಚ್ಚಿದ್ದಾರೆ. ಎರಡು ದೇಶಗಳ ಧಾರ್ಮಿಕ ಆಚರಣೆಗಳು ಬಹಳ ಭಿನ್ನವಾಗಿವೆ.
ಇದನ್ನೂ ಓದಿ ಜಾಗತಿಕ ಶಕ್ತಿಗಳ ʼರಾಜಕೀಯ ಯುದ್ಧʼದಲ್ಲಿ ಸುಡಾನ್ ತತ್ತರ
ಬ್ರಿಟಿಷರು ತಮ್ಮ ಮಿಲಿಟರಿಯನ್ನು ಉತ್ತರ ಸುಡಾನ್‌ನಲ್ಲಿ ನೇಮಿಸಿಕೊಂಡಿದ್ದ ಕಾರಣ, ಸುಡಾನ್ ಪ್ರಜಾಪ್ರಭುತ್ವ ಸರ್ಕಾರಗಳು ಹಾಗೂ ಮಿಲಿಟರಿಗಳಿಗೆ ಅಂತರ್ಯುದ್ಧಕ್ಕೆ ಕಾರಣವಾಯಿತು.
ಯುದ್ಧ ಆರಂಭಕ್ಕೂ ಮೊದಲು
ಸುಡಾನ್ ರಾಜಕೀಯವು ಹಲವಾರು ವರ್ಷಗಳಿಂದ ಪ್ರಕ್ಷುಬ್ದ ಸ್ಥಿತಿಯಲ್ಲಿತ್ತು. ಸೇನಾಪಡೆಯ(SAF) ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೇನಾ ಪಡೆಯ(RSF) ನಾಯಕ ಮೊಹಮ್ಮದ್ ಹಮ್ದಾನ್ ದಗಾಲೋ, 30 ವರ್ಷಗಳಿಂದ ದೀರ್ಘ ಅಧಿಕಾರವನ್ನು ಅನುಭವಿಸಿದ ಸುಡಾನ್ ಅಧ್ಯಕ್ಷ ಒಮರ್ ಅಲ್-ಬಶೀರ್‌ರನ್ನು 2019ರಲ್ಲಿ ಅಧಿಕಾರದಿಂದ ಕೆಳಗಿಳಿಸಿ, ಸಂಪೂರ್ಣ ಪ್ರಜಾಪ್ರಭುತ್ವ ಸ್ಥಾಪಿಸುವುದಾಗಿ ಹೇಳಿಕೊಂಡರು. ಎರಡು ಮಿಲಿಟರಿ ಪಡೆಗಳು ಸಡಾನ್‌ನ ಸಂಪೂರ್ಣ ಅಧಿಕಾರವನ್ನು ಪಡೆಯಲು ಪ್ರಯತ್ನಿಸಿ ತನ್ನಲ್ಲಿಯೇ ಅಂತರ್ಯುದ್ಧವನ್ನು ಮಾಡಲು ಪ್ರಾರಂಭಿಸಿದವು.

ಸರ್ಕಾರದ ಸಂಪೂರ್ಣ ನಿಯಂತ್ರಣವನ್ನು ಪಡೆದ SAF ನ ನಾಯಕ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ವಿರುದ್ಧ RAF ದೊಡ್ಡ ಯುದ್ಧವನ್ನೆ ರೂಪಿಸಿತು. ಇದು ಸುಡಾನ್ ದೇಶದ ಅಂತರ್ಯುದ್ಧಕ್ಕೆ ಕಾರಣವಾಯಿತು.
ಯುದ್ಧ ಆರಂಭದ ದಿನ
2023 ಏಪ್ರಿಲ್ 15ರಂದು ಸೇನಾಪಡೆ (SAF) ಮತ್ತು ಅರೆಸೇನಾ ಪಡೆಯ(RSF) ನಡುವಿನ ಯುದ್ಧ ಆರಂಭವಾದ ದಿನದಂದು, ಮೊದಲು RSF ಪಡೆಯು ಪ್ರಮುಖ ಸರ್ಕಾರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಯುದ್ಧ ಆರಂಭಿಸಿತು. RSF ನಾಯಕ ಮೊಹಮ್ಮದ್ ಹಮ್ದಾನ್ ದಗಾಲೋ(ಹೆಮೆದ್ತಿ) ಖಾರ್ತೂಮ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಧ್ಯಕ್ಷೀಯ ಅರಮನೆ, ಮಿಲಿಟರಿ ಪ್ರಧಾನ ಕಚೇರಿಗಳ ಮೇಲೆ ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಹೇಳಿಕೊಂಡಿದ್ದರು.
2019ರಲ್ಲಿ ಸಂಪೂರ್ಣ ಪ್ರಜಾಪ್ರಭುತ್ವಕ್ಕಾಗಿ ಅಲ್-ಬಶೀರ್ ವಿರುದ್ಧ ಸುಡಾನ್ ನಲ್ಲಿ ದೊಡ್ಡ ಜನಪ್ರತಿಭಟನೆ ನಡೆಯುತ್ತದೆ. ಇದರ ಪರಿಣಾವಾಗಿ ಅಲ್-ಬಶೀರ್ ಕೆಳಗಿಳಿಸಿ, SAF ಮತ್ತು RSF ಗಳ ನಾಯಕರು ಮುನ್ನೆಲೆಗೆ ಬರುತ್ತಾರೆ. ಇವರಿಬ್ಬರ ಆರಂಭದ ಯುದ್ಧದಲ್ಲಿ ಕಾರ್ಟೂಮ್ ಅನ್ನು RSF ನಾಯಕ ಹೆಮೆದ್ತಿ ವಶಪಡಿಸಿಕೊಂಡರೆ, ಸುಡಾನ್ ನ ಬಂಧರಿನ ಜಾಗವನ್ನು ಬುರ್ಹಾನ್ ವಶಪಡಿಸಿಕೊಂಡರು.
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪ ಇರುವುದು ಸುಡಾನ್ ದೇಶದಲ್ಲಿ. ಇದಕ್ಕಾಗಿಯೇ ಕಾದು ಕುಳಿತಿದ್ದ ಅರಬ್ಬ್ ದೇಶವಾದ ಯೂನೈಟೆಡ್ ಅರಬ್ಬ್ ಎಮಿರೇಟ್ಸ್(ಯುಎಇ) ತನ್ನ ವ್ಯಾಪಾರ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಸುಡಾನ್ ನಲ್ಲಿ ಅರೆಸೇನಾ ಮಿಲಿಟರಿ RSF ಗೆ ಬೆಂಬಲಿಸಿದರೆ, ಟರ್ಕಿ ಮತ್ತು ಸೌದಿ ಅರೆಬಿಯಾದಂತಹ ದೇಶಗಳು ಸುಡಾನ್‌ನ ಅಧಿಕೃತ ಸೇನಾಪಡೆ SAFಗೆ ಬೆಂಬಲಿಸುವ ಮೂಲಕ ತನ್ನ ಪ್ರಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದೆ.

ರೆಡ್ ಸೀ (ಕೆಂಪು ಸಮುದ್ರ)ಗೆ ಹತ್ತಿರವಾಗಿರುವ ದೇಶವೆ ಸುಡಾನ್. ಪ್ರಪಂಚದ 30% ರಷ್ಟು ವ್ಯಾಪಾರ ವಹಿವಾಟು ನಡೆಯುವುದೇ ಈ ಕೆಂಪು ಸಮುದ್ರದ ಮೂಲಕ. ಇಡೀ ಏಷ್ಯಾದಿಂದ ಯೂರೋಪ್‌ಗೆ ಯಾವುದೇ ಸರಕು ಸಾಗಾಟವಾಗಬೇಕೆಂದರೆ, ಇದೇ ಕೆಂಪು ಸಮುದ್ರದ ಮೂಲಕವೇ ನಡೆಯಬೇಕು.
ಸುಡಾನ್ ನಲ್ಲಿ ಉಂಟಾಗಿರುವ ಈ ಅಂರ್ತಯುದ್ಧಕ್ಕೆ ಬ್ರಿಟಿಷರು ನಡೆಸಿದ ವಸಾಹತುಶಾಹಿಯ ಆಳ್ವಿಕೆಯು ಸಹ ಉದಾಹರಣೆ. ಸುಡಾನ್ ಗೆ ಬಂದೂಕುಗಳು, ಯುದ್ಧವಿಮಾನಗಳನ್ನು ಚೀನಾ, ಅಮೆರಿಕ, ಯುಎಇ ತರಹದ ದೇಶಗಳು ಕೊಡುತ್ತಿವೆ. ಆರ್ಥಿಕವಾಗಿ ಬಲಿಷ್ಠವಾದ ದೇಶಗಳಿಂದ ಸುಡಾನ್ ದೇಶದ ಜನರು ಸಾಯುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವುದು ಅಂತರ್ಯುದ್ದವೇ ಆದರೂ, ಅಮೆರಿಕ, ಚೀನಾದಂತಹ ದೇಶಗಳ ಒಳಸಂಚುಗಳು ಸಹ ಸುಡಾನ್ ಜನರ ನರಮೇಧಕ್ಕೆ ಕಾರಣವಾಗಿವೆ. ಯಾವ ಮಿಲಿಟರಿ ಪಡೆ ಗೆಲ್ಲುತ್ತದೆಯೋ ಅದರ ಜೊತೆ ನಿಂತು ನೈಸರ್ಗಿಕ ಸಂಪತ್ತು ಹಾಗೂ ಅತಿ ಚಿನ್ನದ ನಿಕ್ಷೇಪ ಇರುವ ಸುಡಾನ್ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.
ಯಾವ ರೀತಿ ನರಮೇಧ ನಡೆದಿದೆ ಎಂದರೆ, ಬಾಹ್ಯಕಾಶದ ಚಿತ್ರದಲ್ಲಿ ನೆಲದಲ್ಲಿ ಬಿದ್ದಿರುವ ರಕ್ತ ಕಾಣುತ್ತಿದೆ. ನರಮೇಧ ನಡೆಸಲು RSF ಬೆಂಬಲಿಸಿದ ಯುಎಇ, ಅಮೆರಿಕ, ಚೀನಾಗಳು ಹಾಗೂ SAF ಗೆ ಬೆಂಬಲಿಸುವ ಟರ್ಕಿ ಮತ್ತು ಸೌದಿ ಅರೆಬಿಯಾದಂತಹ ದೇಶಗಳು ಅಧಿಕಾರಕ್ಕಾಗಿ, ಸುಡಾನ್ ಚಿನ್ನದ ನಿಕ್ಷೇಪಕ್ಕಾಗಿ ಪ್ರಯತ್ನಿಸುತ್ತಿವೆ. ಈ ಅಂತರ್ಯುದ್ಧದಲ್ಲಿ ಯಾರಾದರೂ ಗೆಲ್ಲಬಹದು. ಕೊನೆಗೆ ಸೋಲುವುದು ಸುಡಾನ್ ದೇಶದ ಅಮಾಯಕ ಜನರು.
ಜಾಗತಿಕ ಶಕ್ತಿಗಳು ಯುದ್ಧ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದನ್ನು ನಿಲ್ಲಿಸಬೇಕು. ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಈಜಿಪ್ಟ್, ಸೌದಿ ಮತ್ತು ಇದರ ಹಿಂದಿರುವ ಅಮೆರಿಕ, ಯುರೋಪ್, ರಷ್ಯಾ ಮತ್ತು ಚೀನಾ ಕೂಡಲೇ ತಮ್ಮ ಪರೋಕ್ಷ ಹಿತಾಸಕ್ತಿಯ ಯುದ್ಧವನ್ನು ನಿಲ್ಲಿಸಿ ಸುಡಾನಿನಲ್ಲಿ ಶಾಂತಿ ನೆಲಸಲು ಅನುವು ಮಾಡಿಕೊಡಬೇಕಿದೆ.





