ದೆಹಲಿಯ ಕೆಂಪು ಕೋಟೆ ಕಾರು ಸ್ಪೋಟಗೊಂಡು 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಆತ್ಮಹತ್ಯಾ ದಾಳಿ ಎಂದು ಹೇಳಲಾಗಿದ್ದು, ತನಿಖೆ ನಡೆಯುತ್ತಿದೆ. ಇಂಥಹದ್ದೇ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿಯೂ ಮಂಗಳವಾರ ನಡೆದಿದೆ.
ಇಸ್ಲಾಮಾಬಾದ್‌ನ ಜಿ-11 ಪ್ರದೇಶದ ನ್ಯಾಯಾಲಯದ ಹೊರಗೆ ಆತ್ಮಹತ್ಯಾ ದಾಳಿ ನಡೆದಿದ್ದು, ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಕ್ಷಣಾ ಅಧಿಕಾರಿಗಳು 12 ಮೃತದೇಹಗಳನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
“ಸ್ಫೋಟದಲ್ಲಿ ಸಾವನ್ನಪ್ಪಿದ 12 ಮಂದಿಯ ಶವಗಳನ್ನು ಪಿಮ್ಸ್ (ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಗಾಯಾಳುಗಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಸರ್ಕಾರಿ ಮಾಧ್ಯಮ ‘ಪಾಕಿಸ್ತಾನ್ ಟೆಲಿವಿಷನ್’ (ಪಿಟಿವಿ) ವರದಿ ಮಾಡಿದೆ.
“ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಶಂಕಿಸಲಾಗಿದೆ. ಬಾಂಬರ್‌ನ ತಲೆ ರಸ್ತೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ” ಎಂದು ಪಿಟಿವಿ ಹೇಳಿದೆ.
ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ಅಥವಾ ವ್ಯಕ್ತಿ ಹೊತ್ತುಕೊಂಡಿಲ್ಲ. ಆದರೆ ಪಾಕಿಸ್ತಾನ ಮತ್ತು ಅಫ್ಘಾನ್ ತಾಲಿಬಾನ್ ನಡುವೆ ಸಂಘರ್ಷ ನಡೆಯುತ್ತಿದೆ. ಎರಡೂ ರಾಷ್ಟ್ರಗಳ ನಡುವೆ ಮೂರು ಸುತ್ತಿನ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಆದರೆ, ಈವರೆಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ.




