ಸ್ವಿಡ್ಜರ್‌ಲ್ಯಾಂಡ್‌ನ ಕ್ರಾನ್ಸ್-ಮೊಂಟಾನಾದ ಐಷಾರಾಮಿ ‘ಆಲ್ಪೈನ್ ಸ್ಕೀ ರೆಸಾರ್ಟ್’ ಬಾರ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 40 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ, ಬಾರ್‌ನಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ, ಸ್ಪೋಟ ಸಂಭವಿಸಿದ್ದು, ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಸ್ವಿಸ್ ತಿಳಿಸಿದ್ದಾರೆ. ರಕ್ಷಣಾ ಮತ್ತು ತುರ್ತು ಕಾರ್ಯಾಚರಣೆಗಳು ನಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ನಿಷೇಧಿತ ವಲಯವೆಂದು ಘೋಷಿಸಿದ್ದಾರೆ.
ಸುಮಾರು 10 ಹೆಲಿಕಾಪ್ಟರ್‌ಗಳು, 40 ಆಂಬ್ಯುಲೆನ್ಸ್‌ಗಳು ಹಾಗೂ 150 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಟಾಲಿಯನ್ ವಿದೇಶಾಂಗ ಸಚಿವಾಲಯವು, “ಸುಮಾರು 40 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಭೀರ ಸುಟ್ಟಗಾಯಗಳಿಂದಾಗಿ, ಮೃತರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
“ಬೆಂಕಿಯನ್ನು ನಂದಿಸಲು ಸಿಬ್ಬಂದಿಗಳು ಯತ್ನಿಸುತ್ತಿದ್ದಾರೆ. ಯಾವುದೇ ದಾಳಿಯ ಶಂಕೆ ಇಲ್ಲ. ದುರ್ಘಟನೆಯು ಬಾರ್‌ನಲ್ಲಿ ಸಂಭವಿಸಿರುವ ಸ್ಪೋಟದಿಂದ ಘಟಿಸಿದೆ. ಇದನ್ನು ಭಯೋತ್ಪಾದಕ ದಾಳಿಯೆಂದು ಪರಿಗಣಿಸಲಾಗಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.




