ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ತಾರಿಕ್ ರೆಹಮಾನ್ ಮುಂದಾಗಿದ್ದಾರೆ. ಸತತ 15 ವರ್ಷಗಳ ಅಧಿಕಾರವನ್ನು ಹಿಡಿದಿದ್ದ ಶೇಖ್ ಹಸೀನಾ ಅವರ ಸರ್ಕಾರವು 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆಯಿಂದ ಕೊನೆಗೊಂಡಿತ್ತು. ಆ ಘಟನೆ ನಡೆದು ಸುಮಾರು 18 ತಿಂಗಳ ನಂತರ ಸದ್ಯ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದೆ. ಇದರಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿದೆ. ಸುಮಾರು 300 ಸದಸ್ಯ ಬಲ ಇರುವ ಬಾಂಗ್ಲಾ ಸಂಸತ್ತಿಗೆ ಬಿಎನ್‌ಪಿ ಪಕ್ಷದ 209 ಸದಸ್ಯರು ಲಗ್ಗೆಇಡುತ್ತಿದ್ದಾರೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ 17 ವರ್ಷಗಳು ಸ್ವಯಂ ಗಡಿಪಾರಾಗಿದ್ದರು. 2008ರಲ್ಲಿ ಲಂಡನ್‌ಗೆ ತೆರಳಿದ್ದ ಇವರು, ಕಳೆದ ಎರಡು ತಿಂಗಳ ಹಿಂದೆ ಚುನಾವಣೆಗಾಗಿ ಸ್ವದೇಶಕ್ಕೆ ಬಂದಿದ್ದರು. ತಾರಿಕ್ ಬಂದ ಕೂಡಲೇ ಬಿಎನ್‌ಪಿ ಪಕ್ಷವು ಇವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅದರಂತೆ ಬಹುಮತ ಪಡೆದ ಬಿಎನ್‌ಪಿ ಪಕ್ಷದ ತಾರಿಕ್ ಅವರು ಬಾಂಗ್ಲಾದ ಪ್ರಧಾನಿ ಆಗಲಿದ್ದಾರೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆಡಳಿತಾತ್ಮಕವಾಗಿ ಹೊಸ ಅಧ್ಯಾಯವನ್ನು ಬರೆಯಲಿದ್ದಾರೆ.
ಇದನ್ನು ಓದಿ : ಬಾಂಗ್ಲಾ ಚುನಾವಣೆ : ಭಾರತದ ನಿಲುವು ಎಷ್ಟು ಸರಿ?
ಬಾಂಗ್ಲಾದೇಶವನ್ನು ಯಾವುದೇ ಒಂದು ಶಕ್ತಿಯೊಂದಿಗೆ ಹೆಚ್ಚು ನಿಕಟವಾಗಿ ಬಂಧಿಸದೆ ಹೂಡಿಕೆಯನ್ನು ಆಕರ್ಷಿಸಲು, ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಮರುಪರಿಶೀಲಿಸುವುದಾಗಿ ರೆಹಮಾನ್ ಪ್ರತಿಜ್ಞೆ ಮಾಡಿದ್ದಾರೆ. ರೆಹಮಾನ್ ಅವರ ನಡೆಯೂ ಜಾಗತಿಕ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಾಂಗ್ಲಾದೇಶದ ನೆರೆಯ ರಾಷ್ಟ್ರಗಳು ಯಾವ ರೀತಿಯಲ್ಲಿ ತಾರಿಕ್ ಅವರನ್ನು ಬೆಂಬಲಿಸಲಿವೆ ಎಂಬುದು ಸಹ ಹೆಚ್ಚು ಕುತೂಹಲವಾಗಿದೆ. ಈಗಾಗಲೇ ಭಾರತದ ಪ್ರಧಾನಿ ಸೇರಿದಂತೆ ಅನೇಕ ದೇಶದ ನಾಯಕರುಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಯಾರು ಈ ತಾರಿಕ್ ರೆಹಮಾನ್?
ಮಾಜಿ ಪ್ರಧಾನಿ ಖಲೀದಾ ಜಿಯಾ ಮತ್ತು ಬಿಎನ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜಿಯಾವುರ್ ರೆಹಮಾನ್ ದಂಪತಿಯ ಪುತ್ರ ʼತಾರಿಕ್ ರೆಹಮಾನ್ʼ. 1965ರ ನವೆಂಬರ್ 20ರಂದು ಢಾಕಾದಲ್ಲಿ ಜನಿಸಿದ ಇವರು, ಢಾಕಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಅಧ್ಯಯನದ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣದ ನಂತರ ತಂದೆ-ತಾಯಿಯಂತೆ ರಾಜಕೀಯ ಪ್ರವೇಶ ಮಾಡದೆ, ಸ್ವಉದ್ಯೋಗದ ದಾರಿ ಹಿಡಿಯುತ್ತಾರೆ. ಜವಳಿ ಮತ್ತು ಕೃಷಿ ಉತ್ಪನ್ನಗಳ ಉದ್ಯಮವನ್ನು ಪ್ರಾರಂಭಿಸುತ್ತಾರೆ.
ಖಲೀದಾ ಜಿಯಾ ಮತ್ತು ಜಿಯಾವುರ್ ರೆಹಮಾನ್ ಅವರು ಬಾಂಗ್ಲಾದೇಶದ ರಾಜಕೀಯದಲ್ಲಿ ದೀರ್ಘಕಾಲ ಪ್ರಾಬಲ್ಯ ಸಾಧಿಸಿದ್ದರು. ಅವರಂತೆ ಮಗ ತಾರಿಕ್ ರೆಹಮಾನ್ ಸಹ ರಾಜಕೀಯದಲ್ಲಿ ದೊಡ್ಡ ಅಲೆಯನ್ನು ಎಬ್ಬಿಸಲು ಪ್ರಾರಂಭಿಸಿದ್ದಾರೆ. 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ನಡೆದ ಚಳುವಳಿಯ ಸಂದರ್ಭದಲ್ಲಿ ಬಾಲಕ ತಾರಿಕ್ ರೆಹಮಾನ್ ಬಂಧನಕ್ಕೆ ಒಳಗಾಗಿದ್ದರು. ತಾರಿಕ್ ರೆಹಮಾನ್ ಅವರನ್ನು ಬಾಲ್ಯದಲ್ಲಿಯೇ ಬಂಧಿನಕ್ಕೆ ಒಳಪಡಿಸಿದ್ದಾಗ, “ಯುದ್ಧದ ಕಿರಿಯ ಕೈದಿಗಳಲ್ಲಿ ಒಬ್ಬರು” ಎಂದು ಹೇಳಲಾಗಿತ್ತು.
ಅವರ ತಂದೆ ಜಿಯಾವುರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಮುಖ ವ್ಯಕ್ತಿಯಾಗಿದ್ದಾರೆ. ತಾರಿಕ್ ರೆಹಮಾನ್ ಅವರ ತಂದೆ ಸೇನಾ ಕಮಾಂಡರ್ ಕೂಡ ಆಗಿದ್ದರು. ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಆಗಸ್ಟ್ 15, 1975 ರ ನಸುಕಿನ ವೇಳೆ ಅವರ ನಿವಾಸಕ್ಕೆ ನುಗ್ಗಿದ ಸೇನಾ ಸಿಬ್ಬಂದಿಯ ಗುಂಪೊಂದು ಹತ್ಯೆ ಮಾಡಿತು. ಆ ಸಂದರ್ಭದಲ್ಲಿ ಜಿಯಾವುರ್ ಸೇನೆಯಲ್ಲಿದ್ದರು. ಆದರೆ, ಅವರ ಹತ್ಯೆಯ ಹಿಂದೆ ನೇರವಾಗಿ ಭಾಗಿಯಾಗಿರಲಿಲ್ಲ.
1975ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ನಂತರ ಜಿಯಾವುರ್ ರೆಹಮಾನ್ ಪ್ರಾಮುಖ್ಯತೆಗೆ ಬಂದರು. ಆಗಸ್ಟ್ 25, 1975 ರಿಂದ ಏಪ್ರಿಲ್ 28, 1978ರ ವರೆಗೆ ಸೇನಾ ಮುಖ್ಯಸ್ಥರಾಗಿದ್ದ ಇವರು, ಈ ಮಧ್ಯದಲ್ಲಿಯೇ ಏಪ್ರಿಲ್ 21, 1977ರಿಂದ ಮೇ 30, 1981ರ ತನಕ ಬಾಂಗ್ಲಾದೇಶದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಮುಜಿಬುರ್ ಹತ್ಯೆಯ ನಂತರ, ಜಿಯಾವುರ್ ಮತ್ತು ಶೇಖ್ ಮುಜಿಬುರ್ ಕುಟುಂಬಗಳು ಹಗೆತನ ಸಾಧಿಸಲು ಆರಂಭಿಸಿದವು. ನಂತರ 1981 ರಲ್ಲಿ ನಡೆದ ಮಿಲಿಟರಿ ದಂಗೆಯಲ್ಲಿ ಜಿಯಾವುರ್ ರೆಹಮಾನ್ ಹತ್ಯೆಗೀಡಾಗಿದ್ದರು. ರಾಜಕೀಯವಾಗಿ ಸಾಕಷ್ಟು ಪ್ರಭಾವಿಸಿದ್ದ ಜಿಯಾವುರ್ ಪತ್ನಿ ಖಲೀದಾ ಜಿಯಾ 1991-1996ರ ತನಕ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ಹಿಡಿದರು. ನಂತರ ಎರಡನೇ ಅವಧಿಯಲ್ಲಿ 2001-2006ರ ತನಕ ಪ್ರಧಾನಿ ಆಗಿದ್ದ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಾಂಗ್ಲಾದೇಶ ಮಿಲಿಟರಿ ಸರ್ಕಾರವು ಅವರನ್ನು ಬಂಧಿಸಿತ್ತು. 2008ರಲ್ಲಿ ಜೈಲಿನಿಂದ ಬಿಡುಗಡೆಯಾದ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ದೇಶ ತೊರೆದು ಲಂಡನ್‌ಗೆ ತೆರಳಿದರು.
ಸುಮಾರು 17 ವರ್ಷಗಳು ದೇಶದಿಂದ ಹೊರಗಿದ್ದ ತಾರಿಕ್ ರೆಹಮಾನ್ ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಬಂದು ಚುನಾವಣೆಯನ್ನು ಗೆದ್ದಿದ್ದಾರೆ. 60 ವರ್ಷದ ರೆಹಮಾನ್, ದಶಕಗಳಿಂದ ದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಭಾವಿ ಜಿಯಾ ಕುಟುಂಬದ ಪ್ರಮುಖ ವ್ಯಕ್ತಿ. ಆದಾಗ್ಯೂ, ರಾಜಕೀಯ ಪ್ರತಿಸ್ಪರ್ಧಿಗಳಿಂದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಅನೇಕ ಸಲ ತಾರಿಕ್ ಎದುರಿಸಿದ್ದಾರೆ.
ದೇಶದ ಮೊದಲ ಮಹಿಳಾ ಪ್ರಧಾನಿ ಹಾಗೂ ತಾಯಿ ಖಲೀದಾ ಜಿಯಾ ಅವರು ಮರಣದ ನಂತರ ಸ್ವದೇಶಕ್ಕೆ ಬರುವ ತೀರ್ಮಾನ ಮಾಡಿದ್ದರು. ಚುನಾವಣೆ ಇರುವ ಕೆಲವೇ ವಾರಗಳ ಮೊದಲು ಬಿಎನ್‌ಪಿ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದರು.
ಸ್ವ-ಉದ್ಯೋಗದಲ್ಲಿದ್ದ ರೆಹಮಾನ್ ಮೊದಲ ಬಾರಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ್ದು 2001ರ ವೇಳೆಗೆ. ಆಗ ಅವರಿಗೆ 30ರ ಹರೆಯ. ಯುವಕನಾಗಿದ್ದ ತಾರಿಕ್ ರೆಹಮಾನ್ ಅವರಿಗೆ ಬಿಎನ್‌ಪಿ ಪಕ್ಷದ ಉನ್ನತ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿತ್ತು. ಆ ಸಮಯದಲ್ಲಿ ವಿರೋಧ ಪಕ್ಷವಾದ ಅವಾಮಿ ಲೀಗ್ ಸ್ವಜನಪಕ್ಷಪಾತ ಎಂದು ಟೀಕಿಸಿತ್ತು. ವೈಯಕ್ತಿಕ ಲಾಭ ಪಡೆಯಲು ರೆಹಮಾನ್ ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಅವರು ನಿರಾಕರಿಸುತ್ತಲೇ ಬಂದಿದ್ದರು.
ಮಿಲಿಟರಿ ಬೆಂಬಲಿತ ಉಸ್ತುವಾರಿ ಸರ್ಕಾರದ ಅವಧಿಯಲ್ಲಿ 2007ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನೂ ಬಂಧಿಸಲಾಯಿತು. ವಿಚಾರಣೆಯ ವೇಳೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ತಾರಿಕ್ ಆರೋಪಿಸಿದ್ದರು. 18 ತಿಂಗಳು ಜೈಲಿನಲ್ಲಿ ಕಳೆದ ಅವರು ಆನಂತರ ದೇಶ ತೊರೆದು ಲಂಡನ್‌ನಲ್ಲಿ ನೆಲೆಸಿದರು. ಅಲ್ಲಿ ಅವರು 17 ವರ್ಷಗಳ ಕಾಲ ಇದ್ದರು. ತಾರಿಕ್ ರೆಹಮಾನ್ ವಿದೇಶದಲ್ಲಿ ನೆಲೆಸಿದ್ದರೂ, ಬಿಎನ್‌ಪಿ ಕಾರ್ಯತಂತ್ರ ಮತ್ತು ನೀತಿಗಳನ್ನು ರೂಪಿಸುತ್ತಿದ್ದರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಲ್ಲಿದ್ದಾಗ ತಾರಿಕ್ ಮೇಲೆ ವಿವಿಧ ಆರೋಪಗಳನ್ನು ಹೊರಿಸಿ, ತನಿಖೆಗಳು ನಡೆದವು. 2004ರಲ್ಲಿ ರಾಜಕೀಯ ರ್ಯಾಲಿಯ ಮೇಲೆ ನಡೆದ ಮಾರಕ ಗ್ರೆನೇಡ್ ದಾಳಿಯಲ್ಲಿ ಅವರ ಪಾತ್ರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ತಾರಿಕ್ ಮೇಲೆ ಹಸೀನಾ ಆರೋಪ ಹೊರಿಸಿದ್ದರು.
ಆಗಸ್ಟ್ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ದಂಗೆಯಲ್ಲಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದಾಗ, ತಾರಿಕ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಯಿತು. ಇದರ ನಂತರ ತಾರಿಕ್ ಬಿಎನ್‌ಪಿ ಪಕ್ಷ ಮತ್ತು ಬಾಂಗ್ಲಾ ಜನರ ಜೊತೆ ಉತ್ತಮ ಸಂಬಂಧವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದರು. 17 ವರ್ಷಗಳು ವನವಾಸದಂತೆ ಸ್ವದೇಶದಿಂದ ದೂರವಿದ್ದ ತಾರಿಕ್, ಕ್ರಿಸ್‌ಮಸ್ ದಿನ 2025 ಡಿಸೆಂಬರ್ 25 ರಂದು ಸ್ವದೇಶಕ್ಕೆ ಮರಳಿದರು. ಅವರು ಮರಳಿದ ಕೇವಲ ಐದು ದಿನಗಳ ನಂತರ ಅಂದರೆ ಡಿಸೆಂಬರ್ 30 ಕ್ಕೆ ಅವರ ತಾಯಿ ಖಲೀದಾ ಜಿಯಾ ಅನಾರೋಗ್ಯದ ಕಾರಣದಿಂದ ನಿಧನರಾದರು. ಖಲೀದಾ ನಿಧನರಾಗುವ ಮೊದಲೇ ಪಕ್ಷದ ನೇತೃತ್ವವನ್ನು ತಾರಿಕ್ ವಹಿಸಿಕೊಂಡಿದ್ದರು.
ಶ್ಯಾಡೊ ಪಿಎಂ
2001-2006ರ ಅವಧಿಯಲ್ಲಿ ಅವರ ತಾಯಿ ಖಲೀದಾ ಜಿಯಾ ಪ್ರಧಾನಿಯಾಗಿದ್ದ ವೇಳೆ, ತಾರಿಕ್ ರೆಹಮಾನ್ ಶ್ಯಾಡೊ ಪಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಪ್ರಧಾನಿ ಕಚೇರಿಯಲ್ಲಿ ತಾರಿಕ್ ಇರುವುದನ್ನು ಹಲವರು ಟೀಕಿಸುತ್ತಿದ್ದರು. 2001ರಿಂದ 2006 ರವರೆಗೆ ಬಿಎನ್‌ಪಿ ಮತ್ತು ಜಮಾತ್-ಇ-ಇಸ್ಲಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅಧಿಕಾರವಿತ್ತು.
ಬಾಂಗ್ಲಾ ಸ್ವಾತಂತ್ರ್ಯಗೊಂಡ ನಂತರವೂ ಅನೇಕ ಸಂದರ್ಭದಲ್ಲಿ ರಾಷ್ಟ್ರದೊಳಗೆ ಹಿಂಸಾಚಾರವನ್ನು ಅನುಭವಿಸಿದೆ. ಅದರಂತೆ 2006 ಮತ್ತು 2008ರ ನಡುವೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆಯಿತು. ಬಿಎನ್‌ಪಿ ಮತ್ತು ಅವಾಮಿ ಲೀಗ್ 2006ರ ನವೆಂಬರ್ ಮಧ್ಯಭಾಗದಲ್ಲಿ ನಡೆಯಬೇಕಿದ್ದ ಚುನಾವಣೆಯು ಜಗಳಕ್ಕೆ ಮಾರ್ಪಟ್ಟಿತು. ಈ ಅವ್ಯವಸ್ಥೆಯಿಂದ ಬಾಂಗ್ಲಾ ಮಿಲಿಟರಿಯು ‘ಕೇರ್‌ಟೇಕರ್’ ಸರ್ಕಾರವನ್ನು ಅಧಿಕಾರಕ್ಕೆ ತಂದಿತು. ಇದು ಮೂಲಭೂತ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ್ದು ಮಾತ್ರವಲ್ಲದೆ ಜಿಯಾ ಅಥವಾ ಹಸೀನಾ ಇಲ್ಲದೆ ರಾಜಕೀಯ ಪರ್ಯಾಯವನ್ನು ರೂಪಿಸಲು ಪ್ರಯತ್ನಿಸಿತು. ನಂತರ 2008 ರ ಚುನಾವಣೆಯಲ್ಲಿ ಅವಾಮಿ ಲೀಗ್ ಗೆದ್ದು ಅಧಿಕಾರಕ್ಕೇರಿತು.
2007ರಲ್ಲಿ ಮಿಲಿಟರಿ ಸರ್ಕಾರ ತಾರಿಕ್ ಅವರ ಮೇಲೆ ಅನೇಕ ಆರೋಪಗಳನ್ನು ಹೊರಿಸಿ ಬಂಧನ ಮಾಡಿ ಸುಮಾರ 17 ತಿಂಗಳು ಕಾಲ ಬಂಧನದಲ್ಲಿಟ್ಟಿತು. ಅಕ್ರಮ ಹಣವರ್ಗಾವಣೆ ಸೇರಿದಂತೆ ಹಸೀನಾ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ತಾರಿಕ್ ರೆಹಮಾನ್ ರಾಜಕೀಯ ಕುಟುಂಬದಿಂದ ಬಂದು ಅನೇಕ ಏಳು-ಬೀಳುಗಳನ್ನು ನೋಡಿದ್ದಾರೆ. ವಿರೋಧ ಪಕ್ಷಗಳ ದಾಳಿ, ಸ್ವಪಕ್ಷದವರೇ ಮಾಡಿದ ಆರೋಪ, ಜೈಲು ವಾಸ ಹೀಗೆ ಸಾಲು ಸಾಲು ಆರೋಪಗಳನ್ನು ಹೊತ್ತಿದ್ದ ವ್ಯಕ್ತಿ ಈಗ ಬಾಂಗ್ಲಾದೇಶದ ಉನ್ನತ ಸ್ಥಾನಕ್ಕೆ ಏರುತ್ತಿದ್ದಾರೆ. ಪ್ರಧಾನಿ ಹುದ್ದೆಯು ಜಾಗತಿಕ ಮಟ್ಟದ ರಾಜಕೀಯದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ತಾರಿಕ್ ಅವರು ಈ ಹಿಂದೆ ಸ್ವದೇಶದಲ್ಲಿ ನೋಡಿದ ಸಂಘರ್ಷ ಮತ್ತು ಸೇಡಿನ ರಾಜಕೀಯ ಅವರನ್ನು ಭವಿಷ್ಯದಲ್ಲಿ ಯಾವ ರೀತಿಯ ನಾಯಕನಾಗಿ ರೂಪಿಸಬಹುದು ಎಂಬುದು ಕುತೂಹಲವಾಗಿದೆ. ಪಕ್ಷದ ನಾಯಕರಾಗುವುದರಿಂದ ಹಿಡಿದು ದೇಶದ ನಾಯಕರಾಗಲು ಅವರು ಬಳಸಿದ ರಾಜಕೀಯ ಬುದ್ಧಿವಂತಿಕೆಯು ಜಾಗತಿಕ ಮಟ್ಟದ ರಾಜಕೀಯದಲ್ಲಿ ಯಾವ ಸ್ಥಾನದಲ್ಲಿ ನಿಲ್ಲಿಸಬಹುದು ಎಂಬುದನ್ನು ಕಾದು ನೋಡಬೇಕಿದೆ.





