ಥಾಯ್ಲೆಂಡ್‌ನ ಪ್ರಧಾನಿ ಪೇಟಾಂಗ್‌ತಾರ್ನ್ ಶಿನವಾತ್ರಾ ಅವರನ್ನು ಅಧಿಕಾರಕ್ಕೆ ಬಂದ ಕೇವಲ ಒಂದು ವರ್ಷದೊಳಗೆ ಸಾಂವಿಧಾನಿಕ ನ್ಯಾಯಾಲಯವು ಹುದ್ದೆಯಿಂದ ವಜಾಗೊಳಿಸಿದೆ. ಕಾಂಬೋಡಿಯಾದ ಮಾಜಿ ನಾಯಕನೊಂದಿಗಿನ ಫೋನ್ ಸಂಭಾಷಣೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಶಿನವಾತ್ರಾ ಅವರು ಶಿಷ್ಟಾಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಕಳೆದ 17 ವರ್ಷಗಳ ಅವಧಿಯಲ್ಲಿ ನಿಯಮ ಮೀರಿದ್ದ ಪ್ರಧಾನಿಗಳ ವಿರುದ್ಧ ಥೈಲ್ಯಾಂಡ್ ಸಾಂವಿಧಾನಿಕ ಕೋರ್ಟ್ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದು, ಇದೀಗ ಶಿನವಾತ್ರ ಈ ಹುದ್ದೆಯಿಂದ ಪದಚ್ಯುತಗೊಂಡ ಐದನೇ ಪ್ರಧಾನಿಯಾಗಿದ್ದಾರೆ.
ಈ ತೀರ್ಪಿನ ನಂತರ, ಉಪ ಪ್ರಧಾನಮಂತ್ರಿ ಫುಮ್‌ಥಾಮ್ ವೆಚಯಾಚೈ ಮತ್ತು ಪ್ರಸ್ತುತ ಕ್ಯಾಬಿನೆಟ್ ಸದಸ್ಯರು ಹೊಸ ಪ್ರಧಾನಿಯನ್ನು ಸಂಸತ್ತು ಆಯ್ಕೆ ಮಾಡುವವರೆಗೆ ತಾತ್ಕಾಲಿಕವಾಗಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಹೊಸ ಪ್ರಧಾನಮಂತ್ರಿಯ ಆಯ್ಕೆಗಾಗಿ ಸಂಸತ್ತಿನ ಸ್ಪೀಕರ್ ದಿನಾಂಕವನ್ನು ನಿರ್ಧರಿಸಲಿದ್ದಾರೆ.
ಸಂಸತ್ತಿನ ಸ್ಪೀಕರ್‌ರಿಂದ ನಿಗದಿಪಡಿಸಲಾಗುವ ದಿನಾಂಕದಂದು ಹೊಸ ಪ್ರಧಾನಮಂತ್ರಿಯ ಆಯ್ಕೆಗಾಗಿ ಸಂಸತ್ತು ಸಭೆ ಸೇರಲಿದೆ. 2023ರ ಚುನಾವಣೆಯ ಮೊದಲು ಘೋಷಿತವಾದ ಐದು ಅರ್ಹ ಅಭ್ಯರ್ಥಿಗಳು ಈಗಲೂ ಸ್ಪರ್ಧೆಯಲ್ಲಿದ್ದಾರೆ. ಫಿಯು ಥಾಯ್ ಪಕ್ಷದಿಂದ ಆರಂಭದಲ್ಲಿ ಮೂವರು ಅಭ್ಯರ್ಥಿಗಳಿದ್ದರೂ, ಈಗ ಕೇವಲ ಚೈಕಾಸೆಮ್ ನಿಟಿಸಿರಿ (77) ಒಬ್ಬರೇ ಉಳಿದಿದ್ದಾರೆ. ಮಾಜಿ ನ್ಯಾಯಾಂಗ ಸಚಿವ ಮತ್ತು ಅಟಾರ್ನಿ ಜನರಲ್ ಆಗಿದ್ದ ಇವರು, ಕಡಿಮೆ ಪ್ರಚಾರದಲ್ಲಿದ್ದರೂ, ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವಶಕ್ತಿ ಸದ್ಬಳಕೆಗೆ ಇದು ಸಕಾಲ: ಮೋದಿ ಮನಸ್ಸು ಮಾಡುವರೇ?
ಇನ್ನೊಬ್ಬರು ಪ್ರಮುಖ ಅಭ್ಯರ್ಥಿಯಾಗಿರುವ ಭುಮ್‌ಜೈಥಾಯ್ ಪಕ್ಷದ ಅನುಟಿನ್ ಚಾರ್ನ್‌ವಿರಾಕುಲ್ (58), ಮಾಜಿ ಗೃಹ ಸಚಿವ ಮತ್ತು ಉಪ ಪ್ರಧಾನಮಂತ್ರಿಯಾಗಿದ್ದವರು, ಇವರ ಪಕ್ಷವು ಜೂನ್‌ನಲ್ಲಿ ಶಿನವಾತ್ರಾ ಅವರ ಒಕ್ಕೂಟದಿಂದ ಹೊರಬಂದಿದ್ದರೂ, ಪ್ರಧಾನಿ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ, ಪ್ರಸ್ತುತ ಇಂಧನ ಸಚಿವರಾದ ಪಿರಪಾನ್ ಸಲಿರಥವಿಭಾಗ ಮತ್ತು 2014ರಲ್ಲಿ ಫಿಯು ಥಾಯ್ ಸರ್ಕಾರದ ವಿರುದ್ಧ ದಂಗೆ ನಡೆಸಿದ ಮಾಜಿ ಪ್ರಧಾನಮಂತ್ರಿ ಪ್ರಯುತ್ ಚಾನ್-ಓ-ಚಾ (71) ಕೂಡ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.
ನೂತನ ಪ್ರಧಾನಿಯಾಗಲು ಕನಿಷ್ಠ 50 ಸಂಸದರಿಂದ ಬೆಂಬಲ ದೊರಕಬೇಕು. ಬಳಿಕ, ಹಾಲಿ 492 ಸದಸ್ಯರಲ್ಲಿನ ಕನಿಷ್ಠ 247 ಮತಗಳನ್ನು ಪಡೆಯಬೇಕು. ಯಾವುದೇ ಅಭ್ಯರ್ಥಿ ವಿಫಲವಾದರೆ, ಮತ್ತೆ ಸಭೆ ಸೇರಿ ಮುಂದಿನ ಅಭ್ಯರ್ಥಿಗಳ ಹೆಸರಿನ ಮೇಲೆ ಮತದಾನ ನಡೆಯುತ್ತದೆ. ಈ ಪ್ರಕ್ರಿಯೆಗೆ ಯಾವುದೇ ಕಾಲಮಿತಿ ವಿಧಿಸಲಾಗಿಲ್ಲ.





