ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಿಯಾ ವಿಹಾರ್ ದೇವಾಲಯದ ಸುತ್ತಲಿನ ಭೂಮಿಯ ಒಂದು ಭಾಗವನ್ನು ಕಾಂಬೋಡಿಯಾಕ್ಕೆ ನೀಡಬೇಕು. ಆ ಪ್ರದೇಶದಲ್ಲಿ ನೆಲೆಗೊಂಡಿರುವ ಸೇನೆಯನ್ನು ಥೈಲ್ಯಾಂಡ್ ಹಿಂಪಡೆಯಬೇಕು ಎಂದು ಹೇಳಿತ್ತು ಅಂತಾರಾಷ್ಟ್ರೀಯ ನ್ಯಾಯಾಲಯ
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ಬಿಕ್ಕಟ್ಟು ಮತ್ತೆ ಮುನ್ನಲೆಗೆ ಬಂದಿವೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಘರ್ಷಣೆಗಳು ಭುಗಿಲೆದ್ದಿವೆ. ಭಾನುವಾರ ರಾತ್ರಿ ಆರಂಭವಾದ ಸಂಘರ್ಷದಲ್ಲಿ ಈವರೆಗೆ ಉಭಯ ರಾಷ್ಟ್ರಗಳ 13 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು, 120 ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಆಕ್ರಮಣಕಾರಿ ದಾಳಿಗಳಿಂದ ಸಾವು-ನೋವುಗಳು ಹೆಚ್ಚುತ್ತಲೇ ಇವೆ.
ಉಭಯ ರಾಷ್ಟ್ರಗಳು 817 ಕಿ.ಮೀ (508 ಮೈಲುಗಳು) ಉದ್ದದ ಭೂ ಗಡಿಯನ್ನು ಹೊಂದಿವೆ. ಈ ಗಡಿ ಭಾಗವು ಸುಮಾರು ಒಂದು ಶತಮಾನಕ್ಕೂ (100 ವರ್ಷ) ಹೆಚ್ಚು ಕಾಲದಿಂದ ವಿವಾದ ಮತ್ತು ಸಂಘರ್ಷ ಬಿಂದುವಾಗಿ ಉಳಿದಿದೆ. 1953ರವರೆಗೆ ಕಾಂಬೋಡಿಯಾವನ್ನು ಆಳಿದ ಫ್ರಾನ್ಸ್, 1907ರಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ಗಡಿಯನ್ನು ಗುರುತಿಸಿತು. ಅಂದು ರೂಪತಳೆದ ಗಡಿ ವಿವಾದ ಇಂದಿನ ಜೀವಂತವಾಗಿದೆ. ಜೀವಗಳನ್ನು ಕೊಲ್ಲುತ್ತಿದೆ.
ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಹಲವು ಪ್ರಯತ್ನಗಳು ನಡೆದಿದ್ದವು. ಆದರೂ, 2011ರಲ್ಲಿ ಫಿರಂಗಿ ಗುಂಡಿನ ಭೀಕರ ದಾಳಿಗಳು ನಡೆದವು. ಇದು, ಉಭಯ ರಾಷ್ಟ್ರಗಳ ಸಂಘರ್ಷವನ್ನು ಭೀಕರ ಹಂತಕ್ಕೆ ಕೊಂಡೊಯ್ಯಿತು. 2013ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವು (ICJ), “ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಿಯಾ ವಿಹಾರ್ ದೇವಾಲಯದ ಸುತ್ತಲಿನ ಭೂಮಿಯ ಒಂದು ಭಾಗವನ್ನು ಕಾಂಬೋಡಿಯಾಕ್ಕೆ ನೀಡಬೇಕು. ಆ ಪ್ರದೇಶದಲ್ಲಿ ನೆಲೆಗೊಂಡಿರುವ ಸೇನೆಯನ್ನು ಥೈಲ್ಯಾಂಡ್ ಹಿಂಪಡೆಯಬೇಕು” ಎಂದು ಸೂಚಿಸಿತು. ಆದರೆ, ಈ ನಿರ್ದೇಶನವನ್ನು ಅನುಸರಿಸಲು ಥೈಲ್ಯಾಂಡ್ ನಿರಾಕರಿಸಿತು. ಪರಿಣಾಮ, ಸಂಘರ್ಷ ಮುಂದುವರಿಯಿತು.
ಈಗ, 2025ರಲ್ಲಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಭೀಕರ ಹಂತಕ್ಕೆ ಏರುತ್ತಿದೆ. ಇದೇ ವರ್ಷದ ಮೇ ತಿಂಗಳಲ್ಲಿ, ಕಾಂಬೋಡಿಯನ್ ಸೈನಿಕನನ್ನು ಕೊಲ್ಲಲಾಯಿತು. ಹತ್ಯೆಯಾದ ಪ್ರದೇಶದಲ್ಲಿನ ಘರ್ಷಣೆಗಳು ಎರಡೂ ರಾಷ್ಟ್ರಗಳ ರಾಷ್ಟ್ರೀಯತಾವಾದಿ ಭಾವನೆಯನ್ನು ಪ್ರಚೋದಿಸಿದೆ. ಎರಡೂ ಸರ್ಕಾರಗಳು ಪ್ರತೀಕಾರಕ್ಕಿಳಿದವು. ಥೈಲ್ಯಾಂಡ್ ಕಠಿಣ ಗಡಿ ನಿರ್ಬಂಧಗಳನ್ನು ವಿಧಿಸಿದೆ, ಕಾಂಬೋಡಿಯಾ ಸರ್ಕಾರವು ಹಣ್ಣು, ತರಕಾರಿಗಳು, ಅನಿಲ ಮತ್ತು ಇಂಧನದ ಆಮದು ಹಾಗೂ ಥಾಯ್ ಚಲನಚಿತ್ರಗಳ ಪ್ರಸಾರವನ್ನು ನಿಷೇಧಿಸಿತು.
ನಂತರ ಜುಲೈನಲ್ಲಿ, ವಿವಾದಿತ ಗಡಿ ಪ್ರದೇಶದಲ್ಲಿ ಥಾಯ್ ಸೈನಿಕನೊಬ್ಬ ‘ನೆಲಬಾಂಬ್’ ಮೇಲೆ ಕಾಲಿಟ್ಟು ಸಾವನ್ನಪ್ಪಿದರು. ಆ ಸಂದರ್ಭದಲ್ಲಿ ನಡೆದ ಐದು ದಿನಗಳ ಘರ್ಷಣೆಯು ಕಳೆದ 10 ವರ್ಷಗಳ ಸಂಘರ್ಷದಲ್ಲಿ ಭೀಕರ ಹಂತವನ್ನು ತಲುಪಿತ್ತು. ಎರಡೂ ರಾಷ್ಟ್ರಗಳ ಕನಿಷ್ಠ 48 ಜನರು ಸಾವನ್ನಪ್ಪಿದರು ಮತ್ತು 3,00,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಬೇಕಾಯಿತು. ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನ ಇಬ್ಬರು ಮಾಜಿ ರಾಜಕೀಯ ನಾಯಕರ ನಡುವಿನ ಘರ್ಷಣೆಯಿಂದ ಘರ್ಷಣೆ ಉಲ್ಬಣಗೊಂಡಿತು. ಆನಂತರ, ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಸಂಘರ್ಷ ಆರಂಭಗೊಂಡಿತು. ಆಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಮಲೇಷ್ಯಾದಲ್ಲಿ ಶಾಂತಿ ಒಪ್ಪಂದ ನಡೆಯಿತು. ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಸಂಘರ್ಷವನ್ನು ಕೊನೆಗಾಣಿಸಿದವು.
ಆದರೆ, ಇದೀಗ, ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ನವೆಂಬರ್‌ನಲ್ಲಿ ಗಡಿಯಲ್ಲಿ ನೆಲಬಾಂಬ್ ಸ್ಫೋಟದಿಂದ ಮತ್ತೊಬ್ಬ ಥಾಯ್ ಸೈನಿಕ ಗಾಯಗೊಂಡ ಪರಿಣಾಮ, ಥೈಲ್ಯಾಂಡ್ ಕದನ ವಿರಾಮವನ್ನು ಮುರಿಯಿತು. ಕಾಂಬೋಡಿಯಾದ ಓರ್ವನನ್ನು ಹತ್ಯೆಗೈಯಿತು. ನಾಲ್ವರನ್ನು ಗಾಯಗೊಳಿಸಿತು.
ಅಂದಿನಿಂದ, ಕಾಂಬೋಡಿಯಾ ಮೇಲೆ ಥೈಲ್ಯಾಂಡ್ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಸಂಘರ್ಷವನ್ನು ಉದ್ವಿಗ್ನಗೊಳಿಸಿದೆ. ಭಾನುವಾರದಿಂದ ಈವರೆಗೆ ಕಾಂಬೋಡಿಯಾದ 9 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಅಂತೆಯೇ, ಥೈಲ್ಯಾಂಡ್‌ನಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದು, 68 ಜನರು ಗಾಯಗೊಂಡಿದ್ದಾರೆ.
ಮತ್ತೆ ಹಿಂಸಾಚಾರ ಆರಂಭಗೊಂಡಿದ್ದರಿಂದ ಗಡಿ ಭಾಗದ ಎರಡೂ ರಾಷ್ಟ್ರಗಳ ಜನರನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ. ಥೈಲ್ಯಾಂಡ್ ತನ್ನ ಗಡಿಯಲ್ಲಿನ 4,00,000 ಜನರನ್ನು ಸ್ಥಳಾಂತರಿಸಿದೆ. ಸ್ಥಳಾಂತರಗೊಂಡ ನಾಗರಿಕರಿಗಾಗಿ ಸುಮಾರು 500 ತಾತ್ಕಾಲಿಕ ಆಶ್ರಯತಾಣಗಳನ್ನು ತೆರೆದಿದೆ. ಕಾಂಬೋಡಿಯಾ ಸುಮಾರು 55,000 ಜನರನ್ನು ಸುರಿನ್ ಪಟ್ಟಣಕ್ಕೆ ಸ್ಥಳಾಂತರಿಸಿದೆ.
ಭಾನುವಾರ ರಾತ್ರಿಯಿಂದ ಎರಡು ರಾಷ್ಟ್ರಗಳು ಪರಸ್ಪರರ ಮೇಲೆ ರಾಕೆಟ್‌ಗಳು, ಫಿರಂಗಿ ಗುಂಡುಗಳು ಹಾಗೂ ಡ್ರೋಣ್ ದಾಳಿ ನಡೆಸುತ್ತಿವೆ. ಕಾಂಬೋಡಿಯಾ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಥೈಲ್ಯಾಂಡ್ ಪ್ರಧಾನಿ ಅನುಟಿನ್ ಚಾರ್ನ್‌ವಿರಕುಲ್, ‘ಸಂಭಾವ್ಯ ಮಾತುಕತೆಗಾಗಿ ನಮ್ಮನ್ನು ಕಾಂಬೋಡಿಯಾ ಸಂಪರ್ಕಿಸಿಲ್ಲ. ಸಂಘರ್ಷ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ.
ಕಾಂಬೋಡಿಯಾ ಸೆನೆಟ್ ಅಧ್ಯಕ್ಷ ಹುನ್ ಸೇನ್ ಅವರು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, “ನಮ್ಮ ಮಿಲಿಟರಿ ಥಾಯ್ ಪಡೆಗಳ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಿತ್ತು. ಆದರೆ, ಥಾಯ್ ನಿರಂತರ ದಾಳಿ ನಡೆಸಿದ್ದರಿಂದ, ಪ್ರತಿದಾಳಿ ಆರಂಭಿಸಿತು. ಕಾಂಬೋಡಿಯಾದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶಗಳನ್ನೇ ಥೈಲ್ಯಾಂಡ್ ಗುರಿಯಾಗಿಸಿಕೊಂಡಿದೆ. ಹೀಗಾಗಿ, ನಮ್ಮ ನೆಲೆಗಳನ್ನು ಉಳಿಸಿಕೊಳ್ಳಲು ಪ್ರತಿದಾಳಿ ನಡೆಸುವ ಮೂಲಕ ಶತ್ರು ಪಡೆಗಳನ್ನು ದುರ್ಬಲಗೊಳಿಸಲು ಯಾಂಬೋಡಿಯಾ ಸೇನೆಯು ಮುಂದಾಗಿದೆ” ಎಂದು ಹೇಳಿದ್ದಾರೆ.
“ಕಾಂಬೋಡಿಯಾ ಶಾಂತಿಯನ್ನು ಬಯಸುತ್ತದೆ. ಆದರೆ ಕಾಂಬೋಡಿಯಾ ತನ್ನ ಪ್ರದೇಶವನ್ನು ರಕ್ಷಿಸಲು ಹೋರಾಟಕ್ಕೂ ಸಿದ್ದವಿದೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಗೋವಾ ನೈಟ್‌ಕ್ಲಬ್ ದುರಂತ | ಸ್ಥಳದಿಂದ ಪರಾರಿಯಾದ ‘ಲೂಥ್ರಾ ಬ್ರದರ್ಸ್’ ಯಾರು ಗೊತ್ತೇ?
ಆದಾಗ್ಯೂ, ಕದನ ವಿರಾಮ ಉಲ್ಲಂಘನೆ ಮತ್ತು ಮೊದಲು ಸಂಘರ್ಷ ಆರಂಭಿಸಿದ ವಿಚಾರವಾಗಿ ಎರಡೂ ರಾಷ್ಟ್ರಗಳು ಪರಸ್ಪರರನ್ನು ದೂಷಿಸುತ್ತಿದ್ದಾರೆ. ಈ ನಡುವೆ, ಅಮೆರಿಕವು ಕಾಂಬೋಡಿಯಾ-ಥೈಲ್ಯಾಂಡ್ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ಎರಡೂ ರಾಷ್ಟ್ರಗಳು ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕು. ನಾಗರಿಕರ ರಕ್ಷಣೆ ಮತ್ತು ಅಕ್ಟೋಬರ್ 26ರ ಕೌಲಾಲಂಪುರ್ ಶಾಂತಿ ಒಪ್ಪಂದಗಳನ್ನು ಪಾಲಿಸಬೇಕು” ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ರಾಜತಾಂತ್ರಿಕತೆಗೆ ಅವಕಾಶವಿಲ್ಲ’
ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಥಾಯ್ ನೌಕಾಪಡೆಯು, “ಟ್ರಾಟ್ ಕರಾವಳಿ ಪ್ರಾಂತ್ಯದಲ್ಲಿರುವ ತನ್ನ ಪ್ರದೇಶದಿಂದ ಕಾಂಬೋಡಿಯನ್ ಪಡೆಗಳನ್ನು ಹೊರಹಾಕಲು ಕ್ರಮ ಕೈಗೊಳ್ಳುತ್ತಿದೆ. ಯಾಕೆಂದರೆ, ಆ ಪ್ರದೇಶದಲ್ಲಿ ಕಾಂಬೋಡಿಯನ್ ಪಡೆಗಳು ತಮ್ಮ ಉಪಸ್ಥಿತಿಯನ್ನು ಹೆಚ್ಚಿಸುತ್ತಿವೆ. ಸ್ನೈಪರ್‌ಗಳು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿವೆ. ಬಂಕರ್‌ಗಳನ್ನು ಅಭಿವೃದ್ಧಿಪಡಿಸಿವೆ. ಕಂದಕಗಳನ್ನು ಅಗೆಯುತ್ತಿವೆ. ಇದು ಥೈಲ್ಯಾಂಡ್‌ನ ಸಾರ್ವಭೌಮತ್ವಕ್ಕೆ ನೇರ ಮತ್ತು ಗಂಭೀರ ಬೆದರಿಕೆ” ಎಂದು ಹೇಳಿದೆ.
“ಕಾಂಬೋಡಿಯಾ ಶಾಂತಿ ಮಾತುಕತೆಗಳಿಗೆ ಸಿದ್ಧವಾಗಿಲ್ಲ. ಅವರ ಕ್ರಮಗಳು ಸಂಘರ್ಷಕ್ಕೆ ಎಡೆ ಮಾಡುವ ರೀತಿಯಲ್ಲಿವೆ. ಪರಿಸ್ಥಿತಿಯು ರಾಜತಾಂತ್ರಿಕತೆಗೆ ಅವಕಾಶ ಒದಗಿಸಿದಾಗ ಮಾತ್ರವೇ ರಾಜತಾಂತ್ರಿಕತೆಯು ಕೆಲಸ ಮಾಡುತ್ತದೆ. ಈಗ ಅಂತಹ ಪರಿಸ್ಥಿತಿ ಇಲ್ಲ. ಸಂಘರ್ಷವನ್ನು ಅಂತ್ಯಗೊಳಿಸಲು ಕಾಂಬೋಡಿಯಾ ಸಿದ್ದವಿದೆ ಎಂಬುದನ್ನು ತೋರಿಸಬೇಕು. ಆಗ ನಾವು ರಾಜತಾಂತ್ರಿಕತೆ ಮತ್ತು ಮಾತುಕತೆಗಳ ವಿಚಾರವನ್ನು ಪರಿಗಣಿಸುತ್ತೇವೆ” ಎಂದು ಥೈಲ್ಯಾಂಡ್‌ನ ವಿದೇಶಾಂಗ ಸಚಿವ ಸಿಹಾಸಕ್ ಫುವಾಂಗ್‌ಕೆಟ್ಕಿಯೋ ಹೇಳಿರುವುದಾಗಿ ‘ಅಲ್ ಜಜೀರಾ’ ವರದಿ ಮಾಡಿದೆ.
ಈ ನಡುವೆ, ಥೈಲ್ಯಾಂಡ್‌ನೊಂದಿಗೆ ತಕ್ಷಣದ ದ್ವಿಪಕ್ಷೀಯ ಮಾತುಕತೆಗೆ ತಾವು ಮುಕ್ತವಾಗಿರುವುದಾಗಿ ಕಾಂಬೋಡಿಯಾ ಮಂಗಳವಾರ ಹೇಳಿಕೊಂಡಿದೆ.
ಕದನ ವಿರಾಮಕ್ಕೆ ಒತ್ತಡ
ವಿಶ್ಲೇಷಕರ ಪ್ರಕಾರ, ಉಭಯ ರಾಷ್ಟ್ರಗಳ ನಡುವಿನ ದುರ್ಬಲ ಕದನ ವಿರಾಮ ಉಲ್ಲಂಘನೆಯು ಆಶ್ಚರ್ಯಕರವಲ್ಲ. ಯಾಕೆಂದರೆ, ಜುಲೈನಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಎರಡೂ ಕಡೆಯವರು ಮುಂದಾಗದ ಹೊರತು, ವ್ಯಾಪಾರ ಸುಂಕಗಳನ್ನು ಕಡಿತಗೊಳಿಸುವ ಮಾತುಕತೆಗಳನ್ನು ಸ್ಥಗಿತಗೊಳಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು. ಆ ಬೆದರಿಕೆಯ ಕಾರಣಕ್ಕಾಗಿ ಕದನ ವಿರಾಮಕ್ಕೆ ಸಹಿ ಹಾಕಲಾಯಿತು. ಆದರೆ, ಉದ್ವಿಗ್ನತೆಯು ಬೂದಿ ಮುಚ್ಚಿದ ಕೆಂಡದಂತಿತ್ತು.
ಮಂಗಳವಾರ, ಥಾಯ್ ವಿದೇಶಾಂಗ ಸಚಿವ ಫುವಾಂಗ್‌ಕೆಟ್ಕಿಯೊವ್ ಅವರು ಹೇಳಿರುವಂತೆ; “ಈಗ ಉದ್ವಿಗ್ನಗೊಂಡಿರುವ ಸಂಘರ್ಷವನ್ನು ಕೊನೆಗೊಳಿಸಲು, ಮಾತುಕತೆ ಆರಂಭಿಸುವಂತೆ ಥೈಲ್ಯಾಂಡ್ ಮೇಲೆ ಒತ್ತಡ ಹೇರಲು ಸುಂಕಗಳ ಬೆದರಿಕೆಯನ್ನು ಬಳಸಬಾರದು. ಸಂಘರ್ಷವನ್ನು ಅಂತ್ಯಗೊಳಿಸುವುದು ಕಾಂಬೋಡಿಯಾದ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
“ಥಾಯ್-ಕಾಂಬೋಡಿಯಾ ಸಮಸ್ಯೆಯನ್ನು ವ್ಯಾಪಾರ ಮಾತುಕತೆಗಳಿಂದ ಹೊರಗಿಟ್ಟು ನೋಡಬೇಕು. ವ್ಯಾಪಾರ ಮಾತುಕತೆ ಮತ್ತು ಸಂಘರ್ಷವನ್ನು ಒಟ್ಟಿಗೆ ತರಬಾರದು” ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ‘ಎರಡೂ ರಾಷ್ಟ್ರಗಳಿಗೆ ಫೋನ್ ಕರೆ ಮಾಡುತ್ತೇನೆ. ಸಂಘರ್ಷವನ್ನು ಅಂತ್ಯಗೊಳಿಸುವಂತೆ ಒತ್ತಾಯಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.




