ಥಾಯ್ಲೆಂಡ್ ಮತ್ತು ಕಾಂಬೋಡಿಯಾ ತಕ್ಷಣ ಕದನ ವಿರಾಮ ಮಾತುಕತೆ ನಡೆಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಮೂರು ದಿನಗಳ ಗಡಿ ಘರ್ಷಣೆಯಲ್ಲಿ 30ಕ್ಕೂ ಅಧಿಕ ಜನರು ಮೃತಪಟ್ಟು, ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಕಾಂಬೋಡಿಯಾ ಪ್ರಧಾನಿ ಹನ್ ಮಾನೆಟ್ ಮತ್ತು ಥಾಯ್ಲೆಂಡ್‌ನ ಹಂಗಾಮಿ ಪ್ರಧಾನಿ ಫುಮ್ಥಾಮ್ ವೆಚಾಯಾಚೈ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಸಂಘರ್ಷ ಮುಂದುವರಿಸುವುದರಿಂದ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದಗಳಿಗೆ ಅಡ್ಡಿಯಾಗಬಹುದು ಎಂದು ಇಬ್ಬರೂ ನಾಯಕರಿಗೆ ಎಚ್ಚರಿಕೆ ನೀಡಿದ್ದೇನೆ. ಎರಡೂ ರಾಷ್ಟ್ರಗಳು ತಕ್ಷಣದ ಕದನ ವಿರಾಮ ಮತ್ತು ಶಾಂತಿಯನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಶ್ವೇತಭವನವಾಗಲಿ ಅಥವಾ ರಾಯಭಾರಿ ಕಚೇರಿಯಾಗಲಿ ಪ್ರಸ್ತಾವಿತ ಮಾತುಕತೆಯ ಸಮಯ ಅಥವಾ ವಿವರಗಳನ್ನು ದೃಢಪಡಿಸಲಿಲ್ಲ.
ಕಾಂಬೋಡಿಯಾ-ಥಾಯ್ಲೆಂಡ್ ಗಡಿ ಉದ್ವಿಗ್ನತೆಯನ್ನು ಟ್ರಂಪ್ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ಹೋಲಿಕೆ ಮಾಡಿದ್ದಾರೆ. ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿ ಕೂಡ ಶಾಂತಿಯನ್ನು ಸ್ಥಾಪಿಸಬಹುದು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಮಹದಾಯಿ: ನಾಯಕರೇ ನಾಡದ್ರೋಹಿಗಳು
ಎರಡೂ ದೇಶಗಳು ತಕ್ಷಣವೇ ಕದನ ವಿರಾಮ ಘೋಷಿಸುವಂತೆ, ಇದಕ್ಕಾಗಿ ಮಧ್ಯಪ್ರವೇಶ ಮಾಡುವಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಕ್ಕೆ (ಆಸಿಯಾನ್) ವಿಶ್ವಸಂಸ್ಥೆ ಕರೆ ನೀಡಿದೆ.
ಕಾಂಬೋಡಿಯಾದೊಂದಿಗೆ ಹಂಚಿಕೊಂಡಿದ್ದ ಈಶಾನ್ಯ ಗಡಿಯನ್ನು ಥಾಯ್ಲೆಂಡ್ ಶನಿವಾರ ಮುಚ್ಚಿದೆ. ಥಾಯ್ಲೆಂಡ್ ನಡೆಸಿದ ದಾಳಿಯಲ್ಲಿ 13 ಮಂದಿ ಮೃತಪಟ್ಟಿರುವುದಾಗಿ ಕಾಂಬೋಡಿಯಾ ಹೇಳಿದೆ. ಕಾಂಬೋಡಿಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಥಾಯ್ಲೆಂಡ್ ಹೇಳಿದೆ. ಎರಡೂ ದೇಶಗಳು ದಾಳಿ ಮುಂದುವರಿಸಿರುವುದಾಗಿ ಹೇಳಿಕೊಂಡಿದ್ದು, ತಮ್ಮ ರಾಯಭಾರ ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿವೆ.
ಗಡಿಭಾಗದಿಂದ 10,865 ಕುಟುಂಬಗಳ 37,635 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾಂಬೋಡಿಯಾದ ಮಾಹಿತಿ ಸಚಿವ ನೇತ್ ಪೆಕ್ಟ್ರಾ ಹೇಳಿದ್ದಾರೆ. ಗಡಿ ಭಾಗದ ಗ್ರಾಮಗಳಲ್ಲಿ 1.31 ಲಕ್ಷದಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂದು ಥಾಯ್ಲೆಂಡ್ ಹೇಳಿದೆ. ಸುರಕ್ಷತಾ ದೃಷ್ಟಿಯಿಂದ ಥಾಯ್ಲೆಂಡ್ ಸರ್ಕಾರ ಶನಿವಾರ ಗಡಿ ಭಾಗದ 852 ಶಾಲೆಗಳನ್ನು ಮತ್ತು ಏಳು ಆಸ್ಪತ್ರೆಗಳನ್ನು ಮುಚ್ಚಿದೆ.





