ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ವಾದದ ಅಡಿಯಲ್ಲಿ, ವಸಾಹತುಶಾಹಿ ಧೋರಣೆಯ ಶಕ್ತಿಗಳು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಮೂಲಕ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸಾಧಿಸುತ್ತಿವೆ.
ಆಧುನಿಕೋತ್ತರದ ಎಐ ಕಾಲಘಟ್ಟದಲ್ಲಿ ಯುದ್ಧ ಎಂಬುದು ಕೇವಲ ಎರಡು ಭೂಪ್ರದೇಶಗಳ ನಡುವಿನ ಭೌತಿಕ ಸಂಘರ್ಷವಾಗಿ ಉಳಿದಿಲ್ಲ; ಬದಲಿಗೆ ಅದು ಜಾಗತೀಕರಣದ ಪ್ರಕ್ರಿಯೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಒಂದು ಸಂಕೀರ್ಣ ತಾತ್ವಿಕ ರೂಪಕವಾಗಿ ಮಾರ್ಪಟ್ಟಿದೆ.
ಜಾಗತೀಕರಣವು ಮಾರುಕಟ್ಟೆ ಮತ್ತು ಸಂಸ್ಕೃತಿಗಳನ್ನು ಪರಸ್ಪರ ಬೆಸೆಯುವ ಕಾರ್ಯವನ್ನು ಮಾಡುತ್ತಿದ್ದರೂ, ಅದರ ಬೆನ್ನಲ್ಲೇ ಯುದ್ಧದ ಭೀತಿಯನ್ನು ಜಾಗತಿಕವಾಗಿ ಪಸರಿಸುತ್ತಿದೆ. ಇಲ್ಲಿ ವಿನಾಶ ಮತ್ತು ಅಭಿವೃದ್ಧಿ ಎಂಬ ಎರಡು ಭಿನ್ನ ಪ್ರಕ್ರಿಯೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡುತ್ತಿವೆ.
ಜಾಗತೀಕರಣವು ಜಗತ್ತನ್ನು ಒಂದುಗೂಡಿಸುವ ಶಕ್ತಿಯಾಗಿ ಕಂಡುಬಂದರೂ, ಯುದ್ಧದ ಮೂಲಕ ಅದು ರಾಷ್ಟ್ರಗಳನ್ನು ವಿಘಟಿಸುವ ಮತ್ತು ಮರುಸಂಘಟಿಸುವ ಅಧಿಕಾರವನ್ನು ಚಲಾಯಿಸುತ್ತಿದೆ. ಹೀಗಾಗಿ, ಯುದ್ಧವು ಜಾಗತೀಕರಣದ ಬಾಹ್ಯ ಪರಿಣಾಮವಲ್ಲ, ಬದಲಿಗೆ ಅದರ ಆಂತರಿಕ ಕಾರ್ಯವಿಧಾನ ಮತ್ತು ತತ್ವವಾಗಿ ರೂಪಾಂತರಗೊಂಡಿದೆ.
ಪ್ರಸ್ತುತ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಸಾರ್ವಭೌಮತ್ವದ ವ್ಯಾಖ್ಯಾನವೇ ಬದಲಾಗುತ್ತಿದೆ. ಹಿಂದೆ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸಾಂಸ್ಕೃತಿಕ ಅಥವಾ ರಾಜತಾಂತ್ರಿಕ ಮೌಲ್ಯಗಳು ನಿರ್ಧರಿಸುತ್ತಿದ್ದವು. ಆದರೆ ಇಂದು ಮಿಲಿಟರಿ ತಂತ್ರಜ್ಞಾನದ ವಿನಿಮಯ ಮತ್ತು ಶಸ್ತ್ರಾಸ್ತ್ರಗಳ ವ್ಯಾಪಾರವೇ ಜಾಗತಿಕ ಸ್ಥಾನಮಾನದ ಮಾನದಂಡಗಳಾಗಿವೆ.
ರಷ್ಯಾ-ಉಕ್ರೇನ್, ಅಮೆರಿಕ-ವೆನಿಜುವೇಲಾ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳ ಹಿನ್ನೆಲೆಯಲ್ಲಿ ಗಮನಿಸಿದಾಗ, ಯುದ್ಧವು ರಾಷ್ಟ್ರಗಳ ಹಸ್ತಕ್ಷೇಪಕ್ಕೆ ಹೊಸ ನೈತಿಕತೆಯನ್ನು ಒದಗಿಸುತ್ತಿರುವುದು ಕಂಡುಬರುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಇಂತಹ ಮಿಲಿಟರಿ ಸಂಬಂಧಗಳಿಗಾಗಿ ಹಾತೊರೆಯುವುದು ಜಾಗತಿಕ ಅಧಿಕಾರ ರಾಜಕಾರಣದಲ್ಲಿ ಅನಿವಾರ್ಯತೆಯಾಗಿ ಬಿಂಬಿತವಾಗುತ್ತಿದೆ. ಇದು ರಾಷ್ಟ್ರೀಯ ಸ್ವಾಯತ್ತತೆಯನ್ನು ದುರ್ಬಲಗೊಳಿಸಿ, ಜಾಗತಿಕ ರಕ್ಷಣಾ ಮಾರುಕಟ್ಟೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತಿದೆ.
ಯುದ್ಧದ ಇತಿಹಾಸವು ಸ್ಥೂಲವಾಗಿ ರಾಷ್ಟ್ರಗಳ ನಡುವಿನ ಗಡಿ ಸಂಘರ್ಷಗಳಿಗೆ ಸೀಮಿತವಾಗಿತ್ತು. ಆದರೆ ಜಾಗತೀಕರಣದ ತೀವ್ರತೆಯು ಯುದ್ಧವನ್ನು ಆಂತರಿಕ ಅಥವಾ ದೇಶೀಯ ನೆಲೆಗಳಿಗೆ ವರ್ಗಾಯಿಸಿದೆ. ಸ್ಥಳೀಯ ಜನಾಂಗೀಯ ಬಿಕ್ಕಟ್ಟುಗಳು ಅಥವಾ ಆಡಳಿತಾತ್ಮಕ ದಬ್ಬಾಳಿಕೆಗಳನ್ನು ತಡೆಯುವ, ಭಯೋತ್ಪಾದನೆ ನಿಗ್ರಹಗಳ ನೆಪದಲ್ಲಿ ನಡೆಯುವ ಮಿಲಿಟರಿ ಹಸ್ತಕ್ಷೇಪವು ಇಂದು ‘ಜಾಗತಿಕ ನೈತಿಕ ಕರ್ತವ್ಯ’ ಎಂಬ ಮುಖವಾಡ ಧರಿಸಿದೆ.
ಇದನ್ನೂ ಓದಿದ್ದೀರಾ? ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಶೋಕದಲ್ಲಿ ಮುಳುಗಿದ ಅಲಿಪುರ, ಅಮೆರಿಕಕ್ಕೆ ಧಿಕ್ಕಾರ ಘೋಷಣೆ
ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನಡೆಯುವ ಈ ಹತ್ತಿಕ್ಕುವಿಕೆಗಳು ವಾಸ್ತವವಾಗಿ ಶಸ್ತ್ರಾಸ್ತ್ರ ಪೂರೈಸುವ ವಸಾಹತುಶಾಹಿ ಶಕ್ತಿಗಳಿಗೆ ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಡುತ್ತಿವೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ವಾದದ ಅಡಿಯಲ್ಲಿ, ವಸಾಹತುಶಾಹಿ ಧೋರಣೆಯ ಶಕ್ತಿಗಳು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಮೂಲಕ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸಾಧಿಸುತ್ತಿವೆ. ಈ ಮೂಲಕ ಯುದ್ಧವು ಜಾಗತೀಕರಣದ ಅಡಿಯಲ್ಲಿ ಹೊಸ ರೂಪದ ಬಂಡವಾಳಶಾಹಿ ಹಿತಾಸಕ್ತಿಯನ್ನು ಸಂರಕ್ಷಿಸುವ ಸಾಧನವಾಗಿ ಪರಿಣಮಿಸಿದೆ.

ಬರಹ : ಡಾ. ರವಿ ಎಂ ಸಿದ್ಲಿಪುರ





