ಕಳೆದ ವರ್ಷ ಗಾಝಾ ನಗರದಲ್ಲಿ ಇಸ್ರೇಲಿ ಪಡೆಗಳಿಂದ ಕ್ರೂರವಾಗಿ ಕೊಲ್ಲಲ್ಪಟ್ಟ ಆರು ವರ್ಷದ ಹಿಂದ್ ರಜಬ್ ಬಗ್ಗೆ ಮಾಡಿದ್ದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಸಾಕ್ಷ್ಯಚಿತ್ರವು ಇಟಲಿಯ ವೆನಿಸ್ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದು, ದಾಖಲೆಯ 23 ನಿಮಿಷಗಳ ಚಪ್ಪಾಳೆ ಗಿಟ್ಟಿಸಿಕೊಂಡಿದೆ.
ಆರು ವರ್ಷದ ಗಾಝಾದ ಹುಡುಗಿಯ ಅಂತಿಮ ಮನವಿಯನ್ನು ವಿವರಿಸುವ ಈ ಸಾಕ್ಷ್ಯಚಿತ್ರವು ವಿಶ್ವದ ಅತ್ಯಂತ ಹಳೆಯ ಚಿತ್ರೋತ್ಸವದ ಇತಿಹಾಸದಲ್ಲಿ ಅತಿ ಸುದೀರ್ಘವಾದ 23 ನಿಮಿಷಗಳ ಚಪ್ಪಾಳೆ ಗಿಟ್ಟಿಸಿಕೊಂಡಿತು. ಈ ಚಿತ್ರವು ಗಾಝಾದ ಕಥೆಯನ್ನು ಒಳಗೊಂಡಿದ್ದು, ಭಾವನಾತ್ಮಕವಾಗಿ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿದವು.
ಕಳೆದ ವರ್ಷ ಗಾಝಾ ನಗರದಲ್ಲಿ ಇಸ್ರೇಲಿ ಪಡೆಗಳಿಂದ ಕ್ರೂರವಾಗಿ ಕೊಲ್ಲಲ್ಪಟ್ಟ ಆರು ವರ್ಷದ ಹಿಂದ್ ರಜಬ್‌ನ ಅಂತಿಮ ಮನವಿಯನ್ನು ವಿವರಿಸುವ ನಿಜ ಜೀವನದ ವಿವರಗಳು ಒಳಗೊಂಡಿದ್ದವು. ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಪ್ರದರ್ಶನ ಮುಗಿದ ಬಳಿಕ ಅಲ್ಲಿ ಸೇರಿದ್ದ ನೂರಾರು ಪ್ರೇಕ್ಷಕರು ಕಣ್ಣೀರು ಹಾಕಿದ್ದಲ್ಲದೇ, ಪ್ಯಾಲೆಸ್ಟೀನಿಯನ್ ಧ್ವಜಗಳನ್ನು ಹಿಡಿದು “ಫ್ರೀ, ಫ್ರೀ ಪ್ಯಾಲೆಸ್ಟೈನ್” ಎಂಬ ಘೋಷಣೆಗಳನ್ನು ಕೂಗಿದರು.
ವೆನಿಸ್ ಚಲನಚಿತ್ರೋತ್ಸವವು ಇಟಲಿಯ ವೆನಿಸ್‌ನಲ್ಲಿ ನಡೆಯುವ ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. 2025ರ 82ನೇ ಆವೃತ್ತಿಯು ಆಗಸ್ಟ್ 27 ರಿಂದ ಸೆಪ್ಟೆಂಬರ್ 6 ರವರೆಗೆ ನಡೆಯುತ್ತಿದೆ. ಈ ಚಲನಚಿತ್ರೋತ್ಸವದಲ್ಲಿ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಫ್ರಾಂಕೊ-ಟುನೀಷಿಯನ್ ಕೌಥರ್ ಬೆನ್ ಹನಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಾಜಾದಲ್ಲಿ ಸಾಯುತ್ತಿರುವವರ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವವ ವರದಿಗಳು ನಿಜಕ್ಕೂ ನಮ್ಮ ಮನಸ್ಸನ್ನು ಕಲಕುತ್ತಿವೆ. ಇಸ್ರೇಲ್ ಸೇನೆಯು ಗಾಝಾದಲ್ಲಿ ನಡೆಸುತ್ತಿರುವುದು ತುಂಬಾ ಅಮಾನವೀಯ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿಯೇ ಸಿನಿಮಾ, ಕಲೆ ಮತ್ತು ಪ್ರತಿಯೊಂದು ರೀತಿಯ ಅಭಿವ್ಯಕ್ತಿಯು ಆ ಜನರಿಗೆ ಧ್ವನಿ ಮತ್ತು ಮುಖವನ್ನು ನೀಡಲು ಬಹಳ ಮುಖ್ಯವಾಗಿದೆ” ಎಂದು ಹೇಳಿದರು.
ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಗಾಝಾದಿಂದಲೇ ದೂರವಾಣಿ ಮೂಲಕ ಮಾತನಾಡಿರುವ ರಜಬ್ ಅವರ ತಾಯಿ ವಿಸ್ಸಾಮ್ ಹಮದಾ, ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರವು ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬುತ್ತೇನೆ. ಇಡೀ ಜಗತ್ತು ನಮ್ಮನ್ನು ಸಾಯುವಂತೆ, ಹಸಿವಿನಿಂದ ಬಳಲುವಂತೆ, ಭಯದಲ್ಲಿ ಬದುಕುವಂತೆ ಮತ್ತು ಏನನ್ನೂ ಮಾಡದೆ ಬಲವಂತವಾಗಿ ಸ್ಥಳಾಂತರಗೊಳ್ಳುವಂತೆ ಮಾಡಿದೆ” ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.
ಯಾರು ಈ ಬಾಲಕಿ ಹಿಂದ್ ರಜಬ್?
ಆರು ವರ್ಷದ ಹಿಂದ್ ರಜಬ್, ಜನವರಿ 29, 2024 ರಂದು ಗಾಝಾ ನಗರದ ತಾಲ್ ಅಲ್-ಹವಾ ಪ್ರದೇಶದಲ್ಲಿ ಇಸ್ರೇಲ್ ಸೇನೆಯ ಟ್ಯಾಂಕ್ ದಾಳಿಯಲ್ಲಿ ತನ್ನ ತಾಯಿಯ ಸೋದರ ಸಂಬಂಧಿಗಳು ಸೇರಿದಂತೆ ಕುಟುಂಬದ ಐದು ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೊಲ್ಲಲ್ಪಟ್ಟ ಬಾಲಕಿ.
ಈ ಆಘಾತಕಾರಿ ಘಟನೆಯ ಸಂದರ್ಭದಲ್ಲಿ ಹಿಂದ್ ರಜಬ್‌ನ 15 ವರ್ಷದ ಸೋದರ ಸಂಬಂಧಿ ಲಯಾನ್ ಹಮಾದೆಹ್, ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಗೆ (PRCS) ಕರೆ ಮಾಡಿ, “ಇಸ್ರೇಲ್ ಸೇನೆಯ ಟ್ಯಾಂಕ್ ನಮ್ಮ ಪಕ್ಕದಲ್ಲಿದೆ. ಅವರು ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದಾರೆ” ಎಂದು ಕಿರುಚಿದ್ದಳು. ಆದರೆ ಅದೇ ವೇಳೆ ಕರೆ ಸಂಪರ್ಕ ಕಡಿತಗೊಂಡಿತ್ತು.
ಇದೇ ವೇಳೆ ಕಾರಿನಲ್ಲಿದ್ದ ಹಿಂದ್ ರಜಬ್ ತಾನು ಗಾಯಗೊಂಡಿದ್ದರೂ, ರೆಡ್ ಕ್ರೆಸೆಂಟ್ ಸೊಸೈಟಿಯ ಸಿಬ್ಬಂದಿ ಜೊತೆಗೆ ಮಾತನಾಡಿ, “ನನಗೆ ಭಯವಾಗುತ್ತಿದೆ, ದಯವಿಟ್ಟು ಬಂದು ನನ್ನನ್ನು ರಕ್ಷಿಸಿ ಕರೆದುಕೊಂಡು ಹೋಗಿ” ಎಂದು ಮನವಿ ಮಾಡಿದ್ದಳು. ರಜಬ್ ಕಾರಿನಲ್ಲಿ ಸಿಲುಕಿಕೊಂಡಿದ್ದಾಗ ಅವಳ ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಮೂವರು ಸೋದರ ಸಂಬಂಧಿಗಳು ಇಸ್ರೇಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದನ್ನು ದೃಢಪಡಿಸಿದ್ದರು. ಬಳಿಕ ಅವಳಿಗೆ ಧೈರ್ಯ ತುಂಬಲು ಅವರು ಗಂಟೆಗಟ್ಟಲೆ ಪ್ರಯತ್ನಿಸಿದ್ದರು. ಆ ಬಳಿಕ ಆಕೆಯನ್ನು ರಕ್ಷಿಸಲು ಕಳುಹಿಸಲಾದ ಇಬ್ಬರು ರಕ್ಷಣಾ ಕಾರ್ಯಕರ್ತರೂ ಕೂಡ ಇಸ್ರೇಲ್ ಸೇನೆಯ ದಾಳಿಯಲ್ಲಿ ಮೃತಪಟ್ಟಿದ್ದರು.
ಸುಮಾರು 12 ದಿನಗಳ ನಂತರ ಅಂದರೆ ಫೆಬ್ರವರಿ 10, 2024 ರಂದು, ಹಿಂದ್‌ನ ಮೃತದೇಹವನ್ನು ಗುಂಡಿನ ಗುರುತುಗಳಿಂದ ತುಂಬಿದ, ಟ್ಯಾಂಕ್‌ನಿಂದ ಚೂರಾದ ಕಾರಿನಲ್ಲಿ, ಆಕೆಯ ಕುಟುಂಬದವರ ಮತ್ತು ರಕ್ಷಣಾ ಕಾರ್ಯಕರ್ತರ ಶವಗಳ ಪಕ್ಕದಲ್ಲಿ ಪತ್ತೆ ಹಚ್ಚಲಾಗಿತ್ತು. ಈ ಘಟನೆಯ ಸಂದರ್ಭದಲ್ಲಿ ದಾಖಲಾಗಿದ್ದ ಕರೆಯ ಧ್ವನಿ ಮುದ್ರಿಕೆಯು ವಿಶ್ವದ ಜನರ ಮನಸ್ಸನ್ನು ಕಲಕಿತ್ತು.
‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರವು ಈ ಘಟನೆಯ ಭಾವನಾತ್ಮಕ ಮತ್ತು ರಾಜಕೀಯ ಪರಿಣಾಮಗಳನ್ನು ಚಿತ್ರಿಸಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಕೂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.





