ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ತನ್ನ ವಸಾಹತುಗಳನ್ನು ವಿಸ್ತರಿಸುವ ದೀರ್ಘಕಾಲದ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ. ತನ್ನ ವಿಸ್ತರಣೆಯನ್ನು ಮುಂದುವರೆಸುವ ವಿವಾದಾತ್ಮಕ ‘ಇ1 ವಸಾಹತು ಯೋಜನೆ’ಗೆ ಸಹಿ ಹಾಕಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ‘ಪ್ಯಾಲೆಸ್ತೀನ್ ರಾಜ್ಯವೇ ಇರುವುದಿಲ್ಲ’ ಎಂದು ವಿನಾಶಕಾರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಜೆರುಸಲೆಮ್‌ನಲ್ಲಿರುವ ಮಾಲೆ ಆ್ಯಡುಮಿನ್ ಇಸ್ರೇಲಿ ವಸಾಹತುವಿನಲ್ಲಿ ನಡೆದ ಸಮಾರಂಭದಲ್ಲಿ ನೆತನ್ಯಾಹು ಅವರು ಪ್ಯಾಲೆಸ್ತೀನ್ಅನ್ನು ನಿರ್ನಾಮ ಮಾಡುವ ಕ್ರೌರ್ಯದ ಮಾತುಗಳನ್ನಾಡಿದ್ದಾರೆ. “ನಾವು ಪ್ಯಾಲೆಸ್ತೀನ್ ರಾಜ್ಯ ಇರುವುದಿಲ್ಲ ಎಂಬ ನಮ್ಮ ಭರವಸೆಯನ್ನು ಈಡೇರಿಸಲಿದ್ದೇವೆ. ಈ ಸ್ಥಳವು ನಮಗೆ ಸೇರಿದೆ. ನಾವು ನಮ್ಮ ಪರಂಪರೆ, ನಮ್ಮ ಭೂಮಿ ಹಾಗೂ ನಮ್ಮ ಭದ್ರತೆಯನ್ನು ರಕ್ಷಿಸುತ್ತೇವೆ… ನಾವು ಮಾಲೆ ಆ್ಯಡುಮಿನ್ ನಗರದ ಜನಸಂಖ್ಯೆಯನ್ನು ದ್ವಿಗುಣಗೊಳಿಸಲಿದ್ದೇವೆ” ಎಂದು ಹೇಳಿದ್ದಾರೆ.
ಜೆರುಸಲೆಮ್ ಮತ್ತು ಮಾಲೆ ಅಡುಮಿಮ್ ನಡುವಿನ ಸುಮಾರು 12 ಚದರ ಕಿಲೋಮೀಟರ್ ಭೂಮಿಯನ್ನು ಇಸ್ರೇಲ್ ತೆಕ್ಕೆಗೆ ತೆಗೆದುಕೊಳ್ಳುವ ದುರುದ್ದೇಶವನ್ನು ಈ ವಿವಾದಾತ್ಮಕ, ಆಕ್ರಮಣಕಾರಿ ‘ಇ1 ವಸಾಹತು ಯೋಜನೆ’ ಒಳಗೊಂಡಿದೆ. ಈ ಯೋಜನೆಯು ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ವಿರೋಧವನ್ನು ಎದುರಿಸುತ್ತಿದೆ. ಆದರೂ, ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆಂದು ನೆತನ್ಯಾಹು ಹೇಳುತ್ತಿದ್ದಾರೆ.
AFP ಪ್ರಕಾರ, ಈ ಸ್ಥಳವು ಪ್ಯಾಲೆಸ್ತೀನಿಯನ್ ಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವನ್ನು ಒಳಗೊಂಡಿದೆ. ಈ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದರಿಂದ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯನ್ನು ಪೂರ್ವ ಜೆರುಸಲೆಮ್‌ನಿಂದ ಬೇರ್ಪಡಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪೂರ್ವ ಜೆರುಸಲೆಮ್ಅನ್ನು ಪ್ಯಾಲೆಸ್ತೀನಿಯರು ತಮ್ಮ ಭವಿಷ್ಯದ ರಾಜಧಾನಿಯಾಗಿ ನೋಡುತ್ತಿದ್ದಾರೆ.
2025ರ ಆಗಸ್ಟ್‌ನಲ್ಲಿ E1 ಯೋಜನೆಗೆ ಇಸ್ರೇಲ್ ಸರ್ಕಾರದಿಂದ ಅಂತಿಮ ಯೋಜನಾ ಅನುಮೋದನೆ ದೊರೆಯಿತು. ಅತಿಕ್ರಮಣ ಮತ್ತು ನಿರ್ಮಾಣಕ್ಕೆ ಅನುಮತಿ ನೀಡಿತು. ಈ ಯೋಜನೆಗೆ ಸೆಪ್ಟೆಂಬರ್ 11ರಂದು ಸಹಿ ಹಾಕುವ ಸಮಾರಂಭವು ನಡೆದಿದೆ. ಮುಂದಿನ ದಿನಗಳಲ್ಲಿ ಯೋಜಿತ ಪ್ರದೇಶದಲ್ಲಿ 3,412 ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಇಸ್ರೇಲ್ ರಕ್ಷಣಾ ಸಚಿವಾಲಯದ ನಾಗರಿಕ ಆಡಳಿತವು ಯೋಜಿಸಿದೆ.
1967ರಿಂದ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಅತಿಕ್ರಮಿಸಿಕೊಂಡಿರುವ ಎಲ್ಲ ಇಸ್ರೇಲಿ ವಸಾಹತುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಈ ವಸಾಹತುಗಳು ಇಸ್ರೇಲಿ ಯೋಜನಾ ಅನುಮತಿಯನ್ನು ಹೊಂದಿದ್ದರೂ, ಅದನ್ನು ಇತರ ರಾಷ್ಟ್ರಗಳು ವಿರೋಧಿಸಿವೆ ಮತ್ತು ಆತಂಕ ವ್ಯಕ್ತಪಡಿಸಿವೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ಸರ್ಕಾರಗಳು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಭೆಯಲ್ಲಿ ಪ್ಯಾಲೆಸ್ತೀನ್ ರಾಜ್ಯವನ್ನು ಗುರುತಿಸಿ, ಗಡಿಯನ್ನು ಘೋಷಿಸುವ ತಯಾರಿ ನಡೆಸುತ್ತಿವೆ.




