ನಾಸಾದ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಬ್ಬಂದಿಯೊಬ್ಬರ ಅನಾರೋಗ್ಯ ಕಾರಣಕ್ಕೆ ಬಾಹ್ಯಾಕಾಶದ ಕಾರ್ಯಾಚರಣೆಯನ್ನು ಮೊಟಕುಗೊಳಿಸಿ ಗಗನಯಾನಿಗಳನ್ನು ಮರಳಿ ಭೂಮಿಗೆ ಕರೆದುಕೊಂಡ ಅಪರೂಪದ ಘಟನೆ ನಡೆದಿದೆ.
ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ (ISS) ಕಾರ್ಯನಿರ್ವಹಿಸುತ್ತಿದ್ದ Crew-11 ತಂಡ, ಯೋಜನೆಯಂತೆ ಫೆಬ್ರವರಿ ತಿಂಗಳವರೆಗೂ ಅಂತರಿಕ್ಷದಲ್ಲಿರಬೇಕಿತ್ತು. ಆದರೆ, ಕಕ್ಷೆಯಲ್ಲಿ ಉಂಟಾದ ಸಿಬ್ಬಂದಿಯ ಆರೋಗ್ಯ ಸಮಸ್ಯೆಯ ಕಾರಣದಿಂದ ಯೋಜಿತ ಅವಧಿಗಿಂತ ಸುಮಾರು ಒಂದು ತಿಂಗಳು ಮುಂಚಿತವಾಗಿಯೇ ಮಿಷನ್ ಅನ್ನು ಮುಕ್ತಾಯಗೊಳಿಸಲಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ʼSplash downʼ (ಸಾಗರದ ಮೇಲೆ ಪ್ಯಾರಾಚೂಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಪ್ರಕ್ರಿಯೆ) ಮೂಲಕ ನಾಲ್ವರು ಅಂತರಿಕ್ಷಯಾತ್ರಿಗಳ ತಂಡ ನಿನ್ನೆ (ಜ.15) ಬೆಳಗಿನ ಜಾವ ಸುರಕ್ಷಿತವಾಗಿ ಭೂಮಿಗೆ ಮರಳಿದೆ.
ನಾಸಾ ಅಂತರಿಕ್ಷಯಾತ್ರಿಗಳಾದ ಝೀನಾ ಕಾರ್ಡ್‌ಮನ್ ಮತ್ತು ಮೈಕ್ ಫಿಂಕೆ, ಜಪಾನ್‌ನ ಕಿಮಿಯಾ ಯುಯಿ ಹಾಗೂ ರಷ್ಯಾದ ಕೋಸ್ಮೊನಾಟ್ ಒಲೆಗ್ ಪ್ಲಾಟೋನೋವ್ ಅವರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸ್ಯೂಲ್, ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಸಮೀಪ ಸಾಗರದ ಮೇಲೆ ಲ್ಯಾಂಡ್ ಆಗಿದೆ. ಅಂತರಿಕ್ಷ ನಿಲ್ದಾಣದಿಂದ ಹೊರಟ ಬಳಿಕ ಸುಮಾರು 11 ಗಂಟೆಗಳ ಪ್ರಯಾಣದ ನಂತರ ಕ್ಯಾಪ್ಸ್ಯೂಲ್ ಸಮುದ್ರವನ್ನು ತಲುಪಿತು. ಕ್ಯಾಪ್ಸ್ಯೂಲ್ ನೀರನ್ನು ತಾಕಿದ ಕೂಡಲೇ, “ಸ್ಪೇಸ್‌ಎಕ್ಸ್ ಮತ್ತು ನಾಸಾ ಪರವಾಗಿ, Crew-11ಗೆ ಸ್ವಾಗತ” ಎಂದು ಮಿಷನ್ ಕಂಟ್ರೋಲ್ ಸಿಬ್ಬಂದಿ ರೇಡಿಯೋ ಮೂಲಕ ಅಂತರಿಕ್ಷಯಾತ್ರಿಗಳಿಗೆ ಸಂದೇಶ ರವಾನಿಸಿದರು.
ಸ್ಪ್ಲ್ಯಾಶ್ ಡೌನ್‌ನ ಸುಮಾರು 50 ನಿಮಿಷಗಳ ನಂತರ, ಮೊದಲಾಗಿ ಮೈಕ್ ಫಿಂಕೆ ಅವರನ್ನು ಕ್ಯಾಪ್ಸ್ಯೂಲ್‌ನಿಂದ ಹೊರತೆಗೆದು, ಬಳಿಕ ಕ್ರಮವಾಗಿ ಕಾರ್ಡ್‌ಮನ್, ಯುಯಿ ಮತ್ತು ಪ್ಲಾಟೋನೋವ್ ಹೊರಬಂದರು. ಎಲ್ಲರೂ ನಗುತ್ತಾ, ಕ್ಯಾಮೆರಾಗಳತ್ತ ಕೈಬೀಸಿ ಸಂಭ್ರಮ ವ್ಯಕ್ತಪಡಿಸಿದರು. Crew-11 ತಂಡವು ಒಟ್ಟು 165 ದಿನಗಳ ಕಾಲ ಅಂತರಿಕ್ಷ ನಿಲ್ದಾಣದಲ್ಲಿ ವಾಸವಿತ್ತು. ಇದು ಕಾರ್ಡ್‌ಮನ್ ಮತ್ತು ಪ್ಲಾಟೋನೋವ್‌ರ ಮೊದಲ ಅಂತರಿಕ್ಷಯಾನವಾಗಿದ್ದು, ಯುಯಿಯ ಎರಡನೇ ಯಾನ. ಫಿಂಕೆ ಅವರಿಗೆ ಇದು ನಾಲ್ಕನೇ ಅಂತರಿಕ್ಷಯಾನವಾಗಿದೆ.

ಸ್ಪ್ಲ್ಯಾಶ್ ಡೌನ್ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮನ್, “ನಾಲ್ವರೂ ಸುರಕ್ಷಿತರಾಗಿದ್ದು, ಉತ್ತಮ ಮನಸ್ಥಿತಿಯಲ್ಲಿದ್ದಾರೆ. ಎಲ್ಲಾ ಸಿಬ್ಬಂದಿಯೂ ಎಂದಿನಂತೆ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡುತ್ತಿದ್ದಾರೆ. ಆರೋಗ್ಯ ಸಮಸ್ಯೆ ಕಂಡುಬಂದಿದ್ದ ಸಿಬ್ಬಂದಿಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಆತಂಕದ ವಿಷಯ ಇಲ್ಲ. ಅಗತ್ಯ ಸಮಯದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು” ಎಂದು ಅವರು ಹೇಳಿದರು. ಆದರೆ, ವೈದ್ಯಕೀಯ ಗೌಪ್ಯತೆಯ ಕಾರಣದಿಂದ, ಯಾವ ಅಂತರಿಕ್ಷಯಾತ್ರಿಗೆ ಆರೋಗ್ಯ ಸಮಸ್ಯೆ ಎದುರಾಯಿತು ಎಂಬುದನ್ನಾಗಲೀ, ಆ ಸಮಸ್ಯೆಯ ಸ್ವರೂಪವನ್ನಾಗಲೀ ನಾಸಾ ಬಹಿರಂಗಪಡಿಸಿಲ್ಲ.
ಐಸಾಕ್‌ಮನ್ ಈ ಘಟನೆಗೆ ʼಕಕ್ಷೆಯಲ್ಲಿ ಎದುರಾದ ಗಂಭೀರ ಪರಿಸ್ಥಿತಿʼ ಎಂಬ ವಿವರಣೆ ನೀಡಿದ್ದಾರೆ. ಆದರೂ, ಸಂಬಂಧಿತ ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಸ್ಥಿರ ಸ್ಥಿತಿಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಅಪಾಯವನ್ನು ಲಘುವಾಗಿ ಪರಿಗಣಿಸದೇ, ಅತ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿಯೇ ನಾಸಾ ತಿಳಿಸಿತ್ತು.
ಸದ್ಯ ಈ ವೈದ್ಯಕೀಯ ಸಮಸ್ಯೆಯ ಪರಿಣಾಮವಾಗಿ, ಜನವರಿ 8ರಂದು ನಡೆಯಬೇಕಿದ್ದ ಸ್ಪೇಸ್‌ವಾಕ್ ಅನ್ನು ನಾಸಾ ರದ್ದುಗೊಳಿಸಿತ್ತು. ಆ ಸ್ಪೇಸ್‌ವಾಕ್‌ನಲ್ಲಿ ಝೀನಾ ಕಾರ್ಡ್‌ಮನ್ ಮತ್ತು ಮೈಕ್ ಫಿಂಕೆ ಅಂತರಿಕ್ಷ ನಿಲ್ದಾಣದ ಹೊರಭಾಗದ ತಾಂತ್ರಿಕ ಸುಧಾರಣೆ ಕಾರ್ಯಗಳಲ್ಲಿ ತೊಡಗಬೇಕಿತ್ತು. ಇದೇ ರೀತಿ, ಗುರುವಾರ ಬೆಳಗ್ಗೆ ನಡೆಯಬೇಕಿದ್ದ ಮತ್ತೊಂದು ಸ್ಪೇಸ್‌ವಾಕ್ ಕೂಡ ಮುಂದೂಡಲ್ಪಟ್ಟಿದೆ. ಅಂತರಿಕ್ಷ ನಿಲ್ದಾಣವನ್ನು ತೊರೆಯುವ ಮುನ್ನ, ಫಿಂಕೆ ತಮ್ಮ ಹಾಗೂ ಸಹಯಾತ್ರಿಗಳ ಸ್ಥಿತಿಯನ್ನು ಸ್ಥಿರ, ಸುರಕ್ಷಿತ ಮತ್ತು ಸೂಕ್ತ ಆರೈಕೆಯಲ್ಲಿರುವುದಾಗಿ ವಿವರಿಸಿದ್ದರು. ಭೂಮಿಗೆ ಮರಳುವ ನಿರ್ಧಾರದ ಕುರಿತು ಫಿಂಕೆ ತಮ್ಮ ಲಿಂಕ್ಡ್‌ಇನ್ ಹೇಳಿಕೆಯಲ್ಲಿ, “ಪೂರ್ಣ ಪ್ರಮಾಣದ ವೈದ್ಯಕೀಯ ಪರೀಕ್ಷೆಗಳು ಸಾಧ್ಯವಾಗುವ ಭೂಮಿಯ ಮೇಲೆಯೇ ಅಗತ್ಯ ಮೌಲ್ಯಮಾಪನ ನಡೆಯಬೇಕು ಎಂಬ ಉದ್ದೇಶದಿಂದ ತೆಗೆದುಕೊಳ್ಳಲಾದ ಇದು ಜಾಣ್ಮೆಯ ನಿರ್ಧಾರ. ಸ್ವಲ್ಪ ವಿಷಾದಕರವಾದರೂ, ಇದು ಸರಿಯಾದ ತೀರ್ಮಾನ” ಎಂದು ಬರೆದುಕೊಂಡಿದ್ದಾರೆ. ಅಂತರಿಕ್ಷಯಾತ್ರಿಗಳು ಅಂತರಿಕ್ಷ ನಿಲ್ದಾಣಕ್ಕೆ ಹೋಗಿದ್ದ ಅದೇ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸ್ಯೂಲ್‌ನಲ್ಲಿಯೇ ಭೂಮಿಗೆ ವಾಪಸ್ ಆಗಿದ್ದಾರೆ.
ಭೂಮಿಗೆ ಮರಳುವ ಪ್ರಯಾಣ ಸಂಪೂರ್ಣ ಸುಗಮವಾಗಿದ್ದು, ಜಲಾವತರಣ ಪ್ರದೇಶದಲ್ಲಿ ಅತ್ಯುತ್ತಮ ಹವಾಮಾನವಿತ್ತು ಎಂದು ನಾಸಾದ ಮಿಷನ್ ಕಂಟ್ರೋಲ್ ತಿಳಿಸಿದೆ. ಕ್ಯಾಪ್ಸ್ಯೂಲ್ ಇಳಿಯುವ ಮುನ್ನ ಡ್ರೋಗ್ ಹಾಗೂ ಮುಖ್ಯ ಪ್ಯಾರಾಚೂಟ್‌ಗಳು ಯಶಸ್ವಿಯಾಗಿ ತೆರೆದುಕೊಂಡು, ವೇಗವನ್ನು ನಿಧಾನಗೊಳಿಸಿದವು. ಜಲಾವತರಣದ ಕೆಲವೇ ನಿಮಿಷಗಳಲ್ಲಿ ಸ್ಪೇಸ್‌ಎಕ್ಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿ ಕ್ಯಾಪ್ಸ್ಯೂಲ್ ಪರಿಶೀಲಿಸಿದರು. ಸಮುದ್ರದ ಮೇಲ್ಮೈಯಲ್ಲಿ ತೇಲುತ್ತಿದ್ದ ಕ್ಯಾಪ್ಸ್ಯೂಲ್ ಸುತ್ತ ಡಾಲ್ಫಿನ್‌ಗಳು ಆಟವಾಡುತ್ತಿದ್ದ ದೃಶ್ಯವೂ ಗಮನ ಸೆಳೆದಿದೆ.


ನಾಸಾದ ಸ್ಪೇಸ್ ಆಪರೇಷನ್ಸ್ ಮಿಷನ್ ನಿರ್ದೇಶನಾಲಯದ ಉಪ ಸಹ ಆಡಳಿತಾಧಿಕಾರಿ ಜೋಯಲ್ ಮೊಂಡಾಲ್ಬಾನೋ, “ಮುಂದಿನ Crew-12 ಮಿಷನ್‌ಗಾಗಿ ಸರಿಯಾದ ಸಮಯವನ್ನು ನಿರ್ಧರಿಸಲು ಅಂತರಿಕ್ಷ ನಿಲ್ದಾಣದ ಅಗತ್ಯಗಳು ಹಾಗೂ ಫೆಬ್ರವರಿಯಲ್ಲಿ ನಡೆಯಲಿರುವ ಇತರ ಉಡಾವಣೆಗಳನ್ನೂ ಪರಿಗಣಿಸಲಾಗುವುದು” ಎಂದು ತಿಳಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುದು ಆರ್ಟೆಮಿಸ್-II ಮಿಷನ್. ನಾಲ್ವರು ಅಂತರಿಕ್ಷ ಯಾತ್ರಿಗಳನ್ನು ಚಂದ್ರನ ಸುತ್ತ ಸುಮಾರು 10 ದಿನಗಳ ಯಾನಕ್ಕೆ ಕರೆದೊಯ್ಯುವ ಈ ಪರೀಕ್ಷಾ ಮಿಷನ್, ನಾಸಾದ ಭವಿಷ್ಯದ ಚಂದ್ರಯಾನ ಯೋಜನೆಗೆ ಅತ್ಯಂತ ನಿರ್ಣಾಯಕವಾಗಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸೋಮನಾಥ ಮಂದಿರ ಮರುನಿರ್ಮಾಣವನ್ನು ವಿರೋಧಿಸಿದ್ದರೇ ನೆಹರೂ? ಆ ಕಾಲಮಾನ ಯಾವುದು?
ಸಾಮಾನ್ಯವಾಗಿ ಅಂತರಿಕ್ಷಯಾತ್ರಿಗಳಿಗೆ ಭೂಮಿಯಲ್ಲಿ ವರ್ಷಗಳ ಕಾಲ ಕಠಿಣ ವೈದ್ಯಕೀಯ ಹಾಗೂ ದೈಹಿಕ ತರಬೇತಿ ನೀಡಲಾಗುತ್ತದೆ. ಆದರೂ, ಮೈಕ್ರೋಗ್ರಾವಿಟಿ ಪರಿಸರದಲ್ಲಿ ಮಾನವ ದೇಹ ಎದುರಿಸುವ ಸವಾಲುಗಳು ಸಂಪೂರ್ಣವಾಗಿ ಊಹಿಸಲಾಗದವು. ರಕ್ತಸಂಚಾರದಲ್ಲಿ ಬದಲಾವಣೆ, ರೋಗನಿರೋಧಕ ಶಕ್ತಿಯ ಕುಸಿತ, ಸ್ನಾಯು ಮತ್ತು ಎಲುಬಿನ ದುರ್ಬಲತೆ ಸೇರಿದಂತೆ ಹಲವು ಸಮಸ್ಯೆಗಳು ದೀರ್ಘಾವಧಿಯ ಅಂತರಿಕ್ಷ ವಾಸದ ವೇಳೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲೇ, ವೈದ್ಯಕೀಯ ಅಪಾಯವನ್ನು ನಿರ್ಲಕ್ಷಿಸುವ ಬದಲು ಮುನ್ನೆಚ್ಚರಿಕೆ ಕ್ರಮವಾಗಿ ಮಿಷನ್ ಕಡಿತಗೊಳಿಸಿರುವುದಾಗಿ ನಾಸಾ ವಿವರಿಸಿದೆ. ಆದರೆ, ಯಾವ ಸಿಬ್ಬಂದಿಗೆ ಯಾವ ಸಮಸ್ಯೆ ಉಂಟಾಗಿತ್ತು ಎಂಬುದರ ಕುರಿತು ನಾಸಾ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ.
ಅಂತರಿಕ್ಷ ಅನ್ವೇಷಣೆಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮಾನವ ದೇಹದ ಆರೋಗ್ಯವೇ ಅಂತಿಮ ಮಿತಿ ಎಂಬ ಸತ್ಯವನ್ನು ಈ ಘಟನೆ ಮತ್ತೆ ನೆನಪಿಸಿದೆ. ಗುರಿಗಿಂತಲೂ ಜೀವ ಅಮೂಲ್ಯ ಎಂಬ ತತ್ವವನ್ನು ಮುಂದಿಟ್ಟು ನಾಸಾ ತೆಗೆದುಕೊಂಡ ಈ ಅಪರೂಪದ ನಿರ್ಧಾರ, ಅಂತರಿಕ್ಷ ವಿಜ್ಞಾನದ ಮುಂದಿನ ಅಧ್ಯಾಯಗಳಿಗೆ ಮಹತ್ವದ ಪಾಠವಾಗಿ ಉಳಿಯಲಿದೆ.





