ಇರಾನ್‌ನಲ್ಲಿ ಬೆಲೆ ಏರಿಕೆ ವಿರುದ್ಧ ಆರಂಭವಾಗಿದ್ದ ಪ್ರತಿಭಟನೆ ಇದೀಗ ಆಡಳಿತ ವಿರೋಧಿ ದಂಗೆಯಾಗಿ ಮಾರ್ಪಟ್ಟಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 500ರ ಗಡಿ ದಾಟಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಡುವಿನ ವಾಕ್ಸಮರ ತೀವ್ರಗೊಂಡಿದೆ.
ಅಮೆರಿಕವು ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯಂತಹ ಕಠಿಣ ಕ್ರಮಗಳನ್ನು ಪರಿಗಣಿಸುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ, ಖಮೇನಿ ಅವರು ಟ್ರಂಪ್ ಅವರನ್ನು ‘ಪತನಗೊಳ್ಳಲಿರುವ ದಬ್ಬಾಳಿಕೆಕೋರ’ ಎಂದು ಜರೆಯುವ ಮೂಲಕ ತಿರುಗೇಟು ನೀಡಿದ್ದಾರೆ.
ಟ್ರಂಪ್ ವಿರುದ್ಧ ಖಮೇನಿ ವ್ಯಂಗ್ಯಚಿತ್ರ ಸಮರ
ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಟ್ವಿಟರ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಟ್ರಂಪ್ ಅವರನ್ನು ಶಿಥಿಲವಾಗುತ್ತಿರುವ ಪುರಾತನ ಶವಪೆಟ್ಟಿಗೆಯಂತೆ ಚಿತ್ರಿಸಿರುವ ಅವರು, “ಜಗತ್ತಿನ ಬಗ್ಗೆ ಅಹಂಕಾರದಿಂದ ತೀರ್ಪು ನೀಡುವ ಇವರೂ ಸಹ ಇತಿಹಾಸದ ಇತರ ಸರ್ವಾಧಿಕಾರಿಗಳಂತೆ ಪತನಗೊಳ್ಳಲಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
“ಫೇರೋ, ನಿಮ್ರೋಡ್, ರೆಜಾ ಖಾನ್ ಮತ್ತು ಮೊಹಮ್ಮದ್ ರೆಜಾ ಅವರಂತಹ ದಬ್ಬಾಳಿಕೆಕೋರರು ತಮ್ಮ ಅಹಂಕಾರದ ಉತ್ತುಂಗದಲ್ಲಿದ್ದಾಗಲೇ ಪತನಗೊಂಡರು. ಇದೇ ಹಾದಿಯಲ್ಲಿ ಈ ವ್ಯಕ್ತಿಯೂ (ಟ್ರಂಪ್) ಪತನಗೊಳ್ಳಲಿದ್ದಾರೆ,” ಎಂದು ಖಮೇನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇನಾ ಕ್ರಮದ ಎಚ್ಚರಿಕೆ ನೀಡಿದ ಟ್ರಂಪ್
ಇನ್ನೊಂದೆಡೆ, ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್‌ನಲ್ಲಿ ಅಮಾಯಕರು ಹತ್ಯೆಯಾಗುತ್ತಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸುತ್ತಿರುವ ನಾವು ಮತ್ತು ನಮ್ಮ ಮಿಲಿಟರಿ, ಪ್ರಬಲ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಎಚ್ಚರಿಕೆ ನಂತರ ಇರಾನ್ ನಾಯಕರು ಮಾತುಕತೆಗೆ ಮುಂದಾಗಿದ್ದಾರೆ ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.
ಮೃತರ ಸಂಖ್ಯೆ 500 ದಾಟಿದೆ: ಹ್ರಾನಾ ವರದಿ
ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ‘ಹ್ರಾನಾ’ (HRANA) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ಎರಡು ವಾರಗಳ ಹಿಂಸಾಚಾರದಲ್ಲಿ ಕನಿಷ್ಠ 490 ಪ್ರತಿಭಟನಾಕಾರರು ಮತ್ತು 48 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 538 ಜನರು ಮೃತಪಟ್ಟಿದ್ದಾರೆ. ಡಿಸೆಂಬರ್ 28 ರಂದು ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ಆರಂಭವಾದ ಪ್ರತಿಭಟನೆಗಳಲ್ಲಿ ಇದುವರೆಗೆ 10,600ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ





