ರಷ್ಯಾ ಜೊತೆ ವ್ಯಾಪಾರ ಸಂಬಂಧ ಹೊಂದಿರುವ, ತೈಲ ಖರೀದಿ ಮಾಡುತ್ತಿರುವ ರಾಷ್ಟ್ರಗಳಲ್ಲಿ ಒಂದಾದ ಚೀನಾದ ಮೇಲೆ 50%ರಿಂದ 100%ವರೆಗೆ ಸುಂಕ ವಿಧಿಸುವಂತೆ ಅಮೆರಿಕ ನೇತೃತ್ವದ ‘ನ್ಯಾಟೋ’ ಸದಸ್ಯ ರಾಷ್ಟ್ರಗಳಿಗೆ ಟ್ರಂಪ್ ಕರೆಕೊಟ್ಟಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಅಮೆರಿಕ 50% ತೆರಿಗೆ ವಿಧಿಸಿದೆ. ಆದಾಗ್ಯೂ, ಈ ಹಿಂದೆ, ಚೀನಾ ಮೇಲೆ ಹೆಚ್ಚು ಸುಂಕ ವಿಧಿಸಿದ್ದ ಟ್ರಂಪ್, ಚೀನಾದ ಪ್ರತಿ ಸುಂಕದಿಂದ ನಡುಬಗ್ಗಿಸಿತ್ತು. ಚೀನಾ ಮೇಲೆ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ಹಿಂಪಡೆದುಕೊಂಡಿತ್ತು. ಇದೀಗ, ಚೀನಾ ಮೇಲೆ ಗರಿಷ್ಠ ಸುಂಕ ವಿಧಿಸುವಂತೆ ‘ನ್ಯಾಟೋ’ ರಾಷ್ಟ್ರಗಳಿಗೆ ಟ್ರಂಪ್ ಕರೆಕೊಟ್ಟಿದ್ದಾರೆ.
ಉಕ್ರೇನ್-ರಷ್ಯಾ ನಡುವಿನ ಯುದ್ಧವನ್ನು ತಡೆಯುವ ಅಮೆರಿಕದ ಪ್ರಯತ್ನದಲ್ಲಿ ನ್ಯಾಟೋ ರಾಷ್ಟ್ರಗಳು ಕೈಜೋಡಿಸಬೇಕು. ಅದಕ್ಕಾಗಿ, ಉಕ್ರೇನ್ ಮೇಲಿನ ಯುದ್ಧವನ್ನು ಕೊನೆಗೊಳಿಸುವವರೆಗೆ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ.
“ಎಲ್ಲ ನ್ಯಾಟೋ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಲು ಒಪ್ಪಿದರೆ, ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಲು ಮುಂದಾದರೆ, ರಷ್ಯಾದ ಮೇಲೆ ದೊಡ್ಡ ನಿರ್ಬಂಧ ವಿಧಿಸಲು ನಾನು ಸಿದ್ಧನಿದ್ದೇನೆ. ಜೊತೆಗೆ, ರಷ್ಯಾ ಜೊತೆ ನಿಕಟ ಸಂಬಂಧ ಹೊಂದಿರುವ ಚೀನಾ ಮೇಲೆ 50ರಿಂದ 100% ಸುಂಕ ವಿಧಿಸಬೇಕು” ಎಂದಿದ್ದಾರೆ.




