ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ. ಇರಾನ್‌ನ ಇಂಧನ ನೆಲೆಗಳ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ‘ಫಲಪ್ರದ ಮಾತುಕತೆ’ಯ ನೆಪವೊಡ್ಡಿ ಟ್ರಂಪ್ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ, ಇದು ತಮ್ಮ ಎಚ್ಚರಿಕೆಗೆ ಅಮೆರಿಕ ಹೆದರಿ ತೆಗೆದುಕೊಂಡ ನಿರ್ಧಾರ ಎಂದು ಇರಾನ್ ತಿರುಗೇಟು ನೀಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಮಧ್ಯಪ್ರಾಚ್ಯದಲ್ಲಿನ ದ್ವೇಷವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಕಳೆದ 2 ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಅತ್ಯಂತ ಉತ್ತಮ ಮತ್ತು ಫಲಪ್ರದ ಮಾತುಕತೆಗಳು ನಡೆದಿವೆ. ಈ ರಚನಾತ್ಮಕ ಮಾತುಕತೆಗಳ ಆಧಾರದ ಮೇಲೆ, ಇರಾನ್‌ನ ವಿದ್ಯುತ್ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಮಿಲಿಟರಿ ದಾಳಿಯನ್ನು 5 ದಿನಗಳವರೆಗೆ ಮುಂದೂಡಲು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಈ ವಾರವಿಡೀ ನಡೆಯಲಿರುವ ಮಾತುಕತೆಗಳ ಯಶಸ್ಸಿನ ಮೇಲೆ ಮುಂದಿನ ನಿರ್ಧಾರ ನಿಂತಿದೆ ಎಂದೂ ಅವರು ತಿಳಿಸಿದ್ದಾರೆ.
ಅಮೆರಿಕದ ಈ ನಡೆಯನ್ನು ಕಟುವಾಗಿ ಟೀಕಿಸಿರುವ ಕಾಬೂಲ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು, ಇದು ಟ್ರಂಪ್ ಅವರ ‘ಹಿಮ್ಮೆಟ್ಟುವಿಕೆ’ ಎಂದು ವ್ಯಂಗ್ಯವಾಡಿದೆ. “ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದರೆ ಇಡೀ ಪ್ರದೇಶದ ಇಂಧನ ಮೂಲಸೌಕರ್ಯಗಳನ್ನೇ ನಾಶ ಮಾಡುವುದಾಗಿ ಇಸ್ಲಾಮಿಕ್ ರಿಪಬ್ಲಿಕ್ ಎಚ್ಚರಿಸಿದ ನಂತರ, ಟ್ರಂಪ್ ಹೆದರಿ ಹಿಂದೆ ಸರಿದಿದ್ದಾರೆ” ಎಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದೆ.
ಇದರ ನಡುವೆ, ಅಮೆರಿಕದ ಜೊತೆ ನೇರವಾಗಿಯಾಗಲಿ ಅಥವಾ ಮಧ್ಯವರ್ತಿಗಳ ಮೂಲಕವಾಗಲಿ ಯಾವುದೇ ಮಾತುಕತೆಯೇ ನಡೆದಿಲ್ಲ ಎಂದು ಇರಾನ್‌ನ ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್
ಹಾರ್ಮುಜ್ ಜಲಸಂಧಿಯನ್ನು 48 ಗಂಟೆಗಳ ಒಳಗೆ ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ‘ಹೊಡೆದು ಧ್ವಂಸ’ ಮಾಡುವುದಾಗಿ ಕೇವಲ ಒಂದು ದಿನದ ಹಿಂದೆಯಷ್ಟೇ ಟ್ರಂಪ್ ಅಹಂಕಾರದಿಂದ ಎಚ್ಚರಿಕೆ ನೀಡಿದ್ದರು. ಆದರೆ, ಅಮೆರಿಕದ ಈ ಬೆದರಿಕೆಗೆ ಕಿಂಚಿತ್ತೂ ಜಗ್ಗದ ಇರಾನ್, ದಾಳಿ ನಡೆದರೆ ತಕ್ಕ ಶಾಸ್ತಿ ಮಾಡುವುದಾಗಿ ಗುಡುಗಿತ್ತು. ಅಮೆರಿಕದ ಸೇನಾ ನೆಲೆಗಳಿಗೆ ಆಶ್ರಯ ನೀಡಿರುವ ದೇಶಗಳ ಇಂಧನ ಕೇಂದ್ರಗಳೇ ನಮ್ಮ ‘ಕಾನೂನುಬದ್ಧ’ ಗುರಿಯಾಗಲಿವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಖಲೀಬಾಫ್ ಎಚ್ಚರಿಸಿದ್ದರು. ಅಲ್ಲದೆ, ನಾಶವಾಗಿರುವ ತಮ್ಮ ವಿದ್ಯುತ್ ಸ್ಥಾವರಗಳನ್ನು ಮರುನಿರ್ಮಾಣ ಮಾಡುವವರೆಗೆ ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಯೇ ಇಡುವುದಾಗಿ ಟೆಹ್ರಾನ್ ಪಟ್ಟು ಹಿಡಿದಿತ್ತು.
ಇದನ್ನು ಓದಿದ್ದೀರಾ? 900 ಬಿಲಿಯನ್ ಡಾಲರ್ ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ಫೆಬ್ರವರಿ 28 ರಿಂದ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ಬಂದ್ ಮಾಡಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿತ್ತು. ಬ್ರೆಂಟ್ ಕಚ್ಚಾ ತೈಲದ ಬೆಲೆ ಭಾನುವಾರ ಬ್ಯಾರೆಲ್‌ಗೆ 119 ಡಾಲರ್ ಮುಟ್ಟಿ, ನಂತರ 110 ಡಾಲರ್ ಆಸುಪಾಸಿನಲ್ಲಿತ್ತು. ಆದರೆ, ಇರಾನ್ ಎದುರು ತಲೆಬಾಗಿ ಅಮೆರಿಕ ದಾಳಿ ಮುಂದೂಡಿದ ಬೆನ್ನಲ್ಲೇ ತೈಲ ಬೆಲೆ ಶೇ. 13 ರಷ್ಟು ದಿಢೀರ್ ಕುಸಿತ ಕಂಡು, ಕೊನೆಗೆ ಶೇ. 6.5 ರಷ್ಟು ಇಳಿಕೆಯೊಂದಿಗೆ 104 ಡಾಲರ್‌ಗೆ ತಲುಪಿದೆ.
ಅಮೆರಿಕವು ಮೇಲ್ನೋಟಕ್ಕೆ ರಾಜತಾಂತ್ರಿಕತೆಯ ನಾಟಕವಾಡುತ್ತಿದ್ದರೂ, ಅದರ ಮಿತ್ರರಾಷ್ಟ್ರ ಇಸ್ರೇಲ್ ಮೂಲಕ ತನ್ನ ಕುತಂತ್ರ ಮುಂದುವರಿಸಿದೆ. ಟ್ರಂಪ್ ಪೋಸ್ಟ್ ಮಾಡಿದ ಸ್ವಲ್ಪ ಸಮಯದಲ್ಲೇ, ಇಸ್ರೇಲ್ ಸೇನೆಯು ಟೆಹ್ರಾನ್‌ನ ಹೃದಯಭಾಗದಲ್ಲಿ ದಾಳಿ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಮೆರಿಕ ಮತ್ತು ಇಸ್ರೇಲ್‌ನ ಈ ಜಂಟಿ ದಾಳಿಗಳಿಗೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಕೊಲ್ಲಿಯ ಗುರಿಗಳ ಮೇಲೆ 400 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.





