ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. “ಇತಿಹಾಸದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ನನಗಿಂತ ಬೇರೆ ಯಾರೂ ಇಲ್ಲ. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ‘ಏನನ್ನೂ ಮಾಡದಿದ್ದರೂ’ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ” ಎಂದು ಟ್ರಂಪ್ ಹೇಳಿದ್ದಾರೆ.
ವೆನೆಜುವೆಲಾದ ತೈಲ ನಿಕ್ಷೇಪಗಳಿಗೆ ಸಂಬಂಧಿಸಿದಂತೆ ಶ್ವೇತಭವನದಲ್ಲಿ ತೈಲ ಮತ್ತು ಅನಿಲ ತಜ್ಞರೊಂದಿಗೆ ನಡೆದ ಸಭೆಯಲ್ಲಿ ಟ್ರಂಪ್ ಮಾತನಾಡಿದ್ದಾರೆ. “ಕಳೆದ ವರ್ಷ ಮೇ ತಿಂಗಳಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಎಂಟು ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆ ಸಂಘರ್ಷವನ್ನು ನಾನು ನಿಲ್ಲಿಸಿದ್ದೇನೆ. ಜನರು ಟ್ರಂಪ್ ಅವರನ್ನು ಇಷ್ಟಪಡುತ್ತಾರೋ ಅಥವಾ ಇಲ್ಲವೋ… ನೋಡಿ, ನಾನು ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಕಳೆದ ವರ್ಷ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ (ಭಾರತ-ಪಾಕ್_ ನಡುವಿನ ಸಂಘರ್ಷವನ್ನು ನಿಲ್ಲಿಸಿದ ಕೀರ್ತಿಗಾಗಿ ನನ್ನನ್ನು ಅಭಿನಂದಿಸಿದರು” ಎಂದು ಟ್ರಪ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ತಮಿಳುನಾಡು ಚುನಾವಣೆ | ದಳಪತಿ ವಿಜಯ್ ಸೆಳೆಯಲು ಖೆಡ್ಡಾ ತೋಡಿತೇ ಬಿಜೆಪಿ?
ಭಾರತ-ಪಾಕ್ ಸಂಘರ್ಷವನ್ನು ನಿಲ್ಲಿಸಿದ್ದು ತಾವೇ ಎಂದು ಟ್ರಂಪ್ ಈವರೆಗೆ ಸುಮಾರು 65ಕ್ಕೂ ಹೆಚ್ಚು ಬಾರಿ ಹೇಳಿಕೊಂಡಿದ್ದಾರೆ. ಅವರು 2025ರ ಮೇ 10ರಂದು ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದೀರ್ಘ ರಾತ್ರಿಯ ಮಾತುಕತೆ ನಡೆಸಿದ್ದೇನೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಇದಾದ, ಕೆಲವೇ ಗಂಟೆಗಳಲ್ಲಿ ಭಾರತ-ಪಾಕ್ ಕದನ ವಿರಾಮ ಘೋಷಿಸಿದವರು. ಅಂದಿನಿಂದಲೂ ಈ ಬಗ್ಗೆ ಟ್ರಂಪ್ ಪದೇ-ಪದೇ ಹೇಳಿಕೊಳ್ಳುತ್ತಿದ್ದಾರೆ. ಟ್ರಂಪ್ ಅವರ ಮಾತನನ್ನು ಭಾರತದ ವಿದೇಶಾಂಗ ಸಚಿವಾಲಯ ನಿರಾಕರಿಸಿದ್ದರೂ, ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು, ಟ್ರಂಪ್ ತಾವು 2ನೇ ಅವಧಿಗೆ ಅಧಿಕಾರಕ್ಕೆ ಮರಳಿದ ನಂತರ, ಎಂಟು ತಿಂಗಳೊಳಗೆ ಎಂಟು ಯುದ್ಧಗಳನ್ನು ನಿಲ್ಲಿಸಿದ್ಧೇನೆ. ನಾನು ನಿಲ್ಲಿಸಿರುವ ಪ್ರತಿಯೊಂದು ಯುದ್ಧಕ್ಕೂ ನನಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಟ್ರಂಪ್ ಹೇಳುತ್ತಲೇ ಇದ್ದಾರೆ. 2009ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಬರಾಕ್ ಒಬಾಮಾ ಅವರನ್ನು ಟ್ರಂಪ್ ಟೀಕಿಸಿದ್ದಾರೆ. “ಅವರಿಗೆ ಏಕೆ ಪ್ರಶಸ್ತಿ ಸಿಕ್ಕಿತು ಎಂಬುದು ಗೊತ್ತಿಲ್ಲ. ಅವರು ಶಾಂತಿಗಾಗಿ ಏನನ್ನೂ ಮಾಡಿಲ್ಲ” ಎಂದಿದ್ದಾರೆ.
“ಇತಿಹಾಸದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯಬಹುದಾದವರಲ್ಲಿ ನನಗಿಂತ ಮಿಗಿಲಾದ ವ್ಯಕ್ತಿ ಯಾರೂ ಇಲ್ಲ. ಒಬಾಮಾ ಕೆಟ್ಟ ಅಧ್ಯಕ್ಷ” ಎಂದು ಟ್ರಂಪ್ ಹೇಳಿದ್ದಾರೆ.




