“ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎನ್ನಲಾಗುತ್ತಿದೆ. ಇದು ಉತ್ತಮ ನಿರ್ಧಾರ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಹಾಗೆಯೇ ಇದು ಖಚಿತವಿಲ್ಲ ಎಂಬುದನ್ನೂ ಟ್ರಂಪ್ ಒಪ್ಪಿಕೊಂಡಿದ್ದಾರೆ.
“ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಇದು ನನಗೆ ಕೇಳಿ ಬಂದಿರುವ ಮಾಹಿತಿ, ಇದು ಸರಿಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಇದು ಉತ್ತಮ ನಿರ್ಧಾರ. ಏನಾಗುತ್ತದೆ ಎಂದು ನಾವು ನೋಡುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ವರದಿಗಾರರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ? ಭಾರತದ ಮೇಲೆ ಶೇ 25ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಸುಳಿವು
ಇತ್ತೀಚೆಗೆ ರಷ್ಯಾದ ತೈಲ ಖರೀದಿಸಿದ್ದಕ್ಕಾಗಿ ಭಾರತದ ವಿರುದ್ಧ ಟ್ರಂಪ್ ಅವರು ಟೀಕೆ ಮಾಡಿದ್ದರು. ಅದಾದ ಬಳಿಕ ಅಮೆರಿಕಕ್ಕೆ ಎಲ್ಲಾ ರಫ್ತುಗಳ ಮೇಲೆ ಶೇಕಡ 25ರಷ್ಟು ಸುಂಕವನ್ನು ವಿಧಿಸಲು ಮತ್ತು ರಷ್ಯಾದ ಇಂಧನವನ್ನು ಖರೀದಿಸಲು ಅನಿರ್ದಿಷ್ಟ ಹೆಚ್ಚುವರಿ ‘ದಂಡ’ ವಿಧಿಸಲು ಶ್ವೇತಭವನ ನಿರ್ಧರಿಸಿದೆ. ಇದಾದ ಕೆಲವು ದಿನಗಳ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್, ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾ ಮಿಲಿಟರಿ ಉಪಕರಣಗಳು ಮತ್ತು ಇಂಧನವನ್ನು ಖರೀದಿಸುವುದನ್ನು ಮುಂದುವರಿಸಿದ ಭಾರತವನ್ನು ಟೀಕಿಸಿದ್ದರು. ಹಾಗೆಯೇ ಭಾರತ ಅತ್ಯಧಿಕ ಸುಂಕವನ್ನು ವಿಧಿಸುತ್ತದೆ ಎಂದೂ ಆಗಾಗ ಟೀಕಿಸುತ್ತಿದ್ದಾರೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಖರೀದಿದಾರ ದೇಶವಾಗಿದೆ. ಶುಕ್ರವಾರ, ಸುದ್ದಿ ಸಂಸ್ಥೆ ರಾಯಿಟರ್ಸ್ ಕೆಲವು ಮೂಲಗಳನ್ನು ಉಲ್ಲೇಖಿಸಿ ದೇಶದ ತೈಲ ಸಂಸ್ಕರಣಾಗಾರರು ಕಳೆದ ವಾರದಿಂದ ರಷ್ಯಾದ ತೈಲವನ್ನು ಖರೀದಿಸಿಲ್ಲ ಎಂದು ವರದಿ ಮಾಡಿದೆ. ಈ ಬೆನ್ನಲ್ಲೇ ಟ್ರಂಪ್ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದು ಕೇಳಿಬಂದಿದೆ ಎಂದು ಹೇಳಿದ್ದಾರೆ.





