ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವ ಸಂಸ್ಥೆ ಎಂದು ಹೇಳಿರುವ “ಶಾಂತಿ ಮಂಡಳಿ” ಎಂದು ಕರೆಯಲ್ಪಡುವ ಚಾರ್ಟರ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ದಾವೋಸ್‌ನಲ್ಲಿ ಇತರ ಸ್ಥಾಪಕ ಸದಸ್ಯರೊಂದಿಗೆ ಸಹಿ ಹಾಕಿದರು.
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಿ ಮಂಡಳಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, “ಗಾಜಾ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಈ ‘ಶಾಂತಿ ಮಂಡಳಿ’ಯನ್ನು ಸ್ಥಾಪಿಸಲಾಗಿದೆ. ಈ ಮಂಡಳಿಯ ನಿಯಮದಂತೆ ಹಮಾಸ್ ಶಸ್ತ್ರವನ್ನು ತ್ಯಜಿಸಬೇಕು. ಇಲ್ಲವಾದರೆ ಅವರ ಚಳುವಳಿ ಅಂತ್ಯವಾಗುತ್ತದೆ” ಎಚ್ಚರಿಕೆ ಸಂದೇಶ ಕೊಟ್ಟರು.
“ಟ್ರಂಪ್ ಅವರಿಗೆ ಅಭಿನಂದನೆಗಳು, ಶಾಂತಿ ಮಂಡಳಿ ಸಂಪೂರ್ಣವಾಗಿ ಜಾರಿಯಲ್ಲಿದೆ ಹಾಗೂ ಶಾಂತಿ ಮಂಡಳಿ ಈಗ ಅಧಿಕೃತವಾಗಿ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ” ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸಹಿ ಸಮಾರಂಭದಲ್ಲಿ ಹೇಳಿದ್ದಾರೆ.
“ಎರಡನೇ ಅವಧಿಯಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಎಂಟು ಯುದ್ಧಗಳನ್ನು ನಿಲ್ಲಿಸಿದ್ದಾರೆ. ಇರಾನ್ ನಲ್ಲಿ ನಡೆಯುತ್ತಿದ್ದ ಹೋರಾಟವನ್ನು ಬೆಂಬಲಿಸಿದ್ದಾರೆ. ಹಲವು ರಾಷ್ಟ್ರಗಳು ಟ್ರಂಪ್ ಜೊತೆಗೆ ಕೈಜೊಡಿಸಿ ಶಾಂತಿ ಮಂಡಳಿಯನ್ನು ಸ್ಥಾಪಿಸಲು ನೆರವಾಗಿವೆ” ಎಂದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತನಾಡಿ “ಟ್ರಂಪ್ ಶಾಂತಿಯ ಮಾತುಕತೆಗಾಗಿ ಯಾರೊಂದಿಗಾದರೂ ಮಾತನಾಡಲು ಸಿದ್ಧರಿದ್ದಾರೆ. ಅವರ ದೂರದೃಷ್ಟಿಯ ಕಾರಣದಿಂದ ನಾವು ಇಲ್ಲಿದ್ದೇವೆ” ಎಂದು ಬಣ್ಣಿಸಿದರು.
ಇದನ್ನು ಓದಿ : ಗಾಜಾ ಶಾಂತಿ ಮಂಡಳಿ | ಭಕ್ಷಕನೇ ರಕ್ಷಕನ ರೂಪದಲ್ಲಿರುವುದು ಎಷ್ಟು ಸರಿ?
“ಗಾಜಾದಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳ ಪರವಾಗಿ ಟ್ರಂಪ್ ಬರಬಹುದು ಎಂದು ಯಾರು ಊಹಿಸಿರಲಿಲ್ಲ. ಕೆಲವು ತಿಂಗಳ ಹಿಂದೆ ಅನೇಕರು ಅದನ್ನು ಪರಿಹರಿಸಲು ಕಷ್ಟವೆಂದು ಭಾವಿಸಿದ್ದರು. ಟ್ರಂಪ್ ಅಸಾಧ್ಯವಾದದನ್ನು ಸಾಧ್ಯವಾಗಿಸುವಲ್ಲಿಗೆ ಕನಸು ಕಾಣುವ ದೂರದೃಷ್ಟಿ ಮತ್ತು ಧೈರ್ಯವನ್ನು ಹೊಂದಿದ್ದಾರೆ” ಎಂದು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳನ್ನು ತಮ್ಮ “ಶಾಂತಿ ಮಂಡಳಿ”ಗೆ ಆಕರ್ಷಿಸಲು ಹೆಣಗಾಡುತ್ತಿದ್ದಾರೆ. ಅರ್ಜೆಂಟೀನಾ, ಅರ್ಮೇನಿಯಾ, ಅಜೆರ್ಬೈಜಾನ್, ಬಹ್ರೇನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಕಝಾಕಿಸ್ತಾನ್, ಮೊರಾಕೊ, ಪಾಕಿಸ್ತಾನ, ಯುಎಇ ಮತ್ತು ವಿಯೆಟ್ನಾಂ ದೇಶಳಗು ಟ್ರಂಪ್ ಅವರ ಆಹ್ವಾನವನ್ನು ಸ್ವೀಕರಿಸಿದ್ದಾವೆ. ಆದರೆ, ಚೀನಾ, ಜರ್ಮನಿ, ಇಟಲಿ, ಪರಾಗ್ವೆ, ರಷ್ಯಾ, ಸ್ಲೊವೇನಿಯಾ, ಟರ್ಕಿಯೆ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಆಹ್ವಾನವದ ಬಗ್ಗೆ ಮೌನವಹಿಸಿವೆ.
ಗಾಜಾ “ಶಾಂತಿ ಮಂಡಳಿ” ಎಂದರೇನು?
ಗಾಜಾ ಶಾಂತಿ ಮಂಡಳಿ (Board of Peace for Gaza ಅಥವಾ Board of Peace) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ನಲುಗಿ ಹೋಗಿರುವ ಗಾಜಾ ಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಹಮಾಸ್ ನಿಶಸ್ತ್ರೀಕರಣ, ಗಾಜಾ ಪುನರ್ ನಿರ್ಮಾಣ, ಆರ್ಥಿಕ ಅಭಿವೃದ್ಧಿ ಮತ್ತು ತಾತ್ಕಾಲಿಕವಾಗಿ ಅಮೆರಿಕ ಆಡಳಿತ ನಡೆಸುವ ಉದ್ದೇಶವನ್ನು ಹೊಂದಿದೆ. ಇದು ಟ್ರಂಪ್ ಅವರ “20 ಅಂಶಗಳ ಸಮಗ್ರ ಯೋಜನೆ”ಯನ್ನು ಹೊಂದಿದೆ.
ಶಾಂತಿ ಮಂಡಳಿಯಲ್ಲಿ ರಾಷ್ಟ್ರಗಳ ಮೂಲ ಸದಸ್ಯತ್ವಕ್ಕೆ 3 ವರ್ಷಗಳ ಅವಧಿಗೆ ಯಾವುದೇ ಶುಲ್ಕವಿರುವುದಿಲ್ಲ. ಆ ನಂತರ ಪ್ರತಿ ರಾಷ್ಟ್ರಗಳು 1 ಬಿಲಿಯನ್ ಡಾಲರ್ (ಸುಮಾರು ₹8,300 ಕೋಟಿ) ಹಣವನ್ನು ಕೊಡುಗೆ ರೂಪದಲ್ಲಿ ನೀಡಿದರೆ ಮಾತ್ರ ಶಾಶ್ವತ ಸದಸ್ಯತ್ವ ಸಿಗುತ್ತದೆ. ಈ ಹಣವು ಗಾಜಾ ಪುನರ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ ಹಾಗೂ ಟ್ರಂಪ್ ಅವರೇ ಅಧ್ಯಕ್ಷರಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.





