ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಚೀನಾದ ಮೇಲೆ ಶೇ 100 ರಷ್ಟು ಹೆಚ್ಚುವರಿ ತೆರಿಗೆ ಹೇರುವುದಾಗಿ ಘೋಷಿಸಿ, ಬೀಜಿಂಗ್‌ರೊಂದಿಗಿನ ವಾಣಿಜ್ಯ ಸಮರವನ್ನು ಮುಂದುವರಿಸಿದ್ದಾರೆ. ಜೊತೆಗೆ, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ನಿಗದಿಯಾಗಿದ್ದ ಶೃಂಗಸಭೆಯನ್ನು ರದ್ದು ಮಾಡುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ.
ಹೊಸ ಸುಂಕ ನೀತಿಯು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಅಪರೂಪದ ಭೂಮಿಯ ಖನಿಜಗಳ ರಫ್ತುಗಳ ಮೇಲೆ ಚೀನಾ ನಿರ್ಬಂಧಗಳನ್ನು ವಿಧಿಸಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಖನಿಜಗಳು ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಮಿಲಿಟರಿ ಉಪಕರಣಗಳ ತಯಾರಿಕೆಗೆ ಅತ್ಯಗತ್ಯ. ಚೀನಾದ ಈ ನಡೆ ‘ಅಸಾಧಾರಣವಾಗಿ ಆಕ್ರಮಣಕಾರಿ’ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಆರೋಪಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಶೇ. 30ರಷ್ಟು ಸುಂಕದ ಜೊತೆಗೆ ಈ ಹೊಸ ಸುಂಕವು ಸೇರ್ಪಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೆಡಿಕಲ್ ಮಾಫಿಯಾಗೆ ಅಮಾಯಕ ಮಕ್ಕಳು ಬಲಿ; ಸರ್ಕಾರಗಳೇ ಜವಾಬ್ದಾರಿ
ಚೀನಾದ ಈ ನಡೆ ಹಿನ್ನೆಲೆಯಲ್ಲಿ ಟ್ರಂಪ್ ಅವರು ಈ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ APEC ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ತಮ್ಮ ಯೋಜನೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಜನವರಿಯಲ್ಲಿ ಅಧಿಕಾರಕ್ಕೆ ಮರಳಿದ ನಂತರ ಈ ಇಬ್ಬರೂ ನಾಯಕರ ಮೊದಲ ಭೇಟಿ ಇದಾಗಬೇಕಿತ್ತು. “ಈಗ ಭೇಟಿಯಾಗಲು ಯಾವುದೇ ಕಾರಣವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರ ಈ ಘೋಷಣೆಯು ಮಾರುಕಟ್ಟೆಯಲ್ಲಿ ತಕ್ಷಣದ ಪರಿಣಾಮ ಬೀರಿದ್ದು, ಅಮೆರಿಕದ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಾಸ್ದಾಕ್ ಶೇ. 3.6 ಮತ್ತು ಎಸ್&ಪಿ 500 ಶೇ. 2.7 ರಷ್ಟು ಇಳಿಕೆ ಕಂಡಿವೆ. ಇದೇ ಸಮಯದಲ್ಲಿ, ಅಮೆರಿಕದ ಸಂವಹನ ನಿಯಂತ್ರಕ ಸಂಸ್ಥೆ (FCC) ಕೂಡಾ ನಿಷೇಧಿತ ಚೀನೀ ವಸ್ತುಗಳ ‘ಲಕ್ಷಾಂತರ’ ಪಟ್ಟಿಗಳನ್ನು ಆನ್‌ಲೈನ್ ವೇದಿಕೆಗಳಿಂದ ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ ಎಂದು ಘೋಷಿಸಿದೆ. ಈ ಕ್ರಮಗಳು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆಯನ್ನು ತೀವ್ರಗೊಳಿಸಿವೆ.





