ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆಸುಂಕ ದಾಳಿ ಮುಂದುವರಿಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಎಲ್ಲ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಿಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಅಕ್ಟೋಬರ್ 1ರಿಂದ ಔಷಧಿಗಳ ಮೇಲೆ ಶೇ 100, ಅಡುಗೆಮನೆ ಕ್ಯಾಬಿನೆಟ್‌ಗಳು ಮತ್ತು ಶೌಚಾಲಯ ಸಾಮಗ್ರಿಗಳ ಮೇಲೆ ಶೇ.50, ಪೀಠೋಪಕರಣಗಳ ಮೇಲೆ ಶೇ 30 ಮತ್ತು ಹೆವಿ ಟ್ರಕ್‌ಗಳ ಮೇಲೆ ಶೇ 25 ರಷ್ಟು ಆಮದು ತೆರಿಗೆಯನ್ನು ವಿಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಆಗಸ್ಟ್‌ನಲ್ಲಿ ಆರಂಭಿಸಿದ ಆಮದು ವಸ್ತುಗಳ ಮೇಲಿನ ತೆರಿಗೆಗಳನ್ನು ವಿಧಿಸುವ ಪ್ರಕ್ರಿಯೆ ಅಮೆರಿಕ ಸ್ಥಗಿತಗೊಳಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವರದಿಗಳಾಗಿವೆ.
ಡೊನಾಲ್ಡ್ ಟ್ರಂಪ್ ಅವರು ಸುಂಕಗಳಿಗೆ ಕಾನೂನು ಸಮರ್ಥನೆಯನ್ನು ಒದಗಿಸದಿದ್ದರೂ, ಆಮದು ಮಾಡಿಕೊಂಡ ಅಡುಗೆಮನೆ ಕ್ಯಾಬಿನ್ ಗಳು ಮತ್ತು ಸೋಫಾಗಳ ಮೇಲಿನ ತೆರಿಗೆಗಳು ರಾಷ್ಟ್ರೀಯ ಭದ್ರತೆ ಮತ್ತು ಇತರ ಕಾರಣಗಳಿಗಾಗಿ ಅಗತ್ಯವಿದೆ ಎಂದು ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಟ್ರಂಪ್ ಅವರು ಹೇಳುವ ಮೂಲಕ ಅವರು ಕಮಾಂಡರ್-ಇನ್-ಚೀಫ್ ಪಾತ್ರದ ಮಿತಿಗಳನ್ನು ವಿಸ್ತರಿಸಿದಂತೆ ಕಂಡುಬಂದಿದೆ.
ಯುಎಸ್‌ನಲ್ಲಿ ಔಷಧ ಉತ್ಪಾದನಾ ಘಟಕಗಳ ನಿರ್ಮಾಣ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿದ್ದರೂ ಸಹ, ಸುಂಕ ಪರಿಹಾರ ಲಭ್ಯವಿರುತ್ತದೆ ಎಂದು ಅವರು ಮತ್ತಷ್ಟು ಸ್ಪಷ್ಟಪಡಿಸಿದರು. ಭಾರತದ ಮೇಲಿನ ಔಷಧ ಸುಂಕಗಳ ಪರಿಣಾಮದ ಬಗ್ಗೆ, ಆಗಸ್ಟ್ 2025 ರಲ್ಲಿ ಎಸ್‌ಬಿಐ ಸಂಶೋಧನಾ ವರದಿಯು ಟ್ರಂಪ್ ಭಾರತೀಯ ಔಷಧ ರಫ್ತಿನ ಮೇಲೆ ಶೇ.50 ಸುಂಕವನ್ನು ವಿಧಿಸಿದರೆ, 2026 ರ ಆರ್ಥಿಕ ವರ್ಷದಲ್ಲಿ ಕಂಪನಿಗಳ ಆದಾಯವು ಶೇ.5-10 ರಷ್ಟು ಕಡಿಮೆಯಾಗಬಹುದು ಎಂದು ಹೇಳಿಕೊಂಡಿತ್ತು.
ಈ ಹೊಸ ಸುಂಕಗಳು ಅಮೆರಿಕದ ಷೇರುಪೇಟೆಗೆ ಬೂಸ್ಟ್ ಆಗಿದ್ದರೆ ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ. ಗ್ರಾಹಕರಿಗೆ ಆಮದು ವಸ್ತುಗಳ ಬೆಲೆ ಏರಿಕೆ ಬಿಸಿ ಮತ್ತು ಕಂಪನಿಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಆತಂಕಪಡುವ ವಾತಾವರಣ ಸೃಷ್ಟಿಸಿದೆ ಎಂದು ವರದಿಯಾಗಿದೆ.





