ನಾನಾ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ್ದ ಭಾರೀ ಸುಂಕವನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಬಳಿಕ, ಸುಂಕವನ್ನು 10%ಗೆ ನಿಗದಿ ಮಾಡುವುದಾಗಿ ಹೇಳಿದ್ದ ಟ್ರಂಪ್, ಇದೀಗ ಸುಂಕವನ್ನು 15%ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಇದು, ಅಂತಾರಾಷ್ಟ್ರೀಯವಾಗಿ ಕಳವಳ ಹುಟ್ಟುಹಾಕಿದೆ.
ತಮ್ಮ ‘ಟ್ರುತ್’ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಅಧ್ಯಕ್ಷರು 15%ವರೆಗೆ ಸುಂಕವನ್ನು ವಿಧಿಸುವ ಅಧಿಕಾರ ಹೊಂದಿರುತ್ತಾರೆ. ಇದೇ ಅವಕಾಶದ ಅಡಿಯಲ್ಲಿ ಜಾಗತಿಕ 15% ಸುಂಕ ವಿಧಿಸುತ್ತೇನೆ” ಎಂದು ಹೇಳಿದ್ದಾರೆ.
“ಅಮೆರಿಕವು ದೊಡ್ಡ ಪ್ರಮಾಣದ ‘ಬ್ಯಾಲೆನ್ಸ್ ಆಫ್ ಪೇಮೆಂಟ್’ ಕೊರತೆಯನ್ನು ಎದುರಿಸುತ್ತಿದೆ. ಇದನ್ನು, ನಿಭಾಯಿಸಲು ಸುಂಕ ವಿಧಿಸುವುದು ಅನಿವಾರ್ಯ. ಕೆಲವೇ ತಿಂಗಳುಗಳಲ್ಲಿ ಕಾನೂನುಬದ್ಧವಾಗಿ ಅನುಮತಿಸಲಾದ ಹೊಸ ಸುಂಕವನ್ನು ಜಾರಿಗೊಳಿಸಲಾಗುತ್ತದೆ” ಎಂಧು ಹೇಳಿದ್ದಾರೆ.
“ಅಮೆರಿಕವನ್ನು ಮತ್ತೆ ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು, ನಮ್ಮ ಯಶಸ್ವಿ ವಿಶೇಷ ಪ್ರಕ್ರಿಯೆಯನ್ನು ನಾವು ಮುಂದುವರೆಸುತ್ತೇವೆ” ಎಂದಿದ್ದಾರೆ.




