ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತುರ್ತುಪರಸ್ಥಿತಿ ಅಡಿಯಲ್ಲಿ ವಿವಿಧ ದೇಶಗಳ ಮೇಲೆ ಹೇರಿದ್ದ ಭಾರೀ ಪ್ರಮಾಣದ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಟ್ರಂಪ್ ಅವರು ‘ತುರ್ತು ಪರಿಸ್ಥಿತಿ’ಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಹೆಚ್ಚುವರಿ ಸುಂಕಗಳನ್ನು ಹೇರಿದ್ದರು. ಆದರೆ, ಸುಂಕ ವಿಧಿಸುವ ಅಧಿಕಾರವು ಕಾಂಗ್ರೆಸ್‌ಗೆ (ಅಮೆರಿಕ ಸಂಸತ್ತು) ಮಾತ್ರವೇ ಇದೆ. ಟ್ರಂಪ್ ವಾದಿಸುತ್ತಿರುವ ‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ ಅಡಿ (ಐಇಇಪಿಎ) ಸುಂಕ ವಿಧಿಸುವ ಅಧಿಕಾರ ಅಧ್ಯಕ್ಷರಿಗಿದೆ’ ಎಂಬುದು ಕಾಂಗ್ರೆಸ್‌ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಟ್ರಂಪ್ ಅವರು ಏಕಪಕ್ಷೀಯವಾಗಿ ಘೋಷಿಸಿದ್ದ ಸುಂಕಗಳನ್ನು ರದ್ದುಗೊಳಿಸಿದೆ.
ಅಮೆರಿಕ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಮೇಲಿನ ಬೃಹತ್ ಸುಂಕಗಳು ಕಡಿತಗೊಂಡಿವೆ. ಈ ಹಿಂದೆ ಇದ್ದ ಹಳೆಯ ಸುಂಕಗಳು ಮರುಜಾರಿಗೆ ಬರಲಿವೆ. ಪರಿಣಾಮ, ಭಾರತದ ಮೇಲೆ ಪ್ರಸ್ತುತ ಜಾರಿಯಲ್ಲಿರುವ 18% ಸುಂಕವೂ ಕಡಿತಗೊಳ್ಳಲಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಭಾರತದ ಮೇಲಿನ ಅಮೆರಿಕ ಸುಂಕವು 2ಅಥವಾ 3%ಗೆ ಕಡಿತಗೊಳ್ಳಬೇಕಿದೆ.
ಆದರೆ, ಭಾರತಕ್ಕೆ ವಿಧಿಸಲಾಗುತ್ತಿರುವ ಸುಂಕಗಳು ಕಡಿತಗೊಳ್ಳುವುದಿಲ್ಲ. ಭಾರತವು 18% ಸುಂಕ ಪಾವತಿಯನ್ನು ಮುಂದುವರೆಸಲಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ‘ಬಹಳ ನಿರಾಶಾದಾಯಕ’ವೆಂದು ಟ್ರಂಪ್ ಕರೆದಿದ್ದಾರೆ. ಈ ತೀರ್ಪಿನಿಂದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ‘ಏನೂ ಬದಲಾಗುವುದಿಲ್ಲ’ ಎಂದಿದ್ದಾರೆ.
“ಏನೂ ಬದಲಾಗುವುದಿಲ್ಲ. ಅವರು (ಭಾರತ) ಸುಂಕಗಳನ್ನು ಪಾವತಿಸುತ್ತಾರೆ ಮತ್ತು ನಾವು ಪಾವತಿಸುವುದಿಲ್ಲ. ಇದು ಈ ಹಿಂದೆ ಇದ್ದ ಪರಿಸ್ಥಿತಿಯ ಉಲ್ಟಾ ರೂಪವಾಗಿದೆ. ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ, ಗೌರವಾನ್ವಿತ ವ್ಯಕ್ತಿ. ಅವರು ತಮ್ಮ ಎದುರಾಳಿಗಳಿಗಿಂತ ಹೆಚ್ಚು ಬುದ್ಧಿವಂತರಾಗಿದ್ದರು. ಅಮೆರಿಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅವರು ನಮ್ಮನ್ನು ಸುಲಿಗೆ ಮಾಡುತ್ತಿದ್ದರು. ಹಾಗಾಗಿ, ನಾವು ಭಾರತದೊಂದಿಗೆ ಒಂದು ಒಪ್ಪಂದ ಮಾಡಿಕೊಂಡೆವು. ಈಗ ಅದು ನ್ಯಾಯಯುತವಾದ ಒಪ್ಪಂದವಾಗಿದೆ. ನಾವು ಅವರಿಗೆ ಸುಂಕ ಪಾವತಿಸುತ್ತಿಲ್ಲ. ಆದರೆ, ಅವರು ಪಾವತಿಸುತ್ತಿದ್ದಾರೆ. ನಾವು ಪರಿಸ್ಥಿತಿಯನ್ನು ಅದಲುಬದಲು ಮಾಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಫೆಬ್ರವರಿ 13ರಂದು ಮೋದಿ ಅವರಿಗೆ ಕರೆ ಮಾಡಿದ್ದ ಟ್ರಂಪ್, ಅಮೆರಿಕ ಮತ್ತು ಭಾರತ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಮಾರ್ಚ್ರ್ ತಿಂಗಳಿನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ಅದರ ಅಡಿಯಲ್ಲಿ ಭಾರತದ ಮೇಲೆ ಅಮೆರಿಕ ಹೇರಿದ್ದ 50% ಸುಂಕವನ್ನು 18%ಗೆ ಕಡಿತಗೊಳಿಸಲಾಗಿದೆ. ಅಂತೆಯೇ, ಅಮೆರಿಕದ ಸರಕುಗಳ ಮೇಲೆ ಭಾರತವು ಶೂನ್ಯ (0%) ಸುಂಕ ವಿಧಿಸಲು ಒಪ್ಪಿಕೊಂಡಿದೆ.
ಈ ಒಪ್ಪಂದದ ಭಾಗವಾಗಿ, ಅಮೆರಿಕದ ಎಲ್ಲ ಕೈಗಾರಿಕಾ ಸರಕುಗಳು ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ರದ್ದುಗೊಳಿಸಲು ಭಾರತ ಒಪ್ಪಿಕೊಂಡಿದೆ. ಇದರಲ್ಲಿ ಒಣಗಿದ ಡಿಸ್ಟಿಲರ್ಸ್ ಗ್ರೇನ್ಸ್ (DDGs), ಪ್ರಾಣಿ ಆಹಾರಕ್ಕಾಗಿ ಕೆಂಪು ಜೋಳ, ಒಣ ಹಣ್ಣುಗಳು, ತಾಜಾ ಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ಸ್ ಸೇರಿದಂತೆ ಎಲ್ಲ ಉತ್ಪನ್ನಗಳು ಯಾವುದೇ ಸುಂಕವಿಲ್ಲದೆ ಭಾರತದ ಮಾರುಕಟ್ಟೆಗಳಿಗೆ ಲಗ್ಗೆ ಇಡಲಿವೆ. ಇದು, ಭಾರತೀಯ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ಅಪಾಯವನ್ನು ಸೂಚಿಸಿದೆ.
ಮತ್ತೊಂದೆಡೆ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಜವಳಿ ಮತ್ತು ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳು, ಸಾವಯವ ರಾಸಾಯನಿಕಗಳು, ಗೃಹಾಲಂಕಾರ ವಸ್ತುಗಳು, ಕರಕುಶಲ ವಸ್ತುಗಳು ಮತ್ತು ಕೆಲವು ಯಂತ್ರೋಪಕರಣಗಳ ಮೇಲೆ 18%ರಷ್ಟು ಸುಂಕವನ್ನು ವಿಧಿಸುತ್ತದೆ.
ಒಪ್ಪಂದವು ಏನೇ ಇದ್ದರೂ, ಅಮೆರಿಕದ ಸುಪ್ರೀಂ ಕೋರ್ಟ್ ಆದೇಶವನ್ನು ಟ್ರಂಪ್ ಪಾಲಿಸಬೇಕು. ಸುಂಕಗಳನ್ನು ಹಿಂದಿನ ಪ್ರಮಾಣಕ್ಕೆ ಇಳಿಸಬೇಕು. ಆದರೆ, ಅವರು ಸುಂಕ ಇಳಿಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಸೇಬು ಬೆಳೆಗಾರರಿಗೆ ಸರ್ವನಾಶದ ಭೀತಿ
ಅದಕ್ಕಾಗಿ, ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆಯ (IEEPA) ಸೆಕ್ಷನ್ 122ರ ಅಡಿಯಲ್ಲಿ 10% ಜಾಗತಿಕ ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕುವುದಾಗಿ ಘೋಷಿಸಿದ್ದಾರೆ. ಆದರೆ, ಶಾಸಕಾಂಗದ ಮೂಲಕ ಅನುಮೋದಿಸದ ಹೊರತು, ಈ ಸುಂಕ ಆದೇಶವು 150 ದಿನಗಳ ನಂತರ ರದ್ದಾಗುತ್ತದೆ.
“ಸುಪ್ರೀಂ ಕೋರ್ಟ್ ತೀರ್ಪು ನನ್ನನ್ನು ಇನ್ನೂ ಬಲಗೊಳಿಸಿದೆ. ಪರ್ಯಾಯ ಮಾರ್ಗಗಳನ್ನು ಮುಕ್ತಗೊಳಿಸಿದೆ. ನಾನು ಏನು ಬೇಕಾದರೂ ಮಾಡಬಹುದು, ಸುಂಕ ವಿಧಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿರಬಹುದು. ಆದರೆ, ಆದರೆ ನನಗೆ ವ್ಯಾಪಾರ ನಿಷೇಧ ಹೇರಲು ಅಧಿಕಾರವಿದೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ಟ್ರೇಡ್ ಎಕ್ಸ್‌ಪಾನ್ಶನ್ ಆಕ್ಟ್ ಹಾಗೂ 1930ರ ಟ್ಯಾರಿಫ್ ಆಕ್ಟ್ ಸೇರಿದಂತೆ ಇತರ ಕಾನೂನುಗಳ ಮೂಲಕ ನಾನು ಸುಂಕಗಳನ್ನು ತರುತ್ತೇನೆ. ಈ ಆಯ್ಕೆಗಳು ಸ್ವಲ್ಪ ದೀರ್ಘ ಪ್ರಕ್ರಿಯೆ” ಎಂದು ಹೇಳಿದ್ದಾರೆ.




