ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು NATO ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಜೊತೆಗೆ, ರಷ್ಯಾದಿಂದ ಪೆಟ್ರೋಲಿಯಂ ಖರೀದಿಸುತ್ತಿರುವ ಚೀನಾದ ಮೇಲೆ ಶೇ. 50-100 ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ವೇದಿಕೆಯಲ್ಲಿ ಬರೆದುಕೊಂಡಿರುವ ಟ್ರಂಪ್, NATO ಸದಸ್ಯ ರಾಷ್ಟ್ರಗಳು ರಷ್ಯಾದ ತೈಲ ಖರೀದಿಸುತ್ತಿರುವುದು “ಆಘಾತಕಾರಿ” ಎಂದು ಟೀಕಿಸಿದ್ದಾರೆ. ಇದು NATOದ ರಷ್ಯಾದೊಂದಿಗಿನ ಮಾತುಕತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಚೀನಾ ರಷ್ಯಾದ ತೈಲ ಸಂಪನ್ಮೂಲಗಳ ಅತಿದೊಡ್ಡ ಖರೀದಿದಾರರಾಗಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. NATO ಸದಸ್ಯರಾದ ಟರ್ಕಿ, ಹಂಗೇರಿ, ಮತ್ತು ಸ್ಲೊವಾಕಿಯಾಗಳೂ ರಷ್ಯಾದ ತೈಲವನ್ನು ಖರೀದಿಸುತ್ತಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮು ರಾಜಕಾರಣ: ಒಡೆದ ಮನೆಯಲ್ಲಿ ಹಿಂದುತ್ವಕ್ಕೆ ಒಡೆಯನಾರು?
ರಷ್ಯಾದಿಂದ ಡ್ರೋನ್‌ಗಳು NATO ಸದಸ್ಯ ಪೋಲೆಂಡ್‌ನ ವಾಯುಪ್ರದೇಶಕ್ಕೆ ನುಗ್ಗಿದ ಘಟನೆಯ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಪೋಲೆಂಡ್ ಈ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಯುದ್ಧದ ಆರೋಪವನ್ನು ಮಾಜಿ ಅಧ್ಯಕ್ಷ ಜೋ ಬೈಡನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿಯವರ ಮೇಲೆ ಹೊರಿಸಿದ ಟ್ರಂಪ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನು ಉಲ್ಲೇಖಿಸಿಲ್ಲ.
“ನಾನು ಅಧ್ಯಕ್ಷನಾಗಿದ್ದರೆ ಈ ಯುದ್ಧ ಆರಂಭವಾಗುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ. NATO ತಮ್ಮ ಸಲಹೆಯಂತೆ ಕಾರ್ಯನಿರ್ವಹಿಸಿದರೆ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.





